ವಿಪತ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿರಿ: ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್…!!!

Listen to this article

ವಿಪತ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿರಿ: ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್

ಬೆಂಗಳೂರು ಗ್ರಾಮಾಂತರ ಜಿಲ್ಲೆ,  ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಉಂಟಾಗುವ ಹಾನಿ ಸಾವು ನೋವುಗಳನ್ನು ತಡೆಯಲು ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತುರ್ತು ಕ್ರಮಗಳನ್ನು ಕೈಗೊಂಡು, ಪರಿಸ್ಥಿತಿ ನಿಭಾಯಿಸಲು ಸದಾ ಸನ್ನದ್ಧರಾಗಿ ಇರಬೇಕು ಎಂದು ಬೆಂಗಳೂರು ಗ್ರಾಮಾಂತರ ಅಪರಾ ಜಿಲ್ಲಾಧಿಕಾರಿ ವಿಜಯ.ಇ.ರವಿಕುಮಾರ್ ತಿಳಿಸಿದರು
ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಸಹಯೋಗದೊಂದಿಗೆ ಹೊಸಕೋಟೆ ತಾಲ್ಲೂಕಿನ ದೇವನಗೊಂದಿ ಗ್ರಾಮದ ಬಳಿಯಿರುವ ಬಿಪಿಸಿಎಲ್‌ನ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಸಂಗ್ರಹಣಾ ಘಟಕದಲ್ಲಿ ಇಂದು ನಡೆದ ವಿಪತ್ತು ನಿರ್ವಹಣೆ ಬಗ್ಗೆ ಅಣುಕು ಪ್ರದರ್ಶನದ ನಂತರ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾತನಾಡಿದರು.


ವಿಪತ್ತು ಸಂಭವಿಸಿದ ತುರ್ತು ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಮೊದಲ ಆದ್ಯ ಕರ್ತವ್ಯವಾಗಿದ್ದು, ಕಾರ್ಖಾನೆಗಳಲ್ಲಿ ಮಾತ್ರವಲ್ಲದೆ, ಪ್ರತಿ ಮನೆಗಳಲ್ಲೂ ಸಹ ಅಗ್ನಿ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದರಲ್ಲದೆ, ಸಹಾಯವಾಣ ಸಂಖ್ಯೆ 112 ಕ್ಕೆ ಕರೆ ಮಾಡಿ, ಪೊಲೀಸ್, ಅಗ್ನಿಶಾಮಕ, ಆಂಬ್ಯುಲೆನ್ಸ್ ಸೇವೆ ಬಳಕೆ ಮಾಡಿಕೊಳ್ಳಬೇಕು ಎಂದರು.
ಅಪಾಯಕಾರಿ ರಾಸಾಯನಿಕ ವಸ್ತುಗಳ ಉಪಯೋಗವನ್ನು ಕನಿಷ್ಟಗೊಳಿಸಿ, ಅವಶ್ಯವಿದ್ದಲ್ಲಿ ಸುರಕ್ಷಾ ಮತ್ತು ಪರಿಸರಸ್ನೇಹಿ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಬೇಕು ಎಂದರಲ್ಲದೆ, ಸದೃಢ ಮತ್ತು ಸುರಕ್ಷಿತವಾದ ಕಾರ್ಯಾಚರಣೆ, ಕ್ರಮಬದ್ಧವಾದ ಉಪಕರಣಗಳನ್ನು, ಅಪಾಯಗಳ ನಿಯಂತ್ರಣದ ಕ್ರಮಗಳು ಮತ್ತು ತುರ್ತು ನಿರ್ವಹಣೆಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ತಯಾರಿಸುವ, ಶೇಖರಿಸುವ ಉಪಯೋಗಿಸುವ ಮತ್ತು ಸಾಗಾಣಿಕೆ ಮಾಡುವ ಉದ್ದಿಮೆದಾರರಲ್ಲಿ ಮತ್ತು ಕೈಗಾರಿಕೆಗಳಿಗೆ ಸುರಕ್ಷತೆಯ ಕುರಿತು ನಿಖರವಾದ ತಿಳುವಳಿಕೆ ಮೂಡಿಸಬೇಕು ಎಂದು ಹೇಳಿದರು.
ತುರ್ತು ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಇಲಾಖೆಗಳಿಗೆ ಜಾಗೃತಿ ಮೂಡಿಸುವ ಕುರಿತು ಈ ಅಣುಕು ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಯಾವುದೇ ವ್ಯಾಪ್ತಿಯಲ್ಲಿ ಇಂತಹ ಅಗ್ನಿ ಅವಘಡ ಸ್ಪೋಟ ಸಂಭವಿಸಿದ ಸಂದರ್ಭದಲ್ಲಿ ತಾಲ್ಲೂಕು ಆಡಳಿತಕ್ಕೆ ಮೊದಲು ಮಾಹಿತಿ ಕೊಡಬೇಕು ಹಾಗೂ ಸಾವು ನೋವುಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರಬೇಕು ಎಂದು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ತಿಳಿಸಿದರು
ಅಣಕು ಪ್ರದರ್ಶನದಲ್ಲಿ ರಾಸಾಯಿನಿಕ ಸೋರಿಕೆ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕ್ರಮಗಳು, ಕೈಗೊಳ್ಳಬೇಕಾದ ಮುಂಜಾಗ್ರತಾ ಸಿದ್ಧತೆಗಳ ಬಗ್ಗೆ ಕಾರ್ಯಾಚರಣೆಯಲ್ಲಿ ಬೆಳಕು ಚೆಲ್ಲಲಾಯಿತಲ್ಲದೆ, ದುರಂತದಿಂದ ಮನುಷ್ಯನಿಗೆ ಸಂಭವಿಸುವ ಸಾವು-ನೋವು ಮತ್ತು ನಷ್ಟಗಳನ್ನು ಕನಿಷ್ಟಗೊಳಿಸುವ ಹಾಗೂ ಪರಿಣಾಮಕಾರಿಯಾಗಿ ತುರ್ತು ಪರಿಸ್ಥಿತಿ ನಿಭಾಯಿಸುವ ಕುರಿತು ಕೆಲಸಗಾರರನ್ನು ಸಿದ್ಧಗೊಳಿಸಬೇಕು ಎಂದರು.


ಸುಮಾರು ಅರ್ಧ ಗಂಟೆಯ ಅಣಕು ಪ್ರದರ್ಶನದಲ್ಲಿ 8 ಆಂಬ್ಯುಲೆನ್ಸ್‌ಗಳು, 2 ಅಗ್ನಿಶಾಮಕ ದಳ ವಾಹನಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಸುಮಾರು 300 ಮಂದಿ ಪಾಲ್ಗೊಳ್ಳುವ ಮೂಲಕ ಯಶಸ್ವಿ ಅಣಕು ಪ್ರದರ್ಶನ ಫಲಕಾರಿಯಾಯಿತಲ್ಲದೆ, ಅಣುಕು ಪ್ರದರ್ಶನವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಸದಸ್ಯರು ಅಣುಕು ಪ್ರದರ್ಶನವನ್ನು ವೀಕ್ಷಿಸಿ, ಸಲಹೆ ಸೂಚನೆಗಳನ್ನು ನೀಡಿದರು.
ಅಣುಕು ಪ್ರದರ್ಶನದ ಚಿತ್ರಣ – ದೇವನಗೊಂದಿ ಪೆಟ್ರೋಲಿಯಂ ಮತ್ತು ಎಲ್.ಪಿ.ಜಿ ಸಂಗ್ರಹಣಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸದಾಗ ಕಾರ್ಖಾನೆಯ ಸಿಬ್ಬಂದಿಗಳು ಪರಿಸ್ಥಿತಿ ನಿಯಂತ್ರಿಸಲಾಗದೆ, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಮೊರೆ ಹೋದಾಗ ಅಪರ ಜಿಲ್ಲಾಧಿಕಾರಿ ಅವರು ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ತುರ್ತು ಪರಿಸ್ಥಿತಿ ಘೋಷಿಸಿದರು. ಹತ್ತಿರದ ಶಾಲೆಯೊಂದರಲ್ಲಿ ತೆರೆಯಲಾಗಿದ್ದ ಕಂಟ್ರೋಲ್ ರೂಂ ಮೂಲಕ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಅವರನ್ನು ಕಾರ್ಯ ಪ್ರವೃತ್ತರನ್ನಾಗಿಸಿ ಅವಘಡ ನಡೆದ ಸ್ಥಳಕ್ಕೆ ಧಾವಿಸಿ, ಸುಟ್ಟ ಗಾಯಾಳುಗಳನ್ನು ರಕ್ಷಿಸಿ, ಆಂಬ್ಯುಲೆನ್ಸ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಿ, ಸಕಾಲಕ್ಕೆ ಚಿಕಿತ್ಸೆ ಒದಗಿಸಲಾಯಿತಲ್ಲದೆ, ಅವಘಡ ಸಂಭವಿಸಿದ ಸ್ಥಳದಿಂದ ಹತ್ತಿರದಲ್ಲಿ ಇದ್ದ ವಾಗಟ ಗ್ರಾಮದ ವರದರಾಜ ಸ್ವಾಮಿ ದೇವಾಲಯ ಟ್ರಸ್ಟ್ನಲ್ಲಿ ತೆರೆಯಲಾಗಿದ್ದ ಪುನರ್ವಸತಿ ಕೇಂದ್ರಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ, ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ತುರ್ತು ಪರಿಸ್ಥಿತಿಯನ್ನು ಹಿಂಪಡೆದು, ಆದೇಶಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನರಸಿಂಹ, ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಉಪ ನಿರ್ದೇಶಕ ತಿಮ್ಮರಾಜು, ಡಿವೈಎಸ್ಪಿ ಉಮಾಶಂಕರ್, ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞೆ ಡಾ. ವಿನುತಾ, ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಎನ್‌ಡಿಆರ್‌ಎಫ್, ಅಗ್ನಿ ಶಾಮಕ, ಗೃಹ ರಕ್ಷಕ ದಳ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು…

ವರದಿ. ಕಲಾವತಿ, ಎನ್,

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend