ಭೀಮಾ ಕೋರೆಗಾಂವ್ ದಂಗೆ ಮತ್ತು ಅಂಬೇಡ್ಕರ್..! ಪ್ರತಿಯೊಬ್ಬರೂ ಓದಲೇ ಬೇಕಾದ ಲೇಖನ…!!!

Listen to this article

ಭೀಮಾ ಕೋರೆಗಾಂವ್ ದಂಗೆ ಮತ್ತು ಅಂಬೇಡ್ಕರ್..!
ಪ್ರತಿಯೊಬ್ಬರೂ ಓದಲೇ ಬೇಕಾದ ಲೇಖನ.

ಭೀಮ ಕೋರೆಗಾಂವ್ ದಂಗೆ: ಜನವರಿ 1.1818
(ಸಿಪಾಯಿ ದಂಗೆಗಿಂತ 40 ವರ್ಷಗಳ ಮೊದಲೇ ನಡೆದ ಅಸ್ಪೃಶ್ಯರ ಮಹಾದಂಗೆ)

ಯುದ್ಧದಲ್ಲಿ ಮಡಿದ ಅಸ್ಪೃಶ್ಯ ವೀರರು

1. ಸಿದ್ದನಾಕ ಮಕಲನಾಕ ನಾಯಕ
2. ರಾಮನಾಕ ಯಶನಾಕ ಸಿಪಾಯಿ
3. ಗೋದನಾಕ ಮೋಡೆನಾಕ ಸಿಪಾಯಿ
4. ರಾಮನಾಕ ಯಶನಾಕ ಸಿಪಾಯಿ
5. ಭಾಗನಾಕ ಹರನಾಕ ಸಿಪಾಯಿ
6. ಅಂಬನಾಕ ಕಾನನಾಕ ಸಿಪಾಯಿ
7. ಗಣನಾಕ ಬಾಳನಾಕ ಸಿಪಾಯಿ
8. ಬಾಳನಾಖ ದೊಂಡನಾಕ ಸಿಪಾಯಿ
9. ರೂಪನಾಕ ಲಖನಾಕ ಸಿಪಾಯಿ
10. ಬಾಲನಾಕ ರಾಮನಾಕ ಸಿಪಾಯಿ
11. ವಟಿನಾಕ ಧಾನನಾಕ ಸಿಪಾಯಿ
12. ಗಜನಾಕ ಗಣನಾಕ ಸಿಪಾಯಿ
13. ಬಾಪನಾಕ ಹಬನಾಕ ಸಿಪಾಯಿ
14. ಕೋನಾಕ ಜಾನನಾಕ ಸಿಪಾಯಿ
15. ಸಮನಾಕ ಯಸನಾಕ ಸಿಪಾಯಿ
16. ಗಣನಾಕ ಧರಮನಾಕ ಸಿಪಾಯಿ
17. ದೇವನಾಕ ಅಂಕನಾಕ ಸಿಪಾಯಿ
18. ಗೋಪಾಲನಾಕ ಬಾಲಿನಾಕ ಸಿಪಾಯಿ
19. ಹರನಾಕ ಹರಿನಾಕ ಸಿಪಾಯಿ
20. ಜೇಠನಾಕ ದೌನಾಕ ಸಿಪಾಯಿ
21. ಗಣನಾಕ ಲಖನಾಕ ಸಿಪಾಯಿ
22. ಸೀನನಾಕ ಮಕಲನಾಕ ಸಿಪಾಯಿ
ಅಸ್ಪೃಶ್ಯರನ್ನು ಗುರುತಿಸಲು ಅಂದು ಅವರ ಹೆಸರಿನ ಮುಂದೆ ನಾಕ ಎಂದು ಸೇರಿಸಲಾಗುತ್ತಿತ್ತು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ರವರು ಎಷ್ಟೇ ತುರ್ತು ಕೆಲಸಕಾರ್ಯಗಳಿದ್ದರೂ ಸಹ ಅವುಗಳೆಲ್ಲವನ್ನೂ ಬದಿಗಿರಿಸಿ, ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಸಹ ಅಲ್ಲಿಂದ ಹೊರಟು ಜನವರಿ ಒಂದನೇ ತಾರೀಖಿನಂದು ‘ಕೋರೆಗಾಂವ್‘ಗೆ ತಮ್ಮ ಕುಟುಂಬ ಸಮೇತರಾಗಿ ಬಂದು, ಅಲ್ಲಿರುವ ಹುತಾತ್ಮ ಅಸ್ಪೃಶ್ಯ ಯೋಧರ ಸ್ಮಾರಕಕ್ಕೆ (ವಿಜಯ ಸ್ಥಂಬಕ್ಕೆ) ಶ್ರದ್ದಾಂಜಲಿ ಸಲ್ಲಿಸುತ್ತಿದ್ದ ಅವರು ಬದುಕಿರುವ ತನಕವೂ ಒಂದೇ ಒಂದು ವರ್ಷವೂ ಸಹ ಜನವರಿ 1ನೇ ತಾರೀಖು ಇಲ್ಲಿ ಬರುವುದನ್ನು ಬಾಬಾಸಾಹೇಬರು ತಪಿಸಲಿಲ್ಲ. ಪ್ರತಿವರ್ಷ ಜನವರಿ 1ನೇ ತಾರೀಖು ಜಗತ್ತಿಗೆ ಹೊಸವರ್ಷದ ಸಂಭ್ರಮದ ದಿನವಾದರೆ ಭಾರತದ ದಲಿತರ ಪಾಲಿಗೆ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಅಸ್ಪೃಶ್ಯರ ಗುಂಪೊಂದು ಮಹಾರಾಷ್ಟ್ರದ ಪೇಶ್ವಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿದ ದಿನ, ಈ ದಿನ ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ದ. ಈ ಘಟನೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಹೋರಾಟಗಳ ಬದುಕಿನ ಪ್ರೇರಣೆಗಳಲ್ಲಿ ಒಂದೂ ಹೌದು.

ಕ್ರಿ.ಶ. 1800ರಲ್ಲಿ ಮಹಾರಾಷ್ಟ್ರದಲ್ಲಿ ಪೇಶ್ವೆಗಳು ಆಡಳಿತ ನಡೆಸುತ್ತಿದ್ದರು. ಇವರ ಆಡಳಿತವು ಅಸ್ಪೃಶ್ಯರ ಪಾಲಿನ ಕರಾಳ ಚರಿತ್ರೆಯಾಗಿತ್ತು. ಅಸ್ಪೃಶ್ಯತೆ ಆಚರಣೆಯ ಕಠೋರತೆಯು ಅಮಾನುಷವಾಗಿತ್ತು. ಅಸ್ಪೃಶರ ನೆರಳು ಹಿಂದೂ ಸವರ್ಣಿಯ ಮೇಲೆ ಬಿದ್ದರೆ, ಹಿಂದೂ ಸವರ್ಣಿಯರಿಗೆ ಮೈಲಿಗೆಯಾಗುತ್ತದೆಂಬ ಕಾರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿತ್ತು. ಅಸ ಶ್ಯರು ಊರ ಮಧ್ಯೆ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮಾತ್ರ ನಡೆದುಕೊಂಡು ಹೋಗಬೇಕಾಗಿತ್ತು .

ಏಕೆಂದರೆ ಈ ಸಮಯದಲ್ಲಿ ಅವನ ನೆರಳು ಬೇರೆಕಡೆ ಬೀಳುವುದಿಲ್ಲ ಎನ್ನುವ ಕಾರಣಕ್ಕಾಗಿ. ಹೋಗುವಾಗ ಕುತ್ತಿಗೆಗೆ ಒಂದು ಮಣ್ಣಿನ ಮಡಿಕೆಯನ್ನು ನೇತು ಹಾಕಿಕೊಳ್ಳಬೇಕಾಗಿತ್ತು. ಏಕೆಂದರೆ ಅಸ್ಪೃಶ್ಯರು ನೆಲಕ್ಕೆ ಉಗುಳುವ ಹಾಗಿರಲಿಲ್ಲ. ಆ ಮಡಿಕೆಯಲ್ಲಿ ಉಗುಳಿಕೊಳ್ಳಬೇಕಾಗಿತ್ತು. ಅದೇ ರೀತಿ ಸೊಂಟಕ್ಕೆ ಒಂದು ಕಸಪೊರಕೆ ಕಟ್ಟಿಕೊಂಡು ತಾನು ನಡೆದ ದಾರಿಯನ್ನು ತಾನೇ ಗುಡಿಸಿಕೊಂಡು ಹೋಗಬೇಕಾಗಿತ್ತು. ಅಸ್ಪೃಶ್ಯರು ತಮ್ಮ ಗುರುತು ಪತ್ತೆಗಾಗಿ ತಮ್ಮ ಕುತ್ತಿಗೆ ಮತ್ತು ಮುಂಗೈಗೆ ದಪ್ಪದಾದ ಕಪ್ಪು ದಾರವನ್ನು ಕಡ್ಡಾಯವಾಗಿ ಕಟ್ಟಿಕೊಳ್ಳಬೇಕಾಗಿತ್ತು. ಊರಿನೊಳಗೆ ಸತ್ತ ದನಗಳನ್ನು ಊರಿನಿಂದ ಹೊರಗೆ ಹೊತ್ತುಕೊಂಡು ಹೋಗಿ ಅದರ ಮಾಂಸವನ್ನು ಬೇಯಿಸಿ ತಿನ್ನಬೇಕಾಗಿತ್ತು. ಅವರಿಗೆ ವಿದ್ಯೆ ಕಲಿಯುವ ಹಕ್ಕನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಅಸ್ಪೃಶ್ಯ ಹೆಂಗಸರು ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ತೊಡುವ ಹಾಗಿರಲಿಲ್ಲ. ಹಿಂದೂ ಸವರ್ಣಿಯರು ಮತ್ತು ಪೇಶ್ವೆ ಸೈನಿಕರು ಅಸ್ಪೃಶ್ಯ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು.
ಈ ಎಲ್ಲಾ ಅನ್ಯಾಯ ಮತ್ತು ದೌರ್ಜನ್ಯಗಳನ್ನು ನಿಲ್ಲಿಸಬೇಕೆಂದು ಅಸ್ಪೃಶ್ಯರು 1817 ರಲ್ಲಿ ರಾಜ್ಯಭಾರ ನಡೆಸುತ್ತಿದ್ದ ಪೇಶ್ವಿರಾಜ ಎರಡನೇ ಬಾಜೀರಾಯನಲ್ಲಿ ವಿನಂತಿಸಿಕೊಂಡಾಗ ಎರಡನೇ ಬಾಜೀರಾಯನು “ನೀವುಗಳು ಹುಟ್ಟಿರುವುದೇ ನಮ್ಮಗಳ ಸೇವೆ ಮಾಡಲಿಕ್ಕಾಗಿ & ನಿಮ್ಮ ಹೆಂಗಸರು ಇರುವುದೇ ನಮ್ಮನ್ನು ಸುಖಪಡಿಸಲಿಕ್ಕಾಗಿ, ಇದೇ ನಮ್ಮ ಮನು ಸಂವಿಧಾನ” ಎಂದು ಅಸ್ಪೃಶ್ಯರಿಗೆ ಖಡಕ್ಕಾಗಿ ತಿಳಿಸಿದನು. ಇದರಿಂದ ಗಾಯಗೊಂಡ ವ್ಯಾಘ್ರಗಳಂತಾದ ಅಸ್ಪೃಶ್ಯರು ಸೇಡುತೀರಿಸಿಕೊಳ್ಳಲಿಕ್ಕಾಗಿ ಸಮಯ ಕಾಯತೊಡಗಿದರು. ಇದೇ ಸಮಯದಲ್ಲಿ ಸರಿಯಾಗಿ ಕೊಲ್ಕತ್ತಾವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಬಹುತೇಕ ಉತ್ತರ ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ಬ್ರಿಟಿಷರು ಮಹಾರಾಷ್ಟ್ರದ ಪೇಶ್ವೆ ರಾಜ ಎರಡನೇ ಬಾಜೀರಾಯನನ್ನು ಬಗ್ಗುಬಡಿದು ದಕ್ಷಿಣ ಭಾರತದಲ್ಲಿ ಅಮ್ಮಗಳ ಆಳ್ವಿಕೆಗೆ ವಿಸ್ತರಿಸಿಕೊಳ್ಳಲು ಸಮಯ ಕಾಯುತ್ತಿದ್ದರು .

ಪೇಶ್ವೆಗಳ ದೌರ್ಜನ್ಯ, ದಬ್ಬಾಳಿಕೆಗಳಿಂದ ಇನ್ನಿಲ್ಲದಂತೆ ರೋಸಿಹೋಗಿದ್ದ ಮಹಾರಾಷ್ಟ್ರದ ಅಸ್ಪೃಶ್ಯರು ಅದರಲ್ಲೂ ಅಸ್ಪೃಶ್ಯ ಯುವಕರು ಪೇಶ್ವೆಗಳ ಬಿಸಿ ರಕ್ತ ಕುಡಿಯಲು ಹಾತೊರೆಯುತ್ತಿದ್ದರು. ಇದನ್ನು ಗಮನಿಸಿದ ಚಾಣಾಕ್ಷ ಬ್ರಿಟೀಷರು ಪೇಶ್ವಗಳ ವಿರುದ್ಧ ಯುದ್ಧ ಮಾಡಲು ಅಸ್ಪಶ್ಯರನ್ನು ಕೋರಿಕೊಂಡರು, ತಮ್ಮಗಳ ಕಷ್ಟ ಅಪಮಾನಗಳ ಪರಿಹಾರಕಾಗಿ ಒದಗಿ ಬಂದ ಈ ಸುವರ್ಣಾವಕಾಶವನ್ನು ಮನಃಪೂರ್ವಕವಾಗಿ ಸ್ವೀಕರಿಸಿದ ಅಸ್ಪೃಶ್ಯರು “ಸಿದನಾಕ, ಎಂಬ ಅಸ್ಪೃಶ್ಯ ಯುವಕನ ನಾಯಕತ್ವದಲ್ಲಿ 500 ಜನ ಅಸ್ಪೃಶ್ಯ ಯುವಕರು ಪೇಶ್ವೆಗಳ ವಿರುದ್ಧ ಯುದ್ಧ ಮಾಡಲು ಬ್ರಿಟೀಷರ ಕೋರಿಕೆಗೆ ಒಪ್ಪಿಕೊಂಡರು. ಕಡೆಗೂ ಆ ಐತಿಹಾಸಿಕ ಯುದ್ದದ ದಿನ ಬಂದೇ ಬಿಟ್ಟಿತು. ಅದೇ 1818 ರ ಜನವರಿ 1ನೇ ತಾರೀಖು.

ಬ್ರಿಟೀಷ್ ಕ್ಯಾಪ್ಟನ್ ಎಸ್.ಎಸ್. ಸಂಡನ್ ನೇತೃತ್ವದಲ್ಲಿ ಸಿದ್ದನಾಕನ ನಾಯಕತ್ವದ 500 ಅಸ್ಪೃಶ್ಯ ಯೋಧರ ಪಡೆ (ಈ ಎಲ್ಲಾ ಯೋಧರಿಗೆ ಬಂದೂಕು ಉಪಯೋಗಿಸುವ ತರಬೇತಿಯನ್ನು ಬ್ರಿಟೀಷರು ಚೆನ್ನಾಗಿ ನೀಡಿರುತ್ತಾರೆ.) 1817ರ ಡಿಸೆಂಬರ್ 31ನೇ ತಾರೀಖು ರಾತ್ರಿ ಸಿರೂರ್‌ನಿಂದ ಹೊರಡುತ್ತಾರೆ. ಆ ಇಡೀ ರಾತ್ರಿ ಸತತವಾಗಿ 27 ಕಿಲೋಮೀಟರ್ ನಡೆದು ಮಾರನೇ ದಿನ ಅಂದರೆ 1818ರ ಜನವರಿ 1ರಂದು ಪೂನಾ ನಗರದಿಂದ 15 ಕಿ.ಮೀ . ದೂರದಲ್ಲಿರುವ ಭೀಮಾ ನದಿ ತೀರದಲ್ಲಿರುವ ಕೋರೆಗಾಂವ್ ಎಂಬ ಸ್ಥಳವನ್ನು ಸಿದ್ಧನಾಕನ ಪಡೆ ತಲುಪುತ್ತದೆ. ಇಡೀ ರಾತ್ರಿ ನಿದ್ದೆಯಿಲ್ಲದೆ 27 ಕಿ.ಮೀ. ದೂರವನ್ನು ನಡೆದುಕೊಂಡು ಬಂದಿದ್ದ ಈ ಅಸ್ಪೃಶ್ಯ ಯೋಧರ ಪಡೆ ನಿದ್ದೆ, ಅನ್ನ, ನೀರು ಯಾವುದನ್ನೂ ಬಯಸದೆ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಪೇಶ್ವೆ ಸೈನಿಕರ ಮೇಲೆ ಎರಗುತ್ತಾರೆ. 20 ಸಾವಿರ ಅಶ್ವದಳ, 8 ಸಾವಿರ ಕಾಲ್ದಳ ಸೇರಿ ಒಟ್ಟು 28 ಸಾವಿರ ಪೇಳ್ವೆ ಸೈನಿಕರು ಮೂರೂ ದಿಕ್ಕಿನಿಂದ ಅಸ್ಪೃಶ್ಯ ಯೋಧರಿಗೆ ಎದುರಾಗುತ್ತಾರೆ. ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಯುದ್ದದಲ್ಲಿ ಹಸಿದ ಹೆಬ್ಬುಲಿಗಳಂತಿದ್ದ ಅಸ್ಪೃಶ್ಯ ಯೋಧರು ಪೇಶ್ವೆ ಸೈನ್ಯವನ್ನು ಧೂಳಿಪಟ ಮಾಡುತ್ತಾರೆ. ಇಡೀ ಯುದ್ಧ ಭೂಮಿಯ ತುಂಬ ರಕ್ತದ ಕೋಡಿಯೇ ಹರಿಯುತ್ತದೆ. ಸಾವಿರಾರು ಸೈನಿಕರು ಯುದ್ಧಭೂಮಿಯಲ್ಲಿ ಸಾವನ್ನಪ್ಪುತ್ತಾರೆ.

ಬೃಹತ್ ಸಂಖ್ಯೆಯಲ್ಲಿದ್ದ ಅಂದರೆ ಅಸ್ಪೃಶ್ಯ ಯೋಧರಿಗಿಂತ 56 ಪಟ್ಟು ಹೆಚ್ಚು ಇದ್ದ ಪೇಶ್ವೆಗಳ ರಣಹೇಡಿ ಸೈನ್ಯ ಗಂಡು ಸಿಂಹಗಳಂತಿದ್ದ ಅಸ್ಪೃಶ್ಯ ಸೈನಿಕರ ಮುಂದೆ ನಿಲ್ಲಲಾಗದೆ ಕೊನೆಗೆ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡತೊಡಗಿದರು. ಅಂತಿಮವಾಗಿ ಈ ಯುದ್ದದಲ್ಲಿ ಅಸ್ಪೃಶ್ಯ ಸೈನಿಕರು ಪ್ರಚಂಡ ಜಯಗಳಿಸುತ್ತಾರೆ. ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಕಾಳಗದಲ್ಲಿ 5000ಕ್ಕೂ ಹೆಚ್ಚು ಪೇಶ್ವೆ ಸೈನಿಕರು ಯುದ್ಧ ಭೂಮಿಯಲ್ಲಿ ಸಾವನ್ನಪ್ಪಿದರೆ, ಕೇವಲ 22 ಜನ ಅಸ್ಪೃಶ್ಯ ಯೋಧರು ವೀರಮರಣವನ್ನಪ್ಪಿದರು. (ಈ ಯುದ್ಧದಲ್ಲಿ ಒಬ್ಬೊಬ್ಬ ಅಸ್ಪೃಶ್ಯ ಯೋಧ ಸರಾಸರಿ ಕನಿಷ್ಠ 100 ಜನ ಪೇಶ್ವೆ ಸೈನಿಕರನ್ನು ಕೊಂದುಹಾಕಿರುತ್ತಾನೆ. ಈ ಯುದ್ಧದಲ್ಲಿ ಅಸ್ಪೃಶ್ಯ ಯೋಧರ ಪಡೆಯ ನಾಯಕನಾಗಿದ್ದ ಸಿದ್ದನಾಕನು ಸಹ ವೀರಮರಣವನ್ನಪ್ಪುತ್ತಾನೆ. ಅಂದು ರಾತ್ರಿ 10 ಗಂಟೆಗೆ ಸರಿಯಾಗಿ ಬ್ರಿಟೀಷರು ಯುದ್ಧ ನಡೆದ ಆ ಸ್ಥಳದಲ್ಲಿ (ಪೇಶ್ವೆಗಳ ಸಾಮ್ರಾಜ್ಯದಲ್ಲಿ ಬ್ರಿಟೀಷ್ ಬಾವುಟವನ್ನು ಹಾರಿಸುತ್ತಾರೆ. ವಿಜಯದ ಬಳಿಕ ಕ್ಯಾಪ್ಟನ್ ಸ್ಟಂಡನ್ ಗೆ ಈ ರೀತಿ ಹೇಳಿದನು.
ನಿಮ್ಮ ಕೆಚ್ಚೆದೆಯ ಹೋರಾಟವು ನಾವು ಇಂಡಿಯಾದಲ್ಲಿ ಉಳಿಯಲು ಅಧಿಕಾರವನ್ನು ವಿಸ್ತರಿಸಲು ತುಂಬಾ ಸಹಾಯಕವಾಗಿದೆ ಬ್ರಿಟಿಷ್ ಸತ್ಕಾರವು ನಿಮಗೆ ಎಂದೂ ಮರೆಯಲಾಗದ ಕಾಣಿಕೆ ಬಹುಮಾನವನ್ನು ಉಡುಗೊರೆಯಾಗಿ ಮತ್ತು ಮಡಿದ ಮಹಾಯೋಧರ ವಿಜಯ ಸ್ತಂಭವನ್ನು ಸ್ಥಾಪಿಸುವುದರ ಮೂಲಕ ಗೌರವವನ್ನು ಸಲ್ಲಿಸುತ್ತದೆ. ಹಾಗೆಯೇ ನಿಮಗೆ ನಮ್ಮ ಬ್ರಿಟಿಷ್ ಸೈನ್ಯದಲ್ಲಿ ವಿಶೇಷ ಸ್ಥಾನವನ್ನು ಕಲ್ಪಿಸಿ ನಿಮ್ಮ ಕುಟುಂಬದವರಿಗೆ ಸಕಲ ಸೌಲಭ್ಯವನ್ನು ಒದಗಿಸುವ ಏರ್ಪಾಡು ಮಾಡುತ್ತದೆ. (ಮಹಾರ್ ಸೈನಿಕರು ಸಂತೋಷದಿಂದ ಬ್ರಿಟೀಷ್ ಸತ್ಕಾರಕ್ಕೆ ಜಯವಾಗಲಿ ಮಹಾರ್ ಸೈನ್ಯ ಚಿರಾಯು ಎಂದು ಘೋಷಣೆ ಕೂಗಿದರು.) ರಣರಂಗದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಪೇಶ್ವೆ ಸೈನಿಕರ ಜೊತೆ ವೀರಾವೇಶದಿಂದ ಹೋರಾಡಿ ಜಯ ತಂದುಕೊಟ್ಟು ಹುತಾತ್ಮರಾದ 22 ಅಸ್ಪಶ್ಯಯೋಧರ ನೆನಪಿಗಾಗಿ ಬ್ರಿಟೀಷರು 1921 ರ ಮಾರ್ಚ್ 21 ರಂದು ಯುದ್ಧ ನಡೆದ ಸ್ಥಳದಲ್ಲಿ (ಕೋರೆಗಾಂವ್‌ನಲ್ಲಿ) 65 ಅಡಿ ಎತ್ತರದ ಭವ್ಯ ವಿಜಯ ಸ್ತಂಭವನ್ನು ನಿರ್ಮಿಸಿ, ಆ ಸ್ಥಂಬದ ಮೇಲೆ 22 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಿದರು. ಆ ಭವ್ಯ ವಿಜಯ ಸ್ಥಂಬಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಬ್ರಿಟೀಷರು 22 ಸುತ್ತು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಹುತಾತ್ಮರಿಗೆ ರಾಜ ಮರ್ಯಾದೆಯ ಶ್ರದ್ದಾಂಜಲಿ ಸಲ್ಲಿಸಿದ್ದರು. ಈ ವಿಜಯ ಸ್ಥಂಬದ ಮೇಲೆ ಬ್ರಿಟಿಷರು
“One of the Proudest truimphs of the British Army in the East” (ಬ್ರಿಟೀಷ್ ಯೋಧರಿಗೆ ಭಾರತದ ಪೂರ್ವಭಾಗದಲ್ಲಿ ಸಿಕ್ಕಿದ ಹೆಮ್ಮೆಯ ವಿಜಯವಾಗಿದೆ) ಎಂದೂ ಸಹ ಕೆತ್ತಿಸಿದರು. ಈ ವಿಜಯದ ನಂತರ ಬ್ರಿಟೀಷ್ ಬೋರ್ಡ್ ಆಫ್ ಕಂಟ್ರೋಲ್‌ನ ಅಧ್ಯಕ್ಷ ಜಾರ್ಜ್ ಕ್ಯಾನಿಂಗ್
ಈ ವಿಜಯದ ಬಗ್ಗೆ ಅಚ್ಚರಿ ವ್ಯಕ್ತ ಪಡಿಸುತ್ತಾ “ಸಣ್ಣ ಸಂಖ್ಯೆಯ ಸೈನ್ಯವು ಒಂದು ಬಲಾಢ್ಯ ಸಂಖ್ಯೆಯ ಸೈನ್ಯವನ್ನು ಮಣ್ಣು ಮುಕ್ಕಿಸಿದ ಉದಾಹರಣೆ ಚಿಕ್ಕ ಸಂಖ್ಯೆ ಹೊಂದಿರುವ ಎಲ್ಲಾ ಸೈನಿಕ ಬೆಟಾಲಿಯನ್‌ಗಳಿಗೂ ಅನುಕರಣೀಯವಾಗಿದೆ ” ಎಂದು ಹೇಳಿದರು.

ಅದೇ ರೀತಿ ಜನರಲ್ ಸ್ಮಿತ್ ಕೂಡ ಈ ಗೆಲುವನ್ನು ಉತ್ಸಾಹಪೂರ್ವಕವಾಗಿ ಅಭಿನಂದಿಸಿ “ಇಂಡಿಯಾದ ಬ್ರಿಟಿಷ್ ಸೇನಾ ಇತಿಹಾಸದಲ್ಲಿ ಕೋರೆಗಾಂವ್ ಯುದ್ಧದ ವಿಜಯವೆಂದರೆ ಶೌರ್ಯ ಮತ್ತು ಪರಾಕ್ರಮದ ಯಶೋಗಾಥೆಯೇ ಆಗಿದೆ” ಎಂದು ಉದ್ದಾರವೆತ್ತಿದ್ದಾನೆ. ಈ ಯುದ್ದದ ಇತಿಹಾಸವನ್ನು ಬಗೆದು ಹೊರತೆಗೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 1857ರಲ್ಲಿ ನಡೆದ ‘ಸಿಪಾಯಿ ದಂಗೆ‘ ಗಿಂತ ಸುಮಾರು 40 ವರ್ಷಗಳ ಹಿಂದೆಯೇ ನಡೆದ ಕೋರೆಗಾಂವ್ ದಂಗೆಯ ಬಗ್ಗೆ ಭಾರತದ ಮನುವಾದಿ ಲೇಖಕರು ಬೇಕೆಂತಲೇ ಬೆಳಕು ಚೆಲ್ಲಿರಲಿಲ್ಲ. ಈ ಯುದ್ಧದ ಇತಿಹಾಸವನ್ನು ಹೂತುಹಾಕಿದ್ದರು. ಹುತಾತ್ಮ ಯೋಧರ ನೆನಪಿಗಾಗಿ ಕೋರೆಗಾಂವ್‌ನಲ್ಲಿ ಬ್ರಿಟಿಷರು ನಿರ್ಮಿಸಿದ್ದ ‘ವಿಜಯ ಸ್ಥಂಬ‘ವು ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ಆ ಸ್ತಂಭದ ಸುತ್ತಲೂ ಬೆಳೆದುಕೊಂಡು ಅನಾಥವಾಗಿತ್ತು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು 1922 ರಲ್ಲಿ ಬ್ರಿಟನ್‌ನಲ್ಲಿ ‘ಬಾರ್–ಅಟ್–ಲಾ ‘ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಭಾರತದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಬಗ್ಗೆ ಬ್ರಿಟಿಷ್ ಮ್ಯೂಸಿಯಂ ಲೈಬ್ರರಿಯಲ್ಲಿ ಇಟ್ಟಿದ್ದ ದಾಖಲೆಗಳನ್ನು ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ 1818 ರಂದು ನಡೆದ ಕೋರೆಗಾಂವ್ ಯುದ್ದದ ಬಗ್ಗೆ ಪ್ರಥಮವಾಗಿ ಮಾಹಿತಿ ಸಿಕ್ಕಿತು. ಈ ಮಾಹಿತಿಯ ಆಧಾರದ ಮೇಲೆ ಕೋರೆಗಾಂವ್ ಯುದ್ದದ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸಲು ಪ್ರಾರಂಭಿಸಿದರು. ಕೊನೆಗೆ ಈ ಯುದ್ಧದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದರು, ನಂತರ ಮಹಾರಾಷ್ಟ್ರದ ಪೂನಾ ನಗರದಿಂದ 15 ಕಿ.ಮೀ. ದೂರದಲ್ಲಿರುವ ಕೋರೆಗಾಂವ್‌ಗೆ (ಭೀಮಾನದಿ ತೀರದಲ್ಲಿದೆ) ತೆರಳಿ ‘ವಿಜಯಸ್ಥಂಬ‘ವನ್ನು ಪತ್ತೆ ಹಚ್ಚಿ ಆ ಸ್ಥಳವನ್ನು ಸ್ವಚ್ಛಗೊಳಿಸಿದರು. ಕೊನೆಗೆ ಯುದ್ಧ ನಡೆದು 109 ವರ್ಷಗಳ ನಂತರ ಅಂದರೆ 1927 ರ ಜನವರಿ 1ನೇ ತಾರೀಖಿನಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಪ್ರಥಮ ಬಾರಿಗೆ ‘ವಿಜಯ ಸ್ಟಂಬ‘ಕ್ಕೆ ದೀರ್ಘದಂಡ ನಮಸ್ಕಾರ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಪ್ರಥಮ ಬಾರಿಗೆ (1927ರ ಜನವರಿ 1) ಕೋರೆಗಾಂವ್‌ನಲ್ಲಿ ‘ವಿಜಯ ಸ್ಥಂಬ‘ ಕ್ಕೆ ಗೌರವ ವಂದನೆ ಸಲ್ಲಿಸಿದ ನಂತರ ನಡೆದ ಸಭೆಯಲ್ಲಿ ಮಾತನ್ನಾಡುತ್ತಾ ಈ ರೀತಿ ಹೇಳಿದರು. ಅಂದು ಬ್ರಿಟಿಷರ ಪರವಾಗಿ ಅಸ್ಪೃಶ್ಯ ಯೋಧರು ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ, ಅಸ್ಪೃಶ್ಯ ಯೋಧರು ಬ್ರಿಟಿಷರ ಪರ ಯಾಕೆ ಹೋಗಬೇಕಾಯಿತು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜವೇ ಆಗಿದೆ. ಅಸ್ಪಶ್ಯರು ಮತ್ತೇನು ಮಾಡಲು ಸಾಧ್ಯವಿತ್ತು? ಹಿಂದೂಗಳ ದಬ್ಬಾಳಿಕೆಯನ್ನು ಸುಮ್ಮನೆ ಸಹಿಸಿಕೊಂಡು ಜೀವನ ನಡೆಸಬೇಕಾಗಿತ್ತೆ? ಹಿಂದೂಗಳು ಅವರನ್ನು ಕೀಳು ಎಂದು ಪರಿಗಣಿಸಿ ನಾಯಿ ನರಿಗಳಿಗಿಂತಲೂ ಕೀಳಾಗಿ ಕಂಡಾಗ, ಇನ್ನಿಲ್ಲದಂತೆ ದಬ್ಬಾಳಿಕೆ ನಡೆಸಿದಾಗ, ಅಪಮಾನಿಸಿದಾಗ ಎಲ್ಲವನ್ನೂ ಸಹಿಸಿಕೊಂಡು ಎಷ್ಟು ದಿನ ಬದುಕಬೇಕಾಗಿತ್ತು? ಸ್ವಾಭಿಮಾನದ ನೆಲೆಯಲ್ಲಿ ಮತ್ತು ಹೊಟ್ಟೆಗೆ ಅನ್ನ ದೊರಕಿಸಿಕೊಳ್ಳಲು ಅವರು ಅನಿವಾರ್ಯವಾಗಿ ಬ್ರಿಟೀಷರ ಪರವಾಗಿ ಯುದ್ದ ಮಾಡಿದರೆಂಬುದನ್ನು ಪ್ರತಿಯೊಬ್ಬರೂ ಲಕ್ಷ್ಮದಲ್ಲಿಡಬೇಕು. ಗತಿಸಿದ ಕಾಲವೊಂದರಲ್ಲಿ ನಡೆದ ಈ ಘಟನೆಯಲ್ಲಿ ಅಸ್ಪೃಶ್ಯರು ಅನುಭವಿಸಿದ ಸೋಲು ಗೆಲುವಿನ ನಡುವೆ ಇಂಡಿಯಾದ ಸಾಮಾಜಿಕ ಬದುಕಿನ ಸತ್ಯಗಳನ್ನು ನೀವೇ ನೋಡಿದಿರ. ಇಂತಹ ಅದೆಷ್ಟೋ ಘಟನೆಗಳು ನಡೆದು ಈ ದೇಶದಲ್ಲಿ ಅಸ್ಪೃಶ್ಯರ ಕೌಶಲ್ಯ ಸಾಹಸ, ಮಾನವೀಯ ಮೌಲ್ಯಗಳು ಮಣ್ಣಲ್ಲಿ ಮುಚ್ಚಿ ಹೋಗಿವೆ. ಅವುಗಳೆಲ್ಲವನ್ನೂ ನಾನು ಬಗೆದು ಹೊರತೆಗೆದೇ ತೀರುತ್ತೇನೆ. (ಈ ಯುದ್ದವನ್ನಾಧರಿಸಿ ಶ್ರೀ ಅರುಣ್ ಶೌರಿಯವರು ತಮ್ಮ ‘ವರ್ಷಿಪಿಂಗ್ ಫಾಲ್ಸ್ ಗಾಡ್ ಎಂಬ ಪುಸ್ತಕದಲ್ಲಿ “ಅಸ್ಪೃಶ್ಯರು ಬ್ರಿಟೀಷರ ಪರವಾಗಿ ಹೋರಾಡಿ ಬ್ರಿಟಿಷರಿಗೆ ಗೆಲುವನ್ನು ಕೊಟ್ಟಿದ್ದಾರೆ, ಆ ಮೂಲಕ ಅವರು ಭಾರತದ ವಿರುದ್ದವೇ ಹೋರಾಡಿದಂತಾಗಿದೆ” ಎಂದು ಬರೆದಿದ್ದಾರೆ. ಒಂದೆಡೆ ಅಸ್ಪೃಶ್ಯರು ಬ್ರಿಟೀಷರ ಪರ ಹೋರಾಡಲು ಕಾರಣಗಳೇನು ಎಂದು ಗೊತ್ತಿದ್ದರೂ ಸಹ ಆ ಪುಸ್ತಕದಲ್ಲಿ ಬರೆದಿಲ್ಲ.) ಆ ಸಭೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಮುಂದುವರಿದು ಮಾತನಾಡುತ್ತಾ ಈ ರೀತಿ ಹೇಳಿದರು. “ಯಾವ ಅಸ್ಪೃಶ್ಯ ಯೋಧರು ಹಲವಾರು ಯುದ್ಧಗಳಲ್ಲಿ ತಮ್ಮಗಳ ಪರಾಕ್ರಮದಿಂದ ಬ್ರಿಟೀಷರಿಗೆ ವಿಜಯ ತಂದುಕೊಟ್ಟರೋ, ಇಂದು ಅಂತಹ ವೀರತನವನ್ನೇ ಹೊಂದಿರುವ ಅಸ್ಪೃಶ್ಯ ಯುವಕರನ್ನು ಸೇವೆಗೆ ಸೇರಿಸಿಕೊಳ್ಳಲು ಬ್ರಿಟೀಷ್ ಸರ್ಕಾರ ನಿರ್ಬಂಧ ಹೇರಿದ್ದು ನಂಬಿಕೆ ದ್ರೋಹವೇ ಆಗಿದೆ. ಅಸ್ಪೃಶ್ಯ ಯುವಕರು ಸೇನೆ ಸೇರುವುದನ್ನು ನಿಷೇಧಿಸಿರುವ ಬ್ರಿಟೀಷ್ ಸರ್ಕಾರ ಅದನ್ನು ತಕ್ಷಣವೇ ಹಿಂಪಡೆದು ಅಸ್ಪೃಶ್ಯ ಯುವಕರು ಸೇನೆ ಸೇರಲು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ಒಂದು ವೇಳೆ ಬ್ರಿಟೀಷ್ ಸರ್ಕಾರದ ವಿರುದ್ದ ಉಗ್ರ ಚಳುವಳಿಯನ್ನು ಮಾಡಬೇಕಾಗುತ್ತದೆ.” (1892ರಿಂದ ಬ್ರಿಟೀಷ್ ಸರ್ಕಾರವು ಭಾರತದಲ್ಲಿ ಅಸ್ಪೃಶ್ಯರು ಸೇನೆ ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸತತ ಹೋರಾಟದ ಫಲವಾಗಿ 1941 ರಲ್ಲಿ ಈ ನಿಷೇಧವನ್ನು ತೆಗೆದುಹಾಕಲಾಯಿತು.) 1927 ರಿಂದ ಪ್ರಾರಂಭಿಸಿ ತಾವು ಬದುಕಿರುವವರೆಗೂ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಪ್ರತಿವರ್ಷ ಜನವರಿ 1ನೇ ತಾರೀಖಿನಂದು ತಮ್ಮ ಕುಟುಂಬ ಹಾಗೂ ತನ್ನ ಸಾವಿರಾರು ಅನುಯಾಯಿಗಳೊಂದಿಗೆ ಆ ಸ್ಥಳಕ್ಕೆ ಭೇಟಿ ನೀಡಿ ‘ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದರು. ಈಗ ಪ್ರತಿವರ್ಷ ಜನವರಿ 1ನೇ ತಾರೀಖಿನಂದು ಭಾರತದ ಮೂಲೆ ಮೂಲೆಗಳಿಂದ ನಿವೃತ್ತಯೋಧರುಗಳು ಸೇರಿದಂತೆ ಲಕ್ಷಾಂತರ ಜನರು ಕೋರೆಗಾಂವ್‌ಗೆ ಭೇಟಿ ನೀಡಿ ‘ವಿಜಯ ಸ್ಟಂಬ‘ಕ್ಕೆ ನಮಿಸಿ ಹುತಾತ್ಮ ಅಸ್ಪೃಶ್ಯ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಅಲ್ಲಿಗೆ ತೆರಳುವ ಜನರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜನವರಿ 1ನೇ ತಾರೀಖಿನಂದು ನಡೆಯುವ ಸ್ಮೃತಿ ದಿನ ಕಾರ್ಯಕ್ರಮವು ಸುವ್ಯವಸ್ಥಿತವಾಗಿ ನಡೆಯಲೆಂದು ಅದರ ಉಸ್ತುವಾರಿಗಾಗಿ ಒಂದು ಕಾರ್ಯಕಾರಿಣಿ ಮಂಡಳಿಯನ್ನು ಸ್ಥಾಪಿಸಲಾಗಿದೆ. “ನನ್ನ ಜನರಿಗೆ ಆಯುಧ ಹಿಡಿಯುವ ಅಧಿಕಾರ ನೀಡಿದ್ದರೆ ಈ ದೇಶ ಎಂದೂ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿರಲಿಲ್ಲ ಹಾಗೂ ನನ್ನ ಸಾಮಾಜಿಕ ತತ್ವವು ಮೂರು ಪದಗಳಲ್ಲಿ ಅಡಕವಾಗಿದೆ. ಅವುಗಳೆಂದರೆ; ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂದಿದ್ದಾರೆ ಡಾ.ಬಿ.ಆರ್. ಅಂಬೇಡ್ಕರ್.

ನಾಡಿನ ಸಮಸ್ತ ಜನತೆಗೆ 204ನೇ ಭೀಮಾ ಕೊರೆಗಾಂವ್ ವಿಜಯೋತ್ಸವದ ಶುಭಾಶಯಗಳು 💐💐

ಪ್ರತಾಪ್ ಛಲವಾದಿ
ಹರಪನಹಳ್ಳಿ ತಾಲೂಕು ಛಲವಾದಿ ಮಹಾಸಭಾ ಘಟಕದ ಪ್ರಧಾನ ಕಾರ್ಯದರ್ಶಿಗಳು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend