ಶೈಕ್ಷಣಿಕ ಸಾಧನೆ ಮಾಡಿದರೆ ಸಮಾಜದಲ್ಲಿ ಗೌರವ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆ…!!!

Listen to this article

ಶೈಕ್ಷಣಿಕ ಸಾಧನೆ ಮಾಡಿದರೆ ಸಮಾಜದಲ್ಲಿ ಗೌರವ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆ

ಮಾದಿಗ ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಉನ್ನತ ಹುದ್ದೆ ಅಲಂಕರಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾದರೆ ಮಾತ್ರ ಸಮಾಜದಲ್ಲಿ ಗೌರವ ಸ್ಥಾನಮಾನ ಸಿಗುತ್ತವೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಹೊಳಲ್ಕೆರೆ ಪಟ್ಟಣದ ಹೊರವಲಯದ ಹೊಸದುರ್ಗ ರಸ್ತೆಯಲ್ಲಿರುವ ಸ್ನೇಹ ಕಂಫರ್ಟ್ ಸಭಾಂಗಣದಲ್ಲಿ ಭಾನುವಾರ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯ ಹೊಳಲ್ಕೆರೆ, ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾದಿಗ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಬೇಕು. ಓದು ಪೂರ್ಣವಾಗುವ ಮುಂಚೆಯೇ ಹೋರಾಟ, ರಾಜಕೀಯ ವಿಚಾರಗಳ ಬಗ್ಗೆ ಗಮನ ಹರಿಸಬಾರದು. ನಮ್ಮ ಸಮುದಾಯದವರಿಗೆ ವಿದ್ಯಾಭ್ಯಾಸ ಇಲ್ಲ, ಆರ್ಥಿಕವಾಗಿ ಸ್ಥಿತಿವಂತರಲ್ಲದಿದ್ದಾಗ ಸಾಮಾಜಿಕವಾಗಿ ಹಿಂದುಳಿಯುತ್ತೇವೆ. ಆಗ ನಮಗೆ ಅಸ್ಪೃಶ್ಯತೆ ಹಾಗೂ ಜಾತಿಯತೆ ಕಾಡುತ್ತೆ. ಆದರೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ, ಆರ್ಥಿಕವಾಗಿ ಸ್ವಾವಲಂಬಿಗಳಾದರೆ ಮಾತ್ರ ಜಾತಿಮುಕ್ತ ಸಮಾಜ ನಿರ್ಮಾಣವಾಗಲಿದೆ. ಅಸ್ಪೃಶ್ಯತೆ ತೊಲಗಲಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಳಲ್ಕೆರೆ ತಾಲೂಕಿನಲ್ಲಿ ಆರಂಭವಾಗಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಮುದಾಯದ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಹಕಾರದೊಂದಿಗೆ ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸಿದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಣ ಸರಕಾರಿ ಉದ್ಯೋಗ ಪಡೆಯುವುದಕ್ಕೆ ಮಾತ್ರ ಸೀಮಿತವಾಗಬಾರದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಅಂಕಗಳಿಗೆ ಬೆಲೆ ಇಲ್ಲ. ಆದರೆ ಜ್ಞಾನವಂತರಾದರೆ ಗೌರವ ಸ್ಥಾನ ಮಾನ ಸಿಗುತ್ತದೆ. ಏಕಾಗ್ರತೆ ಇದ್ದಾಗ ಮಾತ್ರ ಕೌಶಲ್ಯ, ತಾಂತ್ರಿಕತೆ ಲಭ್ಯವಾಗುತ್ತದೆ. ಏಕಾಗ್ರತೆ ಇಲ್ಲದಿದ್ದರೆ ಎಷ್ಟೇ ಓದಿದರು ಕೂಡ ಉಪಯೋಗಕ್ಕೆ ಬರುವುದಿಲ್ಲ. ವಿದ್ಯಾರ್ಥಿಗಳಿಗೆ ನಿರ್ಧಿಷ್ಟ ಗುರಿ ಇರಬೇಕು. ಏತಕ್ಕಾಗಿ ಓದಬೇಕು ಎಂಬ ಅರಿವಿರಬೇಕು. ಮೀಸಲಾತಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದೇವೆ. ಅಸ್ಪೃಶ್ಯರು ಮೀಸಲಾತಿಯ ನಿಜವಾದ ಅರ್ಹರಾಗಿದ್ದಾರೆ. ಆದರೆ ಸೌಲಭ್ಯಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಬಡತನದಲ್ಲಿ ಹುಟ್ಟಿದ್ದೇನೆ ಎಂದು ಕೀಳಿರಿಮೆ ಬೆಳೆಸಿಕೊಳ್ಳದೆ ಸ್ವಾಲಂಬಿಗಳಾಗಬೇಕು ಎಂದು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಗುರುತಿಸಿ ಸನ್ಮಾನಿಸಲಾಗುತ್ತಿದೆ. ಹಾಗೆಯೇ ಪರೀಕ್ಷೆಗಳಲ್ಲಿ ಹಲವು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೂ ಅವರಿಗೆ ವಿದ್ಯಾಭ್ಯಾಸವನ್ನು ಮುಂದುವರೆಸುವ ಪರಿಸ್ಥಿತಿ ಇರುವುದಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಫ್ರೋತ್ಸಾಹಿಸಬೇಕು ಎಂದರು.

ಹಿರಿಯೂರು ಆದಿಜಾಂಬವ ಮಠದ ಶ್ರೀ ಷಡಾಕ್ಷರಿ ಮುನಿಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಅನ್ನು ತಮ್ಮ ವಿದ್ಯಾಭ್ಯಾಸಕ್ಕೆ ಸಂಬAಧಿಸಿದ ವಿಚಾರಗಳಿಗೆ ಬಳಸಿಕೊಳ್ಳಬೇಕು. ರೀಲ್ಸ್ ಮಾಡುವುದು, ಸಾಮಾಜಿಕ ಜಾಲತಾಣಗಳನ್ನು ನೋಡುವ ಗೀಳು ಬೆಳಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

೨೦೨೨-೨೩ನೇ ಸಾಲಿನ ವಾರ್ಷಿಕ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಎಸ್‌ಎಸ್‌ಎಲ್‌ಸಿ – ೪೦, ದ್ವಿತೀಯ ಪಿಯುಸಿ-೨೨, ಬಿ.ಇಡಿ – ೨, ಪಿಎಚ್‌ಡಿ – ೨ ಒಟ್ಟು ೬೬ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯದ ಸಂಸ್ಥಾಪಕರು ಹಾಗೂ ಗೌರವಾಧ್ಯಕ್ಷರು ಎಸ್.ಶ್ರೀನಿವಾಸ್‌ಮೂರ್ತಿ, ತಾಲೂಕು ನೌಕರ ಸಂಘದ ಅಧ್ಯಕ್ಷೆ ಜೆ. ಸಿದ್ದಲಿಂಗಮ್ಮ, ಜಿಲ್ಲಾ ಮಾದಿಗ ನೌಕರ ಸಂಘದ ಗೌರವಾಧ್ಯಕ್ಷ ಕೆ.ಜಿ.ಜಗದೀಶ್, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪ, ಹೊಳಲ್ಕೆರೆ ತಾಪಂ ಇಓ ರವಿಕುಮಾರ್, ಮಾದಿಗ ನೌಕರ ಸಂಘದ ಜಿಲ್ಲಾಧ್ಯಕ್ಷರು ಚಂದ್ರಪ್ಪ ಸಿ., ಪೌರಯುಕ್ತರಾದ ಡಿ. ಉಮೇಶ್, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕ ಬಿ.ಪಿ.ತಿಪ್ಪೇಸ್ವಾಮಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ಡಿ.ಆರ್.ಪಾಂಡುರಂಗಸ್ವಾಮಿ, ಜಿಲ್ಲಾ ಸಂಚಾಲಕ ಕೆಂಗುಂಟೆ ಜಯ್ಯಣ್ಣ, ಪುರಸಭೆ ಸದಸ್ಯೆ ವಸಂತ ರಾಜಪ್ಪ ಹಾಗೂ ತಾಲೂಕು ಮಾದಿಗ ಸಮುದಾಯದ ನೌಕರರು, ಮುಖಂಡರು, ವಿದ್ಯಾರ್ಥಿಗಳು, ಪೋಷಕರು ಇದ್ದರು…

ವರದಿ. ಸುರೇಶ್ ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend