ಮೊಳಕಾಲ್ಮೂರು: ಗ್ರಾಮೀಣ ಭಾಗದ ಕುಡಿಯುವ ನೀರಿನ ಕೊರತೆಯಾಗದಂತೆ ಜಾಗ್ರತೆ ವಹಿಸಬೇಕು; ಇಓ, ಕೆ.ಒ. ಜಾನಕಿರಾಮ.!

Listen to this article

ಚಿತ್ರದುರ್ಗ: ಮೊಳಕಾಲ್ಮೂರು/ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ತಾಪಂ ಕಾರ್ಯನಿರ್ವಹಣಾ ಆಧಿಕಾರಿ ಕೆ.ಒ. ಜಾನಕಿರಾಮ ಸೂಚಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಜನಸಾಮಾನ್ಯರಿಗೆ ಕೊರತೆಯಾಗದಂತೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಅಮಕುಂದಿ ಮತ್ತು ಚಿಕ್ಕೇರಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ಗಮನಕ್ಕೆ ಬಂದಿದೆ. ಕೂಡಲೇ ಕೆಟ್ಟು ನಿಂತಿರುವ ಶುದ್ಧೀಕರಣ ಘಟಕಗಳನ್ನು ರಿಪೇರಿ ಮಾಡಿಸಿ. ಅಗತ್ಯವಿರುವಲ್ಲಿ ಕೊಳವೆಬಾವಿ ಕೊರೆಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕೆಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿರ್ದೇಶಕ ಸುಕುಮಾರ್‌ ಪವಾರ್‌ ಮಾತನಾಡಿ, ತಾಲೂಕಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಕಂಡು ಬಂದಿಲ್ಲ. ಶುದ್ಧೀಕರಣ ಘಟಕಗಳು ಕೆಟ್ಟು ನಿಂತಿರುವ ಬಗ್ಗೆ ಸಂಬಂಧಿತ ಏಜೆನ್ಸಿಯವರ ಗಮನಕ್ಕೆ ತರಲಾಗಿದೆ. ಕೂಡಲೇ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸ ಲಾಗುವುದೆಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಉಮೇಶ್‌ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚಿನ ಮಳೆಯಾಗಿದೆ. ಶೇಂಗಾ, ತೊಗರಿ, ಹುರುಳಿ, ಜೋಳ, ರಾಗಿ ಸೇರಿದಂತೆ ಇನ್ನಿತರ ಬೆಳೆಗಳ ಬಿತ್ತನೆಗೆ ನಿಗದಿತ ಗುರಿಯನ್ನು ಹೊಂದಲಾಗಿದೆ. ತಾಲೂಕಿನ ಶೇಂಗಾ ಬೆಳೆಗಾರರಿಗೆ ಬಿತ್ತನೆಗೆ ರೈತ ಸಂಪರ್ಕ ಕೇಂದ್ರದಲ್ಲಿ 3,739 ಕ್ವಿಂಟಲ್‌ ಶೇಂಗಾ ದಾಸ್ತಾನು ಮಾಡಿಕೊಳ್ಳಲಾಗಿದೆ. 3083 ಕ್ವಿಂಟಲ್‌ ಶೇಂಗಾವನ್ನು ನಿಗ ದಿತ ದರದಲ್ಲಿ ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ ಡಿಎಪಿ ಕೊರತೆ ಕಂಡು ಬರುತ್ತಿದೆ. ಉಳಿದ ಇತರೆ ಗೊಬ್ಬರ ಲಭ್ಯವಿದೆ. ಫಸಲ್‌ ಬಿಮಾ ಯೋಜನೆಯಲ್ಲಿ ವಿಮಾ ಕಂಪನಿಯ ಆಯಪ್‌ ಮೂಲಕ ಕೆಲ ಮಾನದಂಡಗಳಂತೆ ತಾಲೂಕಿನ 3 ಗ್ರಾಪಂಗಳ ರೈತರಿಗೆ ಬೆಳೆ ವಿಮೆ ಹಣ ಪಾವತಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಹಾಗೂ ತಾ.ಪಂ ಆಡಳಿತಾಧಿಕಾರಿ ಶಿವರಾಜ್‌ ಕುಲಕರ್ಣಿ, ತಾಪಂ ವ್ಯವಸ್ಥಾಪಕ ನಂದೀಶ್‌, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಡಿ. ಚಿದಾನಂದಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಯತೀಶ್‌, ಬಿಸಿಎಂ ವಿಸ್ತರಣಾಧಿಕಾರಿ ಶೇಖರಪ್ಪ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎಂ. ಹನುಮಂತಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪಾತಲಿಂಗಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ. ಸವಿತಾ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ| ತಿಮ್ಮಣ್ಣ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend