ಪೌಷ್ಟಿಕ ಆಹಾರಗಳ ಮೂಲಕ ಕೊರೋನ ಎದುರಿಸೋಣ…!!!

Listen to this article

ಪೌಷ್ಟಿಕ ಆಹಾರಗಳ ಮೂಲಕ ಕೊರೋನ ಎದುರಿಸೋಣ

ಕೊರೋನ ಕಾಲದಲ್ಲಿ ಲಾಕ್‌ಡೌನ್ ಸೃಷ್ಟಿಸಿರುವ ಅತಿ ದೊಡ್ಡ ವೈರಸ್ ‘ಅಪೌಷ್ಟಿಕತೆ’. ಅಪೌಷ್ಟಿಕತೆ ಕೊರೋನ ಅಥವಾ ಲಾಕ್‌ಡೌನ್‌ನ ಅಧಿಕೃತ ಕೂಸೇನೂ ಅಲ್ಲ. ದಶಕಗಳ ಹಿಂದೆಯೇ ಭಾರತ ಶೇಕಡ 45ರಷ್ಟು ಅಪೌಷ್ಟಿಕತೆಯನ್ನು ಎದುರಿಸುತ್ತಿತ್ತು. *ಇಲ್ಲಿರುವ ಕ್ಷಯದಂತಹ ಕಾಯಿಲೆಗಳ ತಾಯಿ ಅಪೌಷ್ಟಿಕತೆಯೇ ಆಗಿದೆ.* ಅಪೌಷ್ಟಿಕತೆಯನ್ನು ಇಲ್ಲವಾಗಿಸದೆ ಇಂತಹ ಸಾಂಕ್ರಾಮಿಕ ಕಾಯಿಲೆಗಳನ್ನು ಪೂರ್ಣಪ್ರಮಾಣದಲ್ಲಿ ಎದುರಿಸಲಾಗುವುದಿಲ್ಲ. *ಭಾರತದಲ್ಲಿ ಕ್ಷಯ ರೋಗ ಇನ್ನೂ ಗಂಭೀರ ಸ್ಥಿತಿಯಲ್ಲಿ ಇರುವುದಕ್ಕೆ ಮುಖ್ಯ ಕಾರಣ ಬಡತನವಾಗಿದೆ.* ಕ್ಷಯ ಪೀಡಿತರಿಗಾಗಿ ಸರಕಾರ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಬಂದಿದೆಯಾದರೂ, ಅಪೌಷ್ಟಿಕತೆಯನ್ನು ಎದುರಿಸಲು ಪರಿಣಾಮಕಾರಿ ಯೋಜನೆಯನ್ನು ಹಾಕಿಕೊಳ್ಳ್ಳದೆ ಇದ್ದ ಕಾರಣ, ಈ ರೋಗವನ್ನು ಗೆಲ್ಲುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೊರೋನ ಕಾಲದಲ್ಲಿ ಕ್ಷಯದಂತಹ ರೋಗಗಳು ಇನ್ನಷ್ಟು ವಿಜೃಂಭಿಸುತ್ತಿವೆ. ಅದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು, ಕ್ಷಯಕ್ಕಾಗಿ ಮೀಸಲಿಟ್ಟ ಅನುದಾನಗಳನ್ನು ಬಹುತೇಕ ರಾಜ್ಯಗಳು ಕೊರೋನವನ್ನು ಎದುರಿಸಲು ವರ್ಗಾಯಿಸಿರುವುದು. *ಕೊರೋನದ ವೈಭವೀಕರಣದಿಂದಾಗಿ ಕ್ಷಯದ ಕುರಿತಂತೆ ಸರಕಾರದ ಕಾಳಜಿ ಬದಿಗೆ ಸರಿದಿದೆ.* ಕೊಳೆಗೇರಿ ಪ್ರದೇಶಗಳಲ್ಲಿ, ಗ್ರಾಮೀಣ ಭಾಗದಲ್ಲಿ ಕ್ಷಯದಿಂದ ಸಾಯುತ್ತಿರುವವರ ಸಂಖ್ಯೆ ಅಧಿಕವಾಗಿದ್ದರೂ, ಕೊರೋನ ಗದ್ದಲದಲ್ಲಿ ಅವುಗಳು ಸುದ್ದಿಯಾಗುತ್ತಿಲ್ಲ. ಕ್ಷಯ ಹೆಚ್ಚಲು ಇನ್ನೊಂದು ಮುಖ್ಯ ಕಾರಣ ಲಾಕ್‌ಡೌನ್. ಕೊರೋನವನ್ನು ಎದುರಿಸಲು ಲಾಕ್‌ಡೌನ್ ಅನಿವಾರ್ಯ ಎಂದು ಸರಕಾರ ಇನ್ನೂ ಬಲವಾಗಿ ನಂಬಿರುವುದರಿಂದ, ದೇಶಾದ್ಯಂತ ಆರ್ಥಿಕ ಚಟುವಟಿಕೆಗಳು ನಿಂತಿವೆ. ಪರಿಣಾಮವಾಗಿ ಬಡತನ ಕಳೆದ ಒಂದು ವರ್ಷದಿಂದ ತೀವ್ರ ಪ್ರಮಾಣದಲ್ಲಿ ಹೆಚ್ಚಿದೆ. ಭಾರತದ ದೊಡ್ಡ ಸಂಖ್ಯೆಯ ಜನರು ಒಂದು ಹೊತ್ತಿನ ಆಹಾರಕ್ಕೂ ಹಾಹಾಕಾರಗೈಯುವ ಸ್ಥಿತಿಯಲ್ಲಿದ್ದಾರೆ. ಒಂದೆಡೆ ಸೂಕ್ತ ಔಷಧಿಗಳಿಲ್ಲದೆ, ಮಗದೊಂದೆಡೆ ಆಹಾರವಿಲ್ಲದೆ ಕ್ಷಯ ಉಲ್ಬಣಿಸುತ್ತಿದೆ. ಕೊರೋನ ರೋಗಿಗಳಿಗೂ ಪೌಷ್ಟಿಕ ಆಹಾರಗಳ ಅಗತ್ಯವಿದೆ ಎನ್ನುವುದನ್ನು ಸರಕಾರ ಮರೆತಿದೆ. ಇಂದು ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಬಹುತೇಕ ಬಡ ವರ್ಗದ ಕೊರೋನಾ ಸೋಂಕಿತರ ಸಾವಿಗೆ ಕಾರಣ, ಕಳಪೆ ಆಹಾರವೂ ಕೂಡ. ಅಪೌಷ್ಟಿಕತೆಯ ಕಾರಣದಿಂದ ಜನರು ಬಹುಬೇಗ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸರಕಾರ ಒದಗಿಸುವ ರೇಷನ್‌ನಿಂದ ಬಡವರ್ಗ ಹಸಿವನ್ನು ತಡೆದುಕೊಳ್ಳಬಹುದೇ ಹೊರತು, ಅದರಿಂದ ಪೌಷ್ಟಿಕತೆಯನ್ನು ಪಡೆಯಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಜನರಿಗೆ ಕಡಿಮೆ ದರದಲ್ಲಿ ಅಧಿಕ ಪೌಷ್ಟಿಕ ಆಹಾರವನ್ನು ಒದಗಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. *ಆದರೆ ದೇಶಾದ್ಯಂತ ಅದಕ್ಕೆ ವಿರುದ್ಧವಾದ ಪ್ರಕ್ರಿಯೆ ನಡೆಯುತ್ತಿದೆ.* ಇಂದು ದೇಶದಲ್ಲಿ ದಿನದಿಂದ ದಿನಕ್ಕೆ ದಿನಸಿಗಳ ಬೆಲೆ ಹೆಚ್ಚುತ್ತಿದೆ. ಇದೇ ಹೊತ್ತಿಗೆ ಅಮುಲ್‌ನಂತಹ ಸಂಸ್ಥೆ ಹಾಲಿನ ಬೆಲೆಯನ್ನು ಲೀಟರ್‌ಗೆ ಎರಡು ರೂಪಾಯಿಯಂತೆ ಹೆಚ್ಚಳಮಾಡಿದೆ. ಲಾಕ್‌ಡೌನ್‌ನಿಂದಾಗಿ ಸಹಕಾರಿ ಸಂಸ್ಥೆಗಳು ಹಾಲನ್ನು ಹೆಚ್ಚು ದಾಸ್ತಾನು ಮಾಡಿಡುವ ಸ್ಥಿತಿಯಲ್ಲಿಲ್ಲ. ಇದೇ ಸಂದರ್ಭದಲ್ಲಿ ಸರಕಾರ ಅಡುಗೆ ಅನಿಲ ದರವನ್ನು ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದರ ಪರಿಣಾಮ, ಅಂತಿಮವಾಗಿ ಜನಸಾಮಾನ್ಯರ ದೈನಂದಿನ ಆಹಾರದ ಮೇಲಾಗಿದೆ. ಇದೇ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ನೂರು ರೂಪಾಯಿಯನ್ನು ದಾಟಿದೆ. ಪೆಟ್ರೋಲ್ ಬೆಲೆಗೂ, ಬಡವರ ದೈನಂದಿನ ಬದುಕಿಗೂ ಸಂಬಂಧವಿರುವುದೇ ಗೊತ್ತಿಲ್ಲದ ಕೆಲವು ರಾಜಕಾರಣಿಗಳು ಬೆಲೆಯೇರಿಕೆಯನ್ನು ಸಮರ್ಥಿಸುತ್ತಿದ್ದಾರೆ. ಪೆಟ್ರೋಲ್ ಬೆಲೆಯೇರಿಕೆಗಳಿಂದಾಗಿ ಸಮಸ್ಯೆಯನ್ನು ಅನುಭವಿಸುವವರು ಕಾರು, ವ್ಯಾನಿನಂತಹ ವಾಹನಗಳಿರುವವರು ಮಾತ್ರ ಎನ್ನುವುದು ಈ ನಾಯಕರ ವಾದ. ಕಾರು, ವ್ಯಾನು ಹೊಂದಿದವರು ಶ್ರೀಮಂತರಾಗಿರುವುದರಿಂದ ಅವರಿಗೆ ಇದನ್ನು ಭರಿಸುವುದು ಕಷ್ಟವಿಲ್ಲ. ಪೆಟ್ರೋಲ್ ಬೆಲೆಯೇರಿಕೆಯಿಂದಾಗಿ ಬಡವರಿಗೆ ಯಾವುದೇ ನಷ್ಟವಿಲ್ಲ, ಯಾಕೆಂದರೆ ಅವರ ಬಳಿ ಕಾರು, ವ್ಯಾನುಗಳಿಲ್ಲ ಎನ್ನುವುದು ಇವರ ಸ್ಪಷ್ಟೀಕರಣ. ‘ಶ್ರೀಮಂತರಿಂದ ಹಣವನ್ನು ಕಿತ್ತು ಬಡವರಿಗೆ ನೀಡಲಾಗುತ್ತಿದೆ’ ಎಂದು ಹೇಳಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. *ಆರ್ಥಿಕತೆಯ ಗಂಧಗಾಳಿ ಇಲ್ಲದವರ ಕೈಯಲ್ಲಿ ದೇಶವನ್ನು ಒಪ್ಪಿಸಿದಾಗ ಮಾತ್ರ ಇಂತಹ ಸಮರ್ಥನೆಗಳನ್ನು ನಾವು ಕೇಳಿಸಿಕೊಳ್ಳಲು ಸಾಧ್ಯ* . *ನರೇಂದ್ರ ಮೋದಿಯವರು ಅಧಿಕಾರವನ್ನು ಏರಿದ್ದೇ ‘ಯುಪಿಎ ಸರಕಾರ ತೈಲ ಬೆಲೆ ಏರಿಸಿದೆ’ ಎನ್ನುವ ಆರೋಪವನ್ನು ಹೊರಿಸುವ ಮೂಲಕ.* ಆದರೆ ಇಂದು ಕಚ್ಚಾ ಬೆಲೆ ತೀರಾ ಇಳಿಕೆಯಾಗಿದ್ದರೂ, ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಬೆಲೆಯೇರಿಕೆಯಾದರೆ ಎಲ್ಲ ದಿನಸಿ, ವಸ್ತುಗಳ ಸಾಗಾಟ ಬೆಲೆಯೂ ತನ್ನಷ್ಟೇ ಹೆಚ್ಚುತ್ತವೆ. ಸಾಗಾಟ ಬೆಲೆ ಅಧಿಕವಾದಾಕ್ಷಣ, ದಿನಸಿ ಪದಾರ್ಥಗಳ ಬೆಲೆಯೂ ಹೆಚ್ಚುತ್ತದೆ. *ಇದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೂ ಅರ್ಥವಾಗುವ ಅರ್ಥಶಾಸ್ತ್ರ.* ಪೆಟ್ರೋಲ್ ಬೆಲೆಯೇರಿಕೆಯಿಂದಾಗಿ ಮೀನುಗಾರಿಕೆ, ಕೃಷಿ, ಕೈಗಾರಿಕೆ ಎಲ್ಲೆಡೆ ಉತ್ಪಾದನಾ ವೆಚ್ಚ ತನ್ನಷ್ಟಕ್ಕೆ ಹೆಚ್ಚುತ್ತದೆ. ಅಂತಿಮವಾಗಿ ಇವೆಲ್ಲವೂ ಮಾರುಕಟ್ಟೆಯಲ್ಲಿ ಬೆಲೆಯೇರಿಕೆಗಳಿಗೆ ಕಾರಣವಾಗುತ್ತದೆ. ಲಾಕ್‌ಡೌನ್‌ನಿಂದಾಗಿ ನಗರಗಳು ದಿಗ್ಬಂಧನದಲ್ಲಿರುವ ಈ ಹೊತ್ತಿನಲ್ಲಿ ಸರಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆಹೆಚ್ಚಿಸುತ್ತಿರುವುದರಿಂದ ಜನರು ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮಧ್ಯಮವರ್ಗದವರೂ ಇಂದು ಬಡತನ ರೇಖೆಗಿಂತ ಕೆಳಗಿನ ಮಟ್ಟಕ್ಕೆ ಇಳಿದಿದ್ದಾರೆ. ಕೊರೋನದಿಂದ ಇವರೆಲ್ಲರೂ ಬಚಾವಾಗುತ್ತಾರೋ ಇಲ್ಲವೋ, ಆದರೆ ಕ್ಷಯ ಮತ್ತು ಹಸಿವು ಇವರನ್ನು ಭವಿಷ್ಯದಲ್ಲಿ ಹಂತಹಂತವಾಗಿ ನುಂಗಿ ಹಾಕಲಿದೆ.

*ಅಡುಗೆ ಅನಿಲ, ಪೆಟ್ರೋಲ್ ಬೆಲೆ ಇಳಿಕೆಗೆ ಸರಕಾರ ತಕ್ಷಣ ಗಮನ ಹರಿಸದೇ ಇದ್ದರೆ ಆಹಾರ ಪದಾರ್ಥಗಳ ಬೆಲೆಯನ್ನು ಇಳಿಸಲು ಸಾಧ್ಯವಿಲ್ಲ.* ಇದೇ ಸಂದರ್ಭದಲ್ಲಿ ರೈತರಿಗೆ ಜಾನುವಾರು ಮಾರಾಟಕ್ಕಿರುವ ನಿಬಂಧನೆಗಳನ್ನು ಕಿತ್ತು ಹಾಕಬೇಕು. ಇದರಿಂದಾಗಿ ರೈತರು ತಮ್ಮ ಹಟ್ಟಿಯಲ್ಲಿದ್ದ ಅನುಪಯುಕ್ತ ಗೋವುಗಳನ್ನು ಮಾರಿ, ಒಂದಿಷ್ಟು ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಲು ಅನುಕೂಲವಾಗುತ್ತದೆ. ಜನ ಸಾಮಾನ್ಯರಿಗೆ ಗೋಮಾಂಸವನ್ನು ಸೇವಿಸಲು ಮುಕ್ತವಾಗಿ ಅವಕಾಶ ನೀಡುವುದರಿಂದ ಪೌಷ್ಟಿಕ ಆಹಾರವೊಂದನ್ನು ಒದಗಿಸಿದಂತಾಗುತ್ತದೆ. ಹಾಗೆಯೇ ಗೋಶಾಲೆಗಳಲ್ಲಿರುವ ಅನುಪಯುಕ್ತ ಗೋವುಗಳನ್ನು ಕಡಿಮೆ ದರಗಳಲ್ಲಿ ಕಸಾಯಿಖಾನೆಗಳಿಗೆ ಒದಗಿಸುವ ಕುರಿತಂತೆ ಸರಕಾರ ಯೋಚಿಸಬೇಕು. ಹೀಗೆ ಅನುಮತಿ ನೀಡುವುದರಿಂದಾಗಿ ಅನಗತ್ಯವಾಗಿ ಗೋಶಾಲೆಗಳಿಗೆ ವ್ಯಯ ಮಾಡುವ ಹಣವೂ ಉಳಿತಾಯವಾಗಿ, ಆ ಹಣವನ್ನು ಬಡವರಿಗೆ ಅಕ್ಕಿ, ಗೋಧಿಯನ್ನು ನೀಡಲು ಬಳಸಬಹುದು. ಗೋಮಾಂಸ ರಫ್ತಿಗೆ ಸಣ್ಣ ನಿಯಂತ್ರಣ ಹೇರಿ, ಅವುಗಳು ದೇಶವಾಸಿಗಳಿಗೆ ದೊರಕುವಂತೆ ಮಾಡಬೇಕು. *ಈ ದೇಶದಲ್ಲಿ ಶೇಕಡ 70ರಷ್ಟು ಜನರು ಗೋಮಾಂಸಾಹಾರಿಗಳು ಎನ್ನುವುದನ್ನು ಸರಕಾರ ಮರೆಯಬಾರದು.* *ಯಾವಾಗ ಗೋಮಾಂಸಾಹಾರಕ್ಕೆ ಪ್ರೋತ್ಸಾಹ ದೊರೆಯುತ್ತದೆಯೋ ಆಗ, ಇತರ ಆಹಾರ ಪದಾರ್ಥಗಳ ಬೆಲೆಯೂ ಇಳಿಕೆಯಾಗುತ್ತದೆ.* ಗೋಮಾಂಸ ಸೇವಿಸುವವರು ಅನಿವಾರ್ಯವಾಗಿ ಕುರಿ, ಮೀನನ್ನು ಅವಲಂಬಿಸುವಾಗ ಸಹಜವಾಗಿ ಬೇಡಿಕೆ ಹೆಚ್ಚಿ ಇವುಗಳ ದರಗಳಲ್ಲೂ ಏರಿಕೆಯಾಗುತ್ತದೆ. ಹಾಗೆಯೇ ಮಾಂಸಾಹಾರದ ಬೆಲೆ ಅಧಿಕವಾದಾಗ ಜನರು ತರಕಾರಿಗಳೆಡೆಗೆ ಹೊರಳುತ್ತಾರೆ. ಇದರಿಂದ ತರಕಾರಿಯೂ ದುಬಾರಿಯಾಗುತ್ತದೆ. *ಮಾರುಕಟ್ಟೆಯಲ್ಲಿ ಕುರಿ, ಮೀನು, ತರಕಾರಿ ಬೆಲೆ ತೀವ್ರಪ್ರಮಾಣದಲ್ಲಿ ಹೆಚ್ಚುವುದಕ್ಕೆ ಗೋಮಾಂಸಾಹಾರದ ಮೇಲೆ ಸರಕಾರದ ನಿಯಂತ್ರಣ ಹೇರುತ್ತಿರುವುದು ಕಾರಣ* . ಜನರ ಮೂಲಭೂತ ಅಗತ್ಯವಾಗಿರುವ ಪೌಷ್ಟಿಕ ಆಹಾರಗಳನ್ನು ಸರಕಾರ ತನ್ನ ಭಾವನಾತ್ಮಕ ರಾಜಕೀಯಗಳಿಗಾಗಿ ಬಳಸಿಕೊಂಡರೆ ಅದು ಅಂತಿಮವಾಗಿ ಈ ದೇಶವನ್ನು ಇನ್ನಷ್ಟು ರೋಗಗ್ರಸ್ತಗೊಳಿಸಲಿದೆ ಎನ್ನುವ ವಾಸ್ತವವನ್ನು ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಪೌಷ್ಟಿಕ ಆಹಾರದಿಂದ, ಆರೋಗ್ಯವಂತ ಭಾರತ ಎನ್ನುವ ಸತ್ಯವನ್ನು ಒಪ್ಪಿಕೊಂಡು ಗೋಮಾಂಸಾಹಾರಕ್ಕೆ ಪ್ರೋತ್ಸಾಹ ನೀಡುವುದು, ಲಾಕ್‌ಡೌನ್‌ನಿಂದ ಸೃಷ್ಟಿಯಾದ ಬಿಕ್ಕಟ್ಟುಗಳನ್ನು ಎದುರಿಸಲು ಇರುವ ಏಕೈಕ ದಾರಿಯಾಗಿದೆ….

ವರದಿ. ಪ್ರತಾಪ್, ಸಿ ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend