ಶಿವನೊಲುಮೆಗೆ ಮನಸ್ಸು ಜಾಗೃತವಾಗಿರಲಿ ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ !!

Listen to this article

ಶಿವನೊಲುಮೆಗೆ ಮನಸ್ಸು ಜಾಗೃತವಾಗಿರಲಿ!!

ಕರಚರಣ ಕೃತಂ ವಾ ಕಾಯಜಂ
ಕರ್ಮಜಂ ವಾ ಶ್ರವಣನಯನಜಂ
ವಾ ಮಾನಸಾಪರದಾಂ ವಾ ವಿಹಿತಂ ವಿಹಿತಂ ವಾ
ಸರ್ವಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ಚೇ ಶ್ರೀ ಮಹಾದೇವ ಶಂಭೋ||

ಈ ಭೂಮಿಯಲ್ಲಿನ ಪ್ರತಿಯೊಂದು ಮತ ಮತ್ತು ಸಂಸ್ಕೃತಿಯು ಯಾವಾಗಲೂ ದೈವತ್ವದ ಸರ್ವಾಂತರ್ಯಾಮಿ ಸ್ವಭಾವದ ಬಗ್ಗೆ ಮಾತನಾಡುತ್ತದೆ. ಹಾಗೇ ಮಹಾಶಿವರಾತ್ರಿಯು ಹಲವು ಸಾಧ್ಯತೆಗಳ ರಾತ್ರಿ. ಮಹಾಶಿವರಾತ್ರಿಯ ಆಚರಣೆಯು ಅಂಧಕಾರವನ್ನು ಕೊಂಡಾಡುವಂತೆಯೇ ತೋರುತ್ತದೆ. ಯಾವುದೇ ತಾರ್ಕಿಕ ಮನಸ್ಸು ಅಂಧಕಾರವನ್ನು ವಿರೋಧಿಸಿ, ಅದು ಸಹಜವಾಗಿ ಬೆಳಕನ್ನೇ ಆರಿಸಿಕೊಳ್ಳುತ್ತದೆ. ಆದರೆ ‘ಶಿವ’ ಎಂಬ ಪದದ ಅರ್ಥ ‘ಯಾವುದು ಇಲ್ಲವೋ ಅದು’ ಎಂದು. ‘ಯಾವುದು ಇದೆಯೋ ಅದು’ ಅಸ್ತಿತ್ವ ಮತ್ತು ಸೃಷ್ಟಿ. ಅದು ಶಿವ.

ಹೀಗೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ. ಅಲ್ಲದೆ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಜತೆಗೆ, ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಇನ್ನು, ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ

ಮಹಾವಿಷ್ಣುವು ಅಲಂಕಾರ ಪ್ರಿಯನಾದರೆ ಶಿವನು ಅಭಿಷೇಕಪ್ರಿಯ. ಮಂತ್ರಪೂರ್ವಕವಾಗಿ ರುದ್ರಾಭಿಷೇಕ ಮಾಡಿದಾಗ ಸಂತುಷ್ಟನಾಗುವ ಪಶುಪತಿಯು ನಮ್ಮಲ್ಲಿರುವ ಪಶುತ್ವವನ್ನು ದೂರಮಾಡಿ ನಮಗೆ ಮಂಗಳವನ್ನುಂಟು ಮಾಡುತ್ತಾನೆ. ಆದ್ದರಿಂದಲೇ ಅದು ರುದ್ರಾಭಿಷೇಕ. ಜಲಧಾರೆಯಿಂದ ಭಗವಂತನ ಅಭಿಷೇಕವನ್ನು ಮಾಡುವುದು, ಆತನ ಸಂತೃಪ್ತಿಗಾಗಿ ರುದ್ರ ನಮಕ, ಚಮಕಗಳು, ರುದ್ರಸೂಕ್ತ, ಶಿವಸೂಕ್ತ, ಶಿವಪಂಚಾಕ್ಷರೀಮಂತ್ರ, ಶಿವಾಷ್ಟೋತ್ತರ ಶಿವಸಹಸ್ರನಾಮ ಹೀಗೆ ವಿವಿಧ ಮಂತ್ರಗಳ ಪಠಣ ಮಾಡುತ್ತಾ, ಶುದ್ಧ ಸಲಿಲದಿಂದ ಭಗವಂತ ಶಿವನನ್ನು ಅಭಿಷೇಕ ಮಾಡುವಂತಹದ್ದು ಭಗವಂತನಾದ ಶಿವನಿಗೆ ಅಷ್ಟೇ ಪ್ರೀತಿಯನ್ನುಂಟು ಮಾಡುತ್ತದೆ. ಭಕ್ತಿಯಿಂದ ಬೇಡಿದವರಿಗೆ ತಥಾಸ್ತು ಎಂದು ಬೇಡಿದ್ದೆಲ್ಲವನ್ನೂ ಕೊಟ್ಟುಬಿಡುವ ಈತ ಮಾತ್ರ ಸ್ಮಶಾನವಾಸಿ, ಗಜಚರ್ಮಾಂಬರ. ಅರ್ಧನಾರೀಶ್ವರ ಎಂದರೆ ತನ್ನರ್ಧ ದೇಹವನ್ನು ಸತಿಯೊಂದಿಗೆ ಹಂಚಿಕೊಂಡರೂ ಈತ ಮಾತ್ರ ಯೋಗಿಗಳಿಗೆ ಯೋಗಿ.

ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಮಾಘ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವರಿಸಿದ್ದನಂತೆ. ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ.

ಪ್ರತಿ ಶಿವರಾತ್ರಿ ವೇಳೆಯಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿಯಂದು ರಾತ್ರಿಯ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಇದೆ.

ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ. ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು. ಈ ಪರ್ವಕಾಲ ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು, ಅಂದು ಈಶ್ವರನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆದುಕೊಳ್ಳುತ್ತಾನೆ ಎಂಬ ಪ್ರತೀತಿ ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ.

ಹೀಗೆ, ಮಹಾಶಿವರಾತ್ರಿಯ ಈ ಪವಿತ್ರ ದಿನದ ಮಧ್ಯರಾತ್ರಿಯಲ್ಲಿ ಶಿವ ಲಿಂಗ ರೂಪದಲ್ಲಿ ಆವಿರ್ಭವಿಸಿದನಂತೆ. ಹಿಂದೂಗಳಿಗೆ ಪ್ರಮುಖವಾಗಿ ಶಿವಭಕ್ತರಿಗೆ ಮಹಾ ಶಿವರಾತ್ರಿ ಉಪವಾಸದ ದಿನವಾದರೂ ಹಬ್ಬದ ಸಡಗರ ಮನೆ ಮಾಡುತ್ತದೆ. ಅಂದು ಪ್ರಾತಃಕಾಲದಲ್ಲಿಯೇ ಎದ್ದು, ಸ್ನಾನ ಮಾಡಿ, ಮಡಿ ವಸ್ತ್ರ ತೊಟ್ಟು, ಉಪವಾಸವಿದ್ದು, ಶಿವದೇವಾಲಯಗಳಿಗೆ ತೆರಳಿ, ಶಿವಾರ್ಚನೆ ಮಾಡಿದರೆ ಮತ್ತು ರಾತ್ರಿಯಿಡೀ ಜಾಗರಣೆ ಮಾಡಿ ಶಿವನ ಪೂಜೆ ಮಾಡಿದರೆ ಎಲ್ಲ ಕಷ್ಟಗಳೂ ಪರಿಹಾರವಾಗಿ ಸುಖ, ಶಾಂತಿ, ಸಂಪತ್ತು ಲಭಿಸುತ್ತದೆ, ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ.ಸಾಮಾನ್ಯವಾಗಿ ಎಲ್ಲ ಶಿವ ದೇವಾಲಯಗಳಲ್ಲೂ ಮಹಾ ರಾತ್ರಿಯಿಡೀ ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ ನಡೆಯುತ್ತದೆ, ಗೋರೋಚನ, ವಿಭೂತಿ ಹಾಗೂ ರುದ್ರಾಕ್ಷಿ ಮಾಲೆಯಿಂದ ಶಿವಲಿಂಗವನ್ನು ಅಲಂಕರಿಸಲಾಗುತ್ತದೆ. ಪುಷ್ಪಗಳಿಂದ ಹಾಗೂ ಬಿಲ್ವಪತ್ರೆಯಿಂದ ವಿಶೇಷ ಅಲಂಕಾರದೊಂದಿಗೆ, ಪೂಜಾ ಕೈಂಕರ್ಯಗಳು ನಡೆಯುತ್ತವೆ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ.

ಹೀಗೆ ಅನೇಕ ಅನೇಕ ಪುರಾಣಗಳು ಭಕ್ತಿಪಥವನ್ನೇ ಸೂಚಿಸುತ್ತವೆ ಭಗವಂತನಲ್ಲಿ ಭಾಗಿಯಾಗಲು ಸಾರುತ್ತವೆ
ನಾವು ಎಷ್ಟು ಭಕ್ತಿಯನ್ನು ಅರ್ಪಿಸುತ್ತೆವೋ ಭಗವಂತ ಅಷ್ಟು ಮಂಗಲವನ್ನು ನೀಡುತ್ತಾನೆ!!ಜಾಗರಣೆಯ ರಾತ್ರಿ ಜಾಗೃತಿರಾತ್ರಿಯಾಗಲಿ ಶಿವರಾತ್ರಿ ಶಿವನ ಒಲಿಸಿಕೊಳ್ಳುವ ರಾತ್ರಿಯಾಗಲಿ ಭಗವಂತನ ಸಂಕೀರ್ತನೆ ಭಗವಂತನ ನಾಮಾಮೃತವ ಹಾಡಿಪಾಡಿ ಪುನೀತರಾಗೋಣ ಶಿವಂ ಭುಯಾತ್!!

ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ
ವಿಜಯನಗರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend