ಮುತ್ತು ಕಟ್ಟಿಸಿಕೊಂಡವರು…!!!

Listen to this article

ಮುತ್ತು ಕಟ್ಟಿಸಿಕೊಂಡವರು

ದೇವರ ಹೆಸರಲ್ಲಿ ಮುತ್ತು ಕಟ್ಟಿಸಿಕೊಂಡು (ದೇವದಾಸಿ ಪದ್ಧತಿ) ತುತ್ತು ಬದುಕಿಗಾಗಿ ಹೋರಾಡುತ್ತಿರುವ ದೇವದಾಸಿಯರ ಬದುಕಿನಲ್ಲಿ ಇವತ್ತಿಗೂ ಹೊಸಬೆಳಕು ಮೂಡಿಲ್ಲ. ಕೈತುಂಬಾ ಹಸಿರು ಬಳೆ, ಹಣೆಯಲ್ಲಿ ಕಾಸಗಲ ಕುಂಕುಮ, ಕೆನ್ನೆ ತುಂಬಾ ಅರಿಶಿಣ ಬಳಿದುಕೊಂಡಿದ್ದರೂ ಅವರ ಬದುಕಿನಲ್ಲಿ ಮಾತ್ರ ಬಣ್ಣಗಳೇ ಮೂಡಿಲ್ಲ. ‘ದೇವದಾಸಿ’, ‘ಲೇಸಿ’ ಎಂಬ ಎರಡ­ಕ್ಷ­ರದ ನಡುವೆ ಅವರ ಬದುಕು ತೂಗೂ­ಯ್ಯಾಲೆ­ಯಲ್ಲೇ ತೂಗಾಡು­ತ್ತಿದೆ.

ದೇವರು, ಧರ್ಮದ ಹೆಸರಲ್ಲಿ ಹೆಣ್ಣನ್ನು ಶೋಷಿಸುವ ಈ ಪದ್ಧತಿ ಪುರಾತನ ಕಾಲದಿಂದಲೇ ಅಸ್ತಿತ್ವದಲ್ಲಿದೆ. ಹಿಂದೆ ದೇವಸ್ಥಾನಗಳಲ್ಲಿ ಸಂಗೀತ, ನೃತ್ಯದಂತಹ ಸಾಂಸ್ಕೃತಿಕ ಸೇವೆ ಮಾಡಲು ದೇವರಿಗಾಗಿಯೇ ಹೆಣ್ಣನ್ನು ಮೀಸಲಿಟ್ಟ ಪರಿಣಾಮ ಅವರು ದೇವರ ದಾಸಿಯರಾಗಿ (ದೇವದಾಸಿಯರು) ಪ್ರಚಲಿತಕ್ಕೆ ಬಂದರು. ಆರಂಭದಲ್ಲಿ ಸಾಂಸ್ಕೃತಿಕ ನೆಲೆಯಲ್ಲಿದ್ದ ಈ ಸೇವೆ ಕಾಲಾನಂತರ, ದೇವಸ್ಥಾನದ ಪೂಜಾರಿ, ಊರಿನ ಸಾಹುಕಾರರ ವೈಯಕ್ತಿಕ ಲಾಲಸೆಗೂ ವಿಸ್ತರಿಸತೊಡಗಿತು.

ದೇವರ ಹೆಸರಿನಲ್ಲಿ ತಾಳಿ ಕಟ್ಟಿಸಿಕೊಂಡು ಬದುಕು ನಡೆಸುವ ಈ ಹೆಣ್ಣುಮಕ್ಕಳಿಗೆ ‘ಸಂಸಾರ’ ಎಂಬುದು ಎಂದಿಗೂ ನನಸಾಗದ ಕನಸು. ತಂದೆಯ ಅಸ್ತಿತ್ವ, ಹೆಸರು ಇಲ್ಲದೆಯೇ ಬೆಳೆಯುವ ದೇವದಾಸಿಯರ ಮಕ್ಕಳು ಮುಂದೊಂದು ದಿನ ತಾಯಿಯ ವೃತ್ತಿಯನ್ನೇ ಮುಂದುವರಿಸುವ ಅನಿವಾರ್ಯತೆಯನ್ನು ಸಮಾಜ ಸೃಷ್ಟಿಸುತ್ತದೆ. ಅತ್ತ ಅಪ್ಪನ ಹೆಸರಿಲ್ಲದೇ, ಇತ್ತ ಶಿಕ್ಷಣವೂ ಇಲ್ಲದೇ ಅಂಥ ಕಂದಮ್ಮಗಳು ಮತ್ತೆಮತ್ತೆ ದೇವರು, ಧರ್ಮ, ಮೂಢನಂಬಿಕೆಯ ವರ್ತುಲದಲ್ಲಿ ಸದ್ದಿಲ್ಲದೆ ಹಾಗೂ ಸುದ್ದಿಯಾಗದೆ ದೇವದಾಸಿಯರಾಗಿಬಿಡುತ್ತಾರೆ.

ದೇವದಾಸಿಗೆ ಮಗು ಹೆಣ್ಣಾಗಿದ್ದಲ್ಲಿ, ಆ ಕೂಸನ್ನು ದೇವರ ಹೆಸರಲ್ಲಿ ‘ಮುತ್ತು’ ಕಟ್ಟಿಸಿಕೊಳ್ಳಲು ಹುಟ್ಟಿದೆಯೆಂದೇ ಅರ್ಥೈಸಲಾಗುತ್ತದೆ. ಮೈನೆರೆಯುವ ಮುನ್ನವೇ ಆ ಹೆಣ್ಣಿಗೆ ಸುತ್ತಲಿನ ಕಾಮದ ಕಣ್ಣುಗಳು ಬೆಲೆ ಕಟ್ಟಲಾರಂಭಿಸುತ್ತವೆ. ದೇವರ ಹೆಸರಲ್ಲಿ ಪೂಜಾರಿ ‘ಮುತ್ತು’ (ಕೆಂಪು, ಬಿಳಿ ಮಣಿಗಳ ಸರ) ಕಟ್ಟುತ್ತಾನೆ. ಗಂಡು–ಹೆಣ್ಣಿನ ಸಂಬಂಧ ಎಂದರೇನು ಎನ್ನುವುದನ್ನು ಅರಿಯದ, ಸ್ವತಃ ತನ್ನ ದೈಹಿಕ ಬದಲಾವಣೆಯನ್ನೂ ಅರ್ಥೈಸಿ­ಕೊಳ್ಳ­ಲಾರದ ಆ ಪೋರಿ ‘ದೇವದಾಸಿ’ಯಾಗಿ ರೂಪುಗೊಳ್ಳುತ್ತಾಳೆ. ಆಟವಾಡುವ ಪುಟ್ಟ ಬಾಲೆಯ ಕೈಗೆ ಪುಟ್ಟ ಜೀವಂತ ಗೊಂಬೆಯೂ ಬರುತ್ತದೆ!

ಹಿಂದುಳಿದವರೇ ಹೆಚ್ಚು!
ವಯಸ್ಸು ಮೂವತ್ತು ದಾಟುವ ಮುನ್ನವೇ ಎಲೆಅಡಿಕೆ, ತಂಬಾಕು ಹಾಕಿಕೊಂಡು, ಥೇಟ್ ಹಳೇ ಮುದುಕಿ­ಯರಂತೆ ಕಂಗೊಳಿಸುವ ಈ ಯುವತಿ­ಯರು ತಾವು ‘ನಂಬಿದವ’ನಿಂದ ಒಡಲಲ್ಲಿ ಏಡ್ಸ್‌, ಎಚ್‌ಐವಿ ಸೇರಿದಂತೆ ಕಂಡುಕೇಳರಿಯರ ಗುಹ್ಯರೋಗಗಳ ವಾರಸುದಾರರಾಗಿಬಿಡುತ್ತಾರೆ. ಬಡತನ, ಅನಕ್ಷರತೆ, ಜಾತೀಯತೆ ಕಾರಣಗಳಿಂದ ಶೇಕಡಾ 90ರಷ್ಟು ಪರಿಶಿಷ್ಟ ಜಾತಿ (ಎಸ್‌ಸಿ) , ಪರಿಶಿಷ್ಟ ಪಂಗಡ (ಎಸ್‌ಟಿ) ಇಲ್ಲವೇ ಇತರ ಹಿಂದುಳಿದ ಜಾತಿಯ ಹೆಣ್ಣುಮಕ್ಕಳೇ ಈ ಅನಿಷ್ಟ ಪದ್ಧತಿಗೆ ಬಲಿಯಾಗುತ್ತಿರುವುದು ಜಾತಿ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.

ಹೆಣ್ಣೆಂಬುದೇ ದ್ವಿತೀಯ ದರ್ಜೆ ಪ್ರಜೆಯಾಗಿರುವಾಗ ಇನ್ನು ದೇವದಾಸಿ­ಯರ ಬದುಕು ಶಬ್ದಕ್ಕೆ ನಿಲುಕಲಾರದ್ದು. ಮೈಯಲ್ಲಿ ಕಸುವಿದ್ದಾಗ ಹೆಜ್ಜೆಗೊಬ್ಬ­ರಂತೆ ಬೆನ್ನು ಬೀಳುವ ಪುರುಷರು, ಇನ್ನೇನು ಅವಳ ದೇಹದ ಕಸುವು ಮಾಸತೊಡಗಿದೆ ಎಂದೆನಿಸುತ್ತಿದ್ದಂತೆ ಮತ್ತೊಬ್ಬಳ ತೆಕ್ಕೆಗೆ ಜಾರಿರುತ್ತಾರೆ. ಇಲ್ಲಿ ಇವಳ ಕಣ್ಣಲ್ಲಿ ಮುತ್ತಿನ ಹನಿಗಳು ಸಾಲುಗಟ್ಟತೊಡಗು­ತ್ತವೆ, ‘ಮುತ್ತು’ ಕಟ್ಟಿಸಿಕೊಂಡ ದ್ಯೋತಕವಾಗಿ. ಪ್ರೇಮದ ಫಲವಾಗಿ ಮಕ್ಕಳಾದರೆ ಅವನು ತನ್ನನ್ನು ಬಿಟ್ಟುಹೋಗಲಾರ ಎಂಬ ಆಸೆಯಲ್ಲಿ ಮಕ್ಕಳನ್ನು ಮಾಡಿ­ಕೊಂಡರೂ ಅದು ‘ಯಾರಿಗೆ ಹುಟ್ಟಿದ್ದೋ ಏನೋ? ಎಷ್ಟಾದರೂ ನೀನು ದೇವದಾಸಿ ತಾನೇ?’ ಎಂಬ ಮೂದಲಿಕೆಯ ಮಾತುಗಳಲ್ಲೇ ಅವಳು ಕುಸಿದುಹೋಗುತ್ತಾಳೆ.

ಹಡೆದ ತಪ್ಪಿಗೆ ಕೂಲಿನಾಲಿ ಮಾಡಿ ಮಗುವನ್ನು ಸಾಕಲು ಕಂಡವರ ಹೊಲಗಳಲ್ಲಿ ದುಡಿಯಲು ಹೊರಟವಳ ಶ್ರಮಕ್ಕೆ ಬೆಲೆ ಸಿಗದೇ, ದೇಹಕ್ಕೇ ಸುತ್ತಲಿನ ನೋಟಗಳು ಬೆಲೆ ಕಟ್ಟಲಾರಂಭಿಸುತ್ತವೆ. ‘ಮುತ್ತು’ ಕಟ್ಟಿಸಿ­ಕೊಂಡು ಜೀವನವಿಡೀ ಒಬ್ಬನಿಗೇ ನಿಷ್ಠಳಾ­ಗಿದ್ದರೂ, ಅವಳಿಗೆ ‘ಸೂಳೆ’ಯ ಪಟ್ಟ ತಪ್ಪದು. ರಾಜ್ಯ ಸರ್ಕಾರ ಈ ಅನಿಷ್ಟ ಪದ್ಧತಿ ನಿರ್ಮೂಲನೆಗಾಗಿಯೇ ಇದುವರೆಗೆ ಆರು ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ, ಅವ್ಯಾವೂ ಇವರ ಬದುಕಿಗೆ ಸ್ವಾವಲಂಬನೆಯ ದಾರಿ ತೋರಿಲ್ಲ. ಧಾರ್ಮಿಕ ಸ್ವಾತಂತ್ರ್ಯ, ವೈಯಕ್ತಿಕ ನಂಬಿಕೆಗೆ ಧಕ್ಕೆ ತರಬಾರದು ಎಂಬ ಹುಸಿ ಭ್ರಮೆಯಲ್ಲೇ ಸಮಾಜದ ಕೆಲವರು ಈ  ಅನಿಷ್ಟ ಪದ್ಧತಿಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವುದು ಮತ್ತೊಂದು ದುರಂತ.

ಕಾನೂನಿನ ಬೆದರುಗೊಂಬೆ
‘ಕೇವಲ 5 ಸಾವಿರ ರೂಪಾಯಿ ದಂಡ ಇಲ್ಲವೇ, 5 ವರ್ಷ ಜೈಲುಶಿಕ್ಷೆ ಎಂಬ ಸರಳ ಶಿಕ್ಷೆಗೆ ಹೆದರದ ಆರೋಪಿಗಳು ವರ್ಷದಿಂದ ವರ್ಷಕ್ಕೆ ಅಮಾಯಕ ಮಹಿಳೆಯರನ್ನು ಈ ನರಕಕ್ಕೆ ನಿರಾಯಾಸವಾಗಿ ತಳ್ಳುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಟಿ.ವಿ. ರೇಣುಕಮ್ಮ ಆರೋಪಿಸುತ್ತಾರೆ. ಅವರ ಮಾತಿಗೆ ಸಾಕ್ಷಿಯೆಂಬಂತೆ ಸರ್ಕಾರವೇ ನಡೆಸಿರುವ ದೇವದಾಸಿಯರ ಪದ್ಧತಿ ಸಮೀಕ್ಷೆ ವರದಿಯಿದೆ.

1984ರಲ್ಲಿ ಸರ್ಕಾರ ದೇವದಾಸಿಯರ ಸಮೀಕ್ಷೆ ನಡೆಸಿದಾಗ ರಾಜ್ಯದಲ್ಲಿ 22,873 ದೇವದಾಸಿಯರಿದ್ದರು. 2007ರಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಿದಾಗ 46,660 ದೇವದಾಸಿಯರಿದ್ದಾರೆ ಎಂದು ವರದಿ ಹೇಳಿದೆ. ಅಂದರೆ ಎರಡು ಸಮೀಕ್ಷೆಗಳ ನಡುವೆ ಕಡಿಮೆಯಾಗಬೇಕಾಗಿದ್ದ ದೇವದಾಸಿಯರ ಸಂಖ್ಯೆ ದುಪ್ಪಟ್ಟಾಗಿದೆ! ಮತ್ತೊಂದು ಸಮೀಕ್ಷೆ ಇದೆ ನೋಡಿ– ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ನಡೆಸಿರುವ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ದೇವದಾಸಿಯರ ಸಂಖ್ಯೆ 80 ಸಾವಿರಕ್ಕೂ ಹೆಚ್ಚು.

ದೇವದಾಸಿ ಪದ್ಧತಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಸಹಜವೆಂಬಂತೆ ನಡೆದುಕೊಂಡು ಬರುತ್ತಿರುವುದಕ್ಕೆ ಕೊಪ್ಪಳ ಜಿಲ್ಲೆಯ ಹಿರೇಸಿಂಧೋಗಿ ಪ್ರಕರಣವೇ ಸಾಕ್ಷಿ. ಇಲ್ಲಿನ ಸುಪ್ರಸಿದ್ಧ ಮಠವೊಂದರ ಸೇವೆಗೆ ಮೀಸಲಾಗಿರುವ 80 ಕುಟುಂಬಗಳ ಎಲ್ಲಾ ಹೆಣ್ಣುಮಕ್ಕಳು ದೇವದಾಸಿಯರಾಗಿದ್ದಾರೆ. ಅಷ್ಟೇ ಅಲ್ಲ, ಪ್ರತೀ ಶಿವರಾತ್ರಿ, ಯುಗಾದಿ ಹಬ್ಬ ಹಾಗೂ ಊರ ಜಾತ್ರೆಯ ಸಂದರ್ಭಗಳಲ್ಲಿ ಆ ಊರಿನ ಪೂಜಾರಿಯೇ ಈ ಹೆಣ್ಣುಮಕ್ಕಳಿಗೆ ‘ಮುತ್ತು’ ಕಟ್ಟುತ್ತಾನೆ! ಇವೆಲ್ಲವನ್ನೂ ಆ ದೇವದಾಸಿ ಮಹಿಳೆಯರು ಯಾವುದೇ ಮುಚ್ಚುಮರೆಯಿಲ್ಲದೇ ಹೇಳಿಕೊಳ್ಳು­ತ್ತಾರೆ.

ತಮ್ಮ ಬದುಕು ಇರುವುದೇ ಹೀಗೆ, ತಮ್ಮ ಮನೆಯಲ್ಲಿ ಹುಟ್ಟುವ ಪ್ರತೀ ಹೆಣ್ಣೂ ದೇವರಿಗೆ ಮೀಸಲು ಎಂಬ ಮೂಢನಂಬಿಕೆ ಇವರಲ್ಲಿ ಆಳವಾಗಿ ಬೇರೂರಿದೆ. ಈ ಪದ್ಧತಿ ಕೈತಪ್ಪಿದ್ದಲ್ಲಿ ತಮ್ಮ ಕುಟುಂಬಕ್ಕೆ ಒಳ್ಳೆಯದಾಗದು, ದೇವರ ಶಾಪ ತಟ್ಟುತ್ತದೆ ಎಂಬ ನಂಬಿಕೆಯೇ ಈ ಪದ್ಧತಿಯ ಜೀವಂತವಾಗಿ ಉಳಿಯಲು ಕಾರಣವಾಗಿದೆ.

‘ಅಷ್ಟಕ್ಕೂ ದೇವದಾಸಿಯರ ಮಕ್ಕಳನ್ನು ಯಾರು ಮದುವೆ ಆಗುತ್ತಾರೆ?’ – ಈ ಪ್ರಶ್ನೆ ಪ್ರಗತಿಪರ ಬಾಯನ್ನು ಮುಚ್ಚಿಸುತ್ತದೆ. ‘ಹೌದ್ರೀ, ಸರ್ಕಾರ ದೇವದಾಸಿ ಪುರ್ನವಸತಿ ಯೋಜನೆ ಜಾರಿ ಮಾಡೈತಿ. ಅಂದ್ರ, ನಮ್ಗ ಇತರ ಹೆಣ್ಣುಮಕ್ಕಳಿಗೆ ಸಿಗೋ ಗೌರವ ಸಿಗತೈತೇನ್ರಿ? ಎಂಬ ಪ್ರಶ್ನೆಗೆ ಸಮಾಜದ ಉತ್ತರ ‘ಮೌನ’.

‘ನಾವೂ ಇತರ ಹೆಣ್ಣುಮಕ್ಕಳಂತೆ ಸಂಸಾರ ಮಾಡಿಕೊಂಡು ಜೀವನ ನಡೆಸಬೇಕು ಅಂತ ಬಯಸ್ತೀವಿ. ಆದ್ರೆ, ‘ದೇವದಾಸಿ’ ಎಂಬ ಶಬ್ದ ನಮ್ಮ ಪಾಲಿಗೆ ಶಾಪವಾಗಿ ಕಾಡುತ್ತಿದೆ. ಈ ಪದ್ಧತಿ ವಿರುದ್ಧ ಹೋರಾಟ ಮಾಡುತ್ತಿರುವ ಮಾಜಿ ದೇವದಾಸಿಯರ ಬದುಕೇನೂ ಹಸನಾಗಿಲ್ಲ. ಒಟ್ಟಿನಲ್ಲಿ ಸಮಾಜ ನಮ್ಮನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆ ಆಗದ ಹೊರತು, ಸರ್ಕಾರವಾಗಲೀ, ಸಂಘ–ಸಂಸ್ಥೆ­ಗಳಾಗಲೀ ಎಷ್ಟೇ ಕಾರ್ಯಕ್ರಮಗಳನ್ನು ನಡೆಸಿದರೂ  ಯಶಸ್ವಿಯಾಗದು’ ಎಂದು ನಿಟ್ಟುಸಿರುಬಿಡುತ್ತಾರೆ.

ಸಮಾಜವೇ ಶತ್ರು
ಅಲ್ಪಸ್ವಲ್ಪ ಓದಿರುವ ದೇವದಾಸಿಯರು ಹಿರಿಯರು ಮಾಡಿದ ತಪ್ಪನ್ನು ತಾವು ಮಾಡಬಾರದು ಎಂಬ ಅರಿವಿನಿಂದ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮನಸ್ಸು ಮಾಡುತ್ತಾರೆ. ಆದರೆ, ದೇವದಾಸಿಯ ಮಕ್ಕಳನ್ನು ವೇಶ್ಯೆಯರಂತೆ ನೋಡುವ ಸಮಾಜ ಮಾನಸಿಕ ಹಿಂಸೆ ನೀಡುವುದೇ ಹೆಚ್ಚು.

ದಾವಣಗೆರೆ ಜಿಲ್ಲೆಯ ಸುಜಾತಾ (ಹೆಸರು ಬದಲಿಸಲಾಗಿದೆ) ಎಂಬ ಹದಿನಾರರ ತರುಣಿ ಎಸ್ಸೆಸ್ಸೆಲ್ಸಿ ಮುಗಿಸಿದ್ದೇ ದೊಡ್ಡ ಸಾಹಸ. ಬಾಲ್ಯದಲ್ಲೇ ದೇವದಾಸಿ ಪದ್ಧತಿಗೆ ಬಲಿಯಾಗಿದ್ದ ಈಕೆ ಪ್ರತೀ ಮಂಗಳವಾರ – ಶುಕ್ರವಾರ ಶಾಲೆ ತಪ್ಪಿಸಿ, ಪಡ್ಲಿಗಿ ಹಿಡಿದು ಕಂಡವರ ಮನೆ ಮುಂದೆ ಭಿಕ್ಷೆ ಬೇಡುವಂತೆ ಅವಳ ಪಾಲಕರು ಒತ್ತಾಯಿಸುತ್ತಿದ್ದರು. ಎಷ್ಟೋ ಬಾರಿ ಸಹಪಾಠಿಗಳ ಮನೆ ಮುಂದೆಯೇ ಭಿಕ್ಷೆಗೆ ತೆರಳಿ ಅವಮಾನ ಅನುಭವಿಸಿದ್ದ ಸ್ಥಿತಿ ಈಕೆಯದು.

ಈಕೆ ಇರುವ ಗ್ರಾಮದಲ್ಲಿ ಶೌಚಾಲಯ ಸೌಲಭ್ಯವಿಲ್ಲದಿದ್ದರಿಂದ ಬಹಿರ್ದೆಸೆಗೆ ತೆರಳುವಾಗ ಬೀದಿ ಕಾಮಣ್ಣರ ಕೆಂಗಣ್ಣಿಗೂ ಈ ಬಾಲೆ ಗುರಿಯಾದದ್ದಿದೆ. ಇದು ಒಬ್ಬ ಸುಜಾತಾಳ ಕಥೆಯಲ್ಲ. ಎಲ್ಲಾ ದೇವದಾಸಿಯರ ಮಕ್ಕಳ ಕಥೆ. ದೇವದಾಸಿಯರ ಗಂಡು ಮಕ್ಕಳದ್ದು ಇದಕ್ಕಿಂತ ಭಿನ್ನ ಕಥೆ. ಮದುವೆಯಾದ ಹೆಂಡತಿಗೆ ತನ್ನ ತಾಯಿ ದೇವದಾಸಿಯೆಂದು ಹೇಳಲಾಗದೇ, ಇತ್ತ ತಾಯಿಯನ್ನೂ ನೋಡಿಕೊಳ್ಳ­ಲಾಗದೇ ತಾಯಿಯನ್ನು ಬೀದಿ ತಳ್ಳಿದ ಹಲವು ಉದಾಹರಣೆಗಳು ದೊರೆಯುತ್ತವೆ.

ಜಾತಿ ವ್ಯವಸ್ಥೆಯ ಶ್ರೇಣೀಕರಣದ ಕುರಿತು ಅರಿವಿದ್ದ ಡಾ.ಬಿ.ಆರ್. ಅಂಬೇಡ್ಕರ್ ಇವೆಲ್ಲವನ್ನೂ ಮನಗಂಡು 1935ರಲ್ಲೇ ದಲಿತ ದೇವದಾಸಿಯರು ಹಾಗೂ ವೇಶ್ಯೆಯರ ವಿಮೋಚನಾ ಹಾದಿಗೆ ಮುನ್ನುಡಿ ಬರೆದಿದ್ದರು. ಆದರೆ, ಅವರ ಮುನ್ನುಡಿಯ ಕನಸು ಸ್ವಾತಂತ್ರ್ಯ ದೊರೆತು ದಶಕಗಳೇ ಕಳೆದಿದ್ದರೂ ನನಸಾಗಿಲ್ಲ.

ಆಚರಣೆಗೆ,ಭಕ್ತಿ , ಆರಾಧನೆ,ಮುಗ್ದತೆ ಎನೇ ಇದ್ದರೂ ಮೌಢ್ಯದ ಹಾದಿ ತುಳಿಯಬಾರದು ಎಚ್ಚರಿಕೆ.


ವರದಿ.
ಅಂಕಣ; ಅಜಯ್ .ಚ
( ಹುಗಲೂರು)
ಹೂವಿನ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend