ಲೋಕಸಭಾ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ, ಮೇ 07 ರ ಮತದಾನ ಕಾರ್ಯಕ್ಕೆ ಸಕಲ ಸಜ್ಜು…!!!

Listen to this article

ಬಳ್ಳಾರಿ ಲೋಕಸಭೆ ಕ್ಷೇತ್ರ ಚುನಾವಣೆ; ಅಚ್ಚುಕಟ್ಟಾಗಿ ನಡೆದ ಮಸ್ಟರಿಂಗ್ ಕಾರ್ಯ
ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ, ಮೇ 07 ರ ಮತದಾನ ಕಾರ್ಯಕ್ಕೆ ಸಕಲ ಸಜ್ಜು
ಬಳ್ಳಾರಿ:ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಕಂಪ್ಲಿ, ಬಳ್ಳಾರಿ ಗ್ರಾಮೀಣ ಹಾಗೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಗಟ್ಟೆ ಸಿಬ್ಬಂದಿಗಳಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಬಳ್ಳಾರಿ ನಗರದ ವಿವಿಧೆಡೆ ಸೋಮವಾರದಂದು ಅಚ್ಚುಕಟ್ಟಾಗಿ ನೆರವೇರಿದ್ದು, ಮತದಾನ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ, ಸಿಬ್ಬಂದಿ ಮತಗಟ್ಟೆಗಳತ್ತ ಬಿರು ಬಿಸಿಲಿನ ನಡುವೆಯೂ ಹುರುಪಿನಿಂದ ತೆರಳಿದರು.


91-ಕಂಪ್ಲಿ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ನಗರದ ಸುಧಾಕ್ರಾಸ್‍ನ ಸೆಂಟ್ ಫಿಲೊಮೀನಾ ಪಬ್ಲಿಕ್ ಸ್ಕೂಲ್, 93-ಬಳ್ಳಾರಿ ಗ್ರಾಮೀಣ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣ ಮತ್ತು 94-ಬಳ್ಳಾರಿ ನಗರ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ನಗರದ ಕೋಟೆ ಪ್ರದೇಶದ ಸೆಂಟ್ ಜಾನ್ಸ್ ಕಂಪೆಸಿಸಿಟ್ ಜ್ಯೂನಿಯರ್ ಕಾಲೇಜ್‍ನಲ್ಲಿ ಸೋಮವಾರ ಅಚ್ಚುಕಟ್ಟಾಗಿ ಜರುಗಿತು. ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಬೆಳಿಗ್ಗೆಯಿಂದಲೇ ಹಾಜರಿದ್ದು, ಮಸ್ಟರಿಂಗ್ ಕಾರ್ಯ ಪೂರ್ಣಗೊಳ್ಳುವವರೆಗೂ ಮೇಲುಸ್ತುವಾರಿ ವಹಿಸಿದ್ದರು.
ಮತಗಟ್ಟೆಗಳಿಗೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಮಸ್ಟರಿಂಗ್ ಕಾರ್ಯ ಜರುಗುವ ಕಾಲೇಜುಗಳ ಆವರಣದಲ್ಲಿ ಸೇರತೊಡಗಿದರು. ಇದರ ಜೊತೆಗೆ ಚುನಾವಣೆ ಕಾರ್ಯ ಹಾಗೂ ಮತಗಟ್ಟೆಯ ಬಂದೋಬಸ್ತ್‍ಗಾಗಿ ನಿಯೋಜಿತಗೊಂಡಿರುವ ಪೊಲೀಸರು ಸಿ ಆರ್ ಪಿ ಫ್ ಯೋಧರು, ಗೃಹರಕ್ಷಕ ದಳದವರು ಕೂಡ ಆಗಮಿಸಿದ್ದರು.


ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿ, ಸಿಬ್ಬಂದಿ ಹಾಗೂ ಪೋಲೀಸರು, ಯೋಧರನ್ನು ಕರೆದುಕೊಂಡು ಹೋಗಲು ಬಸ್, ಕ್ರೂಸರ್ ಹಾಗೂ ಜೀಪ್‍ಗಳು ಕಾಲೇಜುಗಳ ಆವರಣದಲ್ಲಿ ಸಾಲಾಗಿ ಜಮಾವಣೆಗೊಂಡಿದ್ದವು.
ಆಯಾ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳಲ್ಲಿನ ಮತಗಟ್ಟೆಗಳತ್ತ ತೆರಳುವಂತಹ ಮಾರ್ಗಗಳನ್ನು ಗುರುತಿಸಿ, ಬಸ್, ಕ್ರೂಸರ್ ಹಾಗೂ ಮಿನಿ ಬಸ್ ಮುಂತಾದ ವಾಹನಗಳನ್ನು ನಿಯೋಜಿಸಲಾಗಿತ್ತು. ಕಾಲೇಜು ಆವರಣದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ತಾವು ತೆರಳಬೇಕಿರುವ ಮತಗಟ್ಟೆಯ ವಿವರ ಹಾಗೂ ಬಸ್‍ಗಳ ವಿವರವನ್ನು ಧ್ವನಿವರ್ಧಕ ಮೂಲಕ ತಿಳಿಸುವ ವ್ಯವಸ್ಥೆ ಮಾಡಲಾಗಿತ್ತು.
ಇನ್ನೊಂದೆಡೆ, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣಾ ಸಾಮಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್ ಯಂತ್ರದ ಪೆಟ್ಟಿಗೆ ಹಾಗೂ ವಿಶೇಷ ಕಿಟ್ ಬ್ಯಾಗ್ ಜೊತೆಗೆ ಹೆಲ್ತ್‍ಕಿಟ್‍ಅನ್ನು ವಿತರಿಸಲು ಸೆಕ್ಟರ್‍ವಾರು ಕೌಂಟರ್‍ಗಳನ್ನು ಸ್ಥಾಪಿಸಿ, ಆ ಮೂಲಕ ಸಂಬಂಧಪಟ್ಟ ಮತಗಟ್ಟೆಗಳ ಸಿಬ್ಬಂದಿಗೆ ಚುನಾವಣಾ ಸಾಮಗ್ರಿ ವಿತರಿಸುವ ಕಾರ್ಯ ವ್ಯವಸ್ಥಿತವಾಗಿ ಕೈಗೊಳ್ಳಲಾಯಿತು.


ಯಾವುದೇ ಅಧಿಕಾರಿ, ಸಿಬ್ಬಂದಿಗಳಿಗೆ ಗೊಂದಲಕ್ಕೆ ಆಸ್ಪದವಿಲ್ಲದಂತೆ, ಮಸ್ಟರಿಂಗ್ ಕಾರ್ಯಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು. ಮಸ್ಟರಿಂಗ್ ಕಾರ್ಯಕ್ಕೆ ಆಗಮಿಸಿದ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಲ್ಲಿ, ತ್ವರಿತ ಸ್ಪಂದನೆಗಾಗಿ, ವೈದ್ಯರಿಂದ ಆರೋಗ್ಯ ತಪಾಸಣೆ, ಅಗತ್ಯ ಔಷಧಿಗಳು, ಓಆರ್‍ಎಸ್, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.
ಚುನಾವಣಾ ಮಸ್ಟರಿಂಗ್ ಕೆಲಸ ವೀಕ್ಷಿಸಿದ ಚುನಾವಣಾ ಸಾಮಾನ್ಯ ವೀಕ್ಷಕರು, ಜಿಲ್ಲಾಧಿಕಾರಿಗಳು:
ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ್ ಸಖಮುರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಇಂದು, ನಗರದ ಕೋಟೆ ಪ್ರದೇಶದ ಸೆಂಟ್ ಜಾನ್ಸ್ ಕಂಪೆÇೀಸಿಟ್ ಜ್ಯೂನಿಯರ್ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮಸ್ಟರಿಂಗ್ ಕೆಲಸವನ್ನು ಪರಿಶೀಲನೆ ನಡೆಸಿದರು.
ಪ್ರಸ್ತುತ ಜಿಲ್ಲೆಯಲ್ಲಿ ಬಿರು ಬಿಸಿಲಿದೆ, ಅಧಿಕಾರಿ, ಸಿಬ್ಬಂದಿಗಳು ತಮ್ಮ ಆರೋಗ್ಯದ ಕಡೆಗೂ ಗಮನವಿರಿಸಿಕೊಂಡು, ಯಾವುದೇ ಆತಂಕವಿಲ್ಲದೆ, ಧೈರ್ಯದಿಂದ ಹಾಗೂ ಪ್ರಾಮಾಣಿಕತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸುವಂತೆ ನೈತಿಕ ಸ್ಥೈರ್ಯ ತುಂಬಿದರು.
ಚುನಾವಣೆ ಕೆಲಸವನ್ನು ಯಾವುದೇ ಲೋಪ ದೋಷಗಳು ಆಗದಂತೆ ಚುನಾವಣೆ ನಿಯೋಜಿತವಾದ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.


ಈ ಬಾರಿ ಬಿಸಿಲಿನ ತಾಪಮಾನ ಜಾಸ್ತಿಯಾಗಿರುವುದರಿಂದ, ಮತಗಟ್ಟೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಲು ತಿಳಿಸಿದರು.
ಇದಕ್ಕೂ ಮುನ್ನ ಸಂಡೂರು ಕ್ಷೇತ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಅಚ್ಚುಕಟ್ಟಾದ ವ್ಯವಸ್ಥೆ:
ನಗರದ ವಿವಿಧ ಶಾಲಾ ಕಾಲೇಜು ಆವರಣದಲ್ಲಿ ಏರ್ಪಡಿಸಲಾದ ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ, ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ನೆರವೇರಿಸಲು ಪೂರ್ವಭಾವಿಯಾಗಿ ಯೋಜನೆ ರೂಪಿಸಿ, ಅದರಂತೆಯೇ ಕಾರ್ಯಗತಗೊಳಿಸಲಾಯಿತು. ಚುನಾವಣಾ ಸಾಮಗ್ರಿ ವಿತರಣೆ, ಮತಯಂತ್ರಗಳ ವಿತರಣೆ, ಚುನಾವಣೆಗೆ ಮತಗಟ್ಟೆಗಳಿಗೆ ನಿಯೋಜನೆ, ಚುನಾವಣಾ ಕರ್ತವ್ಯಕ್ಕೆ ತೆರಳಲು ಆಗಮಿಸಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ಕಾಲೇಜು ಆವರಣದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಉಟೋಪಹಾರದ ವ್ಯವಸ್ಥೆ ಕೈಗೊಳ್ಳಲಾಯಿತು. ಮತಗಟ್ಟೆಗಳತ್ತ ತೆರಳುವ ಮುನ್ನ ಮಧ್ಯಾಹ್ನದ ಊಟ ಪೂರೈಸಿಕೊಂಡು ಹೋಗುವ ರೀತಿ ವ್ಯವಸ್ಥೆ ಮಾಡಲಾಯಿತು.
ಮಧ್ಯಾಹ್ನದ ಊಟಕ್ಕೆ ಚಪಾತಿ, ಕಾಳು ಪಲ್ಯೆ, ಅನ್ನ ಸಾಂಬಾರ್ ಜೊತೆಗೆ, ಪಾಯಸದ ಸಿಹಿ ತಿನಿಸಿನ ವ್ಯವಸ್ಥೆ ಮಾಡಲಾಗಿತ್ತು. ಊಟದ ವಿತರಣೆ ಸ್ಥಳದಲ್ಲಿ ಗೊಂದಲ ಉಂಟಾಗದಂತೆ, ಸಾಕಷ್ಟು ಸಂಖ್ಯೆಯಲ್ಲಿ ಕೌಂಟರ್‍ಗಳನ್ನು ತೆರೆದು, ಸರದಿ ಸಾಲಿನಲ್ಲಿ ಬಂದು ಊಟ ಸ್ವೀಕರಿಸಲು ವ್ಯವಸ್ಥೆಗೊಳಿಸಲಾಗಿತ್ತು. ಮತದಾನ ಕಾರ್ಯಕ್ಕೆ ನೇಮಕಗೊಂಡಿರುವ ಹಲವು ಅಧಿಕಾರಿ, ಸಿಬ್ಬಂದಿಗಳೂ ಕೂಡ ಮಸ್ಟರಿಂಗ್ ಕಾರ್ಯಕ್ಕೆ ಕೈಗೊಂಡ ವ್ಯವಸ್ಥೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಮಧ್ಯಾಹ್ನದ ಊಟ ಸವಿದ ಅಧಿಕಾರಿ, ಸಿಬ್ಬಂದಿಗಳು, ತಮಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ಆಯಾ ಮಾರ್ಗದ ವಾಹನಗಳ ಮೂಲಕ ತೆರಳಿದರು.


1219 ಮತಗಟ್ಟೆಗಳು:
ಜಿಲ್ಲೆಯಲ್ಲಿ ಒಟ್ಟು 1,219 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಂಪ್ಲಿ-242, ಸಿರಗುಪ್ಪ-228, ಬಳ್ಳಾರಿ ಗ್ರಾಮೀಣ-235, ಬಳ್ಳಾರಿ ನಗರ-261 ಹಾಗೂ ಸಂಡೂರು ಕ್ಷೇತ್ರದಲ್ಲಿ 253 ಮತಗಟ್ಟೆಗಳಿವೆ. ಜಿಲ್ಲೆಯ 5 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 299 ಸೂಕ್ಷ್ಮ ಹಾಗೂ 69 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ.
ಒಟ್ಟಾರೆ ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 1972 ಮತಗಟ್ಟೆಗಳಿಗೆ 2506 (ಬ್ಯಾಲೆಟ್ ಯುನಿಟ್), 2767 (ಕಂಟ್ರೋಲ್ ಯುನಿಟ್) ಮತ್ತು 2630 (ವಿ.ವಿ.ಪ್ಯಾಟ್)ಗಳನ್ನು ಬಳಸಲಾಗುತ್ತಿದೆ.
5952 ಸಿಬ್ಬಂದಿ ಮತಗಟ್ಟೆ ಕರ್ತವ್ಯಕ್ಕೆ ನೇಮಕ:
ಜಿಲ್ಲೆಯಲ್ಲಿ ಮತದಾನ ಕಾರ್ಯ ಸಮರ್ಪಕವಾಗಿ ಜರುಗಿಸಲು ಒಟ್ಟು 5952 ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 1,395 ಪಿ.ಆರ್.ಒ., 1,395 ಎ.ಪಿ.ಆರ್.ಒ., 2,790 ಪಿ.ಓ ಹಾಗೂ 372 ಮೈಕ್ರೋ ಅಬ್ಸರ್ವರ್ಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಂಪ್ಲಿ ಕ್ಷೇತ್ರಕ್ಕೆ 1183, ಸಿರಗುಪ್ಪ-1097, ಬಳ್ಳಾರಿ ಗ್ರಾಮೀಣ-1196, ಬಳ್ಳಾರಿ ನಗರ-1261 ಹಾಗೂ ಸಂಡೂರು ಕ್ಷೇತ್ರಕ್ಕೆ 1215 ಸಿಬ್ಬಂದಿಗಳು ಮತದಾನ ದಿನದ ಕಾರ್ಯಕ್ಕೆ ನಿಯೋಜಿತಗೊಂಡಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 18,84,469 ಮತದಾರರು:


ಬಳ್ಳಾರಿ (ವಿಜಯನಗರ ಒಳಗೊಂಡಂತೆ) ಲೋಕಸಭೆ ಕ್ಷೇತ್ರದಲ್ಲಿ 92,92,74 ಪುರುಷ ಮತದಾರರು ಮತ್ತು 9,54,929 ಮಹಿಳಾ ಮತದಾರರು, 266 ತೃತೀಯ ಲಿಂಗಿ ಮತದಾರರು ಸೇರಿ ಒಟ್ಟು 18,84,469 ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 61,006 ಯುವ ಮತದಾರರು ಪ್ರಥಮ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.
ಮತದಾನ ಕಾರ್ಯ ಮೇ 07 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಡೆಯಲಿದ್ದು, ಸುಗಮ ಮತದಾನಕ್ಕೆ ಅಗತ್ಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. ಮತದಾರರು ತಪ್ಪದೆ ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತಾಗಲಿ ಎಂಬುದು ಜಿಲ್ಲಾಡಳಿತದ ಆಶಯವಾಗಿದೆ….

ವರದಿ. ವಿರೇಶ್, ಎಚ್, ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend