800 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‍ಗೆ ಉಸ್ತುವಾರಿ ಸಚಿವರಿಂದ ಚಾಲನೆ…!!!

Listen to this article

800 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‍ಗೆ ಉಸ್ತುವಾರಿ ಸಚಿವರಿಂದ ಚಾಲನೆ.
ದಾವಣಗೆರೆ, ಮೇ31:
ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 800 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‍ನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಲೋಕಾರ್ಪಣೆಗೊಳಿಸಿದರು.
ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಸಚಿವರಾದ ಬಿ.ಎ.ಬಸವರಾಜ್ ಮಾತನಾಡಿ, ಈ ಕೋವಿಡ್ ಕೇರ್ ಸೆಂಟರ್‍ನ ಉಪಯೋಗ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ ಜನತೆಗೆ ದೊರೆಯುವಂತಾಗಬೇಕು. ಯಾವುದೇ ರೋಗ ಲಕ್ಷಣ ಕಂಡು ಬಂದ ತಕ್ಷಣ ಸೋಂಕಿತರು ಮನೆಗಳಲ್ಲೆ ಐಸೋಲೇಷನ್ ಆಗದೇ ಕೋವಿಡ್ ಸೆಂಟರ್‍ಗಳಿಗೆ ಬರಬೇಕು. ಇದರಿಂದ ಉತ್ತಮ ಆರೈಕೆ ಹಾಗೂ ಚಿಕಿತ್ಸೆ ದೊರೆತು ಸೋಂಕಿತರು ಬಹು ಬೇಗ ಗುಣಮುಖರಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈ ತಾಲ್ಲೂಕಿನ ಶಾಸಕರಾದ ರೇಣುಕಾಚಾರ್ಯರವರು ಕಾರ್ಯ ಶ್ಲಾಘನೀಯ ಎಂದರು.
ಶಾಸಕರು ದಣಿವರಿಯದೇ ತಾಲ್ಲೂಕಿನಾದ್ಯಂತ ಸಂಚರಿಸಿ ಸೋಂಕಿತರಲ್ಲಿ ಮನೋಸ್ಥೈರ್ಯ ಹೆಚ್ಚಿಸುತ್ತಿದ್ದಾರೆ. ಇವರಿಗೆ ಜಿಲ್ಲಾಡಳಿತವು ಸಂಪೂರ್ಣ ಬೆಂಬಲ ನೀಡುತ್ತಿದ್ದು, ಉತ್ತಮ ಕಾರ್ಯ ತಾಲ್ಲೂಕಿನಲ್ಲಿ ಆಗುತ್ತಿದೆ. ಮತ್ತು ತಾಲ್ಲೂಕು ಆಡಳಿತ ಹಾಗೂ ಅಧಿಕಾರಿಗಳು ಬಹುವಾಗಿ ಶ್ರಮಿಸುತ್ತಿದ್ದಾರೆ. ಇದರಿಂದ ಸೋಂಕಿನ ಪ್ರಮಾಣವು ಕಡಿಮೆಯಾಗಲು ಸಹಕಾರಿಯಾಗಲಿದೆ ಎಂದರು.
ಮಾನ್ಯ ಮುಖ್ಯಮಂತ್ರಿಗಳಲ್ಲಿ ಇನ್ನು ಒಂದು ವಾರ ಅಥವಾ 15 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸಲು ಪ್ರಸ್ತಾಪಿಸುತ್ತೇನೆ ಎಂದ ಅವರು ಎರಡನೇ ಅಲೆ ಪ್ರಾರಂಭವಾದಾಗಿನಿಂದ ವಾರದಲ್ಲಿ ಎರಡು ದಿನ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಿ ಎಲ್ಲಾ ತಾಲ್ಲೂಕುಗಳ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇನೆ ಎಂದರು.
ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಮೊದಲ ಅಲೆ ಆರಂಭವಾದಾಗಿನಿಂದ ಎಲ್ಲರೊಳಗೂಡಿ ಕೋವಿಡ್ ನಿಯಂತ್ರಣಕ್ಕೆ ಅನೇಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಅಧಿಕಾರಿಗಳ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಫುಡ್ ಕಿಟ್ ನೀಡಲಾಗಿದೆ. ಹಾಗೂ 10 ಸಾವಿರ ಜನರಿಗೆ ಎರಡು ಹೊತ್ತು ಊಟ, 8 ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹಾಗೂ ಪ್ರತಿ ಹಳ್ಳಿಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಕೋವಿಡ್ ಕೇರ್ ಸೆಂಟರ್‍ನ್ನು 48 ತಾಸುನೊಳಗೆ ಸುಸಜ್ಜಿತ ಆರೈಕೆ ಕೇಂದ್ರವನ್ನಾಗಿ ಮಾಡಲಾಗಿದೆ. ರಸ್ತೆ, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ, ಒಳ ಚರಂಡಿ ಎಲ್ಲವನ್ನು ಯುದ್ದೋಪಾದಿಯಲ್ಲಿ ಮಾಡಲಾಗಿದ್ದು ಒಂದು ಉತ್ತಮ ಸುಸಜ್ಜಿತ ಕೇಂದ್ರವಾಗಿದೆ. ಇಲ್ಲಿ ದಾಖಲಾಗಿರುವ ಎಲ್ಲರನ್ನು ಮನೆ ಮಕ್ಕಳಂತೆ ನೋಡಿಕೊಳ್ಳಲಾಗಿತ್ತಿದೆ ತಾಲ್ಲೂಕಿನಲ್ಲಿ 4 ಕೋವಿಡ್ ಕೇರ್ ಸೆಂಟರ್‍ಗಳಿದ್ದು, ಜನರು ಮನೆಯಲ್ಲಿ ಚಿಕಿತ್ಸೆ ಪಡೆಯದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಕೋವಿಡ್ ಕೇರ್ ಸೆಂಟರ್ಗಳಲ್ಲಿ ಆಶ್ರಯ ಪಡೆದಲ್ಲಿ ಮಾತ್ರ ಸೋಂಕು ಹರಡುವುದನ್ನು ತಡೆಗಟ್ಟಬಹುದು. 50 ಬೆಡ್‍ಗಳ ಹೊನ್ನಾಳಿ ತಾಲ್ಲೂಕು ಆಸ್ಪತ್ರೆಯನ್ನು 200 ಬೆಡ್‍ಗಳ ಆಸ್ಪತ್ರೆಯನ್ನಾಗಿ, 30 ಬೆಡ್‍ಗಳ ನ್ಯಾಮತಿ ಆಸ್ಪತ್ರೆಯನ್ನು 100 ಬೆಡ್‍ಗಳ ಆಸ್ಪತ್ರೆಯನ್ನಾಗಿ ಉನ್ನತೀಕರಿಸಲಾಗುತ್ತಿದೆ. ಅವಳಿ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಬೆಡ್ ಕೊರತೆ ಉಂಟಾಗಿಲ್ಲ ಎಂದರು.
ತಾಲ್ಲೂಕಿಗೆ 4 ಅಡ್ವಾನ್ಸ್ಡ್ ಲೈಫ್ ಆಂಬುಲೆನ್ಸ್‍ಗಳನ್ನು ನೀಡಲಾಗಿದ್ದು, 70 ಆಕ್ಸಿಜೆನ್ ವೆಂಟಿಲೇಟರ್‍ಗಳಿವೆ. 1 ಕೋಟಿ ವೆಚ್ಚದಲ್ಲಿನ ಆಕ್ಸಿಜನ್ ಘಟಕಕ್ಕೆ ಚಾಲನೆ ನೀಡಿದ್ದು ಮೊದಲ ಕಂತಿನ 50 ಲಕ್ಷ ಹಣವನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಹೊಳೆ ಮೇಲಿನ ಕೆರೆಗಳನ್ನು ತುಂಬಿಸಲು 48 ಕೋಟಿ ಅನುದಾನ, ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲು 68 ಕೋಟಿ ಬಿಡುಗಡೆಯಾಗಿದೆ. ಸರ್ಕಾರವು ಜನರನ್ನು ರಕ್ಷಿಸುವುದರ ಜೊತೆಗೆ ಅಭಿವೃದ್ಧಿ ಕಾರ್ಯವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಮೂರನೇ ಅಲೆ ಎದುರಿಸಲು ಸರ್ಕಾರ, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಸಿದ್ದರಾಗಿದ್ದು ಜನರ ಸಹಕಾರ ಅಗತ್ಯವಾಗಿದೆ. ಮೊದಲನೆ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಹಿರಿಯ ನಾಗರೀಕರಿಗೆ, ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಹಾಗೂ 4 ನೇ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಜನರು ಯಾವುದೇ ಅಪಪ್ರಚಾರಕ್ಕೆ ಮನ್ನಣೆ ಕೊಡದೇ ಕಡ್ಡಾಯವಾಗಿ ಲಸಿಕೆಯನ್ನು ಪಡೆಯಬೇಕು ಆದಲ್ಲಿ ಮಾತ್ರ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಾಸ್ತಾವಿಕವಾಗಿ ಮಾತನಾಡಿ, 800 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸುತ್ತಿರುವುದರಿಂದ ಕೋವಿಡ್ ವಿರುದ್ಧ ಹೋರಾಡಲು ನಮಗೆ ಆನೆ ಬಲ ಬಂದಿದೆ. ನಮ್ಮ ಅಧಿಕಾರಿಗಳು ಮತ್ತು ಆರೋಗ್ಯ ಸಿಂಬಂದಿಗಳು ಹೋಮ್ ಐಸೋಲೇಟ್ ಆಗಿರುವ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸುತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 4773 ಸಕ್ರಿಯ ಸೋಂಕಿತರ ಪ್ರಕರಣಗಳಿದ್ದು, 897 ಸೋಂಕಿತರು ಆಸ್ಪತ್ರೆಗಳಲ್ಲಿ, 196 ಸೋಂಕಿತರು ತಾಲ್ಲೂಕು ಆಸ್ಪತ್ರೆಗಳಲ್ಲಿ, 1153 ಸೋಂಕಿತರು ಕೋವಿಡ್ ಕೇರ್ ಸೆಂಟರ್ ಮತ್ತು 2527 ಜನ ಸೋಂಕಿತರು ಹೋಮ್ ಐಸೊಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ 3422 ಪ್ರಕರಣಗಳು ದಾಖಲಾಗಿದ್ದು 2089 ಜನ ಸೋಂಕಿತರು ಬಿಡುಗಡೆ ಹೊಂದಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 26 ಕೋವಿಡ್ ಕೇರ್ ಸೆಂಟರ್‍ಗಳಿವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉಪವಿಭಾಗ ಅಧಿಕಾರಿ ಮಮತಾ ಹೊಸಗೌಡರ್, ಡಿಎಚ್‍ಒ ಡಾ. ನಾಗರಾಜು, ತಹಶೀಲ್ದಾರ್ ಪಟ್ಟರಾಜ ಗೌಡ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು..

ವರದಿ. ರೇಖಾ, ಆರ್, ಲಿಂಗಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend