ಬಿಸಿಲಿನ ಸೂರ್ಯಘಾತದ ಅನಾಹುತದಿಂದ ಪಾರಾಗಲು ಕೈ ಜೋಡಿಸಿ: ಡಾ.ವೈ.ರಮೇಶ್ ಬಾಬು…!!!

Listen to this article

ಬಿಸಿಲಿನ ಸೂರ್ಯಘಾತದ ಅನಾಹುತದಿಂದ ಪಾರಾಗಲು ಕೈ ಜೋಡಿಸಿ: ಡಾ.ವೈ.ರಮೇಶ್ ಬಾಬು

ಬಳ್ಳಾರಿ:ಜಿಲ್ಲೆಯಲ್ಲಿ ಪ್ರಖರ ಬಿಸಿಲು ಕಂಡುಬರುವ ಹಿನ್ನಲೆಯಲ್ಲಿ ಮಧ್ಯಾಹ್ನದ 01 ಗಂಟೆಯಿಂದ ಸಂಜೆ 04 ಗಂಟೆಯ ಅವಧಿಯಲ್ಲಿ ವಯೋ ವೃದ್ಧರು, ಮಕ್ಕಳು ಗರ್ಭಿಣಿ ಮತ್ತು ದೀರ್ಘಕಾಲಿನ ಖಾಯಿಲೆಗಳಿಗೆ ಔಷಧಿ ಸೇವಿಸುವ ಪ್ರತಿಯೊಬ್ಬರು ಹೊರಗಡೆ ಹೋಗುವುದನ್ನು ತಪ್ಪಿಸಿ, ಬಿಸಿಲಿನ ಸೂರ್ಯಘಾತದ ಅನಾಹುತದಿಂದ ಪಾರಾಗಲು ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ ಬಾಬು ಅವರು ಕೋರಿದ್ದಾರೆ.
ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಬೇಸಿಗೆಯು ಅತ್ಯಂತ ಪ್ರಖರವಾಗಿದ್ದು, ಈಗಾಗಲೇ ರಾಜ್ಯ ಹವಮಾನ ಇಲಾಖೆಯು ಮುಂದಿನ ಕೆಲವು ದಿನಗಳ ಕಾಲ ಒಣಹವೆಯೊಂದಿಗೆ ಬಿಸಿಗಾಳಿ ಬೀಸುವ ಕುರಿತು ಮುನ್ನಚ್ಚೆರಿಕೆ ನೀಡಿರುವ ಹಿನ್ನಲೆ ಬಳ್ಳಾರಿ ಜಿಲ್ಲೆಯಲ್ಲಿಯೂ ಸಹ ವಾತಾವರಣ ಕಂಡುಬರುತ್ತಿದ್ದು, ಪ್ರತಿಯೊಬ್ಬರು ಆದಷ್ಟು ನೆರಳಿನಲ್ಲಿ ಇರುವುದಕ್ಕೆ ಆದ್ಯತೆ ನೀಡಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ದೇಹದಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ಓ.ಆರ್.ಎಸ್ ಜೀವಜಲ ಪುಡಿಯನ್ನು ಅಗತ್ಯವುಳ್ಳವರಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಆರೈಕೆಗಾಗಿ, ಐವಿ ಪ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳಲಾಗಿದೆ. ಓ.ಆರ್.ಎಸ್. ದ್ರಾವಣವನ್ನು 1 ಲೀಟರ್ ನೀರಿಗೆ 1 ಪೊಟ್ಟಣದ ಸಂಪೂರ್ಣ ಪುಡಿಯನ್ನು ಹಾಕಿ 24 ಗಂಟೆಯೊಳಗಡೆ ಕುಡಿಯಲು ಬಳಸುವ ಮೂಲಕ ಬಿಸಿಲಿನ ಪ್ರಖರತೆಯಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಯಬಹುದು ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಕಾರದೊಂದಿಗೆ ಜಿಲ್ಲೆಯಲ್ಲಿ ನಿರ್ಜಲೀಕರಣ ತಡೆಗಟ್ಟಲು ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದ್ದು, ಜೊತೆಗೆ ಜಿಲ್ಲಾ ಕಾಲರಾ ತಂಡದಿಂದ ಕುಡಿಯುವ ನೀರಿನ ಮೂಲಗಳನ್ನು ನಿರಂತರವಾಗಿ ಪರೀಕ್ಷಿಸಿ ಕುಡಿಯಲು ಯೋಗ್ಯವೆಂದು ಖಚಿತಪಡಿಸಿದ ನಂತರವೇ ಸರಬರಾಜು ಮಾಡಲು ಕ್ರಮವಹಿಸಲಾಗಿದೆ ಎಂದಿದ್ದಾರೆ.


ಲೋಕಸಭಾ ಚುನಾವಣೆಯ ಹಿನ್ನಲೆ ಜಿಲ್ಲೆಯ ಗಡಿಭಾಗದಲ್ಲಿ ಹಾಗೂ ಇತರೆಡೆ ತೆರೆದಿರುವ 24 ಚೆಕ್‍ಪೋಸ್ಟ್ ಸಿಬ್ಬಂದಿಯವರಿಗೆ ಓಆರ್‍ಎಸ್ ಪೊಟ್ಟಣಗಳನ್ನು ಹಾಗೂ ತುರ್ತು ಚಿಕಿತ್ಸಾ ಔಷಧಿಗಳನ್ನು ವಿತರಿಸಲಾಗಿದೆ. ಸಾರ್ವಜನಿಕರು ಮಧ್ಯಾಹ್ನದ ವೇಳೆ ಅಗತ್ಯವೆನಿಸುವ ಸಂದರ್ಭಗಳಲ್ಲಿ ಮನೆಯಿಂದ ಹೊರ ಬರುವಾಗ ಶುದ್ಧ ಕುಡಿಯುವ ನೀರು, ಛತ್ರಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುವಾಗ ಮಕ್ಕಳಿಗೆ ಆದಷ್ಟು ತಲೆಯ ಮೇಲೆ ನೀರಿನಿಂದ ಒದ್ದೆ ಬಟ್ಟೆಯನ್ನು ಹಾಕಬೇಕು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗದಂತೆ ಕಾಳಜಿವಹಿಸಬೇಕು ಎಂದು ಅವರು ತಿಳಿಸಿದ್ದಾರೆ.


ಸಾಮಾನ್ಯ ಅಪಾಯದ ಚಿಹ್ನೆಗಳು:
ವಯಸ್ಕರಲ್ಲಿ ಅರೆಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಸಿಡಿಮಿಡಿಗೊಳ್ಳುವುದು, ಗಾಬರಿಗೊಳ್ಳುವುದು, ಅತಿಯಾದ ತಲೆನೋವು, ಚರ್ಮವು ಬಿಸಿ ಹಾಗೂ ಕೆಂಪಾದ ಒಣಚರ್ಮ, ಆತಂಕ, ತಲೆಸುತ್ತುವಿಕೆ, ಮಾಂಸಖಂಡಗಳಲ್ಲಿ ಸುಸ್ತು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ, ಮಕ್ಕಳಲ್ಲಿ ಆಹಾರ ಸೇವಿಸಲು ನಿರಾಕರಿಸುವುದು, ಕನಿಷ್ಠ ಮೂತ್ರ ವಿಸರ್ಜನೆ, ಬಾಯಿ ಒಣಗುವಿಕೆ, ಆಲಸ್ಯ, ಮೂರ್ಛೆ ಹೋಗುವುದು, ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ ಇವೆಲ್ಲವುಗಳೂ ಸಾಮಾನ್ಯ ಅಪಾಯದ ಚಿಹ್ನೆಗಳಾಗಿವೆ.
ಬಿಸಿಲಿನ ಶಾಖಾಘಾತಕ್ಕೆ ಅಗತ್ಯ ತುರ್ತು ಚಿಕಿತ್ಸೆ:
ಶಾಖಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ನೆರಳಿರುವೆಡೆಗೆ ಸ್ಥಳಾಂತರಿಸಿ. ವ್ಯಕ್ತಿಯ ವಸ್ತ್ರಗಳನ್ನು ಸಡಿಲಗೊಳಿಸಿ, ಅಂಗಾತ ಮಲಗಿಸಿ, ಕಾಲುಗಳನ್ನು ಎತ್ತರಿಸಿ. ಸಾಮಾನ್ಯ ನೀರಿನಿಂದ ದೇಹವನ್ನು ಒರೆಸಬೇಕು ಮತ್ತು ಹತ್ತಿರದ ವೈದ್ಯರನ್ನು ಸಂಪರ್ಕಿಸಬೇಕು.
ರಾಷ್ಟ್ರೀಯ ಹವಮಾನ ಬದಲಾವಣೆ ಹಾಗೂ ಮಾನವ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಡಾ.ಅಬ್ದುಲ್ಲಾ ರವರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಅಲ್ಲದೇ ಪ್ರತಿ ದಿನ ಪತ್ರಿಕೆಗಳು, ರೇಡಿಯೋ, ದೂರದರ್ಶನ ಮತ್ತು ಜಿಲ್ಲಾ ವಿಪತ್ತು ಪ್ರಾಧಿಕಾರದ ಮೂಲಕ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

ವರದಿ. ವಿರೇಶ್, ಎಚ್, ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend