ಯೋಜನೆಗಳು, ಸಂಚಾರ ನಿಯಮಗಳು, ಸಾಮಾಜಿಕ ಪಿಡುಗುಗಳ ಕುರಿತ ಜಾಗೃತಿ ಬಗ್ಗೆ  ಡಿಸಿ, ಎಸ್‍ಪಿ, ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಬೈಕ್ ರ್ಯಾಲಿ…!!!

Listen to this article

ಯೋಜನೆಗಳು, ಸಂಚಾರ ನಿಯಮಗಳು, ಸಾಮಾಜಿಕ ಪಿಡುಗುಗಳ ಕುರಿತ ಜಾಗೃತಿ ಬಗ್ಗೆ

ಡಿಸಿ, ಎಸ್‍ಪಿ, ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಬೈಕ್ ರ್ಯಾಲಿ

ದಾವಣಗೆರೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳು, ಅಲ್ಲದೆ ಸಾಮಾಜಿಕ ಪಿಡುಗುಗಳ ಕುರಿತು ಜನ ಜಾಗೃತಿ, ಸಂಚಾರ ನಿಯಮಗಳು ಹಾಗೂ ಕೋವಿಡ್ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಎಸ್‍ಪಿ ರಿಷ್ಯಂತ್ ಸಿ.ಬಿ. ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ದಾವಣಗೆರೆಯಿಂದ, ಸಂತೆಬೆನ್ನೂರು ಮಾರ್ಗವಾಗಿ, ಸೂಳೆಕೆರೆ ವರೆಗೆ ಬೈಕ್ ರ್ಯಾಲಿ ಯನ್ನು ಭಾನುವಾರದಂದು ಹಮ್ಮಿಕೊಳ್ಳಲಾಯಿತು.
ದಾವಣಗೆರೆ ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯತ್ ಆವರಣದಲ್ಲಿ ಭಾನುವಾರದಂದು ಬೆಳಿಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ನೇತೃತ್ವದ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ತಮ್ಮ ತಮ್ಮ ಬುಲೆಟ್ ಬೈಕ್‍ನೊಂದಿಗೆ ರ್ಯಾಲಿ ಹೊರಡಲು ಉತ್ಸಾಹ, ಹುರುಪಿನೊಂದಿಗೆ ಸಿದ್ಧರಾಗಿ ಬಂದಿದ್ದರು. ಜಿಲ್ಲಾಧಿಕಾರಿಗಳು ತಮ್ಮ ಬೈಕ್‍ಗೆ ‘ಕೋವಿಡ್ ನಿಯಂತ್ರಣ ಕುರಿತು, ತಪ್ಪದೆ ಲಸಿಕೆ ಪಡೆಯುವಂತೆ ಕೋರುವ ಸಂದೇಶವುಳ್ಳ ಫಲಕವನ್ನು ಅಳವಡಿಸಿಕೊಂಡರೆ, ಎಸ್‍ಪಿ ಸಿ.ಬಿ. ರಿಷ್ಯಂತ್ ಅವರು ಅಪರಾಧ ತಡೆ ಮಾಸಾಚರಣೆ ನಿಮಿತ್ಯ, ‘ಹೆಲ್ಮೆಟ್ ಬಳಸಿ ಚಾಲನೆ ಮಾಡಿ’, ಅಪರಾಧ ಮುಕ್ತ ಸಮಾಜ ನಿರ್ಮಿಸೋಣ ಬನ್ನಿ’ ಎಂಬ ಸಂದೇಶವುಳ್ಳ ಫಲಕ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಅವರು ‘ಮಕ್ಕಳ ಸಹಾಯವಾಣೀ 1098’ ಕುರಿತು, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ಅವರು, ಬಾಲ ಕಾರ್ಮಿಕ ಪದ್ದತಿ ವಿರೋಧದ ಬಗೆಗಿನ ಸಂದೇಶವುಳ್ಳ ಫಲಕ, ಆರ್‍ಟಿಒ ಶ್ರೀಧರ್ ಮಲ್ಲಾಡ್ ಅವರು ಕೂಡ ರಸ್ತೆ ಸುರಕ್ಷತೆ ಸಪ್ತಾಹ ಕುರಿತು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗಂಗಪ್ಪ ಅವರು ಕೋವಿಡ್ ನಿಯಂತ್ರಣ ಕುರಿತ ಜಾಗೃತಿ ಫಲಕಗಳನ್ನು ತಮ್ಮ ಬೈಕ್‍ಗೆ ಅಳವಡಿಸಿಕೊಂಡಿದ್ದರು.
ಜಿಲ್ಲಾ ಪಂಚಾಯತ್ ಆವರಣದಿಂದ ಆವರಣದಿಂದ ಹೊರಟ ಅಧಿಕಾರಿಗಳ ಬೈಕ್ ರ್ಯಾಲಿ, ಶಿಸ್ತಿನಿಂದ, ರಸ್ತೆಯ ಒಂದೆ ಬದಿಯಲ್ಲಿ ಮಿತಿಯಾದ ವೇಗದೊಂದಿಗೆ ಸಾಗಿತು. ಸಂತೆಬೆನ್ನೂರಿಗೆ ಆಗಮಿಸಿ, ಇಲ್ಲಿನ ಐತಿಹಾಸಿಕ ಪುಷ್ಕರಣಿಗೆ ಭೇಟಿ ನೀಡಿತು. ಬೈಕ್ ರ್ಯಾಲಿ ಸಾಗುತ್ತಿದ್ದ ದಾರಿಯಲ್ಲಿನ ಗ್ರಾಮಗಳಲ್ಲಿ ಸಾರ್ವಜನಿಕರು, ಇಕ್ಕೆಲಗಳಲ್ಲಿ ನಿಂತು, ಬೈಕ್ ರ್ಯಾಲಿಯನ್ನು ಅಚ್ಚರಿ ಹಾಗೂ ಕುತೂಹಲದಿಂದ ವೀಕ್ಷಿಸಿದ್ದು ಕಂಡುಬಂದಿತು. ಸಂತೆಬೆನ್ನೂರಿನ ಪುಷ್ಕರಣಿ ವೀಕ್ಷಿಸಲು ಆಗಮಿಸಿದ್ದ ಸಾರ್ವಜನಿಕರಲ್ಲೂ ಕೂಡ ಜನಜಾಗೃತಿಯನ್ನು ಇದೇ ಸಂದರ್ಭದಲ್ಲಿ ಅಧಿಕಾರಿಗಳ ತಂಡ ಮೂಡಿಸುವಲ್ಲಿ ಯಶಸ್ವಿಯಾಯಿತು. ಬೈಕ್ ರ್ಯಾಲಿಯು ಸೂಳೆಕೆರೆ ಬಳಿಯ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಮಾಡುವ ಮೂಲಕ ಜಾಥಾ ಪೂರ್ಣಗೊಳಿಸಿತು.
ಕಚೇರಿಗಳಲ್ಲಿ ಕುಳಿತು ಸಾರ್ವಜನಿಕರೊಂದಿಗೆ ಸಮಸ್ಯೆಗಳನ್ನು ಆಲಿಸಿ, ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡುವುದು, ಸಮಸ್ಯೆಗಳ ಪರಿಹಾರಕ್ಕೆ ಕಡತಗಳ ನಡುವೆ ಕುಳಿತು ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ, ಭಾನುವಾರದಂದು ಏರ್ಪಡಿಸಿದ ವಿಶೇಷ ಬೈಕ್ ರ್ಯಾಲಿ, ಕಚೇರಿಯಿಂದ ಹೊರಬಂದು, ಬೈಕ್ ಮೂಲಕ ರಸ್ತೆಯಲ್ಲಿ ಸಾಗುತ್ತಾ ಜನರೊಂದಿಗೆ ಬೆರೆಯುವ ಅವಕಾಶ ಕಲ್ಪಿಸಿತಲ್ಲದೆ, ಸಾರ್ವಜನಿಕ ಜೀವನದ ಮತ್ತೊಂದು ಮಜಲನ್ನು ಪರಿಚಯಿಸುವಂತೆ ಮಾಡಿತು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ ನಾಯಕ್, ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಆರ್‍ಟಿಒ ಶೀಧರ್ ಮಲ್ಲಾಡ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು….

ವರದಿ. ರಾಜು, ಎಂ, ದಾವಣಗೆರೆ ಸ್ಥಳೀಯ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend