ಕೋವಿಡ್ ನಿಯಂತ್ರಣ: ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವಲೋಕನ…!!!

Listen to this article

ಸೋಂಕು ಪತ್ತೆಗೆ ಮನೆ ಮನೆಗೆ ತೆರಳಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲು ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ, ಮೇ 21:

ಎಲ್ಲೆಡೆ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮನೆ ಮನೆಗೆ ತೆರಳಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‌ ಮಾಡುವ ಮೂಲಕ ಸೋಂಕಿತರನ್ನು ಕೂಡಲೇ ಪತ್ತೆ ಮಾಡಬೇಕು ಎಂದು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಪಿ‌.ರವಿಕುಮಾರ್ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪ್ರವಾಸಿಮಂದಿರದಲ್ಲಿ ಗುರುವಾರ (ಮೇ 20) ನಡೆದ ಜಿಲ್ಲೆಯ ಉನ್ನತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರ್ಯಾಟ್(ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ) ಕಿಟ್ ಈಗ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಸೋಂಕು ಪತ್ತೆ ಮಾಡಬೇಕು.
ಶೇ.30 ರಷ್ಟು ರ್ಯಾಟ್ ಮಾಡಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ. ಆದಾಗ್ಯೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರ್ಯಾಟ್ ಪ್ರಮಾಣ ‌ಕಡಿಮೆಯಿದೆ ಎಂದು ಹೇಳಿದರು.

ರ್ಯಾಟ್ ವಿಧಾನ ಮೂಲಕ ಕೋವಿಡ್ ತಪಾಸಣೆ ಹೆಚ್ಚಿಸದೇ ಹೊರತು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರನ್ನು ಪತ್ತೆ ಮಾಡುವುದು ತುಂಬಾ ಕಷ್ಟಕರ.
ರ್ಯಾಟ್ ಪರೀಕ್ಷೆಯಲ್ಲಿ ಸೋಂಕು‌ ದೃಢಪಟ್ಟರೆ ಸಾಕು; ಒಂದು ವೇಳೆ ಲಕ್ಷಣಗಳಿದ್ದೂ ರ್ಯಾಟ್ ನಲ್ಲಿ ನೆಗೆಟಿವ್ ಬಂದಾಗ ಮಾತ್ರ ಆರ್.ಟಿ.ಪಿ.ಸಿ.ಆರ್. ಮತ್ತಿತರ ಪರೀಕ್ಷೆ ಮಾಡಬೇಕು ಎಂದು ಸೂಚನೆ ನೀಡಿದರು.

ಸರಿಯಾದ ವಿಳಾಸ-ದೂರವಾಣಿ ಸಂಖ್ಯೆ ಸಂಗ್ರಹಿಸಲು ಸೂಚನೆ:

ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ಸರಿಯಾದ ವಿಳಾಸವನ್ನು ಪಡೆದುಕೊಳ್ಳಬೇಕು. ತಪ್ಪು ವಿಳಾಸ ನೀಡುತ್ತಿರುವುದರಿಂದ ಕೋವಿಡ್ ತಪಾಸಣೆ ಉದ್ಧೇಶ ಈಡೇರುತ್ತಿಲ್ಲ ಎಂದು ರವಿಕುಮಾರ್ ಅಭಿಪ್ರಾಯಪಟ್ಟರು.

ತಪ್ಪು ವಿಳಾಸದಿಂದ ಸೋಂಕಿತರ ಚಿಕಿತ್ಸೆ ಹಾಗೂ ಐಸೋಲೇಷನ್ ಎರಡೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪರ್ಯಾಯ ದೂರವಾಣಿ ಸಂಖ್ಯೆ ಪಡೆಯಲು ನಿರ್ದೇಶನ ನೀಡಿದರು.
ಹೋಮ್ ಐಸೋಲೇಷನ್ ನಲ್ಲಿ ಇರುವವರ ಮೇಲೆ ವಾರ್ ರೂಮ್‌ ಮೂಲಕ ನಿರಂತರ ನಿಗಾ ವಹಿಸಬೇಕು. ಸೋಂಕು ದೃಢಪಟ್ಟ ತಕ್ಷಣವೇ ಅಗತ್ಯ ಔಷಧಿ ಕಿಟ್ ನೀಡಬೇಕು ಎಂದು ನಿರ್ದೇಶನ ನೀಡಿದರು.

ಸೋಂಕಿತರಿಗೆ ಹತ್ತು ದಿನಗಳ ಕಾಲ ಆಸ್ಪತ್ರೆಯಲ್ಲಿ ನಿಗದಿತ ಚಿಕಿತ್ಸೆ ನೀಡಿದ ಬಳಿಕ ಕೊನೆಯ ಮೂರು‌ ದಿನಗಳ ಕಾಲ‌ ಅವರಲ್ಲಿ ಜ್ವರ ಕಂಡುಬರದಿದ್ದರೆ ಅಂತಹವರನ್ನು ಡಿಸ್ಚಾರ್ಜ್ ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ರವಿಕುಮಾರ್ ಸೂಚನೆ ನೀಡಿದರು.

ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಟೆಸ್ಟಿಂಗ್ ಪ್ರಮಾಣ ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ರವಿಕುಮಾರ್ ಅವರು ಅಧಿಕಾರಿಗಳಿಗೆ ತಿಳಿಸಿದರು.

ಸೋಂಕಿತರನ್ನು ಕೇರ್ ಸೆಂಟರ್ ಗೆ ದಾಖಲಿಸಿ:

ಇತ್ತೀಚಿನ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಹೋಮ್ ಐಸೋಲೇಷನ್ ಗೆ ಆದ್ಯತೆ ನೀಡದೇ ಸ್ಥಳೀಯ ಕೋವಿಡ್ ಕೇರ್ ಕೇಂದ್ರಗಳಿಗೆ ಸೋಂಕಿತರನ್ನು ದಾಖಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.

ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಬೇಕು. ‌ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕವಾಗಿ ಕೇಂದ್ರವನ್ನು ಆರಂಭಿಸಬೇಕು ಎಂದು ತಿಳಿಸಿದರು.

ಸ್ಥಳೀಯ ಮಟ್ಟದ ಟಾಸ್ಕ್ ಫೋರ್ಸ್‌ ಅನ್ನು ಚುರುಕುಗೊಳಿಸಿ ಪ್ರತಿಯೊಬ್ಬ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಸೇರಿಸಬೇಕು ಎಂದು ಹೇಳಿದರು.

ವೈದ್ಯರು ಸೇರಿದಂತೆ ಯಾವುದೇ ರೀತಿಯ ವೈದ್ಯಕೀಯ ಸಿಬ್ಬಂದಿ ಅಗತ್ಯವಿದ್ದರೆ ತಕ್ಷಣವೇ ನೇಮಕಾತಿ ನಡೆಸಬೇಕು.
ಒಂದು ವೇಳೆ ತಜ್ಞ ವೈದ್ಯರು ಲಭ್ಯವಿಲ್ಲದಿದ್ದರೆ ಹೆಚ್ಚಿನ ಸಂಭಾವನೆ ನೀಡಿ ನೇಮಿಸಿಕೊಳ್ಳಬೇಕು ಎಂದರು.

ಜಿಲ್ಲಾಡಳಿತದಿಂದಲೇ‌ ಬೆಡ್ ಹಂಚಿಕೆಗೆ ನಿರ್ದೇಶನ:

ಜಿಲ್ಲೆಯ‌‌‌ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸರಕಾರಿ ಕೋಟಾದ ಬೆಡ್ ಗಳನ್ನು ಜಿಲ್ಲಾಡಳಿತದಿಂದಲೇ ಹಂಚಿಕೆ ಮಾಡುವುದೇ ಸೂಕ್ತ. ‌ಆದ್ದರಿಂದ ಸರಕಾರಿ ಕೋಟಾದ ಬೆಡ್ ಗಳನ್ನು ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.

ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾಡಳಿತದ ಮೂಲಕವೇ ಬೆಡ್ ಹಂಚಿಕೆ‌ ಮಾಡಲಾಗುತ್ತಿದೆ. ಈ ಮಾದರಿಯನ್ನು ಅನುಸರಿಸುವುದು ಉತ್ತಮ ಎಂದರು.

ಸೋಂಕಿನ‌ ಪ್ರಮಾಣ ಇನ್ನಷ್ಟು ಹೆಚ್ಚಾದರೆ ಬೆಡ್ ಬೇಡಿಕೆ ಹೆಚ್ಚಾಗಲಿದೆ. ಆದ್ದರಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ತಪ್ಪಿಸಲು ನೋಡಲ್ ಅಧಿಕಾರಿಗಳ ಮೂಲಕವೇ ಬೆಡ್ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದರು.

ತ್ವರಿತವಾಗಿ ವರದಿ ನೀಡಲು ಕ್ರಮ:

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಕೋವಿಡ್ ಪರೀಕ್ಷೆಯ ವರದಿಯನ್ನು ಆದಷ್ಟು ಬೇಗನೆ ನೀಡಲು ತಾಲ್ಲೂಕುವಾರು ಅಗತ್ಯ ವಾಹನ‌ ಹಾಗೂ ಸಿಬ್ಬಂದಿ ಒದಗಿಸಲಾಗಿದೆ ಎಂದು ತಿಳಿಸಿದರು.

ಅನುಕೂಲ ಇರುವವರಿಗೆ ಮಾತ್ರ ಹೋಮ್ ಐಸೋಲೇಷನ್ ಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಎಲ್ಲ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರ ಮತ್ತು ಚಿಕಿತ್ಸೆ ಅಗತ್ಯವಿರುವವರಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ಮನೆ ಮನೆಗೆ ತೆರಳಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಲಾಗುವುದು. ಇದಲ್ಲದೇ ಹೋಮ್ ಐಸೋಲೇಷನ್ ನಲ್ಲಿ ಇರುವವರ ಮೇಲೆ‌ ಆರೋಗ್ಯ ಇಲಾಖೆಯ ಸಿಬ್ಬಂದಿ ಮೂಲಕ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

ಮಾದರಿ ಸಂಗ್ರಹಿಸಿದ ಬಳಿಕ ವರದಿ ನೀಡಲು ಮೂರು ದಿನಗಳಾಗುತ್ತಿತ್ತು. ಇದೀಗ ತಾಲ್ಲೂಕುವಾರು ಡೇಟಾ ಎಂಟ್ರಿ ಸಿಬ್ಬಂದಿ ಒದಗಿಸಿದ್ದರಿಂದ ಈಗ ಒಂದು ದಿನ ವಿಳಂಬವನ್ನು ತಪ್ಪಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ವಿವರಿಸಿದರು.
ರ್ಯಾಟ್ ಮೂಲಕ ಮನೆ‌ಮನೆಗೆ ತೆರಳಿ ಕೋವಿಡ್ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗುವುದು ಎ‌ಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಮೀಸಲಿಟ್ಟಿರುವ ಬೆಡ್ ಗಳನ್ನು ಜಿಲ್ಲಾಡಳಿತ ಮೂಲಕವೇ ಹಂಚಿಕೆಗೆ ಕ್ರಮ‌ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ತಿಳಿಸಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಉತ್ತರ ವಲಯ‌ ಐಜಿಪಿ ರಾಘವೇಂದ್ರ ಸುಹಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಪಾಲಿಕೆಯ ಆಯುಕ್ತರಾದ ಜಗದೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕೋವಿಡ್ ವಾರ್ ರೂಮ್, ಬಿಮ್ಸ್ ಪರಿಶೀಲನೆ:

ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಇದಕ್ಕೂ‌ ಮುಂಚೆ ಬೆಳಗಾವಿ ಜಿಲ್ಲಾ ಕೋವಿಡ್ ವಾರ್ ರೂಮ್, ಬಿಮ್ಸ್ ಆಸ್ಪತ್ರೆ, ಲಸಿಕಾಕರಣ ಘಟಕ ಹಾಗೂ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿ ಬೆಡ್ ಲಭ್ಯತೆ, ಜಿಲ್ಲೆಯಲ್ಲಿ ಲಭ್ಯವಿರುವ ಆಕ್ಸಿಜನ್ ಬೆಡ್, ವೆಂಟಿಲೇಟರ್ ಮತ್ತು ಆಕ್ಸಿಜನ್ ಸಂಗ್ರಹ ಸಾಮರ್ಥ್ಯದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿನ ವಾರ್ ರೂಮ್ ಸಮನ್ವಯತೆ ಸಾಧಿಸಿ ಸೋಂಕಿತರ ಚಿಕಿತ್ಸೆ ಹಾಗೂ ಐಸೋಲೇಷನ್ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಬಿಮ್ಸ್ ಸೇರಿದಂತೆ ಸೇರಿದಂತೆ ಯಾವುದೇ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಜತೆ ಆಸ್ಪತ್ರೆಯಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಅಥವಾ ಅಟೆಂಡರ್ ಗಳಿದ್ದರೆ ಅದಕ್ಕೆ ಆಯಾ ಆಸ್ಪತ್ರೆಯ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ಅವ್ಯವಸ್ಥೆ ಕಂಡುಬಂದರೆ ಸಂಬಂಧಿಸಿದವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಪಿ.ರವಿಕುಮಾರ್ ಹೇಳಿದರು.

ವರದಿ.ಮಹಾಲಿಂಗ ಗಗ್ಗರಿ ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend