ಪ್ರಜಾಪ್ರಭುತ್ವ ಮತ್ತು ಅದರ ಆಶಯಗಳ ಬೆನ್ನಿಗೆ ಚೂರಿ ಹಾಕಿದ ಟಿವಿ ಸುದ್ದಿ ವಾಹಿನಿಗಳು.!

Listen to this article

ಪ್ರಜಾಪ್ರಭುತ್ವ ಮತ್ತು ಅದರ ಆಶಯಗಳ ಬೆನ್ನಿಗೆ ಚೂರಿ ಹಾಕಿದ ಟಿವಿ ಸುದ್ದಿ ವಾಹಿನಿಗಳು.!

ಪಕ್ಷಾಂತರಿಗಳಿಗೆ – ರಾಜಕೀಯ ಬ್ರೋಕರ್ ಗಳಿಗೆ – ಸಾರ್ವಜನಿಕ ಹಣದ ದರೋಡೆಕೋರರಿಗೆ ಮಣೆ ಹಾಕಿ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣರಾದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ.!

ವಿರೋಧ ಪಕ್ಷವಾಗಿ ಕೆಲಸ ಮಾಡಿ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾಗಿದ್ದ ಈ ಮಾಧ್ಯಮಗಳು ಆಳುವವರ ತತ್ತೂರಿಯಾಗಿ ಧ್ವನಿ ಇಲ್ಲದವರ ಸಮಾಧಿಯ ಮೇಲೆ ಮಹಲು ಕಟ್ಟಿದವರು. ಸಮಾಜದ ಪ್ರಾಮಾಣಿಕ ಮತ್ತು ಪ್ರಬುದ್ಧ ವ್ಯಕ್ತಿಗಳಿಗೆ ವೇದಿಕೆ ಕಲ್ಪಿಸುವ ಜವಾಬ್ದಾರಿ ನಿರ್ವಹಿಸದೆ ಕೂಗು ಮಾರಿಗಳಿಗೆ ಅವಕಾಶ ಕಲ್ಪಿಸಿ ಇಡೀ ವ್ಯವಸ್ಥೆ ಅಸಹಿಷ್ಣುತೆ ಅಸಮಾಧಾನದಿಂದ ಭುಗಿಲೇಳುವಂತೆ ಮಾಡಿದ ಈ ಮಾಧ್ಯಮಗಳು.

ಚಿಂತನೆ – ಅಧ್ಯಯನ – ದೂರದೃಷ್ಟಿ – ವಿಶಾಲ ಮತ್ತು ಸೂಕ್ಷ್ಮ ಮನಸ್ಥಿತಿ – ಜನಪ್ರಿಯತೆ ಮೀರಿ ಸತ್ಯ ಮತ್ತು ‌ವಾಸ್ತವದ ಹುಡುಕಾಟ ಮಾಡಬೇಕಿದ್ದ ಈ‌ ಪತ್ರಕರ್ತರು ಅತ್ಯಂತ ‌ಕೆಳ ಮಟ್ಟದ ಭಾಷೆ ವಿಷಯ ಸಂಗ್ರಹ ಮತ್ತು ಗ್ರಹಿಕೆ, ನಿರೂಪಣೆ ಹಾಗು ಚರ್ಚಾ ವಿಧಾನಗಳನ್ನೇ ಮಲಿನ ಗೊಳಿಸಿ ಪತ್ರಿಕಾ ಧರ್ಮವನ್ನೇ ಕತ್ತು ಹಿಸುಕಿ ಧರ್ಮ ಭ್ರಷ್ಟರಾಗಿದ್ದಾರೆ.

ಒಳ್ಳೆಯ ‌ಅಂಶಗಳು ಮತ್ತು ಒಳ್ಳೆಯ ವ್ಯಕ್ತಿಗಳು ಒಳ್ಳೆಯ ವಿಚಾರಗಳನ್ನು ಹೆಚ್ಚು ಪ್ರಸಾರ ಮಾಡುವ ಮೂಲಕ ಸಮಾಜ ಮುಖಿ ಚಿಂತನೆಗಳಿಗೆ ಪ್ರೋತ್ಸಾಹ ನೀಡಿ, ಕೆಟ್ಟ ವಿಷಯ ಕೆಟ್ಟ ವ್ಯಕ್ತಿಗಳಿಗೆ ವಿರೋಧ ಮಾಡಬೇಕಿದ್ದ ಈ‌ ಮಾಧ್ಯಮಗಳು ವಿಕೃತ ಮನಸ್ಥಿತಿಯವರನ್ನು ಪ್ರೋತ್ಸಾಹಿಸುವ ಮೂಲಕ ಸಮಾಜಕ್ಕೆ ಹುಚ್ಚು ಹಿಡಿಸುವ ಕೆಲಸ ಮಾಡುತ್ತಿದ್ದಾರೆ!

ಇಂದು ರಾಜ್ಯದ ಭವಿಷ್ಯವೆಂದೇ ಪರಿಗಣಿಸಲಾದ ಲಕ್ಷಾಂತರ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಆತಂಕದಲ್ಲಿ ಇರುವಾಗ ಆ ಬಗ್ಗೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯಕ್ರಮಗಳನ್ನು ಇಡೀ ದಿನ ಪ್ರಸಾರ ಮಾಡುವ ಬದಲು ಒಂದು ಸಿನಿಮಾದ ಟ್ರೈಲರ್ ಬಿಡುಗಡೆಯನ್ನು ವಿಜೃಂಭಿಸಿದರೆ ಇವರನ್ನು ಪತ್ರಕರ್ತರು ಎಂದು ಕರೆಯಬೇಕೆ ಅಥವಾ ಪಡ್ಡೆಗಳು ಎನ್ನಬೇಕೆ ಎಂಬ ನಿರ್ಧಾರ ನಿಮ್ಮ ವಿವೇಚನೆಗೆ ಸೇರಿದ್ದು.

ಜೇಮ್ಸ್ ,ಆರ್ ಆರ್ ಆರ್, ಕೆಜಿಎಪ್ ಸಿನಿಮಾಗಳೇ ಮುಖ್ಯ ಸುದ್ದಿಗಳಾದರೆ ರೈತ ಹೋರಾಟದ ಅನೇಕ ಕಾರ್ಯಕ್ರಮಗಳು, ಕೋಮು ಸಾಮರಸ್ಯದ ವಿಚಾರ ಸಂಕಿರಣಗಳು, ಭ್ರಷ್ಟಾಚಾರ ವಿರುದ್ಧದ ಸಂವಾದಗಳು, ಸಾಹಿತ್ಯದ ಚಟುವಟಿಕೆಗಳನ್ನು ನಿರ್ಲಕ್ಷಿಸಿ ಒಂದು ಉತ್ತಮ ಸಮಾಜ ನಿರ್ಮಿಸುವುದು ಹೇಗೆ!?

ಸಂವಿಧಾನದ ಆಶಯದಂತೆ ಸಾರ್ವಜನಿಕರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಬೇಕಾದ ಜವಾಬ್ದಾರಿ ಹೊತ್ತಿದ್ದ ಮಾಧ್ಯಮಗಳು ಮೂಡ ನಂಬಿಕೆಯ ಪ್ರಚಾರ ರಾಯಭಾರಿಗಳಾಗಿದ್ದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ.

ವಯಲೆನ್ಸ್ ( Violence ) ಹಿಂಸೆ ಅಥವಾ ಕ್ರೌರ್ಯ ನನಗೆ ಇಷ್ಟ ಎಂಬ ಸಿನಿಮಾ ಸಂಭಾಷಣೆಯನ್ನೇ ಅತ್ಯದ್ಭುತ ಕ್ರಾಂತಿ ಎಂಬಂತೆ ಬ್ರೇಕಿಂಗ್ ನ್ಯೂಸ್ ಮಾಡಿದ ಈ ಮಾಧ್ಯಮಗಳ ಬಫೂನ್ ಗಿರಿ ಎಲ್ಲಾ ಮಿತಿಗಳನ್ನು ಮೀರಿ ಮಾನಸಿಕ ಅಸ್ವಸ್ಥತೆಯ ಅಂತಿಮ ಹಂತ ತಲುಪಿದೆ.

ದಯವಿಟ್ಟು ಇನ್ನು ಮುಂದೆ ಟಿವಿ ವಾಹಿನಿಗಳ ಅಭಿಪ್ರಾಯ ಅವರ ಸ್ವಂತ ಸಂಸ್ಥೆಯ ಹೊಟ್ಟೆ ಪಾಡಿಗಾಗಿ ಅಥವಾ ಅವರ ಬದುಕಿಗಾಗಿ – ಬೆಳವಣಿಗೆಗಾಗಿ ರೂಪಿಸಿಕೊಂಡ ಅಭಿಪ್ರಾಯವೇ ಹೊರತು ಇಡೀ ರಾಜ್ಯದ ಸಾರ್ವಜನಿಕ ಅಭಿಪ್ರಾಯ ಎಂಬುದನ್ನು ತಿರಸ್ಕರಿಸೋಣ.

ರಾಜ್ಯದ ಜನರ ನಿಜವಾದ ಭಾವನೆಗಳನ್ನು – ಅಸಹಾಯಕ ಧ್ವನಿಗಳನ್ನು ಗ್ರಹಿಸುವಷ್ಟು ಪ್ರಬುದ್ಧತೆ, ವಿಶಾಲತೆ, ತಾಳ್ಮೆ ವಿವೇಚನೆ ಬಹುತೇಕ ಮಾಧ್ಯಮ ಮಿತ್ರರಿಗೆ ಇಲ್ಲ. ಹೌದು ಈಗಲೂ ರಾಜ್ಯದಲ್ಲಿ ಕೆಲವು ಅತ್ಯುತ್ತಮ ಪತ್ರಕರ್ತರು ಇದ್ದಾರೆ. ತುಂಬಾ ಸೂಕ್ಷ್ಮ ಗ್ರಹಿಕೆಯ ಬರಹಗಳು ಈಗಲೂ ಮುದ್ರಣ ಮಾಧ್ಯಮದಲ್ಲಿ ಬರುತ್ತದೆ. ಆದರೆ ಈ ಎಲೆಕ್ಟ್ರಾನಿಕ್ ಮಾಧ್ಯಮಗಳ ಅಬ್ಬರದಲ್ಲಿ ಅದು ಕ್ಷೀಣವಾಗಿದೆ.!

ಮತ್ತೆ ನೈಜ ಪತ್ರಕರ್ತರು, ವಾಸ್ತವ ಸುದ್ದಿಗಳು, ಜವಾಬ್ದಾರಿ ಮಾಹಿತಿಗಳು, ವೈಚಾರಿಕ ಚಿಂತನೆಗಳಿಗೆ ಪ್ರಾಮುಖ್ಯತೆ ಸಿಗುವ ಕಾಲವನ್ನು ಸಂದರ್ಭವನ್ನು ಮರು ಸೃಷ್ಟಿ ಮಾಡುವ ಜವಾಬ್ದಾರಿಯನ್ನು ಪ್ರಜ್ಞಾವಂತರಾದ ಜನರು ತೆಗೆದುಕೊಳ್ಳೋಣ ಎಂದು ಪ್ರೀತಿ ಪೂರ್ವಕ ಮನವಿ…

ವರದಿ. ಅಜಯ್, ಚ, ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend