ವಿದ್ಯುತ್ ಬಿಲ್ ಬಲು ಭಾರ ಕರೆಂಟ್ ಬಿಲ್ ನೋಡಿ ಶಾಕ್, ಹಾಗೂ ಶೇಕ್ ಆದ ಗ್ರಾಹಕರು…!!!

Listen to this article

ಬೆಂಗಳೂರು: ಕಾಂಗ್ರೆಸ್ ಸರ್ಕಾರದ 200 ಯುನಿಟ್​ವರೆಗಿನ ಉಚಿತ ವಿದ್ಯುತ್​ನ ‘ಗೃಹಜ್ಯೋತಿ’ ಯೋಜನೆ ಜಾರಿ ಮುನ್ನವೇ, ಬಳಕೆದಾರರು ಪ್ರಸಕ್ತ ಸಾಲಿನ ವಿದ್ಯುತ್ ದರ ಪರಿಷ್ಕರಣೆಯ ಭಾರವನ್ನು ಹೊರಬೇಕಿದೆ. ಏರಿಕೆ ಮಾಡಿರುವ ಅಷ್ಟೂ ಹಣವನ್ನು ಇದೇ ತಿಂಗಳು ನೀಡಿರುವ ಬಿಲ್​ನಲ್ಲಿ ಸೇರಿಸಲಾಗಿದ್ದು, ಮೊತ್ತದಲ್ಲಿ ಭಾರಿ ಏರಿಕೆಯಾಗಿದೆ.

ಜತೆಗೆ, ಅಷ್ಟೂ ಮೊತ್ತವನ್ನು ಒಂದೇ ಬಾರಿಗೆ ಪಾವತಿಸುವಂತೆ ಎಸ್ಕಾಂಗಳು ಪಟ್ಟು ಹಿಡಿದಿರುವುದಕ್ಕೆ ರಾಜ್ಯದೆಲ್ಲೆಡೆ ಜನಾಕ್ರೋಶ ವ್ಯಕ್ತವಾಗಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್​ಸಿ) ಮೇ 12ರಂದು ಪ್ರತಿ ಯುನಿಟ್​ಗೆ 70 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಚುನಾವಣಾ ನೀತಿಸಂಹಿತೆ ಕಾರಣದಿಂದ ತಡೆಹಿಡಿಯಲ್ಪಟ್ಟಿದ್ದ ಆದೇಶ ಈಗ ಜಾರಿಯಾಗಿದೆ. ಈ ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಪೂರ್ವಾನ್ವಯ ಆಗಲಿದೆ. ಇದರಿಂದಾಗಿ ಏಪ್ರಿಲ್ ಹಾಗೂ ಮೇ ತಿಂಗಳಿಗೆ ಅನ್ವಯಿಸುವ ದರ ಹೆಚ್ಚಳದ ಬಾಬ್ತನ್ನು ಜೂನ್ ಬಿಲ್​ನಲ್ಲಿ ನಮೂದಿಸಲಾಗಿದೆ. ಇದು ವಿದ್ಯುತ್ ಬಿಲ್ ಮೊತ್ತ ದುಪ್ಪಟ್ಟು ಆಗಿರುವುದಕ್ಕೆ ಭಾರಿ ಕಾರಣವಾಗಿ ಗ್ರಾಹಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಎಸ್ಕಾಂಗಳು ನೀಡಿರುವ ಬಿಲ್ ದೋಷಪೂರಿತವಾಗಿದೆ. ನಾವು ಎಂದೂ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಿಲ್ಲ. ಹಿಂಬಾಕಿ ವಸೂಲಿ ನೆಪದಲ್ಲಿ ‘ಬಿಲ್​ವಿದ್ಯೆ’ ಅರ್ಥವಾಗುತ್ತಿಲ್ಲ. ಉಚಿತ ವಿದ್ಯುತ್ ನೀಡುವುದಾಗಿ ಈ ರೀತಿ ಶಾಕ್ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.

3 ಕೋಟಿ ಪ್ಯಾಕೇಜ್ ಗಿಟ್ಟಿಸಿದ ಎಲ್‌ಪಿಯು ಪದವೀಧರ!

ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು, ಶಿವಮೊಗ್ಗ, ರಾಯಚೂರು, ಕಲಬುರಗಿ ಸಹಿತ ವಿವಿಧ ಜಿಲ್ಲೆಗಳಲ್ಲಿ ಜನರು ಬಿಲ್ ಹಿಡಿದು ಎಸ್ಕಾಂ ಕಚೇರಿಗಳಿಗೆ ತೆರಳಿ ಆಕ್ಷೇಪ ದಾಖಲಿಸುತ್ತಿದ್ದಾರೆ. ಹಲವೆಡೆ ಬಿಲ್ ಪಾವತಿ ಕೇಂದ್ರದ ಸಿಬ್ಬಂದಿ ಜತೆ ಜಗಳದ ಪ್ರಕರಣಗಳು ನಡೆದಿವೆ. ಎಸ್ಕಾಂ ಅಧಿಕಾರಿಗಳು ಜನರಿಗೆ ಬಿಲ್ ಹೆಚ್ಚಳದ ಕುರಿತು ಅರ್ಥಮಾಡಿಸಲು ವಿಫಲರಾಗಿದ್ದಾರೆ. ಇನ್ನೂ ಕೆಲವೆಡೆ ಗ್ರಾಹಕರು ಪರಿಷ್ಕೃತ ಬಿಲ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ವಾಣಿಜ್ಯ ಬಳಕೆದಾರರು ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದು ದುಬಾರಿ ಮೊತ್ತ ಪಾವತಿಸಲು ಹಿಂದೇಟು ಹಾಕಿದ್ದಾರೆ. ಇದಕ್ಕೆ ಪರಿಹಾರ ನೀಡಬೇಕಿರುವ ಎಸ್ಕಾಂಗಳು ಹಾಗೂ ಇಂಧನ ಇಲಾಖೆ ಮೌನ ವಹಿಸಿರುವುದು ಜನರನ್ನು ಇನ್ನಷ್ಟು ಸಿಟ್ಟಿಗೆಬ್ಬಿಸಿದೆ.

ಪೂರ್ಣ ಮೊತ್ತ ವಸೂಲಿಗೆ ವಿನಾಯಿತಿ ಅಗತ್ಯ: ಎಸ್ಕಾಂಗಳು ಭಾರಿ ಮೊತ್ತದ ಶುಲ್ಕ ಹಾಗೂ ಇತರ ಬಾಬ್ತನ್ನು ವಸೂಲು ಮಾಡುವುದು ಸಾಮಾನ್ಯ. ಆದರೆ, ದೊಡ್ಡ ಮೊತ್ತ ಪಾವತಿಸಲು ಸಾಧ್ಯವಾಗದ ಗ್ರಾಹಕರಿಗೆ ಸ್ಥಳೀಯ ಎಇಇ ಮಟ್ಟದಲ್ಲಿ ನಂತರದ ತಿಂಗಳ ಬಿಲ್​ನೊಂದಿಗೆ ಪಾವತಿಸಲು ಅವಕಾಶ ಇದೆ. ಇದನ್ನು ಈ ಹಿಂದೆ ಕೋವಿಡ್ ಸಾಂಕ್ರಾಮಿಕದ ವೇಳೆ ಲಿಖಿತವಾಗಿ ಪತ್ರ ನೀಡಿದ ಗ್ರಾಹಕರಿಗೆ ಅನ್ವಯಿಸಲಾಗಿತ್ತು. ಇದೇ ರೀತಿ ಈಗಲೂ ವಿನಾಯಿತಿ ನೀಡಿದರೆ ಬಡ-ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗಲಿದೆ.

ಏಕ ಸ್ಲಾಬ್ ಕೈಬಿಡಿ: ಮಾಸಿಕ ವಿದ್ಯುತ್ ಬಿಲ್​ನಲ್ಲಿ ಹಿಂದಿನಿಂದಲೂ ಸ್ಲಾಬ್ ಪದ್ಧತಿ ಜಾರಿಯಲ್ಲಿದೆ. ಕಡಿಮೆ ವಿದ್ಯುತ್ ಬಳಸುವವರಿಗೆ 50-100 ಯುನಿಟ್ ವರೆಗಿನ ಸ್ಲಾಬ್​ಅನ್ನು ಮರು ಆರಂಭಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಎಸ್ಕಾಂಗಳು ಹಾಗೂ ಕೆಇಆರ್​ಸಿ ಪರಿಗಣಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಪ್ರತಿ ವರ್ಷ ವಿದ್ಯುತ್ ದರ ಏರಿಸಿದರೂ ಬಿಲ್ ಮೊತ್ತದಲ್ಲಿ ಈಗಿನಷ್ಟು ವ್ಯತ್ಯಾಸ ಇರಲಿಲ್ಲ. ಹಿಂಬಾಕಿಯನ್ನು ಒಂದೇ ಬಾರಿ ವಸೂಲು ಮಾಡಲು ಹೊರಟಿರುವುದು ಜನರಿಗೆ ಬರೆ ಹಾಕಿದಂತೆ. ಉಚಿತವಾಗಿ ಕರೆಂಟ್ ಕೊಡುವುದಾಗಿ ಹೇಳಿ ಈ ರೀತಿ ಜನರಿಗೆ ದರ ಹೆಚ್ಚಳದ ಹೊರೆ ವರ್ಗಾಯಿಸುವುದು ಸರಿಯಲ್ಲ.

ನಾರಾಯಣಸ್ವಾಮಿ, ಯಲಹಂಕ ನಿವಾಸಿ

ಪ್ರತಿ ಯುನಿಟ್​ಗೆ 7 ರೂ.!

ಕೆಇಆರ್​ಸಿ ಪ್ರಸಕ್ತ ಸಾಲಿಗೆ ವಿದ್ಯುತ್ ಶುಲ್ಕವನ್ನು ಒಂದೇ ಸ್ಲಾಬ್​ಗೆ ಸೀಮಿತ ಮಾಡಿದೆ. ಇದರಿಂದ ಎಷ್ಟು ಪ್ರಮಾಣದ ಯುನಿಟ್ ಬಳಕೆ ಮಾಡಿದರೂ ಪ್ರತಿ ಯುನಿಟ್​ಗೆ 7 ರೂ. ಪಾವತಿಸಬೇಕು. ಈ ಪದ್ಧತಿ ಪ್ರತಿ ಗ್ರಾಹಕನಿಗೂ ಹೊಡೆತ ನೀಡಿದೆ. 100 ಯುನಿಟ್ ಬಳಸುತ್ತಿದ್ದ ಗೃಹ ಬಳಕೆದಾರರು ಹೆಚ್ಚುವರಿಯಾಗಿ 210 ರೂ. ಪಾವತಿಸಬೇಕಿದೆ. ಹಿಂದೆ 50 ಯುನಿಟ್ ವರೆಗೆ ಮೊದಲ ಸ್ಲಾಬ್, 51-100 ಎರಡನೇ ಸ್ಲಾಬ್ ಹಾಗೂ 101 ಮೇಲ್ಪಟ್ಟ ಯುನಿಟ್​ಗೆ ಕ್ರಮವಾಗಿ 4.15 ರೂ., 5.60 ರೂ. ಹಾಗೂ 7.15 ರೂ. ನಿಗದಿಯಾಗಿತ್ತು. ಈಗ ಏಕ ಸ್ಲಾಬ್​ನಿಂದಾಗಿ ಕಡಿಮೆ ವಿದ್ಯುತ್ ಬಳಸುವವರು ಕೂಡ ಯುನಿಟ್ ಒಂದಕ್ಕೆ 7 ರೂ. ಪಾವತಿಸಬೇಕಾಗುತ್ತದೆ. ಇದು ಗ್ರಾಹಕರ ಮೇಲೆ ಕೆಇಆರ್​ಸಿ ಎಳೆದಿರುವ ಬರೆ ಎಂದು ಹಲವು ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ..

ಶಫಿ ಹೆಬ್ಬಾಳ ನಿವಾಸಿ

ಪ್ರತಿ ತಿಂಗಳು ನಮ್ಮ ಮನೆಯ ಕರೆಂಟ್ ಬಿಲ್ ಬರೀ,500ರಿಂದ 600ಮಾತ್ರ ಬರುತ್ತಿತ್ತು ಈ ಬಾರಿ,2100ರೂಪಾಯಿ ಬಂದಿದೆ ಮತ್ತು ಪ್ರತಿ ತಿಂಗಳು 31ಅಥವಾ 1ನೇ ತಾರೀಕೆಗೆ ಮೀಟರ್ ರೀಡಿಂಗ್ ಬರುತ್ತಿದ್ದ ರಿಡರ್ ಈ ಬಾರಿ 7ನೇ ತಾರೀಕೆಗೆ ಬಂದು ಬಿಲ್ ಕೊಟ್ಟರು ಆ ಬಿಲ್ ನೋಡಿ ನಾನೇ ಶಾಕ್ ಅದೇ ಏನೂ ಮಾಡೋದು ಸ್ವಾಮಿ, ಈ ಸರ್ಕಾರ ಅಧಿಕಾರಕ್ಕೆ ಬರುವ ತನಕ ಅದು ಪ್ರಿ ಇದು ಪ್ರಿ ಅಂತ ಹೇಳಿ ಇವಾಗ ಎಲ್ಲಾ ಗೊತ್ತಿಲ್ಲದೇ ದುಬಾರಿ ಮಾಡಿದರೆ ಏನೂ ಪ್ರಯೋಜನ, ಇದು ಮದ್ಯಮ ವರ್ಗದ ಹಾಗೂ ಬಡವರಿಗೆ ತುಂಬಾ ಮೋಸ ಎನ್ನುತ್ತಾ ತಮ್ಮ ಒಂದು ಅನಿಸಿಕೆಯನ್ನು ಏಳಿಕೊಂಡರು..

ಬಾಕಿ ವಸೂಲಿಗೆ ತಾಕೀತು

200 ಯುನಿಟ್​ವರೆಗೆ ಉಚಿತ ವಿದ್ಯುತ್ ಪೂರೈಸುವ ‘ಗೃಹಜ್ಯೋತಿ’ ಯೋಜನೆ ಆಗಸ್ಟ್ ನಿಂದ ಜಾರಿಗೆ ಬರಲಿದೆ. ಅಂದರೆ ಜುಲೈನಲ್ಲಿ ಬಳಸಿದ ವಿದ್ಯುತ್​ಗೆ ಗ್ರಾಹಕರು ಆಗಸ್ಟ್​ನಲ್ಲಿ ಪಾವತಿಸಬೇಕಿದ್ದ ಬಿಲ್ ಶೂನ್ಯ ಆಗಿರಲಿದೆ. ಆದರೆ, ಯಾವುದೇ ಬಾಕಿ ಉಳಿಸಿಕೊಂಡಿರುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ. ಹೀಗಾಗಿ ಬಾಕಿ ಉಳಿಸಿಕೊಂಡಿ ರುವ ಫಲಾನುಭವಿಗಳಿಂದ ಹಿಂಬಾಕಿ ವಸೂಲಿ ಮಾಡುವಂತೆ ಎಲ್ಲ ಎಸ್ಕಾಂಗಳಿಗೆ ನಿರ್ದೇಶನ ನೀಡಲಾಗಿದೆ. ಹೀಗಾಗಿ ಎಸ್ಕಾಂಗಳು ಹಿಂಬಾಕಿ ಇದೇ ತಿಂಗಳ ಬಿಲ್​ನಲ್ಲಿ ನಮೂದಿಸಿವೆ.

ಬಿಲ್ ಏರಿಕೆಗೆ ಕಾರಣ

ದರ ಪರಿಷ್ಕರಣೆಯಿಂದ ಪ್ರತಿ ಯುನಿಟ್​ಗೆ 70 ಪೈಸೆ ದರ ಹೆಚ್ಚಿಸಲಾಗಿದೆ. ಜತೆಗೆ ನಿಗದಿತ ಶುಲ್ಕದಡಿ ಪ್ರತಿ ಕಿಲೋ ವ್ಯಾಟ್​ಗೆ 100 ರೂ. ಬದಲು 110 ರೂ. ಗೆ ಏರಿಸಲಾಗಿದೆ. ಸ್ಲಾಬ್ ಪದ್ಧತಿಯಿಂದ ಬಿಲ್ ಮೊತ್ತ ಹಿಗ್ಗಲು ಅವಕಾಶವಾಗಿದೆ. ಇದಲ್ಲದೆ ಹಿಂಬಾಕಿಯನ್ನೂ ವಸೂಲು ಮಾಡಲಾಗುತ್ತಿದೆ. ಈ ಎಲ್ಲ ಬಾಬ್ತಿಗೆ ತೆರಿಗೆ ರೂಪದಲ್ಲಿ ಒಂದಿಷ್ಟು ಹಣ ಅಧಿಕವಾಗಿ ಪಾವತಿಸಬೇಕಿದೆ. ಹೀಗಾಗಿ ಜೂನ್ ತಿಂಗಳ ಬಿಲ್ ಮೊತ್ತದಲ್ಲಿ ಭಾರಿ ಏರಿಕೆ ಕಂಡುಬಂದಿದೆ…

ವರದಿ. ಮುಕ್ಕಣ್ಣ ಹುಲಿ ಗುಡ್ಡ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend