ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಯವರು ಪ್ರತಿ ತಿಂಗಳು ವೇತನ ನೀಡುವುದು ಕಡ್ಡಾಯ;..!!!

Listen to this article

ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಯವರು ಪ್ರತಿ ತಿಂಗಳು ವೇತನ ನೀಡುವುದು ಕಡ್ಡಾಯ;…..

ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಯವರು ಪ್ರತಿ ತಿಂಗಳು ವೇತನ ನೀಡುವುದು ಕಡ್ಡಾಯ ತಪ್ಪಿದಲ್ಲಿ ನೌಕರರು ಕ್ಲೇಮ್ ಮಾಡಿದರೆ 3 ಸಾವಿರ ರೂ. ಹೆಚ್ಚುವರಿ ಕೊಡಬೇಕು. ಡಿಸಿ ಅನಿರುದ್ಧ್ ಶ್ರವಣ್ ಸೂಚನೆ.
ಹೊಸಪೇಟೆ: -ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯ ಹೊರಗುತ್ತಿಗೆ ನೌಕರರನ್ನು ಹೊಂದಿರುವ ಏಜೆನ್ಸಿಗಳ ಮೂಲ ಮಾಲೀಕರು ಹಾಗೂ ಗುತ್ತಿಗೆದಾರರು ಕಡ್ಡಾಯವಾಗಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ರದ್ದತಿ) ಕಾಯ್ದೆ, 1970 ಮತ್ತು ಕರ್ನಾಟಕ ನಿಯಮಗಳು 1974ರ ಮೇರೆಗೆ ಹಾಗೂ ಇತರೆ ಅನ್ವಯಿಸುವ ಕಾರ್ಮಿಕ ಕಾಯ್ದೆಗಳನ್ವಯ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಂದು ಸಾವಿರ ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಏಜೆನ್ಸಿದಾರರು ನೌಕರರಿಗೆ ಪ್ರತಿ ತಿಂಗಳ 10ನೇ ತಾರೀಕಿನಂದು ಹಾಗೂ ಸಾವಿರಕ್ಕಿಂತ ಕಡಿಮೆ ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಏಜೆನ್ಸಿದಾರರು ನೌಕರರಿಗೆ ಪ್ರತಿ ತಿಂಗಳ 7ನೇ ತಾರೀಕಿನಂದು ವೇತನವನ್ನು ಕಡ್ಡಾಯವಾಗಿ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಬೇಕು ಮತ್ತು ವೇತನವನ್ನು ಪಾವತಿಸಿದ ನಂತರ ಅವರಿಗೆ ವೇತನ ಚೀಟಿ (ಫೇ ಸ್ಲೀಪ್) ಅನ್ನು ಪ್ರತಿ ತಿಂಗಳು ನೀಡಬೇಕು.
ಏಜೆನ್ಸಿಯ ಮೂಲ ಮಾಲೀಕರು ಪ್ರತಿ ತಿಂಗಳು ಇ.ಎಸ್.ಐ ಮತ್ತು ಪಿ.ಎಫ್ ಅನ್ನು ಗುತ್ತಿಗೆದಾರರು ಪಾವತಿಸಿದ್ದಾರೆ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.

ಮಹಿಳಾ ಮತ್ತು ಪುರುಷ ನೌಕರರಿಗೂ ಸಮಾನ ವೇತನ ಪಾವತಿ ಮಾಡುತ್ತಿರುವ ಕುರಿತು ಮೂಲ ಮಾಲೀಕರು ಖಾತರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆಯಿಂದ ಕಾಲ ಕಾಲಕ್ಕೆ ಹೊರಡಿಸುವ ಅಧಿಸೂಚನೆ ಅನುಸಾರ ಪರಿಷ್ಕೃತ ವೇತನ ದರಗಳನ್ನು ಕಾರ್ಮಿಕರಿಗೆ ಪಾವತಿಯಾಗುವಂತೆ ಕ್ರಮ ವಹಿಸಬೇಕು ಎಂದು ಹೇಳಿದರು.

ಕಲಬುರಗಿ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್ ಮಾತನಾಡಿ, ಕಾರ್ಮಿಕ ಕಾಯ್ದೆಗಳನ್ವಯ ಹೊರಗುತ್ತಿಗೆ ನೌಕರರು ದಿನಕ್ಕೆ 8 ತಾಸು ಕೆಲಸವನ್ನು ಮಾಡಬೇಕಾಗಿದ್ದು, ಹೆಚ್ಚುವರಿ ಅವಧಿಗೆ ಹೆಚ್ಚುವರಿ ವೇತನವನ್ನು ಮೂಲ ಮಾಲೀಕರು, ಗುತ್ತಿಗೆದಾರರು ಪಾವತಿ ಮಾಡಬೇಕಾಗಿರುತ್ತದೆ. ಹೊರಗುತ್ತಿಗೆ ನೌಕರರನ್ನು ನಿಯೋಜಿಸಿಕೊಂಡಿರುವ ಏಜೆನ್ಸಿಯಮೂಲಮಾಲೀಕರು, ಗುತ್ತಿಗೆದಾರರು 1948ಯ ಕಾಯ್ದೆಯ ಪ್ರಕಾರ ಸರ್ಕಾರವು ನಿಗದಿಡಿಸಿದ ಕನಿಷ್ಠ ವೇತನವನ್ನು ಪಾವತಿ ಮಾಡಬೇಕು.

1961ರ ಕಾಯ್ದೆಯ ಪ್ರಕಾರ ಮಹಿಳಾ ಕಾರ್ಮಿಕರಿಗೆ ಹೆರಿಗೆ ಸಮಯದಲ್ಲಿ ಆರೂವರೆ ತಿಂಗಳು ವೇತನ ಸಹಿತ ರಜೆಯನ್ನು ನೀಡಬೇಕು. ಇ.ಎಸ್.ಐ ಹಾಗೂ ಪಿ.ಎಫ್ ಸೇರಿ ಇತರೆ ಕಾರ್ಮಿಕ ಕಾಯ್ದೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಗುತ್ತಿಗೆ ಕಾರ್ಮಿಕರ ಏಜೆನ್ಸಿಗಳ ಮೂಲ ಮಾಲೀಕರು, ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನವನ್ನು ಪಾವತಿಸದಿದ್ದಲ್ಲಿ ನೌಕರರು ಕ್ಲೈಮ್‍ಗೆ ಸಲ್ಲಿಸಿದಲ್ಲಿ 3 ಸಾವಿರ ರೂ.ವರೆಗೆ ವೇತನದ ಜೊತೆಗೆ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಕಲಬುರಗಿ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್ ಹೇಳಿದರು.

ಈ ಸಂದರ್ಭದಲ್ಲಿ ಬಳ್ಳಾರಿ ವಿಭಾಗದ ದಾವಣಗೆರೆಯ ಸಹಾಯಕ ಕಾರ್ಮಿಕ ಆಯುಕ್ತೆ ವೀಣಾ ಎಸ್.ಆರ್, ಬಳ್ಳಾರಿ ಉಪವಿಭಾಗ-1ರ ಜಿಲ್ಲಾ ಕಾರ್ಮಿಕ ಅಧಿಕಾರಿ ಅಲ್ತಾಫ್ ಅಹಮ್ಮದ್, ಬಳ್ಳಾರಿ ಉಪವಿಭಾಗ-2ರ ಜಿಲ್ಲಾ ಕಾರ್ಮಿಕ ಅಧಿಕಾರಿ ಮಾರಿಕಾಂಬ ಹುಲಿಕೋಟಿ, ಕಾರ್ಮಿಕ ನಿರೀಕ್ಷಕ ಎಂ.ಅಶೋಕ್, ಡಿ.ವೈ.ಎಸ್.ಪಿ. ವಿಶ್ವನಾಥ ಕುಲಕರ್ಣಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್, ಹೊಸಪೇಟೆ ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ್, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ಸೇರಿ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend