ಮೇಕೆದಾಟು ಎಂದರೇನು ಇದು,ಕರ್ನಾಟಕಕ್ಕೂ ಮತ್ತು ತಮಿಳುನಾಡಿಗೆ ಏನು ಸಂಬಂಧ ಇದರ ಸಂಪೂರ್ಣ ಮಾಹಿತಿ…!!!

Listen to this article

ಮೇಕೆದಾಟು ಎಂದರೇನು ಇದು ಹೇಗೆ ಪ್ರಾರಂಭವಾಯಿತು ಕರ್ನಾಟಕಕ್ಕು ಮತ್ತು ತಮಿಳುನಾಡಿಗೆ ಏನು ಸಂಬಂಧ ಇದರ ಸಂಪೂರ್ಣ ಮಾಹಿತಿ

 

ಕಾವೇರಿ ನೀರಿಗಾಗಿ ಸದಾ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ಈಗ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದೆ. ಕರ್ನಾಟಕ ಸರ್ಕಾರ ಕುಡಿಯುವ ನೀರಿಗಾಗಿ ರಾಮನಗರದ ಮೇಕೆದಾಟು ಎಂಬಲ್ಲಿ ಕಿರು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗುತ್ತಿರುವುದು ತಮಿಳುನಾಡು ಸರ್ಕಾರದ ಪಿತ್ತ ನೆತ್ತಿಗೇರಿದೆ. ಸದಾ ಕಾವೇರಿ ವಿವಾದವನ್ನೇ ಬಂಡವಾಳ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವ ತಮಿಳುನಾಡು ಮೇಕೆದಾಟು ಯೋಜನೆ ವಿರೋಧಿಸಿ ಪ್ರಧಾನಿಗೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ.

ನಮ್ಮ ಕಡೆಯಿಂದ ಯಾವುದೇ ತಪ್ಪಿಲ್ಲದಿದ್ದರೂ ನಮ್ಮ ನೀರಿಗೆ ಕಲ್ಲು ಹಾಕುತ್ತಿರುವ ತಮಿಳುನಾಡು ವಿರುದ್ಧ ರಾಜ್ಯದ ಕನ್ನಡ ಪರ ಸಂಘಟನೆಗಳು, ರಾಜಕೀಯ ಪಕ್ಷಗಳು ರಾಜ್ಯದಲ್ಲೂ ಪ್ರತಿಭಟನೆ ನಡೆದಿದೆ. ಹೀಗಾಗಿ ಮೇಕೆದಾಟು ಯೋಜನೆ ಅಂದರೆ ಏನು? ಎರಡು ರಾಜ್ಯಗಳಲ್ಲಿ ಪ್ರತಿಭಟನೆ ಯಾಕೆ ನಡೆಯುತ್ತದೆ? ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

 

ಮೇಕೆದಾಟು ಏನು?
ಮೇಕೆದಾಟು ಎಂದರೇನು ಎಂದು ಕೇಳಿದರೆ ಸಿಗುವ ಉತ್ತರ ಪಿಕ್ನಿಕ್ ಸ್ಪಾಟ್. ಬೆಂಗಳೂರಿನಿಂದ 90 ಕಿ.ಮೀ ದೂರದ ರಾಮನಗರ ಜಿಲ್ಲೆಯಲ್ಲಿರುವ ಸ್ಥಳವೇ ಮೇಕೆದಾಟು. ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳದಿಂದ 4 ಕಿಲೋಮೀಟರ್ ದೂರದಲ್ಲಿದೆ ಮೇಕೆದಾಟು. ಇಲ್ಲಿ ಕಾವೇರಿ ನದಿ ಮೇಕೆ ಹಾರಿ ದಾಟುವಷ್ಟು ಕಿರು ಜಾಗದಲ್ಲಿ ಹರಿದು ಆಳವಾದ ಕಂದಕಕ್ಕೆ ಧುಮುಕುತ್ತದೆ. ಇಲ್ಲಿಗೆ ಮೇಕೆದಾಟು ಎಂಬ ಹೆಸರು ಬರಲು ಒಂದು ಕಥೆಯೇ ಇದೆ. ನೂರಾರು ವರ್ಷಗಳ ಹಿಂದೆ ಇಲ್ಲಿ ಕುರಿಗಾಹಿಯೊಬ್ಬ ತನ್ನ ಮೇಕೆಗಳನ್ನು ಮೇಯಿಸುತ್ತ ಇದ್ದನಂತೆ. ನೂರಾರು ಮೇಕೆಗಳು ಒಂದೆಡೆ ಮೇಯುತ್ತಾ ಇದ್ದರೆ ಒಂದು ಮೇಕೆ ಮಾತ್ರ ಒಬ್ಬಂಟಿಯಾಗಿ ಓಡಾಡುತ್ತ ಸೊಪ್ಪು ತಿನ್ನುತ್ತಾ ಇತ್ತು. ಈ ಸಮಯದಲ್ಲಿ ಬೇಟೆಯಾಡಲು ಬಂದಿದ್ದ ಒಂದು ಹುಲಿ ಒಬ್ಬಂಟಿಯಾಗಿ ಸೊಪ್ಪು ತಿನ್ನುತ್ತಿದ್ದ ಮೇಕೆಯನ್ನು ನೋಡಿ ಅದರ ಮೇಲೆ ದಾಳಿ ನಡೆಸಿತು. ಆದರೆ ಹುಲಿಯಿಂದ ತಪ್ಪಿಸಿಕೊಂಡ ಮೇಕೆ ನದಿಯ ತೀರದಲ್ಲೇ ಪ್ರಾಣ ಉಳಿಸಲು ಓಡತೊಡಗಿತು. ಮುಂದೆ ಸಾಗಿದಂತೆ ದಾರಿ ಕಾಣದ ಮೇಕೆ ಒಂದೇ ನೆಗೆತಕ್ಕೆ ಒಂದು ಬಂಡೆಯಿಂದ ಮತ್ತೊಂದು ಬಂಡೆಗೆ ನೆಗೆದು ಪ್ರಾಣ ಉಳಿಸಿಕೊಂಡಿತು. ಆದರೆ ಹುಲಿ ಮಾತ್ರ ನದಿಯನ್ನು ಹಾರುವಂತಹ ಸಾಹಸಕ್ಕೆ ಕೈ ಹಾಕಲಿಲ್ಲ. ಮೇಕೆಯನ್ನು ಹಿಂಬಾಲಿಸುವ ಕಾರ್ಯವನ್ನು ನಿಲ್ಲಿಸಿದ ಹುಲಿ ಅಲ್ಲಿಂದ ಹಸಿದ ಹೊಟ್ಟೆಯಲ್ಲೇ ಹೊರಟಿತು ಎಂಬುದು ಪೂರ್ವಜರು ಹೇಳುವ ಕಥೆ. ಹೀಗಾಗಿ ಈ ಸ್ಥಳ ಮೇಕೆದಾಟು ಎಂಬ ಹೆಸರು ಬಂದು ಪ್ರಸಿದ್ಧಿ ಪಡೆದುಕೊಂಡಿತು.

ಏನಿದು ಮೇಕೆದಾಟು ಯೋಜನೆ?
ಮೇಕೆದಾಟು ಬಳಿ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಕ್ಯಾತೆ ತೆಗೆಯುವ ತಮಿಳುನಾಡು ಈಗ ಮತ್ತೆ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆ. ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.

 

ಕರ್ನಾಟಕ ಸರ್ಕಾರ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಿಸಲು ಹೊರಟ್ಟಿದ್ದು ಯಾಕೆ?

ತಮಿಳುನಾಡು ವಿರೋಧ ಯಾಕೆ?
ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬೇಕೆಂಬ ಪ್ರಸ್ತಾಪ 1952ರಲ್ಲೇ ಚಿಗುರೊಡೆದಿತ್ತು. ಆದರೆ ಕೆಲ ಕಾರಣಗಳಿಂದ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು. 1996ರಲ್ಲಿ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದೇ ಸಮಯದಲ್ಲಿ ಕಾವೇರಿ ವಿವಾದ ನ್ಯಾಯಾಧಿಕರಣ ಮುಂದೆ ಇದ್ದ ಕಾರಣ ಮೊದಲು ಈ ವಿವಾದವನ್ನು ಬಗೆಹರಿಸಿಕೊಳ್ಳಿ, ನಂತರ ಈ ವಿಚಾರವನ್ನು ಪ್ರಸ್ತಾಪ ಮಾಡಿ ಎಂದು ಹೇಳುವ ಮೂಲಕ ವಿದ್ಯುತ್ ಪ್ರಾಧಿಕಾರ ಉಪಾಯದಿಂದ ಜಾರಿಕೊಂಡಿತ್ತು. 2007ರಲ್ಲಿ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಮತ್ತೆ ಮೇಕೆದಾಟು ಯೋಜನೆ ಗರಿಗೆದರತೊಡಗಿತು. ಅಂತಿಮವಾಗಿ 2013ರಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ನಿರ್ಮಿಸಲು ಮಹತ್ವದ ಹೆಜ್ಜೆ ಇಟ್ಟಿತು. ರಾಜ್ಯ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದ್ದಂತೆ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಕೇಂದ್ರದ ಮೊರೆ ಹೋಗಿ, ಸುಪ್ರೀಂನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಈಗ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದ್ದು ತಮಿಳುನಾಡು ಸಿಎಂ ಪಳನಿಸ್ವಾಮಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ

 

ತಮಿಳುನಾಡು ವಾದ ಏನು?
ಕಾವೇರಿ ನ್ಯಾಯಾಧಿಕರಣದಲ್ಲಿ ನೀರು ಹಂಚಿಕೆ ವಿಚಾರಣೆ ನಡೆಯುವ ವೇಳೆ ಮೇಕೆದಾಟು ವಿಚಾರ ಪ್ರಸ್ತಾಪವಾಗಿಲ್ಲ. ಆದರೆ ಸರ್ಕಾರ ಈಗ ಯೋಜನೆ ಮುಂದಾಗಿದ್ದು ನ್ಯಾಯಮಂಡಳಿಯ ತೀರ್ಪನ್ನು ಉಲ್ಲಂಘಿಸಿದೆ. ತಮಿಳುನಾಡಿಗೆ ನೈಸರ್ಗಿಕವಾಗಿಯೇ ಮಳೆ ಮೂಲಕ ಹೆಚ್ಚುವರಿ ನೀರು ಬರುತ್ತದೆ. ಅದರೆ ಈ ಅಣೆಕಟ್ಟು ನಿರ್ಮಿಸುವ ಮೂಲಕ ಕರ್ನಾಟಕ ತಮಿಳುನಾಡಿನ ರೈತರ ಕೃಷಿಗೆ ಅಡ್ಡಗಾಲು ಹಾಕುತ್ತಿದೆ.

ಕರ್ನಾಟಕದ ವಾದ ಏನು?
ಪ್ರತಿವರ್ಷ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದು ನಮ್ಮ ಹೊಣೆ. ಒಂದು ವೇಳೆ ನಾವು ಅಷ್ಟು ಪ್ರಮಾಣದ ನೀರನ್ನು ಬಿಡದಿದ್ದರೆ ತಮಿಳುನಾಡು ಪ್ರಶ್ನಿಸುವುದು ಸರಿ. 2018 ರಲ್ಲಿ ಭಾರೀ ಮಳೆಯಾದ ಪರಿಣಾಮ ಈಗಾಗಲೇ ಕರ್ನಾಟಕದಿಂದ 310 ಟಿಎಂಸಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ತಮಿಳುನಾಡು ಹರಿದುಹೋಗಿದೆ. ಮೆಟ್ಟೂರಿನಲ್ಲಿ ಅಧಿಕ ನೀರಿನ ಸಂಗ್ರಹ ಸಾಮರ್ಥ್ಯ ಇಲ್ಲದೇ ಇರುವ ಕಾರಣ 100 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಹರಿದು ಹೋಗಿದೆ. ಮೇಕೆದಾಟಿನಲ್ಲಿ ಅಣೆಕಟ್ಟೆ ಇದ್ದಿದ್ದರೆ ಕನಿಷ್ಠ 60 ಟಿಎಂಸಿ ಹಿಡಿದಿಟ್ಟುಕೊಳ್ಳಬಹುದಾಗಿತ್ತು. ಒಂದು ಡ್ಯಾಂ ಇದ್ದಿದ್ದರೆ ತಮಿಳುನಾಡಿಗೆ ತಿಂಗಳವಾರು ಕೋಟಾದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೂ ಅನುಕೂಲವಾಗುತ್ತಿತ್ತು. ನಾವು ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟುತ್ತೇವೆಯೇ ಹೊರತು ವಿದ್ಯುತ್ ಉತ್ಪಾದನೆಯೇ ನಮ್ಮ ಮೂಲ ಉದ್ದೇಶ ಅಲ್ಲ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಎಂದು ಅಂತಾರಾಷ್ಟ್ರೀಯ ಜಲ ನೀತಿಯೇ ಹೇಳಿದೆ. ಹೀಗಾಗಿ ನಾವು ಎತ್ತಿಕೊಂಡ ಮೇಕೆದಾಟು ಯೋಜನೆ ನ್ಯಾಯ ಸಮ್ಮತವಾಗಿದೆ.

 

ಕರ್ನಾಟಕಕ್ಕೆ ಈ ಅಣೆಕಟ್ಟು ಅಗತ್ಯ ಯಾಕೆ?
ಬೆಂಗಳೂರು ನಗರಕ್ಕೆ ನೀರು ಬರುವುದು ಕೆಆರ್‌ಎಸ್ ಡ್ಯಾಂನಿಂದ. ಮಳೆಗಾಲದಲ್ಲಿ ಡ್ಯಾಂ ಭರ್ತಿಯಾದರೆ ಬೆಂಗಳೂರು ಜನತೆಗೆ ನೀರು ಭಾಗ್ಯ. ಬೆಂಗಳೂರು ನಗರಕ್ಕೆ ಪ್ರತಿದಿನ 1400 ದಶಲಕ್ಷ ಲೀಟರ್ ಅಗತ್ಯವಿದೆ. ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆ ಶೇ.15ರಷ್ಟು ಹೆಚ್ಚಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ 2012ರಲ್ಲಿ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ಸಂಗ್ರಹವಾದ ಡ್ಯಾಂ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಬಳಸುವ ಉದ್ದೇಶ ರಾಜ್ಯ ಸರ್ಕಾರದ್ದು.

ಎಷ್ಟು ಡ್ಯಾಂ ನಿರ್ಮಾಣವಾಗಲಿದೆ?
ಆರಂಭಿಕ ಯೋಜನೆ ಪ್ರಕಾರ 4,500 ಎಕ್ರೆ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಮುಳುಗಡೆಯಾಗುವ ಪ್ರದೇಶವನ್ನು ತಪ್ಪಿಸಲು 20 ಟಿಎಂಸಿ ಸಾಮರ್ಥ್ಯದ 2, 3 ಅಣೆಕಟ್ಟು ಕಟ್ಟುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಆದರೆ ಎಷ್ಟು ಡ್ಯಾಂ ನಿರ್ಮಾಣ ಮಾಡಬೇಕು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಸ್ಥಳ ಪರಿಶೀಲನೆಯಾಗಿದ್ದು, ಸಮಗ್ರ ಯೋಜನಾ ವರದಿ ಸರ್ಕಾರದ ಕೈ ಸೇರಿದ ಬಳಿಕ ಎಷ್ಟು ಡ್ಯಾಂ ನಿರ್ಮಿಸಬೇಕು ಎನ್ನುವುದು ಅಂತಿಮವಾಗಲಿದೆ.

ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು(ನ್ಯಾಯಾಲಯಗಳು ನೀಡುವ ಅಂತಿಮ ಆದೇಶಕ್ಕೆ ತೀರ್ಪು ಎಂದು ಕರೆದರೆ ನ್ಯಾಯಾಧಿಕರಣಗಳು ನೀಡುವ ಅಂತಿಮ ಆದೇಶಕ್ಕೆ ಐತೀರ್ಪು(Award) ಎಂದು ಕರೆಯಲಾಗುತ್ತದೆ) ನೀಡಿತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು.

 

ಕಾವೇರಿಯಲ್ಲಿ ಯಾರಿಗೆ ಎಷ್ಟು ನೀರು?
ಕಾವೇರಿ ನ್ಯಾಯಾಧಿಕರಣ ನೀಡಿದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ 2018ರ ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ಅನ್ವಯ ಕರ್ನಾಟಕಕ್ಕೆ 284 ಟಿಎಂಸಿ, ತಮಿಳುನಾಡು 177.25 ಟಿಎಂಸಿ, ಕೇರಳ 30 ಟಿಎಂಸಿ, ಪುದುಚೇರಿಗೆ 10 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ.

ಯಾವ ತಿಂಗಳು ಎಷ್ಟು ಟಿಎಂಸಿ ನೀರು ಬಿಡಬೇಕು?
ಜೂನ್ 9.19, ಜುಲೈ 31.24, ಆಗಸ್ಟ್ 45.95, ಸೆಪ್ಟೆಂಬರ್ 36.76, ಅಕ್ಟೋಬರ್ 20.22, ನವೆಂಬರ್ 13.78, ಡಿಸೆಂಬರ್ 7.35, ಜನವರಿ 2.76 ಟಿಎಂಸಿ ಬಿಡಬೇಕು. ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಲಾ 2.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು.

ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕರ್ನಾಟಕ ನಿರ್ಮಿಸಿರುವ ಅಣೆಕಟ್ಟುಗಳು
ಹಾರಂಗಿ(ಕೊಡಗು), ಕಬಿನಿ(ಮೈಸೂರು), ಹೇಮಾವತಿ(ಹಾಸನ), ಕೆಆರ್‌ಎಸ್(ಮಂಡ್ಯ)ದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದೆ.

 

ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನನವರು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.

ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ..

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend