ಮಹಿಳಾ ವಿವಿ ಉಳಿವಿಗಾಗಿ ಮಹತ್ವದ ಸಭೆ!!
: ನಾಡಿನ ವಿಜಯಪುರ ಜಿಲ್ಲೆಯ ಹೆಮ್ಮೆಯಾದ ಹಾಗೂ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಸರ್ಕಾರ ಮುಚ್ಚಲು ಹೊರಟಿರುವ ಕುರಿತ ಅನುಮಾನ ಬಹಳ ದಟ್ಟವಾಗಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸುತ್ತಾ ವಿಶ್ವವಿದ್ಯಾಲಯದ ಉಳಿವಿಗಾಗಿ ಎಲ್ಲ ಕಾಳಜಿಯುಳ್ಳ ಸಮಾನ ಮನಸ್ಕರ ಸಭೆಯನ್ನು ಇಂದು ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕದ ಮೂಲಕ ನಡೆಸಲಾಯಿತು.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಹತ್ತಿರದ NGO ಭವನದಲ್ಲಿ ಪರಿಷತ್ ನ ಅಧ್ಯಕ್ಷರಾದ ಶ್ರೀನಾಥ್ ಪೂಜಾರಿ ಅವರ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಯಿತು. ಈ ಸಮಾಲೋಚನಾ ಸಭೆಯಲ್ಲಿ ಜಿಲ್ಲೆಯ ಪ್ರಗತಿಪರ ಚಿಂತಕರು, ಪ್ರಗತಿಪರ ಸಂಘಟನೆಗಳ ಮುಖಂಡರು ಹಾಜರಿದ್ದರು.
ಸಭೆಯಲ್ಲಿ ಪಾಲ್ಗೊಂಡ ವಿಜಯಪುರ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಚಿಂತಕರು, ಸರ್ಕಾರ ಇಂತಹ ಕ್ರಮ ಕೈಗೊಳ್ಳಲಿದೆ ಎಂಬ ಮಾಹಿತಿ ಮತ್ತು ಅನುಮಾನವು ಹರಡಿರುವುದನ್ನು ಪ್ರಸ್ತಾಪಿಸಿ, ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಈ ಬೆಳವಣಿಗೆ ಅತ್ಯಂತ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು. ಹಾಗೊಂದುವೇಳೆ ಸರ್ಕಾರ ನಿರ್ಣಯ ಕೈಗೊಂಡ ಪಕ್ಷದಲ್ಲಿ ಅದರ ವಿರುದ್ಧ ಕೊನೆತನಕ ಹೋರಾಟ ನಡೆಸುವುದಾಗಿಯೂ, ಈಗ ಆ ಕುರಿತ ಆತಂಕ ಹಬ್ಬಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಿವಿಯ ಕುಲಪತಿಗಳು ಖಚಿತವಾಗಿ ಭರವಸೆ ನೀಡುವವರೆಗೆ ಹೋರಾಟ ಮುಂದುವರೆಸುವುದೇ ಸರಿಯಾದ ಕ್ರಮ ಎಂಬ ಸಲಹೆಯೂ ಸಭೆಯಲ್ಲಿ ವ್ಯಕ್ತವಾಯಿತು.
ವಿ.ವಿಯ ಹಿಂದಿನ ಸಿಂಡಿಕೇಟ್ ಸದಸ್ಯೆ ಮತ್ತು ವಕೀಲರಾದ ವಿದ್ಯಾವತಿ ಅಂಕಲಗಿ, ಸಮಾಜಸೇವಕರೂ ಸಬಲ ಸಂಸ್ಥೆಯ ಮುಂದಾಳಾದ ಮಲ್ಲಮ್ಮ ಯಳವಾರ ಮೊದಲಾದವರು ಸಭೆಯಲ್ಲಿ ಮಾತನಾಡಿ ಈ ವಿಶ್ವವಿದ್ಯಾಲಯವು ವಿಜಯಪುರ ಜಿಲ್ಲೆಯ ಜನತೆಯ ಹೋರಾಟದ ಫಲವಾಗಿ ಮತ್ತು ನಂಜುಂಡಯ್ಯ ವರದಿ ಪ್ರಕಾರವಾಗಿ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಉತ್ತೇಜನವಾಗಿ ರೂಪುಗೊಂಡದ್ದು. ಇದನ್ನು ಮುಚ್ಚಲು ಅವಕಾಶ ಕೊಡುವುದಿಲ್ಲ ಎಂದರು.
ವಕೀಲರೂ, ದಲಿತ ವಿದ್ಯಾರ್ಥಿ ಪರಿಷತ್ ನ ಮುಖಂಡರಾದ ಶ್ರೀನಾಥ್ ಪೂಜಾರಿಯವರು ಮಾತನಾಡಿ, ಸರ್ಕಾರವು ಹೊಸ ಶಿಕ್ಷಣ ನೀತಿಯನ್ವಯ ಮತ್ತು ತನ್ನ ಜನವಿರೋಧಿ ಅಜೆಂಡಾದ ಭಾಗವಾಗಿ ಈ ಹೆಜ್ಜೆ ಇಟ್ಟಿರಬಹುದು. ಸಂಪನ್ಮೂಲಗಳ ಕೊರತೆಯ ಸುದ್ದಿಯೂ ಕೇಳಿಬಂದಿದ್ದು ಸಂಸ್ಕೃತ ವಿವಿ ಸ್ಥಾಪಿಸಲು ಸರ್ಕಾರದ ಬಳಿ ಸಂಪನ್ಮೂಲ ಇದ್ದರೆ ಮಹಿಳಾ ವಿವಿಗೆ ಯಾಕೆ ಇಲ್ಲ? ಮಹಿಳಾ ವಿವಿಯನ್ನು ಮುಚ್ಚುವುದು ನಿಜವಾದ ಸುದ್ದಿಯಾದಗಿದ್ದಲ್ಲಿ ಇದರ ವಿರುದ್ಧ ವಿಜಯಪುರದಲ್ಲೂ ರಾಜ್ಯ ಮಟ್ಟದಲ್ಲೂ ಉಗ್ರ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದರು.
ಈ ವಿಚಾರವಾಗಿ ಜವಾಬ್ದಾರಿ ಸ್ಥಾನದಲ್ಲಿರುವವರಿಂದ ಖಚಿತ ಉತ್ತರ ಪಡೆಯುವುದಕ್ಕಾಗಿ ಗಣರಾಜ್ಯೋತ್ಸವದ ದಿನದಂದು ಜನಪ್ರತಿನಿಧಿಗಳು ಮತ್ತು ಆಡಳಿಯ ಮಂಡಳಿಗೆ ಮನವಿ ಪತ್ರ ಸಲ್ಲಿಸಲು ಸರ್ವ ಸಂಘಟನೆಗಳು ಮತ್ತು ಸರ್ವ ಪಕ್ಷಗಳ ನಿಯೋಗ ಹೋಗಬೇಕೆಂದು ಸಮಾಲೋಚನಾ ಸಭೆ ತೀರ್ಮಾನಿಸಿತು. ಇಂದು ಗೋವಿಂದ ಕಾರಜೋಳ ಅವರು ಇದು ಸತ್ಯವಾದ ಸಂಗತಿಯಲ್ಲ ಎಂಬ ಹೇಳಿಕೆ ನೀಡಿದ್ದಾರಾದರೂ, ಅದು ಉನ್ನತ ಶಿಕ್ಷಣಕ್ಕಾಗಲೀ ಅಥವಾ ವಿವಿಗಾಗಲೀ ಸಂಬಂಧಪಟ್ಟ ಯಾರಿಂದಲೂ ಇನ್ನೂ ದೃಢಪಟ್ಟಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಮನವಿಗೆ ಸ್ಪಂದಿಸಿ ವಿಶ್ವವಿದ್ಯಾಲಯವನ್ನು ಈಗಿರುವಂತೆಮಹಿಳಾ ವಿಶ್ವವಿದ್ಯಾಲಯವಾಗಿಯೇ ಮುಂದುವರೆಸುವ ಬಗ್ಗೆ ಖಚಿತವಾದ ಹೇಳಿಕೆಯನ್ನು ನೀಡಿದ ನಂತರ ಈ ಹೋರಾಟವನ್ನು ನಿಲ್ಲಿಸಬಹುದೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು..
ವರದಿ. ಅಜಯ್. ಚ. ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030