ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ: ಮಕ್ಕಳ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮ ಶಶಿಕಲಾ ಜೊಲ್ಲೆ…!!!

Listen to this article

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಅ.ಜೊಲ್ಲೆ
ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ: ಮಕ್ಕಳ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮ
ಚಿತ್ರದುರ್ಗ,ಜೂನ್22:
ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮೂರನೇ ಅಲೆಯನ್ನು ಸಮಪರ್ಕವಾಗಿ ಎದುರಿಸುವ ನಿಟ್ಟಿನಲ್ಲಿ ಮಕ್ಕಳ ರಕ್ಷಣೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಸಕಲ ಸಿದ್ಧತೆ  ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ  ಶಶಿಕಲಾ ಅ.ಜೊಲ್ಲೆ ತಿಳಿಸಿದರು.
ನಗರದ ಜಿಲ್ಲಾ  ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೊರೊನಾ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋವಿಡ್ ಮೂರನೇ ಅಲೆ ಎದುರಿಸಲು ಮಕ್ಕಳಿಗಾಗಿ ಪ್ರತಿ ತಾಲ್ಲೂಕಿನಲ್ಲಿಯೂ ಕೋವಿಡ್ ಕೇರ್ ಸೆಂಟರ್‍ನ್ನು ಮಹಿಳಾ ಮತ್ತು  ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗುರುತಿಸಲಾಗಿದ್ದು, ಕೋವಿಡ್ ರೋಗ ಲಕ್ಷಣಗಳಿಲ್ಲದಿದ್ದರೆ ಮಗುವಿನೊಂದಿಗೆ ತಾಯಿಯೂ ಇರಲು ಅವಕಾಶ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್‍ನಲ್ಲಿ ಉಚಿತ ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ವೇದಾಂತ ಕಂಪನಿಯವರು ಸಿಎಸ್‍ಆರ್ ಅನುದಾನದಲ್ಲಿ 100 ಬೆಡ್‍ಗಳ ಸುಸಜ್ಜಿತವಾದ ಟೆಂಟ್ ಆಸ್ಪತ್ರೆಗಳನ್ನು ನಿರ್ಮಿಸಿದ್ದಾರೆ. ಅದೇ ರೀತಿ ಜಾನ್‍ಮೈನ್ಸ್ ಅವರು ಸಹ ಸರ್ಕಾರಿ ಹಾಸ್ಟೆಲ್‍ನಲ್ಲಿ 250 ಬೆಡ್‍ಗಳ ವ್ಯವಸ್ಥೆ ಮಾಡಿದ್ದಾರೆ. ಮಕ್ಕಳಿಗಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 5 ಬೆಡ್ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 2 ಬೆಡ್‍ಗಳ ವ್ಯವಸ್ಥೆ, ಜಿಲ್ಲಾಸ್ಪತ್ರೆಯಲ್ಲಿ ಸುಮಾರು 50 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಮಕ್ಕಳಿಗೆ ಬೇಕಾಗಿರುವ ವೆಂಟಿಲೇಟರ್‍ಗಳು ಹಾಗೂ ಔಷಧಿಗಳು ಬಹಳ ಮುಖ್ಯವಾಗಿವೆ. ಜಿಲ್ಲೆಯಲ್ಲಿ ಸಿಎಸ್‍ಆರ್ ಅನುದಾನ, ಜಿಲ್ಲಾ ಮತ್ತು ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಮಕ್ಕಳಿಗಾಗಿ ಪ್ರತ್ಯೇಕವಾಗಿ 600 ಬೆಡ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಒಂದುವರೆ ವರ್ಷದಲ್ಲಿ ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ 3803 ಮಕ್ಕಳು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಇದರಲ್ಲಿ ಶೇ.90ರಷ್ಟು ಮಕ್ಕಳಿಗೆ ಕೋವಿಡ್ ರೋಗಲಕ್ಷಣಗಳಿರಲಿಲ್ಲ. ಕೆಲವು ಮಕ್ಕಳು ಚಿಕಿತ್ಸೆ ಪಡೆದು ವ್ಯವಸ್ಥಿತವಾಗಿ ಗುಣಮುಖರಾಗಿದ್ದಾರೆ. ಕೆಲವು ಮಕ್ಕಳು ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದು, ಅಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ಮುಗಿಸಿ ಮನೆಗೆ ಹೋಗಿರುವುದನ್ನು ಕಾಣಬಹುದಾಗಿದೆ. ಪೋಸ್ಟ್ ಕೋವಿಡ್ ಪರಿಣಾಮ ಜಿಲ್ಲೆಯ ಮಕ್ಕಳಿಗೆ ಕಾಣಿಸಿರುವುದಿಲ್ಲ. ಜೊತೆಗೆ ಇಲ್ಲಿನ ಮಕ್ಕಳಿಗೆ ಬ್ಲಾಕ್ ಫಂಗಸ್ ಪ್ರಕರಣಗಳು ಬಂದಿರುವುದಿಲ್ಲ ಎಂದು ತಿಳಿಸಿದರು.
ಕೋವಿಡ್ ಎರಡನೇ ಅಲೆಯಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ 52 ಮಕ್ಕಳು ರಾಜ್ಯದಲ್ಲಿದ್ದಾರೆ. ಜಿಲ್ಲೆಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಯಾವುದೇ ಮಕ್ಕಳು ಇಲ್ಲ ಮಾಹಿತಿ ಇದೆ. ಆದರೆ ಜಿಲ್ಲೆಯಲ್ಲಿ ಏಕಪೋಷಕರನ್ನು ಕಳೆದುಕೊಂಡ 30 ಮಕ್ಕಳಿದ್ದಾರೆ. ಕೋವಿಡ್ ಎರಡನೇ ಅಲೆಯಿಂದಾಗಿ ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳಿಗಾಗಿ ಮುಖ್ಯಮಂತ್ರಿಗಳು ಈಗಾಗಲೇ ಮುಖ್ಯಮಂತ್ರಿ ಬಾಲಸೇವಾ ಯೋಜನೆ ಘೋಷಣೆ ಮಾಡಿದ್ದಾರೆ. ಈ ಯೋಜನೆಯನ್ವಯ ಅನಾಥ ಮಕ್ಕಳಿಗೆ ಪ್ರತಿ ತಿಂಗಳು ರೂ.3500/-ಗಳನ್ನು ಅವರ ಖಾತೆಗೆ ಜಮಾ ಮಾಡಲಾಗುವುದು. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಅವರಿಗೆ ಉಚಿತ ಶಿಕ್ಷಣ ನೀಡುವುದು. ಅದೇ ರೀತಿ ಎಸ್‍ಎಸ್‍ಎಲ್‍ಸಿ ನಂತರ ಉನ್ನತ ಶಿಕ್ಷಣಕ್ಕೆ ಲ್ಯಾಪ್‍ಟಾಪ್ ಅಥವಾ ಟ್ಯಾಬ್ ನೀಡುವುದು. 21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ರೂ.1 ಲಕ್ಷ ನೀಡಲು ತೀರ್ಮಾನಿಸಲಾಗಿದ್ದು, ಇದು ಮುಖ್ಯಮಂತ್ರಿ ಬಾಲಸೇವಾ ಯೋಜನೆಯ ಕಾರ್ಯಕ್ರಮಗಳಾಗಿವೆ ಎಂದು ತಿಳಿಸಿದರು.
ತಂದೆ ತಾಯಿಯನ್ನು ಕಳೆದುಕೊಂಡ 52 ಮಕ್ಕಳಲ್ಲಿ 20 ಮಕ್ಕಳೊಂದಿಗೆ ಚರ್ಚೆ ಮಾಡಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಲಾಗಿದೆ. ಕೋವಿಡ್‍ನಿಂದ ಮಧ್ಯಮ ಮತ್ತು ಬಡ ವರ್ಗದ ಮಕ್ಕಳು ಅನಾಥರಾಗಿದ್ದಾರೆ. ಪ್ರಸ್ತುತ ಅವರು ಸಂಬಂಧಿಕರ ಬಳಿ ಆಶ್ರಯ ಪಡೆದಿದ್ದಾರೆ. ಆದರೆ ಅವರಿಗೆ ಬಡತನವಿದ್ದರೆ ಅಂತಹ ಮಕ್ಕಳನ್ನು ಪೋಷಣೆ ಮಾಡುವುದು ಕಷ್ಟಸಾಧ್ಯವಾಗಬಹುದು. ಅಂಥ ಸಂದರ್ಭದಲ್ಲಿ ಆ ಮಕ್ಕಳ ದುರುಪಯೋಗವಾಗಬಾರದು ಎಂಬ ಮುಂದಿನ ಭವಿಷ್ಯದ ದೃಷ್ಠಿಯಿಂದ ಅಂತಹ ಮಕ್ಕಳನ್ನು ಇಲಾಖೆಯ ವಶಕ್ಕೆ ಪಡೆದು ದತ್ತು ಸ್ವೀಕಾರದ ಮೂಲಕ ನೋಂದಣಿ ಮಾಡಿಕೊಂಡು ಒಳ್ಳೆಯ ಕುಟುಂಬಕ್ಕೆ ಸೇರಿಸುವ ಕಾರ್ಯವೂ ನಡೆಯುತ್ತಿದೆ ಎಂದರು.
ಕಳೆದ ಒಂದು ವರ್ಷದಲ್ಲಿ 98 ಬಾಲ್ಯವಿವಾಹಗಳ ದೂರುಗಳು  ಬಂದಿವೆ. ಈಗಾಗಲೇ 93 ಪ್ರಕರಣಗಳಿಗೆ ಎಫ್‍ಐಆರ್ ದಾಖಲಿಸಲಾಗಿದೆ. ಈ ವರ್ಷ ಏಪ್ರಿಲ್‍ನಲ್ಲಿ 41 ಬಾಲ್ಯವಿವಾಹದ ದೂರುಗಳು ಬಂದಿತ್ತು. ಇದರಲ್ಲಿ 40 ಬಾಲ್ಯವಿವಾಹಗಳನ್ನು ತಡೆದು, 1 ಪ್ರಕರಣಕ್ಕೆ ಸಂಬಧಿಸಿದಂತೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ್ ಮಾತನಾಡಿ, ಜಿಲ್ಲೆಯಲ್ಲಿ 2333 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 6 ತಿಂಗಳಿಂದ 6ವರ್ಷದ 126198 ಮಕ್ಕಳು ಹಾಗೂ 6ವರ್ಷದಿಂದ 16 ವರ್ಷದ 253964 ಮಕ್ಕಳನ್ನು ಗುರುತಿಸಲಾಗಿದೆ. 6 ವರ್ಷದೊಳಗಿನ 1,26,198 ಮಕ್ಕಳ ಪೈಕಿ 10,104 ಮಕ್ಕಳು ಜಿಲ್ಲೆಯಲ್ಲಿ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 211 ಮಕ್ಕಳು ತೀವ್ರ ಅಪೌಷ್ಢಿಕತೆಯಿಂದ ಬಳಲುತ್ತಿದ್ದಾರೆ.

ಸಾಧಾರಣ ಅಪೌಷ್ಠಿಕತೆ ಮಕ್ಕಳಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ವತಿಯಿಂದ ವಿಶೇಷ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗಿದ್ದು, ಕೋವಿಡ್ ಬಾಧಿಸದಂತೆ ನಿಗಾವಹಿಸಲಾಗುತ್ತಿದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ 211 ಮಕ್ಕಳಿಗೆ ಹೆಚ್ಚಿನ ಕ್ಯಾಲೋರಿ ಪ್ರೊಟಿನ್ ಪೌಷ್ಠಿಕಾಂಶಗಳನ್ನು ನೀಡಿದ್ದಲ್ಲಿ ಅಪೌಷ್ಠಿಕತೆಯನ್ನು ದೂರಮಾಡಬಹುದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಮಾತನಾಡಿ, ಜಿಲ್ಲೆಯಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಎರಡು ಆಕ್ಸಿಜೆನ್ ಸಾಮಾಥ್ರ್ಯದ ಮಕ್ಕಳ ವಾರ್ಡ್‍ಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಜಿಲ್ಲೆಯ ಜಿಲ್ಲಾಸ್ಪತ್ರೆ ಸೇರಿದಂತೆ ಉಳಿದ ಐದು ತಾಲ್ಲೂಕುಗಳ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಆರು ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್ ಸೇರಿದಂತೆ ಒಟ್ಟು 94 ಬೆಡ್‍ಗಳನ್ನು ಪ್ರತ್ಯೇಕಿಸಿ ಮಕ್ಕಳ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. 18 ವರ್ಷದೊಳಗಿನ ಕೋವಿಡ್ ಸೊಂಕಿತ ರೋಗ ಲಕ್ಷಣಗಳಿಲ್ಲದ ಮಕ್ಕಳಿಗೋಸ್ಕರ ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸಲು ಕ್ರಮವಹಿಸಲಾಗಿದ್ದು, ಜಿಲ್ಲಾ ಮಟ್ಟದ ಮಕ್ಕಳ ಕೋವಿಡ್  ಕೇರ್ ಸೆಂಟರ್‍ನಲ್ಲಿ 50 ಬೆಡ್ ಉಳಿದಂತೆ ಐದು ತಾಲ್ಲೂಕಿನಲ್ಲಿ ತಲಾ 25 ಬೆಡ್ ಸೇರಿದಂತೆ ಒಟ್ಟು 175 ಬೆಡ್ ಸಾಮಾಥ್ರ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುಲಿದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಕಳೆದ 20 ದಿನಗಳ ಹಿಂದೆಯೇ ಸಮಿತಿ ರಚನೆ ಮಾಡಿ ಕ್ರಿಯಾಯೋಜನೆ ತಯಾರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್, ಜಿಲ್ಲಾ ಅಂಗವಿಕಲರ ಕಲ್ಯಣಾಧಿಕಾರಿ ಜೆ.ವೈಶಾಲಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ.ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend