ಸಚಿವ ಅಶ್ವತ್ಥ್ ನಾರಾಯಣ ವಜಾಗೊಳಿಸಲು ಆಗ್ರಹ…!!!

Listen to this article

ಸಚಿವ ಅಶ್ವತ್ಥ್ ನಾರಾಯಣ ವಜಾಗೊಳಿಸಲು ಆಗ್ರಹ.

ದಲಿತಪರ ಸಂಘಟನೆಗಳ ಒಕ್ಕೂಟ ಸಿಂಧನೂರು ಪ್ರತಿಭಟನೆ ಮೂಲಕ ಶನಿವಾರ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಯಿತು.
ಬೆಂಗಳೂರಿನ ಮಲ್ಲೇಶ್ವರಂನ ಕೇಂದ್ರವೊದರಲ್ಲಿ ಒಂದು ಕೋಮಿಗೆ ಸೇರಿದ ಜನರಿಗೆ ಮಾತ್ರ ಕೋವಿಡ್ ಲಸಿಕೆ ವಿತರಣೆಗೆ ಏರ್ಪಾಡು ಮಾಡಿ, ದಲಿತ ಸಮುದಾಯದವರಿಗೆ ನಿರಾಕರಿಸುವ ಮೂಲಕ ಬಹಿರಂಗವಾಗಿ ಜಾತಿ ಆಚರಣೆಗೆ ಕುಮ್ಮಕ್ಕು ನೀಡಿರುವ ಮನುವಾದಿ ಬಿಜೆಪಿ ಸಚಿವ ಡಾ.ಅಶ್ವತ್ಥ್ನಾರಾಯಣ ಅವರ ಶಾಸಕ ಸ್ಥಾನ ರದ್ದುಗೊಳಿಸಬೇಕು ಹಾಗೂ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ರವಾನಿಸಲಾಯಿತು.
ಸಂವಿಧಾನದ ಪ್ರಸ್ತಾವನೆಯಲ್ಲೇ ಭಾರತನ್ನು ಜಾತ್ಯತೀತ ರಾಷ್ಟçವೆಂದು ಘೋಷಿಸಲಾಗಿದ್ದು, ಜಾತಿ ಆಚರಣೆ ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಸಂಪುಟ ದರ್ಜೆ ಸಚಿವರೇ ಸಂವಿಧಾನದ ಆಶಯ ಹಾಗೂ ಕಾನೂನನ್ನು ಉಲ್ಲಂಘಿಸಿ ಒಂದು ಸಮುದಾಯದ ಜನರಿಗೆ ಮಾತ್ರ ಕೋವಿಡ್ ಲಸಿಕೆ ವಿತರಣೆಗೆ ಅನುಕೂಲ ಕಲ್ಪಿಸಿ, ದಲಿತ ಸಮುದಾಯದ ಜನರನ್ನು ಅವಮಾನಿಸಿರುವುದು ಅಮಾನವೀಯ ಕೃತ್ಯವಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಖಂಡಿಸಿದರು.
ಸಂವಿಧಾನದ ಕಲಂ ೧೫ರ ಪ್ರಕಾರ ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯದ ನಿಷೇಧಿಸಲಾಗಿದೆ. ರಾಜ್ಯವು ಯಾರೇ ನಾಗರಿಕನ ವಿರುದ್ಧ ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾವುದೇ ತಾರತಮ್ಯವನ್ನು ಮಾಡತಕ್ಕದ್ದಲ್ಲ ಎಂದು ಹೇಳಲಾಗಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಅಪಚಾರ ಎಸಗಿದ್ದಾರೆ. ಭಯ, ಪಕ್ಷಪಾತವಿಲ್ಲದೇ, ರಾಗದ್ವೇಷವಿಲ್ಲದೇ, ಎಲ್ಲ ಬಗೆಯ ಜನರಿಗೆ, ಸಂವಿಧಾನಕ್ಕೆ ಮತ್ತು ಕಾನೂನಿಗೆ ಅನುಸಾರವಾಗಿ ನ್ಯಾಯ ವರ್ತನೆ ಮಾಡುತ್ತೇನೆ ಎಂದು ಪ್ರಮಾಣ ವಚನದ ಸಂದರ್ಭದಲ್ಲಿ ರಾಜ್ಯಪಾಲರ ಹಾಗೂ ನಾಡಿನ ಜನರ ಸಮ್ಮುಖದಲ್ಲಿ ಪ್ರತಿಜ್ಞಾವಿಧಿ ಕೈಗೊಂಡು ಜಾತಿ ಆಚರಣೆ ಮಾಡಿರುವುದು ನಾಚಿಕೆಗೇಡಿತನದ ಪರಮಾವಧಿಯಾಗಿದೆ ಎಂದು ಸಂಘಟಕರು ಆಪಾದಿಸಿದರು.
ಬಿಜೆಪಿ ಸಚಿವರ ನಡೆ ದಲಿತರನ್ನು ಈ ದೇಶದ ಶೂದ್ರರನ್ನು ವರ್ಣ ವ್ಯವಸ್ಥೆಯಲ್ಲಿಟ್ಟು ಶೋಷಿಸುವ ಕುತಂತ್ರದ ಭಾಗವಾಗಿದೆ. ಕೋವಿಡ್ ೧೯ಗೆ ವ್ಯಾಕ್ಸಿನ್ ಸಂಶೋಧಿಸಿದಾಗ ಪ್ರಯೋಗಾರ್ಥವಾಗಿ ಮೊದಲು ಪೌರ ಕಾರ್ಮಿಕರಿಗೆ ನೀಡಲಾಯಿತು. ಅದು ಯಶಸ್ವಿಯಾದಾಗ ಜಾತಿ ಆಧಾರಿತವಾಗಿ ಲಸಿಕೆ ಹಾಕಲು ಮುಂದಾಗಿರುವುದು ಸಂವಿಧಾನ ಬಾಹಿರವಾಗಿದೆ. ಮನುವಾದಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ದಲಿತರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ಕಾಣುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸಾವಿರಾರು ವರ್ಷಗಳಿಂದ ಶೋಷಣೆಗೊಳಪಟ್ಟ ದಲಿತ ಸಮುದಾಯ ಡಾ.ಬಾಬಾ ಸಾಹೇಬ್ ಅವರ ನಿರಂತರ ಪ್ರಯತ್ನದಿಂದ ಸಂವಿಧಾನದ ಕಾರಣಕ್ಕೆ ಕನಿಷ್ಠ ನೆಮ್ಮದಿಯನ್ನು ಗಳಿಸುವಂತಾಗಿದೆ. ಆದರೆ, ಆಡಳಿತಕ್ಕೆ ಬಂದ ಬಿಜೆಪಿ ಸರಕಾರ ಪುನಃ ಜಾತಿ ವ್ಯವಸ್ಥೆಯ ಕೂಪಕ್ಕೆ ತಳ್ಳುತ್ತಿರುವುದನ್ನು ಗಮನಿಸಿದರೆ ದಲಿತರ ಭವಿಷ್ಯ ಬರುವ ದಿನಗಳಲ್ಲಿ ಇನ್ನಷ್ಟು ಕರಾಳವಾಗುವ ಲಕ್ಷಣ ಗೋಚರಿಸುತ್ತಿದೆ ಎಂದು ಆರೋಪಿಸಿದರು.
ನಡುವೆ ಚಾಮರಾಜ ನಗರ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಕೋವಿಡ್ ಪೀಡಿತ ೨೪ ಜನರು ಆಕ್ಸಿಜನ್ ಸಿಗದೇ ಮೃತಪಟ್ಟಿದ್ದರೆ, ಪುನಃ ಎರಡ್ಮೂರು ದಿನಗಳ ಹಿಂದೆ ಹಸಿವಿನಿಂದ ಒಂದೇ ಕುಟುಂಬದ ೪ ಜನರು ಮೃತಪಟ್ಟಿರುವುದು ರಾಜ್ಯ ಸರಕಾರದ ಪೈಶಾಚಿಕ ಆಡಳಿತಕ್ಕೆ ಸಾಕ್ಷಿಯಾಗಿದೆ. ಕೂಡಲೇ ಈ ಎರಡು ಘಟನೆಗಳನ್ನು ನ್ಯಾಯಾಂಗ ತನಿಖೆಗೆ ಆದೇಶಿಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ಹಸಿವಿನ ಸಾವುಗಳು ಆಗದಂತೆ ಗಮನಹರಿಸಬೇಕು ಎಂದು ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು.

ಹಕ್ಕೊತ್ತಾಯಗಳು:
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರ ಶಾಸಕ ಸ್ಥಾನ ರದ್ಧುಗೊಳಿಸಿ, ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು, ಸಚಿವ ಡಾ.ಅಶ್ವತ್ಥ್ ನಾರಾಯಣ ಅವರ ವಿರುದ್ಧ ಜಾತಿನಿಂದನೇ ಕೇಸ್ ದಾಖಲಿಸಬೇಕು, ಕೋವಿಡ್ ೧೯ ಲಸಿಕೆ ನೀಡಿಕೆಯಲ್ಲಿ ತಾರತಮ್ಯವನ್ನು ಹೋಗಲಾಡಿಸಬೇಕು, ಚಾಮರಾಜ ನಗರ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಹಸಿವಿನಿಂದ ಮೃತಪಟ್ಟ ಘಟನೆಯನ್ನು ನ್ಯಾಯಾಂಗ ತನಿಖೆಗೊಳಪಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಲಾಯಿತು.
Iಎಐಸಿಸಿಟಿಯು ಸಂಘಟನೆಯ ಸಂಚಾಲಕ ನಾಗರಾಜ ಪೂಜಾರ್. ಡಿ.ಎಸ್.ಎಸ್. ಕಾದ್ರೊಳ್ಳಿ ಸಂಘಟನೆ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ. ಕಾರ್ಮಿಕ ಮುಖಂಡ ಬಿ.ಎನ್.ಯರದಿಹಾಳ. ದಲಿತ ಮುಖಂಡರಾದ ಗುರುರಾಜ್. ದಲಿತ ಸೇನೆ ಸಂಘಟನೆಯ. ನಾಗರಾಜ್ ತುರ್ವಿಹಾಳ್. ದಲಿತ ಯುವ ಮುಖಂಡ ನಾಗರಾಜ್ ಬೊಮ್ಮನಾಳ. ವಿರೇಶ್ ಹೊಸಳ್ಳಿ ಇತರರಿದ್ದರು…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend