ಬಿಸಿಲು ನಾಡಿನ ಚಿತ್ರಕಥಾನಕಗಳು…!!!

Listen to this article

 

ಬಿಸಿಲು ನಾಡಿನ ಚಿತ್ರಕಥಾನಕಗಳು.

ವಿಮರ್ಶೆ.ಸಂಧ್ಯಾರಾಣಿ

ರಂಗಕರ್ಮಿ ನಂದಕುಮಾರ.ಹೂವಿನ ಹಡಗಲಿ ಅವರ ಮೊದಲ ಕಥಾಸಂಕಲನ ’ಜಾಲಿಮುಳ್ಳು ಮತ್ತು ಇತರ ಕತೆಗುಳು’. ಹೌದು ಇವು ’ಕತೆಗುಳು’, ’ಕಥೆಗಳು’ ಅಲ್ಲ. ಪುಸ್ತಕದ ಹೆಸರಿನಲ್ಲಿಯೇ ನಂದಕುಮಾರ ಒಂದು ಗಟ್ಟಿಯಾದ ಹೇಳಿಕೆಯನ್ನು ಹೇಳದೆಯೂ ಮಾಡಿಬಿಡುತ್ತಾರೆ. ಸಾಧಾರಣವಾಗಿ ಮೈಸೂರು-ಬೆಂಗಳೂರು ಕಡೆಯವರಿಗೆ ತಮ್ಮ ಕನ್ನಡ ಪ್ರಯೋಗಕ್ಕೆ ಸಂಬಂಧಿಸಿದಂತೆ ಒಂದು ಜಂಬ ಮತ್ತು ವ್ಯಸನ ಎರಡೂ ಇರುತ್ತದೆ. ಯಾರೂ ಒಪ್ಪಿ ಸಹಿ ಹಾಕದಿದ್ದರೂ ಅವರು ತಮ್ಮ ಕನ್ನಡವೂ ಹಲವು ಕನ್ನಡಗಳಲ್ಲಿ ಒಂದು ಎಂದು ಪರಿಗಣಿಸದೆ, ತಮ್ಮ ಕನ್ನಡವೇ ಪ್ರಮಾಣೀಕೃತ ಮಾದರಿ ಕನ್ನಡ ಎಂದು ನಂಬಿಕೊಂಡಿರುತ್ತಾರೆ. ಈ ಜಂಬವೇ ’ದೇವನೂರು ಅವರ ಕಥೆ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದರೆ ಓದಲು ಚೆಂದ’ ಎನ್ನುವಂತಹ ಹೇಳಿಕೆ ಕೊಡಲು ಅವರನ್ನು ಪ್ರೇರೇಪಿಸುತ್ತಿರುತ್ತದೆ. ಚಾಮರಾಜನಗರ, ಕುಂದಾಪುರ, ಬಿಜಾಪುರ, ಕೋಲಾರ ಇತ್ಯಾದಿ ಪ್ರದೇಶಗಳ ಕನ್ನಡ ಓದುವುದು ತಮಗೆ ಕಷ್ಟವಾದಂತೆ ತಮ್ಮ ಬರಹಗಳೂ ಅವರಿಗೆ ಕಷ್ಟವಾಗಬಹುದು ಎನ್ನುವ ಅಂದಾಜು ಇಲ್ಲದಂತೆ ಮಾತುಗಳು, ಬೀಸುಹೇಳಿಕೆಗಳು ಬರುತ್ತಿರುತ್ತವೆ. ಆದರೆ ಈ ಎಲ್ಲಾ ಹೇಳಿಕೆಗಳ ಅಗೋಚರ ಗಾಜಿನ ಗೋಡೆಗಳನ್ನು ಮುರಿಯುವಂತಹ ಬರಹಗಳು ಆಗಾಗ ನಮಗೆ ಎದುರಾಗುತ್ತಲೇ ಇರುತ್ತವೆ. ತಮ್ಮ ಸೊಲ್ಲಿನ ಬಗ್ಗೆ ಯಾವುದೇ ಹಿಂಜರಿಕೆ ಇಟ್ಟುಕೊಳ್ಳದೆ ಬರುವ ಈ ಬರಹಗಳಲ್ಲಿ ಭಿನ್ನ ನುಡಿ ಮಾತ್ರವಲ್ಲ, ಭಿನ್ನ ಬದುಕು ಸಹ ದಾಖಲಾಗಿರುತ್ತದೆ. ಹೊಸ ಬರಹಗಾರರ ಕಥೆಗಳ ಬಗ್ಗೆ ನನಗೆ ಯಾವಾಗಲೂ ಕುತೂಹಲ. ಹೊಸಕಾಲದ ತಂತ್ರ, ವಸ್ತು, ಮನೋಭಾವ ಎಲ್ಲದಕ್ಕೂ ನನಗೆ ಇವು ಕಿಟಕಿಯಂತೆ ಕಾಣಿಸುತ್ತವೆ. ಇನ್ನೊಂದು ನೋಟ, ಬದುಕು, ಅನುಭವದ ಬಗ್ಗೆ ಹೇಳುವುದಷ್ಟೇ ಅಲ್ಲ, ನಮ್ಮ ಜೀವನದೃಷ್ಟಿಯನ್ನೂ ಇವು ಅಷ್ಟರಮಟ್ಟಿಗೆ ವಿಸ್ತರಿಸುತ್ತವೆ. ಈ ಕತೆಗುಳು ಮೊದಲ ಸಂಕಲನ ಎಂದು ಒಮ್ಮೆಯಾದರೂ ಅನಿಸದ ಮಟ್ಟಿಗೆ ಇವುಗಳಲ್ಲಿ ಕಪ್ಪು ಮಣ್ಣಿನ ಗಂಧ ಮತ್ತು ಬಿಸುಪು ಎರಡೂ ಇವೆ. ಇವು ಕೇವಲ ಒಂದು ಸಮುದಾಯದ ಕಥೆ ಅಲ್ಲ, ನಾವು ಅಂಚಿಗೆ ಸರಿಸಿ, ಉಪೇಕ್ಷಿಸಿರುವ ಹಲವು ಬದುಕುಗಳ, ಸಮುದಾಯಗಳ ಕಥೆ. ಇವುಗಳಲ್ಲಿನ ವಿಶೇಷತೆಯನ್ನು ಕಥೆಗಳಿಗೆ ಮುನ್ನುಡಿ ಬರೆದಿರುವ ಕೆವಿ ಅಕ್ಷರ ಅವರು, ’ಎರಡು ಪ್ರಮುಖ ಅಂಶಗಳು ಈ ಎಲ್ಲ ಕಥೆಗಳಿಗೆ ಸ್ಥಾಯಿಯಾಗಿವೆ. ಒಂದು – ಬಳ್ಳಾರಿ ಪ್ರಾಂತ್ಯದ ಬಯಲುಸೀಮೆಯ ಭಾಷೆ, ಮತ್ತು ಎರಡು – ಒಂದು ಬಗೆಯ ಜಾನಪದ ನಿರೂಪಣೆಯ ಚೌಕಟ್ಟು.’ ಎಂದು ಗುರುತಿಸಿದ್ದಾರೆ. ಜೊತೆಗೆ ’ಈ ಯಾವ ಕಥನವೂ ನಿಜವಾಗಿ ನಡೆದ ಕಥೆಯಲ್ಲ, ಬದಲು, ಕಟ್ಟಿದ ಕಥೆ – ಎಂಬ ಅವ್ಯಕ್ತ ಸಂವಹನೆ ಈ ಕಥನದೊಳಗೇ ಅಡಕವಾಗಿದೆ. ಉದಾಹರಣೆಗೆ ಇಲ್ಲಿಯ ಪ್ರತಿಯೊಂದು ಕಥೆಯೂ ಆರಂಭವಾಗುವುದು ಹೆಚ್ಚೂಕಮ್ಮಿ ‘ಒಂದಾನೊಂದು ಊರಿನಲ್ಲಿ…’ ಎನ್ನುವಂಥ ಮಾತುಗಳ ಮೂಲಕವೇ.’ ಎಂದು ಹೇಳುತ್ತಾರೆ. ಭಾಷೆಯ ಮಟ್ಟಿಗೆ ಹೇಳುವುದಾದರೆ ಹೂವಿನ ಹಡಗಲಿಯ ಕನ್ನಡ, ಅಲ್ಲಿನ ಕಪ್ಪತ್ತ ಗುಡ್ಡದಷ್ಟೇ ದೃಢವಾಗಿ ಮತ್ತು ಇದು ಸಾಧ್ಯವೇ ಎಂದು ಅಚ್ಚರಿ ಪಡುವಷ್ಟು ಲಾಲಿತ್ಯದೊಂದಿಗೆ ಮೈದಾಳುತ್ತದೆ. ಇಲ್ಲಿನ ಕತೆಗಳಲ್ಲಿ ಭಾಷೆ ನೋವು, ವಿಷಾದ, ತಣ್ಣನೆಯ ಸಿಟ್ಟು ಇವೆಲ್ಲದರೊಡನೆ ಹಾಸ್ಯಕ್ಕೂ ಅತ್ಯಂತ ಸಹಜವಾಗಿ ಒಗ್ಗಿಕೊಳ್ಳುತ್ತದೆ. ಕಥೆಗಳ ಸಿದ್ಧಮಾದರಿಯನ್ನು ಒಡೆದೂ, ಈ ಕಥೆಗಳು ಗೆಲ್ಲುತ್ತವೆ.
ಈ ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಎಲ್ಲಾ ಕಥೆಗಳೂ ಬಯಲುಸೀಮೆಯ ಆವರಣಕ್ಕೇ ಸಂಬಂಧಿಸಿದ್ದು. ಮೊದಲನೆಯ ’ಗಾಳೀ ಕತಿ’ಯಲ್ಲೇ ನಂದಕುಮಾರ ತಮ್ಮ ಅಪರೂಪದ ಚಿತ್ರಕಶಕ್ತಿ ಮತ್ತು ದೃಶ್ಯಕಟ್ಟೋಣಗಳ ಮೂಲಕ ಗಮನ ಸೆಳೆಯುತ್ತಾರೆ. ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ರಂಗಭೂಮಿಯನ್ನು ಆರಿಸಿಕೊಂಡ ಇವರಿಗೆ ಬಹುಶಃ ಕಥೆಗಳು ಪದಗಳ ಮೂಲಕ ಮೂಡದೆ ದೃಶ್ಯಗಳ ಮೂಲಕ ಮೂಡುತ್ತವೇನೋ ಎನ್ನುವ ಮಟ್ಟಿಗೆ ಈ ಕಥೆಗಳಿಗೆ ಆ ಶಕ್ತಿ ಇದೆ. ’ದೊಂಬರಾಟ ಮಾಡಿಕ್ಯಂತ ಊರೂರು ಸುತ್ತಿ ಸಿಕ್ಕಿದ್ದು ತಿಂದು, ಕಂಡಲ್ಲಿ ಮಲಗಿ, ಮತ್ತ ನಸಿಗ್ಲೆ ಎದ್ದಕೂಡಲೆ ಹಲ್ಲ ತಿಕ್ಕಳ್ದ ಚಾ ಕುಡದ ಸುಮ್ನ ಬಿಸಲೇರದ ನೋಡಕಂತ ಕಾದು…’ ಎನ್ನುವ ಸರಳ ವಾಕ್ಯ ಆ ಬದುಕನ್ನು ಆರಾಮಾಗಿ ಕಟ್ಟಿಕೊಡುತ್ತದೆ.
ಈ ಕಥೆಯ ಯಾವುದೇ ವಾಕ್ಯ ಪ್ರಜ್ಞಾಪೂರ್ವಕವಾಗಿ ಬರೆದಂತಿಲ್ಲ. ಮುಂಜಾನೆ ಸೂರ್ಯ ಹುಟ್ಟೊದನ್ನು ನೋಡುತ್ತಾ, ಸಂಜೆ ಮುಳುಗುವುದನ್ನು ನೋಡುತ್ತಾ ಅರಳೀಕಟ್ಟೆಯ ಮೇಲೆ ಕೂತು, ಸಾವಧಾನದಲ್ಲಿ ಹೇಳಿದ ಕಥೆಯ ಸ್ವರೂಪ ಇಲ್ಲಿ ಕಂಡುಬರುತ್ತದೆ. ನಾಗರೀಕತೆಯ ಆಟಕ್ಕೆ ಕುಣಿತದ ಹೆಜ್ಜೆ ಮಾತ್ರ ಆಗುವ ಗಾಳಿ ಇಲ್ಲಿ ಸ್ವತಂತ್ರವಾಗಿ ಹೋಗಬಹುದಾದರೂ ಹೋಗಲಾರದು. ಕಥೆಯ ಈ ಕೊನೆಯಲ್ಲಿ ಗಾಳೀ ಎನ್ನುವ ಕೋತಿ ಇಲ್ಲಿ ಅದರಾಚೆಗೂ ಏನೋ ಆಗಿಬಿಡುತ್ತದೆ. ಇದಕ್ಕಿಂತಲೂ ಗಾಢವಾದ ವಿಷಾದ ಇರುವುದು ನಂತರದ ’ಮರವು’ ಕಥೆಯಲ್ಲಿ. ಬಿಸಿಲುನಾಡಿನ ಬಡವರು ಅಪರೂಪಕ್ಕೆ ಮಳೆ ಬಂದಾಗ ಹಗಲೆಲ್ಲಾ ಸಾವುಕಾರರ ಹೊಲಕ್ಕೆ ಕೂಲಿಗೆ ಹೋದರೆ ರಾತ್ರಿ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡುತ್ತಾರೆ. ಅದನ್ನು ನಂದಕುಮಾರ ಕಟ್ಟಿಕೊಡುವುದು ಹೀಗೆ, ’ಸಾವಕಾರ್ರ ಹೊಲದಾಗ ಬೆಳಿ ಸಾಲಕ ಬೆಳದ್ರ ಇವರ ಹೊಲದಾಗ ಅಡ್ಡಾದಿಡ್ಡಿ ಬೆಳದಿರತಿತ್ತು.’ ಇಂತಹ ಸೂಕ್ಷ್ಮ ಹೆಣಿಗೆ ಉದ್ದಕ್ಕೂ ಕಾಣಿಸುತ್ತಲೇ ಇರುತ್ತದೆ. ಜನಪದ ಕಥೆಯಂತೆ ಶುರುವಾಗುವ ಈ ಕಥೆ ಮುಗಿಯುವಾಗ ಹಳ್ಳಿ ಬಿಟ್ಟು ಪಟ್ಟಣ ಸೇರುವ ಎಲ್ಲರ ದುರಂತದ ಕಥನವಾಗಿ ಬಿಡುತ್ತದೆ. ಹಳ್ಳಿಯಲ್ಲಿದ್ದರೆ ಜೀತ, ಪಟ್ಟಣಕ್ಕೆ ಬಂದರೆ ಅಸ್ತಿತ್ವವನ್ನೇ ಇಲ್ಲವಾಗಿಸುವ ಅನಾಮಿಕತೆ. ’ಫಕೀರಪ್ಪನ ಕತಿ’ ಹೇಗೆ ಒಂದು ಘಟನೆಯ ಪರಿಣಾಮಗಳು ಘಟನೆಯನ್ನೇ ನಗಣ್ಯವಾಗಿಸಬಲ್ಲವು ಎನ್ನುವುದನ್ನು ಕಥೆಯ ತಂತ್ರದ ಮೂಲಕವೇ ಹೇಳುತ್ತದೆ. ಇಲ್ಲಿನ ಒಂದೊಂದು ಕಥೆಯೂ ಒಂದೊಂದು ಗುಣದಿಂದ ನಮಗೆ ಇಷ್ಟವಾಗುತ್ತದೆ. ಜಾಲಿಮುಳ್ಳನ್ನು ಹೆದರಿಕೆಯಿಂದ, ಗುಮಾನಿಯಿಂದ ನೋಡುವ ನಮಗೆ ಅಲ್ಲಿ ಒಲೆಗೂ ಇದೇ, ನೆರಳಿಗೂ ಇದೇ ಎಂದು ಹೇಳುತ್ತಲೇ ’ಕಟ್ಟಿಗೆ ತರಲು ಹೋದ ಮಗಳು ಬರಲೇ ಇಲ್ಲ’ ಎನ್ನುವ ವಿಷಾದ ಆವರಿಸಿಕೊಳ್ಳುತ್ತವೆ. ಈ ಎಲ್ಲಾ ಕಥೆಗಳ ನಡುವೆ ಅದರಲ್ಲಿನ ಅಪ್ಪಟ ಹೆಣ್ಮನಸಿನ ಕಾರಣಕ್ಕೆ ನನಗೆ ವೈಯಕ್ತಿಕವಾಗಿ ಇಷ್ಟವಾದ ಕಥೆ ’ರೊಟ್ಟಿ ಬಸಕ್ಕ ಮತ್ತ ಆಕಿ ಸೊಸಿ ಕೊಟ್ರಮ್ಮ.’
ಪ್ರಸ್ತುತ ಮೈಸೂರಿನ ರಂಗಾಯಣದಲ್ಲಿರುವ ನಂದಕುಮಾರ ಇಲ್ಲಿನ ಕಥೆಗಳಲ್ಲಿ ತಮ್ಮೂರಿನ ಕಥೆಗಳನ್ನು ಹೇಳಿದ್ದಾರೆ. ಅವರ ಅನುಭವ ಲೋಕ ಇನ್ನೂ ವಿಸ್ತಾರವಾಗಿದೆ. ಅವರ ಮುಂದಿನ ಕಥೆಗಳಲ್ಲಿ ಅವೆಲ್ಲದಕ್ಕೂ ಜಾಗ ಸಿಗಲಿ ಎನ್ನುವುದು ನನ್ನ ಹಾರೈಕೆ…

ವರದಿ.ಅಜಯ್. ಚ. ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend