ಎಚ್ಚೆತ್ತುಕ್ಕೊಳ್ಳದಿದ್ದರೆ ಕಾಂಗ್ರೆಸ್ ರಾಜಸ್ಥಾನವನ್ನೂ ಕಳೆದುಕೊಳ್ಳಲಿದೆ…!!!

Listen to this article

ಎಚ್ಚೆತ್ತುಕ್ಕೊಳ್ಳದಿದ್ದರೆ ಕಾಂಗ್ರೆಸ್ ರಾಜಸ್ಥಾನವನ್ನೂ ಕಳೆದುಕೊಳ್ಳಲಿದೆ……..!!!!!!

ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇದ್ದು ರಾಜಸ್ಥಾನ ಕಾಂಗ್ರೆಸ್ ಘಟಕದಲ್ಲಿನ ಗೊಂದಲಗಳು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಅಪರೂಪಕ್ಕೆ ಅಂತಃಕಲಹ ನಿಭಾಯಿಸುವಲ್ಲಿ ಪ್ರಬುದ್ಧತೆ ತೋರಿರುವ ಕಾಂಗ್ರೆಸ್ ಹೈಕಮಾಂಡ್ ಕೂಡಲೇ ರಾಜಸ್ಥಾನದತ್ತ ಗಮನಹರಿಸಿ ಪರಿಸ್ಥಿತಿಯನ್ನು ಸರಿದಾರಿಗೆ ತರಬೇಕು. ಶೀಘ್ರದಲ್ಲೇ ಅಲ್ಲಿ ಏನಾದರೂ ಬದಲಾಗದಿದ್ದರೆ ಹಳೆಯ ಪಕ್ಷವು ಅಧಿಕಾರದಲ್ಲಿರುವ ಕೆಲವೇ ರಾಜ್ಯಗಳಲ್ಲಿ ಒಂದನ್ನು ಕಳೆದುಕೊಳ್ಳಬಹುದು. ಅದಕ್ಕೆ ಬಹಳಷ್ಟು ಕಾರಣಗಳಿವೆ.
ಇತ್ತೀಚೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅಶೋಕ್ ಚಂದನಾ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಅಶೋಕ್ ಚಂದನಾ ಮತ್ತು ಅಶೋಕ್ ಗೆಹ್ಲೋಟ್ ನಡುವೆ ಬಿರುಕು ಮತ್ತಷ್ಟು ಹೆಚ್ಚಾಗಿದೆ. ಅಶೋಕ್ ಚಂದನಾ ಮಾತ್ರವಲ್ಲ ಇತ್ತಿಚೆಗೆ ಬುಡಕಟ್ಟು ಜನಾಂಗದ ಮುಖಂಡ ಗಣೇಶ್ ಘೋಗ್ರಾ ಅವರು ಭೂ ಹಕ್ಕುಗಳ ವಿತರಣೆಯ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಘರ್ಷಣೆಗಿಳಿದಿದ್ದರು. ಮೇ 18ರಂದು ಅಸೆಂಬ್ಲಿಯಲ್ಲಿ ಡುಂಗರ್‌ಪುರವನ್ನು ಪ್ರತಿನಿಧಿಸುವ ರಾಜಸ್ಥಾನ ಯುವ ಕಾಂಗ್ರೆಸ್ ಮುಖ್ಯಸ್ಥ ಘೋಗ್ರಾ ಅವರು ಆಡಳಿತ ಪಕ್ಷದ ಶಾಸಕರಾಗಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

ಹಾಗೆ ನೋಡಿದರೆ 2018ರ ವಿಧಾನಸಭಾ ಚುನಾವಣೆಗೆ ಮುಂಚೆ ಟಿಕೆಟ್ ಹಂಚಿಕೆ ಮಾಡುವಾಗಲೇ ರಾಜಸ್ಥಾನದಲ್ಲಿ ಕಾಂಗ್ರೆಸ್ ಆಂತರಿಕ ಕಲಹದ ಬೀಜಗಳನ್ನು ಬಿತ್ತಲಾಗಿದೆ. ಆಗ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಚಿನ್ ಪೈಲಟ್ ತಳಮಟ್ಟದ ಕಾಂಗ್ರೆಸ್ಸಿಗರನ್ನು ಟಿಕೆಟ್ ಹಂಚಿಕೆಯಿಂದ ದೂರವಿಟ್ಟರು. ಅಂತಹ ಹನ್ನೊಂದು ನಾಯಕರು ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿದರು ಮತ್ತು ಅವರಲ್ಲಿ 10 ಮಂದಿ ಗೆದ್ದಿದ್ದಾರೆ. ಏತನ್ಮಧ್ಯೆ, ಕಾಂಗ್ರೆಸ್ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಈ ಸ್ವತಂತ್ರ ಶಾಸಕರು ಗೆಹ್ಲೋಟ್‌ಗೆ ಬೆಂಬಲ ನೀಡಿದರು. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನಾಯಕತ್ವ ಮತ್ತು ಅವರ ಸಾಮೂಹಿಕ ಬೆಂಬಲವಿಲ್ಲದೆ ಕಾಂಗ್ರೆಸ್ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಪಕ್ಷ ಭಾವಿಸಿದೆ. ಆದರೆ ಸಚಿನ್ ಪೈಲಟ್ ತಮ್ಮ ಹಕ್ಕು ಚಲಾಯಿಸುತ್ತಲೇ ಇದ್ದಾರೆ.

2020ರಲ್ಲಿ ಆಗ ಉಪ ಮುಖ್ಯಮಂತ್ರಿಯಾಗಿದ್ದ ಪೈಲಟ್, ಶಾಸಕರ ನಿಯೋಗವನ್ನು ದೆಹಲಿಗೆ ಕರೆದೊಯ್ದರು. ಇದು ಗೆಹ್ಲೋಟ್ ಮತ್ತು ಪೈಲಟ್ ನಡುವಿನ ಬಹಿರಂಗ ಜಗಳಕ್ಕೆ ಕಾರಣವಾಯಿತು. ಇದಕ್ಕೆ ಹಿಂದೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡಿದ್ದರು. ಅವರು ರಾಜಸ್ಥಾನದಲ್ಲಿ ಸರ್ಕಾರ ಬೀಳಿಸಲು ಸಚಿನ್ ಪೈಲಟ್ ಜೊತೆ ಸೇರಿಕೊಂಡು ಪಿತೂರಿ ನಡೆಸಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದ್ದರು.

ಪಂಜಾಬ್‌ನಲ್ಲಿ ಇದೇ ರೀತಿಯ ಒಳಜಗಳದಿಂದ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳಿರುವಾಗ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಕೊಡುವಂತಾಯಿತು. ಇದು ಪಕ್ಷದೊಳಗೆ ಇನ್ನಷ್ಟು ಭಿನ್ನಾಭಿಪ್ರಾಯವನ್ನು ಸೃಷ್ಟಿಸಿತು. ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ದಯನೀಯವಾಗಿ ಸೋತಿತು. ಆದರೂ ರಾಜಸ್ಥಾನ ಘಟಕದಲ್ಲಿನ ಪರಿಸ್ಥಿತಿಯು ಪಂಜಾಬ್‌ಗಿಂತ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ ಅಶೋಕ್ ಗೆಹ್ಲೋಟ್ ಅವರನ್ನು ತೆಗೆದುಹಾಕಿ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಏಕೆಂದರೆ ಅಶೋಕ್ ಗೆಹ್ಲೋಟ್ ತಳಮಟ್ಟದ ಬೆಂಬಲ ಹೊಂದಿದ್ದಾರೆ ಮತ್ತು ಪಕ್ಷದ ಬಹುಪಾಲು ಶಾಸಕರು ಹಾಗೂ ಪಕ್ಷೇತರ ಶಾಸಕರು ಅಶೋಕ್ ಗೆಹ್ಲೋಟ್ ಪರ ಇದ್ದಾರೆ. ಇದಲ್ಲದೆ ರಾಹುಲ್ ಗಾಂಧಿ ಅವರು ಸಚಿನ್ ಪೈಲಟ್‌ಗೆ ಆದ್ಯತೆ ನೀಡಿದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬೆಂಬಲ ಸಿಎಂ ಗೆಹ್ಲೋಟ್‌ ಅವರಿಗಿದೆ ಎಂದು ಹೇಳಲಾಗುತ್ತಿದೆ.

ಪಕ್ಷದಲ್ಲಿನ ಈ ಗೊಂದಲದ ನಡುವೆ ರಾಜಸ್ಥಾನದಲ್ಲಿ ಅಧಿಕಾರಿಗಳ ಹಿಡಿತವೂ ಉತ್ತುಂಗಕ್ಕೇರಿದೆ. ಕೆಲವು ಉನ್ನತ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆಹತ್ತಿರವಾಗಿ ಅವರೇ ದರ್ಬಾರ್ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಉದಾಹರಣೆಗೆ, ಹಿಂದೆ ಐಎಎಸ್ ಅಧಿಕಾರಿ ಸುನಿಲ್ ಅರೋರಾ ಅವರನ್ನು ಭೈರೋನ್ ಸಿಂಗ್ ಶೇಖಾವತ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಹೇಳಲಾಗುತ್ತಿತ್ತು. ವಸುಂಧರಾ ರಾಜೆ ರಾಜಸ್ಥಾನ ಸಿಎಂ ಆಗಿದ್ದಾಗ ತನ್ಮಯ್ ಕುಮಾರ್ ಎಲ್ಲವನ್ನೂ ನಿರ್ಧರಿಸುತ್ತಿದ್ದರು. ಈಗ ಸಿಎಂ ಅಶೋಕ್ ಗೆಹ್ಲೋಟ್ ಅವರ ಪ್ರಧಾನ ಕಾರ್ಯದರ್ಶಿ ಕುಲದೀಪ್ ರಂಕಾ ನಿರ್ಣಾಯಕರಾಗಿದ್ದಾರೆ. ಇದರಿಂದ ಶಾಸಕರ ಮತ್ತು ಪಕ್ಷದ ಮುಖಂಡರ ಕೆಲಸಗಳು ಆಗುತ್ತಿಲ್ಲ. ಇದು ಅಸಮಾಧಾನಕ್ಕೆ ಕಾರಣವಾಗಿದೆ.

ಇದಲ್ಲದೆ ಅಲ್ವಾರ್, ಕರೌಲಿ ಮತ್ತು ಜೋಧ್‌ಪುರದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಕೋಮು ಸಂಘರ್ಷಗಳಾಗಿವೆ. ಆದರೆ ಜೋಧ್‌ಪುರದ ಶಾಸಕರಾಗಿರುವ ಮುಖ್ಯಮಂತ್ರಿ ಗೆಹ್ಲೋಟ್ ಕೋಮುಗಲಭೆಯ ನಂತರ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಇನ್ನೊಂದೆಡೆ ಅಸಾದುದ್ದೀನ್ ಓವೈಸಿ ಜೈಪುರಕ್ಕೆ ಭೇಟಿ ನೀಡಿದ್ದಾಗ ಕರೌಲಿಯಲ್ಲಿನ ಹಿಂಸಾಚಾರದ ಬಗ್ಗೆ ಮಾತನಾಡುತ್ತಾ ತಮ್ಮ ಪಕ್ಷವು 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ಪರ್ಧಿಸಲು ಯೋಜಿಸಿದೆ ಎಂದಿದ್ದಾರೆ. ಇದು ಕಾಂಗ್ರೆಸ್‌ಗೆ ಕೆಟ್ಟ ಸುದ್ದಿಯಾಗಿದೆ.

ಇನ್ನೂ ರಾಜಸ್ಥಾನದಿಂದ ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಈ ಪೈಕಿ ಯಾರೊಬ್ಬರೂ ರಾಜಸ್ಥಾನದವರಲ್ಲ. ಹೈಕಮಾಂಡ್‌‌ ದೃಷ್ಟಿಯಲ್ಲಿ ರಾಜಸ್ಥಾನಕ್ಕೆ ಎಷ್ಟು ಪ್ರಾಮುಖ್ಯತೆ ಸಿಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆಂತರಿಕ ಕಚ್ಚಾಟದ ಜ್ವಾಲೆಯನ್ನು ನಂದಿಸಲು ರಾಜ್ಯಸಭಾ ಚುನಾವಣೆಯನ್ನು ಬಳಸಿಕೊಳ್ಳಬಹುದಿತ್ತು. ಬದಲಾಗಿ ಕಾಂಗ್ರೆಸ್ ನಾಯಕತ್ವವು ಮತ್ತೊಮ್ಮೆ ರಾಜ್ಯವನ್ನು ಲಘುವಾಗಿ ತೆಗೆದುಕೊಂಡಿದೆ. ಈ ನಿರ್ಧಾರದ ಪರಿಣಾಮ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆಗಬಹುದು.

ಮುಖ್ಯಮಂತ್ರಿ ಗೆಹ್ಲೋಟ್ ಜನಪ್ರಿಯ ನಾಯಕರಾಗಿದ್ದು, ಅವರ ಕಲ್ಯಾಣ ಯೋಜನೆಗಳು ರಾಜ್ಯದ ಜನತೆಯನ್ನು ಬಡಿದೆಬ್ಬಿಸಿದೆ. ಆದರೆ ಅದೊಂದೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ಖಾತರಿಪಡಿಸಲಾರದು. ಕಾಂಗ್ರೆಸ್ ಕೇಂದ್ರ ನಾಯಕತ್ವವು ರಾಜಸ್ಥಾನ ಘಟಕದಲ್ಲಿ ಸ್ಥಿರತೆಯನ್ನು ತರುವ ಮೂಲಕ ಕಾರ್ಯಕರ್ತರು ಮತ್ತು ನಾಯಕರ ನಂಬಿಕೆಯನ್ನು ಮರುಸ್ಥಾಪಿಸುವ ಸಮಯ ಬಂದಿದೆ. ಹೈಕಮಾಂಡ್ ಎಚ್ಚೆತ್ತುಕೊಳ್ಳದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ…

ವರದಿ. ಪ್ರತಾಪ್. ಎಚ್. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend