ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50 ಹಾಸಿಗೆ ಸರ್ಕಾರದಿಂದಲೇ ಹಂಚಿಕೆ; ಸಚಿವರಾದ ಬಿ.ಶ್ರೀರಾಮುಲು

Listen to this article

ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50 ಹಾಸಿಗೆ ಸರ್ಕಾರದಿಂದಲೇ ಹಂಚಿಕೆ; ಸಚಿವರಾದ ಬಿ.ಶ್ರೀರಾಮುಲು
ಚಿತ್ರದುರ್ಗ,ಮೇ.11:
ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿನ ಹಾಸಿಗೆ ಸಾಮಥ್ರ್ಯದಲ್ಲಿ ಶೇ 50 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು ಈ ಸೀಟುಗಳಿಗೆ ಸರ್ಕಾರದಿಂದಲೇ ಕೋವಿಡ್ ಚಿಕಿತ್ಸೆಗೆ ಹಂಚಿಕೆ ಮಾಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದರು.
ಅವರು (ಮೇ.11) ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಕೋವಿಡ್ ನಿರ್ವಹಣಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೆಪಿಎಂಎ ಕಾಯ್ದೆಯನ್ವಯ ವಿಪತ್ತಿನ ಸಂದರ್ಭದಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಸಿಗೆ ಸಾಮಥ್ರ್ಯದ ಶೇ 50 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು ಇದಕ್ಕೆ ಸರ್ಕಾರ ನಿರ್ಧಿಷ್ಟ ದರವನ್ನು ನೀಡಲಿದೆ. ಸರ್ಕಾರದಿಂದ ಮೀಸಲಿರಿಸಿದ ಸೀಟುಗಳಿಗೆ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಹಾಸಿಗೆಯನ್ನು ಹಂಚಿಕೆ ಮಾಡಲಿದೆ. ಇದರ ಪ್ರಯೋಜನ ಪಡೆಯಲು ಕೋವಿಡ್ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಾಗ ಇಲ್ಲಿ ಹಾಸಿಗೆ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಆಸ್ಪತ್ರೆಯಲ್ಲಿನ ಸರ್ಕಾರದ ಕೋಟಾದ ಬೆಡ್‍ಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದನ್ನು ಜಿಲ್ಲೆಯಲ್ಲಿ ಖುದ್ದಾಗಿ ಮೇಲ್ವಿಚಾರಣೆ ನಡೆಸುವ ಮೂಲಕ ಯಾರು ಸಹ ಬೆಡ್ ಇಲ್ಲ ಎಂದು ಸಂಕಷ್ಟವನ್ನು ಎದುರಿಸಬಾರದೆಂದರು.
ಜಿಲ್ಲೆಯಲ್ಲಿ ಕೆಪಿಎಂಎ ಕಾಯ್ದೆಯನ್ವಯ ನೊಂದಣಿಯಾದ 33 ಖಾಸಗಿ ಆಸ್ಪತ್ರೆಗಳಿದ್ದು ಇದರಲ್ಲಿ 1317 ಹಾಸಿಗೆ ಇರುತ್ತವೆ. ಒಟ್ಟು ಸೀಟುಗಳಲ್ಲಿ ಶೇ 50 ರಷ್ಟು ಹಾಸಿಗೆಯನ್ನು ಕೋವಿಡ್‍ಗೆ ಮೀಸಲಿರಿಸಬೇಕು, ಇದರಿಂದ 658 ಹಾಸಿಗೆಗಳು ಲಭ್ಯವಾಗಲಿವೆ. ಈಗಾಗಲೇ 5 ಆಸ್ಪತ್ರೆಗಳನ್ನು ಮಾತ್ರ ಗುರುತಿಸಿದ್ದು ಇನ್ನುಳಿದ ಆಸ್ಪತ್ರೆಗಳನ್ನು ಸಹ ಗುರುತಿಸಲಾಗುತ್ತದೆ. ಬಸವೇಶ್ವರ, ಬಸಪ್ಪ ಆಸ್ಪತ್ರೆ, ಅಕ್ಷಯ ಗ್ಲೋಬಲ್, ಮಲ್ಟಿಸ್ಪೇಷಾಲಿಟಿ, ವಾಯುಪುತ್ರ ಆಸ್ಪತ್ರೆಗಳಲ್ಲಿ ಶೇ 50 ರಷ್ಟು 166 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ ಎಂದರು.
ಮತ್ತು ಸಿಟಿ ಸ್ಕ್ಯಾನ್‍ಗೆ 1500 ರೂ.ಗಳು ಮತ್ತು ಎಕ್ಸ್‍ರೇಗೆ ರೂ.250 ನಿಗದಿ ಮಾಡಲಾಗಿದೆ. ಇದಕ್ಕಿಂತ ಹೆಚ್ಚು ದರ ಪಡೆದಲ್ಲಿ ಅಂತಹ ಡಯೋಗ್ನಾಸ್ಟಿಕ್ ಸೆಂಟರ್, ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಔಷಧ ಪೂರೈಕೆಗೆ ಕ್ರಮ;
ಚಿತ್ರದುರ್ಗ ಜಿಲ್ಲೆಗೆ ಖಾಸಗಿ ಆಸ್ಪತ್ರೆಯಲ್ಲಿನ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಪ್ರತಿ ನಿತ್ಯ 300 ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ 800 ಸೇರಿ 1100 ರೆಮ್‍ಡಿಸೀವರ್ ಇಂಜೆಕ್ಷನ್ ಬೇಕಾಗಿದೆ. ಆದರೆ ಇದಕ್ಕಿಂತಲೂ ಕಡಿಮೆ ಪೂರೈಕೆಯಾಗುತ್ತಿದ್ದು ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದ್ದು ಪೂರೈಕೆಗೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದು ಪೂರೈಕೆಗೆ ಕ್ರಮ ವಹಿಸಲಾಗುತ್ತದೆ ಎಂದರು.
ಆಕ್ಸಿಜನ್ ಪೂರೈಕೆ;
ಜಿಲ್ಲಾ ಆಸ್ಪತ್ರೆಯಲ್ಲಿ ಈಗಿರುವ 175 ಬೆಡ್‍ಗಳ ಜೊತೆಗೆ 200 ಹೆಚ್ಚುವರಿ ಬೆಡ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಇದರಿಂದ ಪ್ರತಿನಿತ್ಯ 6 ಸಾವಿರ ಲೀಟರ್ ಆಕ್ಸಿಜನ್ ಬೇಕಾಗುತ್ತದೆ. ಮತ್ತು ಇತರೆ ಸಾರ್ವಜನಿಕ ಆಸ್ಪತ್ರೆ, ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್‍ಗಳು ಸೇರಿದಂತೆ ಒಟ್ಟು 16154 ಲೀಟರ್ ಆಕ್ಸಿಜನ್ ಬೇಕಾಗಿದ್ದು ಸುಮಾರು 15000 ಲೀಟರ್‍ನಷ್ಟು ಪೂರೈಕೆಯಾಗುತ್ತಿದೆ. ಕೊರತೆಯಾಗುವ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಲಾಗುತ್ತದೆ.
ಎಸ್‍ಡಿಆರ್‍ಎಫ್‍ನಡಿ ಜಿಲ್ಲೆಗೆ 20 ಕೋಟಿ ಮಂಜೂರಾಗಿದ್ದು ಇದರಲ್ಲಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಾಗುತ್ತಿದ್ದು ಕೆಲವೇ ದಿನಗಳಲ್ಲಿ ಇದು ನಿರ್ಮಾಣವಾಗಲಿದೆ. ಮತ್ತು ಪ್ರತಿ ತಾಲ್ಲೂಕಿನಲ್ಲಿಯು ಉತ್ಪಾದನಾ ಘಟಕ ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿನ ಸ್ಟೀಲ್ ಇಂಡಸ್ಟ್ರೀಸ್‍ಗಳಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ಉತ್ತೇಜಿಸಲಾಗುತ್ತದೆ ಎಂದರು.
ವೆಂಟಿಲೇಟರ್ ಹೆಚ್ಚಳ;
ಪಿಎಂ ಕೇರ್ ನಿಧಿಯಡಿ ಜಿಲ್ಲೆಗೆ 60 ವೆಂಟಿಲೇಟರ್‍ಗಳನ್ನು ನೀಡಿದ್ದು ತಾಲ್ಲೂಕು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿತ್ತು. ಅಲ್ಲಿ ಸಮರ್ಪಕವಾಗಿ ಬಳಕೆ ಮಾಡಲು ತಾಂತ್ರಿಕ ಪರಿಣಿತರ ಕೊರತೆಯಿಂದ ಅವುಗಳನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿ ಈಗಿರುವ 30 ವೆಂಟಿಲೇಟರ್‍ಗಳ ಬದಲಾಗಿ 60 ಕ್ಕೆ ಹೆಚ್ಚಳ ಮಾಡಲಾಗುತ್ತದೆ. ಇದರಿಂದ ತೀವ್ರನಿಗಾ ಘಟಕದ ಚಿಕಿತ್ಸೆ ಅಗತ್ಯವಿರುವವರಿಗೆ ಸಹಾಯವಾಗಲಿದೆ ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ವೇದಾಂತ ಕಂಪನಿಯಿಂದ ಸಾಂಸ್ಥಿಕ ಸಾಮಾಜಿಕ ಒಣೆಗಾರಿಕೆ ನಿಧಿಯಡಿ 100 ಹಾಸಿಗೆ ಸಾಮಥ್ರ್ಯದ ಟೆಂಟ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು ಆದಷ್ಟು ಬೇಗ ಜನರ ಸೇವೆಗೆ ಲಭ್ಯವಾಗಲಿದೆ ಎಂದ ಸಚಿವರು ಜಿಲ್ಲೆಯ ಜನರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಮೇಲ್ವಿಚಾರಣೆಯನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ; ಕೆ.ನಂದಿನಿದೇವಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಪಾಲಾಕ್ಷ, ಜಿಲ್ಲಾ ಸರ್ಜನ್ ಡಾ; ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ; ರಂಗನಾಥ್ ಉಪಸ್ಥಿತರಿದ್ದರು.

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend