ಕರ್ನಾಟಕ ವಿಧಾನಸಭೆ ಚುನಾವಣೆ ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ರಾಜ್ಯದ 2615 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ…!!!

Listen to this article

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections) ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ರಾಜ್ಯದ 2615 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ.

ರಾಜ್ಯದಲ್ಲಿ ಒಟ್ಟು 5, 31,33,054 ಕೋಟಿ ಮತದಾರರಿದ್ದಾರೆ. ಈ ಪೈಕಿ 2,67,28,053 ಕೋಟಿ ಪುರುಷ ಹಾಗೂ 2,64,00,074 ಕೋಟಿ ಮಹಿಳಾ ಮತದಾರರಿದ್ದಾರೆ. ಜೊತೆಗೆ 11, 71,558 ಯುವ ಮತದಾರರು ಇದ್ದಾರೆ. ಒಟ್ಟು ಮತದಾರರ ಪೈಕಿ 4,92,85,247 ಮತದಾರರಿಗೆ ಮತದಾರರ ಚೀಟಿ ವಿತರಿಸಲಾಗಿದೆ.

ರಾಜ್ಯದಲ್ಲಿ ಸಕ್ರಿಯ ಮತಗಟ್ಟೆ ಕೇಂದ್ರಗಳು- 58,282, ಹೆಚ್ಚುವರಿ ಮತಗಟ್ಟೆ ಕೇಂದ್ರಗಳು- 263 ಒಳಗೊಂಡು ಒಟ್ಟು – 58,545 ಮತಗಟ್ಟೆಗಳು ಇವೆ. ಈ ಮತಗಟ್ಟೆಗಳಲ್ಲಿ ಮತದಾನಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮತಗಟ್ಟೆ ತಲುಪಿದ ನಂತರ ಏನು ಮಾಡಬೇಕು?

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಮತದಾರರು ಪರಿಶೀಲಿಸಬೇಕು. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ, ನಿಮ್ಮ ಮತದಾನದ ಗುರುತಿನ ಚೀಟಿ ಅಥವಾ ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಮುಂತಾದ ಯಾವುದೇ ಗುರುತಿನ ಪುರಾವೆಗಳನ್ನು ತೋರಿಸಿದ ನಂತರ ನಿಮ್ಮ ಮತ ಚಲಾಯಿಸಲು ನಿಮಗೆ ಅವಕಾಶವಿರುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ತಿಳಿಯಲು ಅರ್ಹ ಮತದಾರರು 1950 ಗೆ ಕರೆ ಮಾಡಬಹುದು.

ಮತದಾನದ ಪ್ರಕ್ರಿಯೆ ಏನು?

ಮತಗಟ್ಟೆಯೊಳಗೆ ತಲುಪಿದ ನಂತರ, ಅಧಿಕಾರಿಯು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಮತ್ತು ನಿಮ್ಮ ಗುರುತಿನ ಪುರಾವೆಯನ್ನು ಪರಿಶೀಲಿಸುತ್ತಾರೆ. ನಂತರ ಅಧಿಕಾರಿ ನಿಮ್ಮ ಬೆರಳಿಗೆ ಶಾಯಿ ಹಾಕುತ್ತಾರೆ, ನಿಮ್ಮ ಸಹಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ನಿಮಗೆ ಚೀಟಿ ನೀಡುತ್ತಾರೆ. ಇನ್ನೊಬ್ಬ ವ್ಯಕ್ತಿಯು ನಿಮ್ಮ ಶಾಯಿ ಹಾಕಿದ ಬೆರಳನ್ನು ಪರೀಕ್ಷಿಸುತ್ತಾನೆ ಮತ್ತು ನಿಮ್ಮಿಂದ ಚೀಟಿಯನ್ನು ತೆಗೆದುಕೊಳ್ಳುತ್ತಾನೆ. ನಂತರ ನಿಮ್ಮನ್ನು ಮುಚ್ಚಿಟ್ಟಿರುವ ವಿದ್ಯುನ್ಮಾನ ಮತದಾನ ಯಂತ್ರದಲ್ಲಿ (ಇವಿಎಂ) ಹೋಗಿ ಮತ ಚಲಾಯಿಸುವಂತೆ ಕೇಳಲಾಗುತ್ತದೆ. ನೀವು ಹೋಗಿ ನೀವು ಬೆಂಬಲಿಸುವ ಪಕ್ಷದ ಗುಂಡಿಯನ್ನು ಒತ್ತಬಹುದು. ನೀವು ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸದಿದ್ದರೆ, ನೀವು ನೋಟಾ ಬಟನ್ ಒತ್ತಬಹುದು.

1.56 ಲಕ್ಷ ಪೊಲೀಸ್ ಸಿಬ್ಬಂದಿಗಳ ನೇಮಕ

ರಾಜ್ಯಾದ್ಯಂತ ಒಂದೇ ಹಂತದಲ್ಲಿ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 1.56 ಲಕ್ಷ ಪೊಲೀಸರು ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಒಟ್ಟು 304 ಡಿವೈಎಸ್ ಪಿಗಳು, 991 ಪಿಐಗಳು, 2610 ಪಿಎಸ್ ಐಗಳು, 5803 ಎಎಸ್ ಐಗಳು,46, 421 ಪೊಲೀಸರು, 27,900 ಗೃಹ ರಕ್ಷಕರು ಸೇರಿದಂತೆ 84.119 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಹೊರ ರಾಜ್ಯಗಳಿಂದ 8,500 ಅಧಿಕಾರಿ, ಸಿಬ್ಬಂದಿ ಹಾಗೂ ಗೃಹ ರಕ್ಷಕರನ್ನು ನೇಮಿಸಲಾಗಿದೆ.

ಮತದಾನ ಮಾಡಲು ವೋಟರ್ ಐಡಿ ಇಲ್ಲದಿದ್ದರೆ, ಈ ದಾಖಲೆ ತೋರಿಸಿ ವೋಟ್ ಮಾಡಬಹುದು

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಚುನಾವಣಾ ಗುರುತಿನ ಚೀಟಿ (ಎಪಿಕ್ ಕಾರ್ಡ್) ಹಾಗೂ ಭಾರತ ಚುನಾವಣಾ ಆಯೋಗ ನಿಗಧಿಪಡಿಸಿರುವ ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮತದಾರರು ಮತ ಚಲಾಯಿಸಲು ಮತಗಟ್ಟೆಗಳಿಗೆ ಹೋದ ಸಂದರ್ಭದಲ್ಲಿ ಅವರು ಹೊಂದಿರುವ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು. ಒಂದು ವೇಳೆ ಅದನ್ನು ಹಾಜರುಪಡಿಸಲು ಸಾಧ್ಯವಿಲ್ಲದಿದ್ದಲ್ಲಿ ಈ ಕೆಳಕಂಡ ಯಾವುದಾದರೂ ಒಂದು ಪರ್ಯಾಯ ದಾಖಲಾತಿಯನ್ನು ಮತದಾರರನ್ನು ಗುರುತಿಸುವುದಕ್ಕಾಗಿ ಹಾಜರು ಪಡಿಸಬಹುದಾಗಿದೆ.

ಮತದಾನ ಮಾಡಲು ಬೇಕಾಗುವ ಪರ್ಯಾಯ ದಾಖಲೆಗಳು

ಆಧಾರ್ ಕಾರ್ಡ್

ಎಂಎನ್‌ಆರ್‌ಇಜಿಎ ಜಾಬ್ ಕಾರ್ಡ್ ಬ್ಯಾಂಕ್

ಅಂಚೆ ಕಚೇರಿ ನೀಡಿದ ಭಾವಚಿತ್ರವಿರುವ ಪಾಸ್ಬುಕ್ಗಳು

ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್

ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್

ಎನ್ಪಿಆರ್ ಅಡಿಯಲ್ಲಿ ಆರ್ಜಿಐ ನೀಡಿದ ಸ್ಮಾರ್ಟ್ ಕಾರ್ಡ್

ಭಾರತೀಯ ಪಾಸ್ಫೋರ್ಟ್

ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ

ರಾಜ್ಯ, ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು ತಮ್ಮ ನೌಕರರಿಗೆ ನೀಡಿರುವ ಸೇವಾ ಗುರುತಿನ ಚೀಟಿ

ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳು

ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ಕಾರ್ಡ್) ಪತ್ರದ ಮೂಲ ಪ್ರತಿಗಳನ್ನು ಮತದಾನದ ವೇಳೆ ಪರ್ಯಾಯ ದಾಖಲೆಗಳನ್ನಾಗಿ ಬಳಸಬಹುದು…

ವರದಿ, ಲತಾ, ಜೆ, ವಿ,

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend