ಮನೋ ವಿಜ್ಞಾನ -5 ಅಪರಾಧಮುಕ್ತ ಸಮಾಜದ ನಿರ್ಮಾಣ ಶಿಕ್ಷೆಯ ಸ್ವರೂಪಗಳಿಂದ ಸಾಧ್ಯವಿಲ್ಲ. ಶಿಕ್ಷಣದ ಸ್ವರೂಪವನ್ನು ಸಾಧ್ಯ!!

Listen to this article

ಮನೋ ವಿಜ್ಞಾನ -5
ಅಪರಾಧಮುಕ್ತ ಸಮಾಜದ ನಿರ್ಮಾಣ ಶಿಕ್ಷೆಯ ಸ್ವರೂಪಗಳಿಂದ ಸಾಧ್ಯವಿಲ್ಲ. ಶಿಕ್ಷಣದ ಸ್ವರೂಪವನ್ನು ಸಾಧ್ಯ!!

ಹುಟ್ಟಿ ಬೆಳೆದಾಗಿನಿಂದ ಜೊತೆಯಲ್ಲಿ ಇರುವ ಮಕ್ಕಳು ಸ್ವತಂತ್ರವಾಗಿ ಓಡಾಡುವ ವಯಸ್ಸು ಬಂದ ಕೆಲವೇ ಸಮಯದಲ್ಲಿ ಯಾರೋ ಜತೆ ಸೇರಿಕೊಂಡು ಮನೆಯವರನ್ನು, ಸ್ನೇಹಿತರನ್ನು, ಬಂಧು ಬಳಗ ಮತ್ತು ಶಿಕ್ಷಕರು ಎಲ್ಲರನ್ನೂ ಮರೆತು ಕ್ಷುಲ್ಲಕವಾದ ವಿಷಯಗಳನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದ್ಯಾರೋ ಜೊತೆ ಸೇರಿಕೊಂಡು ಅತ್ಯಾಚಾರ ಮಾಡುತ್ತಾರೆ. ಕೊಲೆ ಮಾಡುತ್ತಾರೆ. ಉಗ್ರರಾಗುತ್ತಾರೆ, ನಿರ್ಲಜ್ಜರಾಗುತ್ತಾರೆ. ಅವರ ಹಣೆಯಲ್ಲಿ ಹೀಗೇ ಆಗಬೇಕು ದೇವರು ಬರೆದಿರುತ್ತಾನಾ? ಅಥವಾ ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟಾ? ಅಥವಾ ಎಲ್ಲಾ ವಿಧಿಯ ಕೈವಾಡವಾ? ಹೋಗಲಿ, ವಿಷಯ ನಮ್ಮ ಕೈ ಮೀರಿರುವುದು ಅನ್ನುವುದಾದರೆ ಅಪರಾಧಿಗೆ ಶಿಕ್ಷೆಯಾಗಬೇಕು ಎಂದು ಬಲವಂತಪಡಿಸುವುದರಲ್ಲಿ ಅರ್ಥವಿದೆಯೇ?
ಆತ್ಮಹತ್ಯೆ ಮಾಡಿಕೊಳ್ಳುವುದು, ಅತ್ಯಾಚಾರ ಮಾಡುವುದು, ಅಥವಾ ಇನ್ನಾವುದೇ ಪ್ರಮಾದಗಳನ್ನು ಮತ್ತು ಅಪರಾಧಗಳನ್ನು ಮಾಡುವುದು ಇದ್ದಕ್ಕಿದ್ದಂತೆ ಅಲ್ಲ. ಅವುಗಳ ಲಕ್ಷಣಗಳನ್ನು ಬಾಲ್ಯದಿಂದಲೇ ಒಂದಲ್ಲಾ ಒಂದು ರೀತಿಯಲ್ಲಿ ಅಪರಾಧಿಗಳೆನಿಸಿಕೊಂಡವರು ತೋರಿಸಿರುತ್ತಾರೆ. ಆದರೆ ಪೋಷಕರು ಮತ್ತು ಶಿಕ್ಷಕರು ಅಜ್ಞಾನದಿಂದಲೋ ಅಥವಾ ಉದಾಸೀನದಿಂದಲೋ ನಿರ್ಲಕ್ಷಿಸಿರುತ್ತಾರೆ. ನೆನಪಿರಲಿ, Criminals are not born, but made.

ಶಿಶುಮನದ ಮಹಾಮಾರಿ
ಭಾಗ 01

ಗುರುತಿಸಿ ಗುಣಮುಖರಾಗಿ
ಮಕ್ಕಳ ಅಥವಾ ಹದಿಹರೆಯದವರ, ಹಾಗೂ ಮುಂದುವರೆದಂತೆ ವಯಸ್ಕರಾಗಿರುವರ ವರ್ತನೆಗಳ ಗಮನಿಸಿಕೊಂಡು ಒಂದಿಷ್ಟು ಮನಸ್ಥಿತಿಗಳ ಗುರುತು ಹಾಕೋಣವೆಂದುಕೊಂಡರೆ, ಹೆಸರಿಸಲೇ ಸಾವಿರಾರು ಬಗೆಯ ಸಮಸ್ಯೆಗಳಿವೆ. ಆ ಸಾವಿರಾರು ಸಮಸ್ಯೆಗಳು ನಮ್ಮ ನಮ್ಮಲ್ಲಿ ಧಾರಾಳವಾಗಿ ಹಂಚಿಕೊಂಡು ಹರಿದಾಡಿಕೊಂಡಿವೆ. ಸಮಸ್ಯೆ ಇರುವುದು ಸಮಸ್ಯೆಯನ್ನು ಹೊಂದಿರುವುದರಲ್ಲಿ ಅಲ್ಲ. ಆ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದರಲ್ಲಿ. ಮೊದಲನೆಯ ಹಂತವಾದ ಒಪ್ಪಿಕೊಳ್ಳುವುದೇ ಸಾಧ್ಯವಿಲ್ಲದಿರುವುದರಿಂದ ಇನ್ನುಳಿದ ಹಂತಗಳಾದ ಸಮಾಲೋಚನೆ, ಚಿಕಿತ್ಸೆ ಮತ್ತು ಪರಿಹಾರ ಯಾವುದೂ ಸಕಾರಾತ್ಮಕವಾಗಿರುವುದಿಲ್ಲ.
ಒಂದು ವಿಷಯ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳೋಣ. ರೋಗಲಕ್ಷಣಗಳನ್ನು ಗುರುತಿಸಿ, ರೋಗಕಾರಣಗಳನ್ನು ಪತ್ತೆಹಚ್ಚಿ, ಬಿಡದೇ ಸಮಾಲೋಚನೆ ಮತ್ತು ಚಿಕಿತ್ಸೆಗಳನ್ನು ನೀಡಿದ್ದೇ ಆದರೆ ಆರೋಗ್ಯಕರ ವ್ಯಕ್ತಿತ್ವವನ್ನು ಉಳ್ಳ ವ್ಯಕ್ತಿಯನ್ನೂ ಮತ್ತು ಅಂತಹ ವ್ಯಕ್ತಿಗಳ ಸಮೂಹದ ಆರೋಗ್ಯಕರ ಮನಸ್ಥಿತಿಯ ಸಮಾಜವನ್ನು ಒಂದು ಹಂತಕ್ಕೆ ಕಾಣಬಹುದು. ಇದು ಸಾಧ್ಯವಾಗುವುದು ವ್ಯಕ್ತಿಯ ಎರಡೇ ಹಂತಗಳಲ್ಲಿ ಒಂದು ಬಾಲ್ಯ, ಅದು ಮುಂದುವರಿದ ಕಿಶೋರಾವಸ್ಥೆ ಅಥವಾ ಹದಿಹರೆಯದ ಸಮಯ. ಅಷ್ಟರಲ್ಲಿ ಪತ್ತೆಹಚ್ಚುವಿಕೆ, ಸಮಾಲೋಚನೆ ಮತ್ತು ಅಗತ್ಯವಾದ ಚಿಕಿತ್ಸೆ ಆಗದೇ ಇದ್ದರೆ, ಮುಂದೆ ಆಗುವುದೆಲ್ಲಾ ತಪ್ಪುಗಳಲ್ಲ, ಅಪರಾಧಗಳು. ಮಕ್ಕಳು ತಿಳಿದುಕೊಳ್ಳುತ್ತಾರೆ, ದೊಡ್ಡವರಾಗುತ್ತಾ ತಿದ್ದುಕೊಳ್ಳುತ್ತಾರೆ ಎಂದು ಮಾಡಿದ ನಿರ್ಲಕ್ಷ್ಯಗಳೆಲ್ಲಾ ಮಹಾಪ್ರಮಾದಗಳಾಗಿ ತೋರತೊಡಗುತ್ತವೆ. ಆದ್ದರಿಂದಲೇ ಮೊದಲು ಸಾಮಾಜಿಕವಾಗಿ ಮತ್ತು ವ್ಯಕ್ತಿಗತವಾಗಿ ಮನೋರೋಗಗಳಿಗೆ ಸಂಬಂಧಿಸಿರುವ ಅಪಖ್ಯಾತಿ ಹೋಗಬೇಕು. ಇದನ್ನು ಇಂಗ್ಲಿಷಲ್ಲಿ ಸ್ಟಿಗ್ಮಾ ಎನ್ನುತ್ತೇವೆ. ಮನೋರೋಗಗಳ ಕುರಿತಾದ ಮನೋಭಾವ ಬದಲಾಗದ ಹೊರತು ಆರೋಗ್ಯಕರ ಮನಸ್ಥಿತಿಯ ಸಮಾಜದ ನಿರ್ಮಾಣ ಸಾಧ್ಯವಿಲ್ಲ.
ಮುಂದುವರಿದ ರಾಷ್ಟ್ರಗಳು ಬರಿಯ ಆರ್ಥಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಯನ್ನು ಮಾತ್ರ ಹೊಂದಿರುವುದಲ್ಲ. ಜನಸಮೂಹದಲ್ಲಿ ವ್ಯಕ್ತಿಗತವಾಗಿ ಸ್ಟಿಗ್ಮಾಗಳನ್ನು ಅಥವಾ ಸಾಮಾಜಿಕ ಅಪಕೀರ್ತಿಗಳೆಂದು ಪೂರ್ವಾಗ್ರಹಗಳನ್ನು ಹೊಂದಿರಬಾರದು. ಆರೋಗ್ಯಕರ ಮನಸ್ಥಿತಿಗಳೇ ಆರೋಗ್ಯಕರ ಕುಟುಂಬವನ್ನು ನಿರ್ಮಿಸುವುದು, ಕುಟುಂಬದ ಆರೋಗ್ಯವೇ ಸಮಾಜದ ಆರೋಗ್ಯಕ್ಕೆ ಮೂಲ.
ಸೀಮಾತ್ಮ ಕ್ಷೋಭೆ
ಚೌಕಟ್ಟಿನ ಮನಸ್ಸಿನದೊಂದು ಸಮಸ್ಯೆ ಇದೆ. ಅದಕ್ಕೆ ಸೀಮಾತ್ಮ ಕ್ಷೋಭೆ ಎನ್ನಬಹುದು. ಇಂಗ್ಲೀಷಲ್ಲಿ ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಅಥವಾ ಸಂಕ್ಷಿಪ್ತವಾಗಿ ಬಿಪಿಡಿ ಎನ್ನುತ್ತೇವೆ. ಇದೊಂದು ಗಂಭೀರ ಸಮಸ್ಯೆ. ಇದು ಸಣ್ಣ ಮಗುವಿದ್ದಾಗಿನಿಂದಲೇ ಪ್ರಾರಂಭವಾಗಿ, ಹದಿಹರೆಯದಲ್ಲಿ ಪರಿಣಾಮಕಾರಿಯಾಗಿ ಮುಂದುವರಿದು, ವಯಸ್ಕರಾದಾಗ ಪೂರ್ಣಫಲಗಳನ್ನು ನೀಡುವಂತಹ ಗಂಭೀರ ಸಮಸ್ಯೆ. ಈ ಸಮಸ್ಯೆ ಇರುವವರು ಕೊಡುವ ಸಮಸ್ಯೆ ಅಷ್ಟಿಷ್ಟಲ್ಲ. ಒಂದೆರಡು ವರ್ಷಗಳ ಕಾಲ ಬಾಧಿಸಿ ಹೋಗಿಬಿಡಬಹುದಾದಂತಹ ಸಮಸ್ಯೆಯಾದರೂ ಆ ಅವಧಿಯಲ್ಲಿ ಉಂಟಾಗುವ ಅವಘಡಗಳು ಅವರನ್ನು ಮತ್ತು ಅವರ ಜೊತೆಗಾರರನ್ನು ಜೀವನಪೂರ್ತಿ ಬಾಧಿಸಬಹುದು. ಆಗ ಉಂಟಾಗುವ ತೊಂದರೆಗಳು ಜೀವನಪರ್ಯಂತ ನೋವನ್ನು ಉಂಟು ಮಾಡಬಹುದು.
ಬಿಪಿಡಿ ಅಥವಾ ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಲಕ್ಷಣಗಳನ್ನು ಗುರುತಿಸಬೇಕು. ಅವೇನೆಂದರೆ,
1. ತನ್ನ ತೊರೆಯಬಾರದು ಎಂದ ಉನ್ಮತ್ತ ಅಥವಾ ಆವೇಶಭರಿತವಾಗಿರುವಂತಹ ಪ್ರಯತ್ನಗಳನ್ನು ಮಾಡುವುದು. ತಮ್ಮನ್ನು ಬಿಟ್ಟುಬಿಡುತ್ತಾರೆ ಅಥವಾ ನಿರಾಕರಿಸುತ್ತಾರೆ ಎಂದು ಭಾವೋದ್ರೇಕಗೊಳ್ಳುವುದು.
2. ವ್ಯಕ್ತಿಗಳೊಂದಿಗೆ ಅಸ್ಥಿರವಾದ ಮತ್ತು ತೀವ್ರ ಅಥವಾ ಉಗ್ರವಾದ ಸಂಬಂಧಗಳನ್ನು ಹೊಂದಿರುವುದು.
3. ವ್ಯಕ್ತಿಯ ಅನನ್ಯತೆ ಅಥವಾ ವ್ಯಕ್ತಿತ್ವದ ಗುರುತಿನ ಬಗ್ಗೆ ಗೊಂದಲ.
4. ಆತ್ಮಹಾನಿ ಅಥವಾ ತನಗೆ ತೊಂದರೆ ಮಾಡಿಕೊಳ್ಳುವಂತಹ ಉದ್ವೇಗ.
5. ಆತ್ಮಹತ್ಯೆ ಮಾಡಿಕೊಳ್ಳುವ ಒಲವು.
6. ಪರಿಣಾಮಕಾರಿಯಾದ ಅಥವಾ ಪ್ರಭಾವಶಾಲಿಯಾದ ಅಸ್ಥಿರತೆ.
7. ದೀರ್ಘಕಾಲ ಶೂನ್ಯಭಾವದಲ್ಲಿರುವುದು. ಖಾಲಿತನವನ್ನು ಅನುಭವಿಸುವುದು.
8. ಅಸಹನೀಯ ಮತ್ತು ತೀವ್ರವಾದ ಕೋಪ.
9. ಅನಾದರಕ್ಕೊಂಡಿರುವ ಭಾವದಲ್ಲಿ ಖಿನ್ನತೆಯಲ್ಲಿರುವುದು.
10. ತಾವೇ ಎಲ್ಲರ ಸಂಪರ್ಕ ಕಳೆದುಕೊಂಡು ಏಕಾಂತದಲ್ಲಿರುವುದೇ ಸರಿ ಎಂದು ಭಾವಿಸುವುದು.
11. ಜನರನ್ನು ನಂಬದೇ ಇರುವುದು. ಇದ್ದಕ್ಕಿದ್ದಂತೆ ಜಿಗುಪ್ಸೆಗೊಳ್ಳುವುದು. ಸಂಬಂಧಗಳನ್ನು ಉದಾಸೀನ ಮಾಡುವುದು.
ಇಂತಹ ಮಾನಸಿಕ ಸಮಸ್ಯೆಗಳು ಬಾಲ್ಯದಿಂದಲೇ, ಅದರಲ್ಲೂ ಕೆಲವೊಮ್ಮೆ ಪಾಲಕ ಪೋಷಕರಿಂದಲೇ ಬಂದಿರುತ್ತವೆ. ಮಾನಸಿಕ ಸಮಸ್ಯೆಗಳನ್ನು ಹೊಂದಿರುವಾಗ ಅವನ್ನು ಬಹಳ ಲಘುವಾದ ಮತ್ತು ಸಹಜವಾದ ಹೆಸರುಗಳಿಂದ ಗುರುತಿಸಿ, ನಿರ್ಲಕ್ಷಿಸುತ್ತಾರೆ. ಖಿನ್ನತೆಯನ್ನು ಬೇಸರ ಎಂದೋ, ಅನಾವಶ್ಯಕ ಕೋಪವನ್ನು ಮೂಡ್ ಔಟ್ ಎಂದೋ, ಸಂಬಂಧಗಳ ಬಗ್ಗೆ ಜಿಗುಪ್ಸೆ ಅಥವಾ ಅನಾದರ ಉಂಟಾಗುವುದನ್ನು ಅವರ ಯಾವುದೋ ಅಪಥ್ಯವಾದ ನಡವಳಿಕೆಗೆ ಅಥವಾ ಇಷ್ಟವಿಲ್ಲದ ಘಟನೆಗೆ ತಳುಕು ಹಾಕಿ, ಅದಕ್ಕೇ ನನಗೆ ಇಷ್ಟವಿಲ್ಲದ ವ್ಯಕ್ತಿ ಅವನು ಎಂದೋ ಸುಮ್ಮನಾಗಿಬಿಡುವ ಅಪಾಯಗಳು ಉಂಟು. ಹುಟ್ಟಿದಾಗಿನಿಂದ ವಯಸ್ಸಿಗೆ ಬಂದಿರುವವರೆಗೂ ಗಾಢ ಸಂಬಂಧದಲ್ಲಿ ಮನೆಯವರೊಂದಿಗೆ ಇರುತ್ತಾರೆ. ಯಾರೋ ಗೆಳತಿ, ಗೆಳೆಯರೊಂದಿಗೆ ಕೂಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಮ್ಮ ಸಮಾಜದಲ್ಲಿ ಅವರ ಹಣೆಯಲ್ಲಿ ಹಾಗೆ ಬರೆದಿತ್ತು, ಅವರಿಗೆ ಅಷ್ಟೇ ಋಣ ಇದ್ದದ್ದು, ಕೆಟ್ಟ ಗಳಿಗೆ ಹಾಗಾಯ್ತು ಎಂದು ಸಮಯದಲ್ಲಿ ಕೈ ತೊಳೆದುಕೊಂಡುಬಿಡುತ್ತಾರೆ. ಆದರೆ ಅವುಗಳ ಲಕ್ಷಣಗಳನ್ನು ಅವರು ಬಾಲ್ಯದಿಂದಲೇ ತೋರಿಸಿರುತ್ತಾರೆ. ಅವನ್ನು ಗುರುತಿಸುವ ರೀತಿಯೇ ಗೊತ್ತಿಲ್ಲದೇ ಮುಂದಿನ ಅನಾಹುತಗಳಿಗೆ ಪೋಷಕರು ಮತ್ತು ಶಿಕ್ಷಕರು ಕಾರಣರಾಗುತ್ತಾರೆ. ಎಚ್ಚರಿಕೆ…

ವರದಿ. ಅಜಯ್, ಚ, ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend