ಶರಣ ಶ್ರೀ ಡಾ. ಈಶ್ವರ ಮಂಟೂರ ಅವರು ಲಿಂಗೈಕ್ಯರಾದ ಸುದ್ದಿ ತಿಳಿಸಲು ವಿಷಾದಿಸುತ್ತೇವೆ…!!!

Listen to this article

ಶರಣ ಶ್ರೀ ಡಾ. ಈಶ್ವರ ಮಂಟೂರ ಅವರು ಲಿಂಗೈಕ್ಯರಾದ ಸುದ್ದಿ ತಿಳಿಸಲು ವಿಷಾದಿಸುತ್ತೇವೆ.

ಅವರ ಸಾಧನೆ ಹಾದಿಯ ಸಂಕ್ಷಿಪ್ತ ಪರಿಚಯ

ಶರಣ ಶ್ರೀ ಡಾ. ಈಶ್ವರ ಮಂಟೂರ ಅವರು ಕವಿಯಾಗಿ, ಚಿಂತಕರಾಗಿ, ಅನುಭಾವಿ ಪ್ರವಚನಕಾರರಾಗಿ, ಸಾಹಿತಿಗಳಾಗಿ, ಸಮಾಜೋದ್ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಮುನ್ನಡೆದಿದ್ದರು. ಕಲ್ಲು ಮನಸ್ಸಿನ ಹೃದಯಗಳನ್ನು ಹೂವಿನಂತೆ ಅರಳಿಸುವ ಕ್ರೂರಿಗಳ ಭಾವದಲ್ಲಿ ದಯೆಯನ್ನು ತುಂಬುವ, ದ್ವೇಷಿಗಳ ಮನದಲ್ಲಿ ಪ್ರೀತಿಯ ಹಣತೆಯನ್ನು ಹಚ್ಚುವ, ವಿನಯಗುಣ ಸರಳ ಸಂಪನ್ನ ಶರಣರಾದ ಇವರ ತ್ಯಾಗ, ಸೇವೆ ಅನುಪಮವಾದುದು.

ಶರಣ ಶ್ರೀ ಡಾ. ಈಶ್ವರ ಮಂಟೂರ ಅವರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರಿನ ‘ಕಲಾನೇಕಾರ’ ಕುಟುಂಬದಲ್ಲಿ 23-03-1972 ರಂದು ತಂದೆ ಶ್ರೀಶೈಲಪ್ಪ ತಾಯಿ ಅನ್ನಪೂರ್ಣ ಶರಣ ದಂಪತಿಗಳ ಪುಣ್ಯ ಉದರದಿಂದ ಜನ್ಮ ತಾಳಿದವರು. ಬಾಲ್ಯದಲ್ಲಿಯೇ ಶಿಕ್ಷಣದೊಂದಿಗೆ ಸಂಗೀತ, ಸಾಹಿತ್ಯ, ಭಜನೆ, ಪುರಾಣ, ಪ್ರವಚನ ಮುಂತಾದ ಕಲೆಗಳನ್ನು ಮೈಗೂಡಿಸಿಕೊಂಡು ಬೆಳೆದವರು, ತಿಳಿಯಲಾರದ ಘನವನ್ನು ತಿಳಿಯುವ ಕಾಣಬಾರದ ಪರವಸ್ತುಗಳನ್ನು ಕಾಣುವ ಅಂತರಂಗದ ರತ್ನವಾದ ಆತ್ಮವಿದ್ಯೆಯ ಕಡೆಗೆ ಒಲವು ತೋರಿದವರು.

ಪೂಜ್ಯ ಶರಣರು 1993 ರಲ್ಲಿ ಬಿ.ಕಾಂ. ಪದವಿ ಪಡೆದು, ಅಣ್ಣಾಗೃಹಪಾಠ ಶಿಕ್ಷಣ ಕೇಂದ್ರ ಆರಂಭಿಸಿ ಐದು ವರ್ಷಗಳ ಕಾಲ ಜ್ಞಾನಚಿಂತನದಡಿಯಲ್ಲಿ ಆಧ್ಯಾತ್ಮಿಕ ತಳಹದಿಯ ಮೇಲೆ ಸಹಸ್ರಾರು ಮಕ್ಕಳಿಗೆ ಜ್ಞಾನದಾಸೋಹ ನೀಡುತ್ತಲೇ ಬ್ಯಾಂಕಿನಲ್ಲಿ ಕರಣಿಕರಾಗಿ ಸೇವೆ ಸಲ್ಲಿಸಿದವರು.

ಬಸವಾದಿ ಶಿವಶರಣರ ತತ್ತ್ವಸಿದ್ಧಾಂತಗಳನ್ನು ಅಪ್ಪಿಕೊಂಡ ಶರಣ ಈಶ್ವರ ಮಂಟೂರ ಅವರು ಪ್ರವಚನಗಳ ಮೂಲಕ ನಾಡಿನ ಜನಮನದಲ್ಲಿ ಬಸವತತ್ವವನ್ನು ಬಿತ್ತರಿಸುವ ಸಂಕಲ್ಪ ತೊಟ್ಟ ಇವರು ಬ್ಯಾಂಕ್ ಹುದ್ದೆಗೆ ರಾಜೀನಾಮೆ ನೀಡಿ, ಶರಣ ಪಥದಲ್ಲಿ ಹೆಜ್ಜೆಯಿರಿಸಿದವರು.

ನಾಡಿನ ದೇಶೀ ಕಲೆಗಳನ್ನು ಉಳಿಸಿ ಬೆಳೆಸಲು ‘ರಾಗರಶ್ಮಿ’ ಎಂಬ ಹತ್ತು ಕಲಾವಿದರ ಜಾನಪದ ಬಳಗ ಕಟ್ಟಿಕೊಂಡು ಹಳ್ಳಿ-ಹಳ್ಳಿಗೆ ಸಂಚರಿಸಿ, ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು. ಸಮಾಜದ ಏಳ್ಗೆಗಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾದ ಗಡಿಭಾಗದಲ್ಲೆಲ್ಲಾ ಶರಣರಂತೆ ಸಂಚರಿಸಿ, ಬೆಹರೀನ್, ದುಬೈ ರಾಷ್ಟ್ರಗಳಲ್ಲೂ ಶರಣ ಸಂಸ್ಕೃತಿಯ ಪ್ರಚಾರ-ಪ್ರಸಾರ, ವಚನ ಪ್ರವಚನ ಮಾಡಿದ ಕೀರ್ತಿ ಈ ಶರಣರಿಗೆ ಸಲ್ಲುತ್ತದೆ.

ಶ್ರೇಷ್ಠ ಅನುಭಾವಿ ಪ್ರವಚನಕಾರರಾದ ಶರಣ ಶ್ರೀ ಡಾ. ಈಶ್ವರ ಮಂಟೂರ ಅವರು ಗೀತ ರಚನಕಾರರು ಹಾಗೂ ಶ್ರೇಷ್ಠ ಸಂಗೀತಗಾರರು. ಬಸವಭಾವ ಗೀತೆಗಳು, ಬಸವಭಾವ ಪೂಜೆ, ವಚನವಂದನೆ, ತವರಿನ ತಾವರೆ ಮುಂತಾದ ಭಕ್ತಿ ಪರವಶೆಯ ಹತ್ತಾರು ಸಿ. ಡಿ., ವ್ಹಿ.ಸಿ.ಡಿ ಗಳು ಕನ್ನಡಿಗರ ಕೈ ಸೇರುವುದರ ಜೊತೆಗೆ, ದೇಶ-ವಿದೇಶಗಳಲ್ಲಿರುವ ಕನ್ನಡದ ಮನೆಗಳಲ್ಲಿ ಸಂಭ್ರಮಿಸುತ್ತಿವೆ. ನೆತ್ತಿಗೆ ಬುತ್ತಿ, ಅಂತರಂಗದ ಮೃದಂಗ, ಪುಟ್ಟಹಣತೆ, ವಚನ ಹನಿ, ಮಹಾಂತ ಜೋಳಿಗೆ, ವಚನವೃಕ್ಷ ಮುಂತಾದ ಕೃತಿ ಕುಸುಮಗಳು ಓದುಗರ ಅಭಿಮಾನಕ್ಕೆ ಸಾಕ್ಷಿಯಾಗಿವೆ.

ಪ್ರವಚನ ಭಾಸ್ಕರ, ಪ್ರವಚನ ಪ್ರಭಾಕರ, ಪ್ರವಚನ ಚೇತನ, ಪ್ರವಚನ ಭೂಷಣ, ಸಂಗೀತ ಸುಧಾಕರ, ಕಂಚಿನಕಂಠದ ವೀರವಾಣಿ, ಶರಣಶ್ರೀ ಶ್ರೇಷ್ಠ ಕವಿ, ಅನಾಥ ಮಕ್ಕಳ ತಾಯಿ, ಅಬಲೆಯ ಬಂಧು, ಉತ್ಸಾಹದ ಖಣಿ, ಸಾಹಿತ್ಯದ ಚಿಲುಮೆ, ಮುಂತಾದ ಗೌರವ ಬಿರುದುಗಳಿಗೆ ಭಾಜನರಾಗಿದ್ದಾರೆ.

ಎಂ. ಎ. ಪದವಿ ಪಡೆದ ಶರಣರು ಸತತ ಅಧ್ಯಯನ, ಕಠಣ ಪರಿಶ್ರಮ, ಅಂದು ಕೊಂಡದ್ದನ್ನು ಸಾಧಿಸುವ ಛಲ, ನಿರಂತರ ಚಿಂತನದ ಫಲವಾಗಿ ಸ್ವತಃ ಖ್ಯಾತ ಪ್ರವಚನಕಾರರಾಗಿರುವುದರಿಂದ ತಮ್ಮ ಪ್ರವಚನ ಕ್ಷೇತ್ರವನ್ನೇ ಆಧಾರವಾಗಿಟ್ಟುಕೊಂಡು ಇದುವರೆಗೂ ಅಧ್ಯಯನಕ್ಕೆ ಒಳಪಡದ “ಕನ್ನಡದಲ್ಲಿ ಪ್ರವಚನ ಸಾಹಿತ್ಯ” ಪಿಎಚ್.ಡಿ. ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 2013 ಡಿಸೆಂಬರ್ 21ರ ನುಡಿಹಬ್ಬದ ಸಂಭ್ರಮದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವುದು ಅಭಿಮಾನದ ಸಂಗತಿ.

ಜಮಖಂಡಿ ತಾಲೂಕಿನ ಹುನ್ನೂರ-ಮಧುರಖಂಡಿಯ ಸುಂದರ ಪರಿಸರದಲ್ಲಿ ಬೆಟ್ಟದ ಇಳಿಜಾರುವಿನಲ್ಲಿ “ಬಸವಜ್ಞಾನ ಗುರುಕುಲ” ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಯೋಗಾಶ್ರಮವನ್ನು ಸ್ಥಾಪಿಸಿದ್ದಾರೆ. ಈ ಆಶ್ರಮದಲ್ಲಿ ನಾಡಿನ ಅನಾಥ ಬಡಮಕ್ಕಳಿಗೆ ಅನ್ನ, ವಸ್ತ್ರ, ಆಶ್ರಯ, ಶಿಕ್ಷಣ, ಸಂಸ್ಕಾರ ನೀಡುವುದರ ಜೊತೆಗೆ ಸಂಗೀತ, ಗಣಕಯಂತ್ರ ಜ್ಞಾನ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ‘ವ್ಯಕ್ತಿತ್ವ ವಿಕಸನ ಶಿಬಿರ’, ಪರಿಸರ ಸಂರಕ್ಷಣೆ, ನೇತ್ರದಾನ, ರಕ್ತದಾನ, ಉಚಿತ ಆರೋಗ್ಯ ಶಿಬಿರಗಳು, ಪುಸ್ತಕ ಪ್ರಕಟಣೆ, ಪ್ರತಿ ತಿಂಗಳ ಕೊನೆಯ ಶನಿವಾರ ‘ಶಿವಾನುಭವ ಸಂಪದ’ ಮಾಸಿಕ ಕಾರ್ಯಕ್ರಮ ನಿರಂತವಾಗಿ ನಡೆಯುತ್ತಿವೆ.

ಪ್ರತಿ ವರ್ಷ ಡಿಸೆಂಬರ್ 25, 26 ಮತ್ತು 27 ಮೂರು ದಿನಗಳ ಕಾಲ ‘ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾಮಹೋತ್ಸವ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.

ಈ ಮೂಲಕ ನೆಲ-ಜಲ, ಕಲೆ, ಕೃಷಿ, ದಾಸೋಹ ನಾಡು-ನುಡಿ ಸಂಸ್ಕೃತಿ ಸಂವರ್ಧನೆಗಾಗಿ ಶ್ರಮಿಸಿದ ಸಾಧಕರಿಗೆ ರಾಜ್ಯಮಟ್ಟದ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವುದು ಇವರ ಆಶ್ರಮದ ವಿಶೇಷತೆ. ನೂರಾರು ಜನ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗೌರವಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ‘ಎನಗಿಂತ ಕಿರಿಯರಿಲ್ಲ’ ಎಂಬುದಕ್ಕೆ ರೂಪಕವಾಗಿದ್ದು ಕಾಯಕದಲ್ಲೇ ಕೈಲಾಸ ಇದೆ ಎಂಬುದನ್ನು ಕರಸ್ಥಲದಲ್ಲಿ ಪ್ರತಿಷ್ಠಾಪಿಸಿಕೊಂಡ ಶಿವಾನುಭಾವಿ ಶರಣ..

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend