ಪೌರಕಾರ್ಮಿಕರ ಅಸಹಾಯಕ ಬದುಕು ಯಾವ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು ಇವರುಗಳ ಬದುಕು ಬದಲಾವಣೆ ಆಗುವದೇ…?

Listen to this article

ಪೌರಕಾರ್ಮಿಕರ ಅಸಹಾಯಕ ಬದುಕು ಯಾವ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು ಇವರುಗಳ ಬದುಕು ಬದಲಾವಣೆ ಆಗುವದೇ…?

 

ಆಗಾಗ್ಗೆ ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆಯಲ್ಲಿ ಕಂಡು ಬರುವ
ಪೌರಕಾರ್ಮಿಕರ ಆ ಬಡಾವಣೆಯ ಹಾದಿ ಚಲಿಸುತ್ತಿದ್ದ ನಾನು ಮೊನ್ನೆ ಹರಪನಹಳ್ಳಿ ತಾಲೂಕಿನಲ್ಲಿ ಬರುವ ಅಲವಾರು ಬಡಾವಣೆಗೆ ಭೇಟಿ ಕೊಟ್ಟೆ. ಹಿಂದೆ ಹೋಗುವಾಗಲೆಲ್ಲ ಒಮ್ಮೆ ಹೋಗಿ ಬಡಾವಣೆಯ ಎಲ್ಲರನ್ನೂ ಮಾತಾಡಿಸಿಕೊಂಡು ಬರೋಣ ಎಂದುಕೊಳ್ಳುತ್ತಿದ್ದೆ‌‌. ಆದರೆ ಪರಿಚಯವಿರದ ಕಾರಣ ಅಭಾಸ ಆಗಬಾರದು ಎಂದು ಹೋಗಿರಲಿಲ್ಲ.

ಪೌರಕಾರ್ಮಿಕರ ಹಾಗೂ ಬೀಡಿ ಕಾರ್ಮಿಕರು ಹೆಚ್ಚಾಗಿ ಇಲ್ಲಿ ಕಂಡು ಬರುವ ಬಡಾವಣೆಯಲ್ಲಿ ಅಲವು ಬಡಾವಣೆಗಳು ವೀಕ್ಷಣೆ ಮಾಡಿದರೆ ಅಂಬೇಡ್ಕರ್ ನಗರ,ಭಾಪೂಜೆ ನಗರ,ಅಗಸನ ಕಟ್ಟೆ,ಗುಂಡಿನಕೇರಿ, ಎಷ್ಟೋ ಕುಟುಂಬಗಳು ವಾಸವಾಗಿವೆ. ಆ ಬಡಾವಣೆ ಈಗ ವಾಸದ ಸ್ಥಾನಗಳಾಗಿವೆ (ಮನೆ ಅನ್ನಲು ಮನಸ್ಸಾಗುತ್ತಿಲ್ಲ).10 ×10 ಅಳತೆಯ ವಾಸ ಸ್ಥಳಗಳು, ಹೇಗೆಂದರೆ ಹಿಂದುಗಡೆ ಮನೆಗೂ ಮುಂದುಗಡೆ ಮನೆಗೂ ಮಧ್ಯೆ ಒಂದು ಮೋಟು ಗೋಡೆ! ಪ್ರತ್ಯೇಕ ಕೊಠಡಿಯಂತು ಇಲ್ಲ. ಶೌಚಾಲಯವಂತು ಕೇಳುವುದೇ ಬೇಡ, ಹೊರಗೆ ಕಟ್ಟಿದ ಒಂದು ನೆರಿಕೆಯೇ ಸ್ನಾನದ ಮನೆ. ಪ್ರತ್ಯೇಕ ಮಲಗುವ ಕೊಠಡಿಗಳು ಇಲ್ಲದ ಕಾರಣ ಮಂಚದ ಮೇಲೆ ತಂದೆ ತಾಯಿ ಮಲಗಿದರೆ ಮಂಚದ ಕೆಳಗೆ ಮಕ್ಕಳು ಮಲಗುತ್ತಾರಂತೆ‌… ಹೇಳುತ್ತಿದ್ದಾಗ ನಮ್ಮ ಅಭಿವೃದ್ಧಿ ಮಾತಿನ ಶೂರರು ಕುಬ್ಜರಂತೆ ಕಂಡರು.

ಇಲ್ಲಿಯವರೆಗೆ ಇಲ್ಲಿ ಬೀದಿ ದೀಪಗಳು, ಕಾಳಜಿಯಿಂದ ಇಲ್ಲಿ ಲೈಟು ಕಂಬಗಳು ಬಂದಿವೆ, ಬೀದಿ ದೀಪಗಳು ಬೆಳಗುತಿವೆ. ಹಾಗೆಯೇ ಮನೆಯ ಒಳಗೆ ಪಿಣ ಪಿಣ ಉರಿಯುವ ಬಲ್ಬುಗಳ ಕಾರಣ ಪಳ ಪಳ ಹೊಳೆಯುವ ಬೀದಿಯ ದೀಪಗಳೇ ಇಲ್ಲಿಯ ಓದುವ ಮಕ್ಕಳ ಓದುವ ಸ್ಥಳಗಳಾಗಿವೆ‌. ಇನ್ನು ಪೌರಕಾರ್ಮಿಕರಾದ್ದರಿಂದ ಇಲ್ಲಿ ಕೇವಲ ಪುರಸಭೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ ಅರೋಗ್ಯ ಇಲಾಖೆ,ಶಿಕ್ಷಣ ಇಲಾಖೆ,ಸಮಾಜ ಕಲ್ಯಾಣ ಇಲಾಖೆ,ಇನ್ನೂ ಅಲವಾರು ಸಂಸ್ಥೆ ಗಳಲ್ಲಿ ಕೆಲಸ ಮಾಡಿ ಜೀವನ ನಡೆಸಬೇಕು ಬೆಳಿಗ್ಗೆ 5 ಗಂಟೆಗೆ ಕೆಲಸಕ್ಕೆ ಹೋದವರು ಬರುವುದು ಮಧ್ಯಾಹ್ನ 2- 30 ಕ್ಕೆ. ಬಹುತೇಕರು ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ತಿಂಗಳ ಸಂಬಳ ತಿಂಗಳಿಗೆ ಸಿಗದೆ ಎರಡು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಹೀಗೆ ಅಸ್ತವ್ಯಸ್ತ. ಆ ಕಾರಣಕ್ಕೆ ಅಸ್ತವ್ಯಸ್ತ ಬದುಕು.

ಮಧ್ಯೆ ಮಾತನಾಡಿದ ಪೌರಕಾರ್ಮಿಕ ಮಂಗಳ ಗ್ರಹಕ್ಕೆ ಹೋದರಂತೆ, ರಾಕೆಟ್ ಹಾರಿಸಿದರಂತೆ, ಅದಂತೆ ಇದಂತೆ, ಆದರೆ ನಮ್ಮ ಉದ್ಧಾರ ಯಾವಾಗ ಸಾರ್?”. ನನ್ನ ಬಳಿ ಉತ್ತರ ಇರಲಿಲ್ಲ. ನಡುವೆ ಪೆದ್ದುತನ ಪ್ರದರ್ಶಿಸಿದ ನಾನು ದೊಡ್ಡ ಭಾಷಣ ಬಿಗಿಯುವವನಂತೆ “ನೋಡಿ, ದಯವಿಟ್ಟು ಪೌರಕಾರ್ಮಿಕರ ಕೆಲಸ ಬಿಟ್ಟುಬಿಡಿ. ನಿಮ್ಮ ತಲೆಮಾರಿಗೆ ಇದು ನಿಂತು ಹೋಗಲಿ” ಈ ಕೆಲಸ ಬಿಟ್ಟು ಬೇರೆ ಕೆಲಸ ನಮಗೆ ಯಾರು ಕೊಡುತ್ತಾರೆ? ಹೊಟೆಲ್, ಅಂಗಡಿ, ಕಚೇರಿ.. ಎಲ್ಲೇ ಹೋದರು ಅದೇ ಗಲೀಜು ತೊಳೆಯುವ ಕೆಲಸ. ನಾವು ಏನು ಮಾಡುವುದು ಹೇಳಿ? ಕಡೇ ಪಕ್ಷ ನಮಗೆ ಎಂಜಲು ಎಲೆ ಎತ್ತುವ ಕೆಲಸ ಕೂಡ ಕೊಡುವುದಿಲ್ಲ!” ಎನ್ನುತ್ತಿದ್ದಾಗ ನನ್ನ ಪೆದ್ದುತನವ ಶಪಿಸಿಕೊಂಡೆ, ಪಾಪ ಪ್ರಜ್ಞೆ ಚುಚ್ಚಲಾರಂಭಿಸಿತು.

ಅವರು ನೋವುಗಳು ಹೇಳುತ್ತಿದ್ದರು ಎಷ್ಟೋ ಟಿವಿ ಚಾನಲ್ ಗಳು ಇದ್ದಾವೆ,ಎಷ್ಟೋ ಪತ್ರಿಕೆ ಮಾಧ್ಯಮಗಳು ಇದ್ದರು ಹೇನು ಪ್ರಯೋಜನ ಸರ್ ನಮಂತವರ ಪಾಡು ಯಾವ ಯಾವ ಶತ್ರುಗಳಿಗೆ ಬರಬಾರದು,

ನಮ್ಮ ಮಕ್ಕಳಿಗೆ ಖಾಸಗಿ ಶಾಲೆಗೆ ಸೇರಿಸಲು ಹೋದಾಗ ನಿಮಗೆ ಅಂತ ಕಾರ್ಪೊರೇಷನ್ ಶಾಲೆಗಳಿವೆಯಲ್ಲ? ನೀವ್ಯಾಕೆ ಇಲ್ಲಿ ಬಂದಿರಿ? ಎಂದು ಪ್ರಶ್ನಿಸಿದರು ಸರ್” ಎಂದು ದುಃಖ ತೋಡಿಕೊಂಡರು. ಸಮಾಧಾನ ನೀಡದ ಅಸಹಾಯಕ ಸ್ಥಿತಿಯಲ್ಲಿ ನಾನಿದ್ದೆ.

ಅಲ್ಲಿದ್ದ ಅರ್ಧ ಗಂಟೆಯಲ್ಲಿ ಬಡಾವಣೆಯ ಎಲ್ಲರೂ ಸಮಸ್ಯೆಗಳ ರಾಶಿ ರಾಶಿ ಹಂಚಿಕೊಂಡರು. ಕ್ಷಮೆ ಇರಲಿ, ಹಂಚಿಕೊಳ್ಳದಿದ್ದರೂ ಕಿರಿದಾದ ಅಲ್ಲಿಯ ಓಣಿಗಳು, ಗಾರೆ ಕಾಣದ ಮನೆಯೊಳಗಿನ ನೆಲ, ಉದ್ದಕ್ಕೂ ನಿಲ್ಲಿಸಿದ್ದ ತಡಿಕೆ… ಈ ನಡುವೆಯೂ ಅಲ್ಲಿದ್ದ ಮಕ್ಕಳಿಗೆ ಪ್ರತ್ಯೇಕ ವಾಗಿ ಕರೆದು ಯಾವುದೇ ಕಾರಣಕ್ಕು ಪೌರಕಾರ್ಮಿಕ ವೃತ್ತಿ ಮುಂದೆ ಮಾಡದಂತೆ ಕೇಳಿಕೊಂಡೆ. ಮಹಿಳೆಯರಿಗೂ ಈ ವೃತ್ತಿ ತಮ್ಮ ಪತಿಯರು ಮಾಡದಂತೆ ನೋಡಿಕೊಳ್ಳಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಕೈ ಮುಗಿದು ಮನವಿ ಮಾಡಿಕೊಂಡೆ. ಅವರ ಬೇಡಿಕೆ “ನಮ್ಮ ಬಡಾವಣೆ ಹತ್ತಿರ ಅಥವಾ ನಮ್ಮ ತಾಲೂಕಿನಲ್ಲಿ ಒಂದು ಕಾರ್ಖಾನೆ ತೆಗೆದರೆ ನಾವು ಈ ಕೆಲಸ ಬಿಟ್ಟು ಫ್ಯಾಕ್ಟರಿ ಕೆಲಸ ಮಾಡುತ್ತೇವೆ” ಎಂಬುದಾಗಿತ್ತು. ಹಾಗೆಯೇ ಖಾಸಗಿ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಇಷ್ಟು ಸೀಟು ಎಂದು ಮೀಸಲಿರಿಸಬೇಕು ಎಂಬುದಾಗಿತ್ತು‌‌.

ಇನ್ನು ಗುತ್ತಿಗೆ ಪದ್ಧತಿ ತೊಲಗಿ ನಮಗು ಖಾಯಂ ಮಾಡಬೇಕು, ನಮ್ಮ ವೃತ್ತಿಗೆ ತಕ್ಕಂತೆ ವೇತನ, ರಜೆ ಮತ್ತು ವಿಶ್ರಾಂತಿ ಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಪರಿಹರಿಸುವ ಸ್ಥಿತಿಯಲ್ಲಿ ನಾನಿಲ್ಲದಿದ್ದರೂ ಸಮಸ್ಯೆಯನ್ನು ಸಾರ್ವಜನಿಕವಾಗಿ ಇಡುತ್ತಿದ್ದೇನೆ. ಕೇವಲ ರಾಜಕೀಯ ವ್ಯಕ್ತಿಗಳು ಚುನಾವಣೆಯಲ್ಲಿ ಮಾತ್ರ ಕಾಣುತ್ತಾರೆ.ಆದರೆ ಅವರ ಬಳಿ ಸಹಾಯ ಕೇಳಿದರೆ ಅವರ ಉತ್ತರ ನಿಮ್ಮ ಜನಾಂಗದವರು ಎಸ್ಟಿದ್ದಾರೆ ಎಂದು ಗದರಿಸಿ ಕಳಿಸುತ್ತಾರೆ,

ಕಡೆಗೊಂದು ಮನವಿ; ಮೊದಲು ನಾವು ಮನುಷ್ಯರಾಗೋಣ, ಮನುಷ್ಯರಾಗಿ ಪೌರಕಾರ್ಮಿಕರ ನೋವಿಗೆ ಸ್ಪಂಧಿಸೋಣ. ಅದಾಗದಿದ್ದರೆ ಮಾನವೀಯತೆಯ ನಮ್ಮ ಬರಹ, ಭಾಷಣಗಳಿಗೆ ಇಂದೇ ಬ್ರೇಕ್ ಹಾಕಿಕೊಳ್ಳೋಣ.

ಪ್ರತಾಪ್ ಛಲವಾದಿ ಹರಪನಹಳ್ಳಿ ತಾಲ್ಲೂಕು ಛಲವಾದಿ ಮಹಾಸಭಾ ಘಟಕದ ಪ್ರಧಾನ ಕಾರ್ಯದರ್ಶಿ…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend