ಮೊಳಕಾಲ್ಮೂರು: ನಾಡೋಜ ಕವಿ ಡಾ. ಸಿದ್ದಲಿಂಗಯ್ಯ ಅವರಿಗೆ ಗೌರವ ವಂದನೆ ಮತ್ತು ನುಡಿನಮನ ಕಾರ್ಯಕ್ರಮ.!

Listen to this article

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದಲ್ಲಿ (ಜೂ,30) ರಂದು ನುಂಕೆಮಲೆ ಸಿದ್ದೇಶ್ವರ ಸಮುದಾಯ ಭವನದಲ್ಲಿ ನಾಡೋಜ ಕವಿ ಡಾ. ಸಿದ್ದಲಿಂಗಯ್ಯ ಅವರಿಗೆ ಗೌರವ ವಂದನೆ ಮತ್ತು ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ರೈತ ಸಂಘ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಪ್ರಬುದ್ಧ ಭಾರತ ಜನಸೇವಾ ಕೇಂದ್ರ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೊಳಕಾಲ್ಮುರು ಇವರ ಸಂಯುಕ್ತ ಆಶ್ರಯದಲ್ಲಿ
ನಾಡೋಜ ಕವಿ ಡಾ. ಸಿದ್ದಲಿಂಗಯ್ಯ ಅವರಿಗೆ ಗೌರವ ವಂದನೆ ಮತ್ತು ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯವಾದಿಗಳಾದ ರಾಜಶೇಖರ್ ನಾಯಕ ಮಾತನಾಡಿ, ಸಿದ್ದಲಿಂಗಯ್ಯ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ, ಕನ್ನಡದ ಸಾಹಿತ್ಯ ಅಸ್ಮಿತೆಯ ಬಹುದೊಡ್ಡ ಕೊಂಡಿಯನ್ನು ಕಳಚಿಕೊಂಡಂತಾಗಿದೆ. ಅವರು ಕೇವಲ ದಲಿತ ಕವಿ ಅಲ್ಲ, ಅವರು ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಅವ್ರು ಕೂಡ ಒಬ್ಬರು. ತಳ ಸಮುದಾಯಗಳಿಗೆ ಧ್ವನಿ ನೀಡಿದ ಸೂಕ್ಷ್ಮ ಸಂವೇದನಾ ಶೀಲ ವ್ಯಕ್ತಿತ್ವ ಅವರದು. ಬಂಡಾಯ ಸಾಹಿತ್ಯದ, ಬೂಸಾ ಚಳುವಳಿಯ ಹಾಗೂ ರೈತ ಚಳುವಳಿಯ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವವಹಿಸಿದರು, ಬೆಂಗಳೂರಿನ ಮಂಚನಬೆಲೆಯಲ್ಲಿ 1954 ರಲ್ಲಿ ತಂದೆ ದೇವಯ್ಯ ತಾಯಿ ವೆಂಕಮ್ಮ ಇವರ ಮಗನಾಗಿ ಬಡಕುಟುಂಬದಲ್ಲಿ ಜನಿಸಿ ,ಸಾಹಿತ್ಯ ಎಂಬ ಶ್ರೀಮಂತಿಕೆಯನ್ನು ತನ್ನದಾಗಿಸಿಕೊಂಡು, ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಲೋಹಿಯಾ, ಮೊದಲಾದವರ, ಇವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸುವುದರ ಮೂಲಕ ಶೋಷಿತ ಸಮುದಾಯಗಳ ಬಹುದೊಡ್ಡ ಜಾಗೃತಿಯ ಧ್ವನಿಯಾಗಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಭಾಷಣಕಾರರಾಗಿ, ಬರಹಗಾರರಾಗಿ, ಸಾಹಿತ್ಯದ ಕೃಷಿಯನ್ನು ಕೈಗೊಂಡು ನಾಟಕಗಳಾದ ಏಕಲವ್ಯ, ನೆಲಸಮ, ಪಂಚಮ ಹಾಗೂ ಕೃತಿಗಳಾದ ಗ್ರಾಮದೇವತೆಗಳು, ಹೊಲೆಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪುಕಾಡಿನ ಹಾಡು, ಆಯ್ದ ಕವಿತೆಗಳು, ನನ್ನ ಜನಗಳು ಹೀಗೆ ಹತ್ತು ಹಲವು ಕೃತಿಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು. ಇವರ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ, ಪಂಪ ಪ್ರಶಸ್ತಿ,ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.

ಯುವ ಬರಹಗಾರರಾದ ರಾಜು. ಟಿ ಮಾತನಾಡಿ ಡಾ. ಸಿದ್ದಲಿಂಗಯ್ಯ ಅವರನ್ನು ಸರ್ಕಾರ ಮರಣೋತ್ತರ ರಾಷ್ಟ್ರಕವಿಯಾಗಿ ಘೋಷಿಸಬೇಕು ಹಾಗೂ ಅವರ ಪುತ್ಥಳಿಯನ್ನು ನಿರ್ಮಿಸಿ ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಿ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಹಾಗೂ ಸಿದ್ದಲಿಂಗಯ್ಯ ಅವರು 2007 ರಲ್ಲಿ ಮೊಳಕಾಲ್ಮುರುವಿಗೆ ಅಶೋಕನ ಶಿಲಾಶಾಸನಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದರು, ಇವರ ಕೃತಿಗಳು 7 ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ರಾದ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಮಾತನಾಡಿ ಸಿದ್ದಲಿಂಗಯ್ಯ ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು, ಜೊತೆಗೆ ಅವರೆಲ್ಲ ಹೋರಾಟದ ಹಾದಿಗಳನ್ನು ಗಮನಿಸಿ ದಮನಿತರ, ದುರ್ಬಲರ ಪರವಾಗಿ ನಾವೆಲ್ಲರೂ ಇಂದು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು. ಈ ಕಾರ್ಯಕ್ರಮದಲ್ಲಿ ಆಯೋಜಕರಾದ ಎಸ್. ಪರಮೇಶ್, ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕರಾದ ಕೊಂಡಪುರ ಪರಮೇಶ್ವರಪ್ಪ, ಓ ಕರಿಬಸಪ್ಪ, ಸಾಹಿತಿಗಳಾದ ಲೋಕೇಶ್ ಪಲ್ಲವಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಬೆಳಗಲ್ ಈಶ್ವರಯ್ಯ, ಜಿಲ್ಲಾ ಕಾರ್ಯದರ್ಶಿ ಮರ್ಲಹಳ್ಳಿ ರವಿಕುಮಾರ್, ರಾಂಪುರ ಬಸವರಾಜಪ್ಪ, ನಾಗರಾಜ್, ಮಂಜಣ್ಣ, ನಿಂಗಣ್ಣ, ಅನಿಲ್ ಕುಮಾರ್, ಇನ್ನು ಮುಂತಾದವರು ಉಪಸ್ಥಿತರಿದ್ದರು.

ವರದಿ, ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend