ಮುನ್ನಡೆಯ ಕೂಡ್ಲಿಗಿ’ ಕೃತಿಯ ಸಂಪಾದಕರಾದ ಎನ್.ಎಂ.ರವಿಕುಮಾರ್ ಜತೆಗೊಂದು ಮಾತುಕತೆ…!!!

Listen to this article

‘ಮುನ್ನಡೆಯ ಕೂಡ್ಲಿಗಿ’ ಕೃತಿಯ ಸಂಪಾದಕರಾದ ಎನ್.ಎಂ.ರವಿಕುಮಾರ್ ಜತೆಗೊಂದು ಮಾತುಕತೆ..

ಇಂದು ಆಕಸ್ಮಿಕವಾಗಿ ಎನ್.ಎಂ.ರವಿಕುಮಾರ್ ಸರ್ ಸಿಕ್ಕು ಬಹಳ ದಿನದ ನಂತರ, ಬಹಳ ಹೊತ್ತು ಮಾತನಾಡಿ ಖುಷಿಯಾಯ್ತು. ಅವರದ್ದೊಂದು ಮಕ್ಕಳ ಪುಸ್ತಕ ‘ಸಿರಿಗನ್ನಡ ಸೌರಭ’ ಕೃತಿಯನ್ನು ಕೈಗಿಟ್ಟರು. ಅವರ ಬಗೆಗಿನ ಹಲವು ನೆನಪುಗಳು ಮರುಕಳಿಸಿದವು.

ನಾನು ಬಿ.ಎ ಓದುವಾಗ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ ಆಯೋಜಿಸುವ ತಿಂಗಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ಆಗ ಎನ್.ಎಂ.ರವಿಕುಮಾರ್, ಎಸ್.ಡಿ. ಈರಗಾರ, ಜೆ.ಬಿ.ನಾಗನಗೌಡರ್, ಎನ್.ಎಂ.ಕೊಟ್ರೇಶ್, ಲಿಂಗಾರೆಡ್ಡಿ ಶೇರಿ, ಶಿವಕುಮಾರ್ ಕಂಪ್ಲಿ ಮೊದಲಾದ ಹಿರಿಯರು, ಅಂಚೆಕೊಟ್ರೇಶ್, ಸಿದ್ದು ದೇವರ ಮನಿ, ಹೆಚ್.ಎಂ.ನಿರಂಜನ್, ನಿರ್ಮಲ ಶಿವನಗುತ್ತಿ, ಸತೀಶ್ ಪಾಟೀಲ್, ಎಂ.ಎಸ್.ಶಿವನಗುತ್ತಿ, ಮಹಮದ್ ರಫಿ ಮೊದಲಾದವರು ಇರುತ್ತಿದ್ದರು. ನಾನು ಬರೆದ ಮೊದ ಮೊದಲ ಕವಿತೆಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದರು. ಆಗ ಪ್ರತಿ ತಿಂಗಳು ಎರಡನೆಯ ಭಾನುವಾರ ಒಂದೊಂದು ವಿಷಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಎಂ.ಬಿ.ಐನಳ್ಳಿಯಿಂದ ಬಂದು ಎನ್.ಎಂ.ರವಿಕುಮಾರ್ ಸರ್ ಹಲವು ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ನೀಡುತ್ತಿದ್ದರು. ಒಮ್ಮೆ ಶಿವಕುಮಾರ್ ಕಂಪ್ಲಿ ಸರ್ ಸೂಫಿಗಳ ಬಗ್ಗೆ ಮಾತನಾಡಿದ್ದರು. ನಾನು ಮೊದಲಬಾರಿಗೆ ಸೂಫಿ ಎಂಬ ಪದವನ್ನು ಕೇಳಿದ್ದೆ. ರವಿಕುಮಾರ್ ಸರ್ ಕೂಡ್ಲಿಗಿ ತಾಲೂಕಿನಲ್ಲಿ ಹೊಸ ತಲೆಮಾರಿನಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಿದವರು. ಅವರು ತಮ್ಮ ಹೇಮಂತ ಪ್ರಕಾಶನದ ಮೂಲಕ 1987 ರಿಂದ ಈ ತನಕ 20 ಕೃತಿಗಳನ್ನು ಬರೆದಿದ್ದಾರೆ. ಇವರ ‘ಮುನ್ನಡೆಯ ಕೂಡ್ಲಿಗಿ’ ಕೃತಿ ಈಗಲೂ ಕೂಡ್ಲಿಗಿ ತಾಲೂಕಿನ ಬಗ್ಗೆ ಅಧ್ಯಯನ ಮಾಡುವವರಿಗೆ ಪ್ರಾಥಮಿಕ ಆಕರವಾಗಿದೆ.

ಎನ್.ಎಂ.ರವಿಕುಮಾರ್ ತರಹದ ಅನೇಕರು ತಮ್ಮದೇ ಮಿತಿಯಲ್ಲಿ ನಿರಂತರವಾಗಿ ತಮ್ಮ ತಾಲೂಕು ಜಿಲ್ಲಾ ವ್ಯಾಪ್ತಿಯಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಕೆಲಸ ಮಾಡುತ್ತಿರುತ್ತಾರೆ. ಅವರುಗಳು ರಾಜ್ಯಮಟ್ಟದ ಸಾಹಿತಿ ಚಿಂತಕರ ಸಾಲಿನಲ್ಲಿ ಕಾಣುವುದಿಲ್ಲ. ಹಾಗೆ ಕಾಣಲು ಹಪಾಹಪಿಸುವುದೂ ಇಲ್ಲ. ಸಾಹಿತ್ಯ ಅಕಾಡೆಮಿ ಮೊದಲಾದ ರಾಜ್ಯಮಟ್ಟದ ಸಾಹಿತ್ಯ ಸಂಘಟನೆಗಳ ಪ್ರಶಸ್ತಿ ಗೌರವಗಳನ್ನು ಪಡೆಯುವುದೇ ಇಲ್ಲ. ಇವರುಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯ ಸಾಹಿತ್ಯಿಕ ಚಟುವಟಿಕೆಗಳಲ್ಲಿಯೇ ಖುಷಿ ಪಟ್ಟು ಸಂಭ್ರಮಿಸುತ್ತಾರೆ‌. ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸುವ ಹೊಸಬರನ್ನು ಪ್ರೋತ್ಸಾಹಿಸುತ್ತಿರುತ್ತಾರೆ. ಎನ್.ಎಂ.ರವಿಕುಮಾರ್ ಸರ್ ಸದಾ ಶಿಸ್ತಿನ ಸಿಪಾಯಿಯಂತೆ ಡ್ರೆಸ್ ಹಾಕುತ್ತಿದ್ದುದು ನನ್ನ ಗಮನ ಸೆಳೆಯುತ್ತಿತ್ತು. ಎಲ್ಲರೊಂದಿಗೂ ತುಂಬಾ ಆತ್ಮೀಯವಾಗಿ ಬೆರೆಯುವ ಅವರ ನಡೆ-ನುಡಿ ನನ್ನಂಥವರನ್ನು ಸೆಳೆಯುತ್ತಿತ್ತು. ಕಿರಿಯರನ್ನೂ ಗೌರವಿಸುವ ಅವರ ಗುಣ ಚೂರೂ ಮುಕ್ಕಾಗಿಲ್ಲ. ಅವರ ‘ಸಿರಿಗನ್ನಡ ಸೌರಭ’ ಕೃತಿಯಲ್ಲಿ ಮಕ್ಕಳಿಗಾಗಿ ಹಲವು ಸಂಗತಿಗಳನ್ನು ಸರಳವಾಗಿ ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ. ಟಿಪ್ಪುವನ್ನು ‘ಮೈಸೂರು ಹುಲಿ’ ಎಂದು ಅಭಿಮಾನದಿಂದ ಪರಿಚಯಿಸಿದ್ದಾರೆ. ಈ ಕೃತಿಯಲ್ಲಿ ಗಾದೆಯ ಹಿಂದಣ ಕತೆಗಳ ಬಗ್ಗೆ ಬರೆದ ಲೇಖನ ಹೊಸ ಹೊಳಹುಗಳಿಂದ ಕೂಡಿದೆ. ನನ್ನ ತಿಳುವಳಿಕೆಗೆ ಹೊಸ ಸಂಗತಿಗಳನ್ನು ಸೇರಿಸಿದಂತಾಯ್ತು.

ಬಹಳ ದಿನದ ನಂತರ ಬೇಟಿಯಾಗಿ ಆಪ್ತವಾಗಿ ಮಾತನಾಡಿ ಖುಷಿಯಾಯ್ತು. ಜತೆಗೊಂದು ಫೋಟೋ ತೆಗೆದುಕೊಳ್ಳುವುದ ಮರೆತೆ. ಸದ್ಯಕ್ಕೆ ಜಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಎನ್.ಎಂ.ರವಿಕುಮಾರ್ ಸರ್ ಅವರ ಮತ್ತಷ್ಟು ಬರಹಗಳು ಪ್ರಕಟಣೆ ಕಾಣಲಿ. ಒಳಿತಾಗಲಿ ಎಂಬುದು ನಮ್ಮ ಆಶಯ..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend