ಚಳ್ಳೆ ಹಣ್ಣು ತಿನ್ನಿಸ್ತೀನಿ ಬನ್ನಿ,,,!!!

Listen to this article

ಚಳ್ಳೆ ಹಣ್ಣು ತಿನ್ನಿಸ್ತೀನಿ ಬನ್ನಿ,,

” ಚಳ್ಳೆ ಹಣ್ಣು ತಿನ್ನಿಸಿದ ” ಚಳ್ಳೆ ಹಣ್ಣು ತಿಂದಂತೆ ಮುಖ ಮಾಡಿದ್ದ ” ಎಂಬ ಹೆಸರು ಯಾಕೆ ಬಂದವೆಂಬುದು ಅವುಗಳನ್ನು ತಿಂದು ನೋಡಿದರೆ ನಿಮಗೇ ಗೊತ್ತಾಗುತ್ತೆ. ಹಾಗಂತ ಹಣ್ಣು ಚನ್ನಾಗಿಲ್ಲ ಅಂದುಕೊಳ್ಳಬೇಡಿ. ತುಂಬಾ ಸಿಹಿಯಾದ ಹಣ್ಣಿದು.

ಈಗ ಚಳ್ಳೆಹಣ್ಣುಗಳ ಕಾಲ. ಕಾಡು ಪ್ರದೇಶಗಳಲ್ಲಿ, ಗಿಡಗಳಲ್ಲಿ ತಿಳಿಗುಲಾಬಿ ಬಣ್ಣದಿಂದ ರಸದುಂಬಿ ಕಾಣುವ ಚಳ್ಳೆಹಣ್ಣುಗಳನ್ನು ತಿಂದಿದ್ದೀರಾ ? ತಿಂದಿದ್ದರೆ ಸಂತೋಷ, ತಿನ್ನದೇ ಇದ್ದರೆ ಒಮ್ಮೆ ತಿಂದು ನೋಡಿ. ಅತ್ಯಂತ ಸಿಹಿಯಾದ ಹಾಗೂ ಮಧುರವಾದ ಹಣ್ಣು.

ಸಾಮಾನ್ಯವಾಗಿ ಯಾರನ್ನಾದರೂ ಯಾಮಾರಿಸಿದಾಗ ಚಳ್ಳೆಹಣ್ಣು ತಿನ್ನಿಸಿದ ಎಂಬುದು ಆಡುನುಡಿ. ಆದರೆ ಚಳ್ಳೆಹಣ್ಣನ್ನೇ ಯಾಕೆ ಬಳಸಿದರೋ ಗೊತ್ತಿಲ್ಲ. ಯಾಕೆಂದರೆ ಅತ್ಯಂತ ಸಿಹಿಯಾದ ಆರೋಗ್ಯಕ್ಕೂ ಪೂರಕವಾದ ಗ್ರಾಮೀಣ ಭಾಗದಲ್ಲಿ ಚಿರಪರಿಚಿತವಾದ ಹಣ್ಣೆಂದರೆ ಚಳ್ಳೆಹಣ್ಣು. ಮೇಲಿನ ಸಿಪ್ಪೆಯನ್ನು ತೆಗೆದರೆ ಒಳಗೆಲ್ಲ ಅಂಟುಅಂಟಾಗಿದ್ದರೂ ಬಾಯಲ್ಲಿ ಸವಿ ನೀಡುವ ಈ ಹಣ್ಣು ಗ್ರಾಮದ ಮಕ್ಕಳಿಗೆಲ್ಲ ಚಿರಪರಿಚಿತವಾದುದು. ಅತ್ಯಂತ ಸುಲಭವಾಗಿ, ಉಚಿತವಾಗಿ, ಆರೋಗ್ಯಕ್ಕೆ ಪೂರಕವಾಗಿ ಸಿಗುವ ಹಣ್ಣೆಂದರೆ ಚಳ್ಳೆಹಣ್ಣು.

ಇದೀಗ ಚಳ್ಳೆಹಣ್ಣಿನ ಕಾಲ. ಕಾಡಿನಲ್ಲಿ ಗೊಂಚಲು ಗೊಂಚಲಾಗಿ ತೂಗಾಡುವ ಚಳ್ಳೆಹಣ್ಣನ್ನು ಇಂಗ್ಲೀಷ್‌ನಲ್ಲಿ ಬರ್ಡ್ ಲೈಮ್ ಎಂದು ಕರೆಯುತ್ತಾರೆ. ಕನ್ನಡದಲ್ಲಿಯೇ ವಿವಿಧ ಪ್ರದೇಶಗಳಲ್ಲಿ ಇದನ್ನು ಸೊಳ್ಳೆ, ಬೊಟ್ಟೆ, ಚಡ್ಲು ಎಂದು ವಿವಿಧ ಹೆಸರಿನಿಂದ ಕರೆಯಲಾಗುತ್ತದೆ. ಮೇ ತಿಂಗಳಿನಿಂದ ಜುಲೈ ತಿಂಗಳವರೆಗೂ ಚಳ್ಳೆಹಣ್ಣುಗಳ ಕಾಲ. ಚಳ್ಳೆಹಣ್ಣಿನಲ್ಲಿ ಪ್ರೋಟೀನ್, ಕಬ್ಬಿಣಾಂಶ, ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣದ ಅಂಶವಿರುತ್ತದೆ. ಈ ಕಾಯಿಯಿಂದ ಉಪ್ಪಿನಕಾಯಿ, ಸಾಂಬಾರ್ ನ್ನೂ ಮಾಡಲಾಗುತ್ತದೆ. ಮೂತ್ರವರ್ಧನೆಗೆ, ಕೆಮ್ಮಿಗೆ ಈ ಹಣ್ಣು ಉತ್ತಮ ಔಷಧ. ಗಾಯಕ್ಕೆ ಇದರ ತೊಗಟೆಯನ್ನು ತೇದು ಹಚ್ಚಬಹುದಾಗಿದೆ. ಹಣ್ಣಿನ ತಿರುಳನ್ನು ಅಂಟಿನಂತೆಯೂ ಬಳಸಲಾಗುತ್ತದೆ.

ಏಷ್ಯಾ ಮೂಲದ ಚಳ್ಳೆಗಿಡ 8-10 ಮೀ ಎತ್ತರಕ್ಕೆ ಬೆಳೆಯಬಲ್ಲದು. ತೆಳ್ಳನೆಯ ಇಳಿ ಬಿದ್ದ ರೆಂಬೆಗಳಲ್ಲಿ ಅಂಡಾಕಾರದ ಚೂಪು ತುದಿಯ ದಟ್ಟ ಹಸಿರು ಎಲೆಗಳು ಇರುತ್ತವೆ. ಚಿಕ್ಕ ಬಿಳಿ ಹೂಗೂಂಚಲು ಹಸಿರು ಕಾಯಿಗಳಿಗೆ ರೂಪಾಂತರ ಹೊಂದುತ್ತದೆ. ಹಳದಿ ಮಿಶ್ರಿತ ತಿಳಿ ಗುಲಾಬಿ ವರ್ಣದ ಹಣ್ಣಿನಲ್ಲಿ ಸುತ್ತುವರೆದ ಪಾರದರ್ಶಕ ಸಿಹಿ ಅಂಟಿನ ತಿರುಳು ತುಂಬಿರುತ್ತದೆ. ಬೀಜ ಮತ್ತು ದಂಟುಸಸಿಗಳಿಂದ ಸಸ್ಯಾಭಿವೃದ್ಧಿ ಮಾಡಬಹುದಾಗಿದೆ. ಹಕ್ಕಿ ಕೋತಿಗಳಿಂದ ಸಾಮಾನ್ಯವಾಗಿ ಇದರ ಬೀಜಪ್ರಸಾರವಾಗುತ್ತದೆ.

ಹೆಚ್ಚಾಗಿ ಯಾರ ಕಣ್ಣಿಗೂ ಬೀಳದಿರುವ ಈ ಹಣ್ಣಿನ ಮಹತ್ವ ಗೊತ್ತಾದರೆ ಅಥವಾ ಇದರಲ್ಲಿ ಔಷಧೀಯ ಅಂಶವಿದೆಯೆಂದು ವೈದ್ಯರು ಹೇಳಿದಲ್ಲಿ ಬಹುಶ: ಇದಕ್ಕೂ ಬೆಲೆ ಬರಬಹುದು. ಅಲ್ಲಿಯವರೆಗೂ ಎಲೆಮರೆಯ ಕಾಯಿಯಂತೆ, ಈ ಹಣ್ಣುಗಳು ಎಲೆಯ ಮರೆಯಲ್ಲಿಯೇ ಉಳಿದುಬಿಡುತ್ತಿವೆ. ಇದಕ್ಕೂ ಒಂದು ಕಾಲ ಬರಬಹುದು. ಆಗ ಎಲ್ಲರೂ ಚಳ್ಳೆಹಣ್ಣಿನ ಗಿಡಗಳನ್ನು ಹುಡುಕಿ ಹಣ್ಣುಗಳನ್ನು ಮಾರಾಟ ಮಾಡಲೂಬಹುದು.

ಅಮೃತ ನೋನಿಯವರ ಕಣ್ಣಿಗೆ ಇದು ಬಿದ್ದಂತಿಲ್ಲ. ಬಿದ್ದರೆ ” ಚಳ್ಳೆ ನೋನಿ ” ಎಂದು ಹೆಸರಿಟ್ಟು ಭರ್ಜರಿ ವ್ಯಾಪಾರ ಮಾಡಬಹುದೇನೋ ಗೊತ್ತಿಲ್ಲ. ಆಗ ಎಲ್ಲರೂ ಉಚಿತವಾಗಿ ಸಿಗುವ ಇವನ್ನೇ ನೂರಾರು ರೂ.ಗಳ ಕೊಟ್ಟು ಸೇವಿಸಿ ಟಿವಿಯಲ್ಲಿ ” ನಾನು ಚಳ್ಳೆ ನೋನಿ ಉಪಯೋಗಿಸಿರುವುದರಿಂದ ನನ್ನ ಕೈಕಾಲುಗಳು ನೆಟ್ಟಗಾದವು ” ಎಂದು ಹೇಳಬಹುದು.

ಈಗಿನ ಕಾಲದ ಮಕ್ಕಳಿಗೆ ಇದರ ಬಗ್ಗೆ ಹೇಳಿ ವಿವರಿಸುವುದೂ ತುಂಬ ಕಷ್ಟ ಎನಿಸುತ್ತದೆ. ಬರೀ ಆಪಲ್, ಮ್ಯಾಂಗೋ, ಸ್ಟ್ರಾಬೆರಿಯಂತಹ ಹಣ್ಣುಗಳನ್ನು ತಿನ್ನುವ ಮಕ್ಕಳಿಗೆ ಇವುಗಳನ್ನು ತಿನ್ನಿಸಿದರೆ ಅವುಗಳ ಮುಖವೂ ಚಳ್ಳೆಹಣ್ಣು ತಿಂದ ಮುಖದಂತಾಗಬಹುದೇನೋ !.


.ಸಿದ್ಧರಾಮ ಹಿರೇಮಠ ಕೂಡ್ಲಿಗಿ-80508 77735

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend