ಕೋವಿಡ್ ಮುಕ್ತಗೊಳಿಸುವಲ್ಲಿ ದಾವಣಗೆರೆ ಜಿಲ್ಲೆ ಮಾದರಿಯಾಗಲಿ  ಎಸ್.ಆರ್.ಉಮಾಶಂಕರ್…!!!

Listen to this article

ಗೇಮ್ ಚೇಂಜರ್ ಆದ ಲಸಿಕಾಕರಣಕ್ಕೆ ಯೋಜನೆ ರೂಪಿಸಿ
ಕೋವಿಡ್ ಮುಕ್ತಗೊಳಿಸುವಲ್ಲಿ ದಾವಣಗೆರೆ ಜಿಲ್ಲೆ ಮಾದರಿಯಾಗಲಿ  ಎಸ್.ಆರ್.ಉಮಾಶಂಕರ್
ದಾವಣಗೆರೆ, ಮೇ28
ಕೋವಿಡ್ ಮುಕ್ತವಾಗಿಸುವ ಹಾದಿಯಲ್ಲಿ ದಾವಣಗೆರೆ ಜಿಲ್ಲೆ ಇತರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಜಿಲ್ಲಾ ಮತ್ತು ತಾಲ್ಲೂಕು ತಂಡಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಹಾಗೂ ಗೇಮ್ ಚೇಂಜರ್ ಎಂದೇ ಪರಿಗಣಿಸಲಾದ ಲಸಿಕಾಕರಣವನ್ನು ಯೋಜಿತ ರೀತಿಯಲ್ಲಿ ಮಾಡಿ ಯಶಸ್ಸು ಸಾಧಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ಕಿವಿಮಾತು ಹೇಳಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾ ತಂಡ ಉತ್ತಮವಾಗಿ ತಯಾರಿ ಮಾಡಿಕೊಂಡಿದೆ. ಅದೇ ರೀತಿಯಲ್ಲಿ ತಾಲ್ಲೂಕು ತಂಡಗಳು ಸಹ ತಯಾರಿ ಮಾಡಿಕೊಂಡು ಕೈಜೋಡಿಸಿದಲ್ಲಿ ಜಿಲ್ಲೆ ಕೊರೊನಾ ಮುಕ್ತವಾಗಿ, ಮಾದರಿ ಜಿಲ್ಲೆಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದರು.
ಲಸಿಕೆ – ಗೇಮ್ ಚೇಂಜರ್ : ಕೋವಿಡ್ ಲಸಿಕೆ ಗೇಮ್ ಚೇಂಜರ್ ಆಗುವುದರಲ್ಲಿ ಅನುಮಾನವಿಲ್ಲ. ಹೆಚ್ಚೆಚ್ಚು ಲಸಿಕಾಕರಣವಾದಷ್ಟು ಕೊರೊನಾ ಮುಕ್ತರಾಗಲು ಸಾಧ್ಯವಿದೆ. ಆದ ಕಾರಣ ಟಾರ್ಗೆಟೆಡ್ ಸಮುದಾಯಗಳಾದ ಆರೋಗ್ಯ, ಫ್ರಂಟ್‍ಲೈನ್ ವರ್ಕರ್ಸ್ ಹಾಗೂ ಇ-ಕಾಮರ್ಸ್ ಡೆಲಿವರಿ ಬಾಯ್ಸ್, ಆಟೋ ಮತ್ತು ಟ್ಯಾಕ್ಸಿ ಡ್ರೈವರ್‍ಗಳು ಈ ರೀತಿ ಸೇವಾನಿರತರಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲು ಯೋಜನೆ ಹಾಕಿಕೊಳ್ಳಬೇಕು.
ಈಗ ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿದೆ. ಮುಂದಿನ ದಿನಗಳಲ್ಲಿ ಲಸಿಕೆ ಪೂರೈಕೆ ಸಮರ್ಪಕವಾಗಿ ಆಗುವ ನಿರೀಕ್ಷೆ ಇದ್ದು ಈಗಿನಿಂದಲೇ ಲಸಿಕೆ ಹಾಕುವ ಬಗ್ಗೆ ಯೋಜನೆ ರೂಪಿಸಿಕೊಂಡು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕುಗಳ ತಹಶೀಲ್ದಾರರು, ಇಓ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ಗ್ರಾಮೀಣ ಮಟ್ಟದಲ್ಲಿ ಮತ್ತು ನಗರ ಭಾಗದಲ್ಲಿ ಟಾಸ್ಕ್‍ಫೋರ್ಸ್ ತಂಡಗಳನ್ನು ಚುರುಕುಗೊಳಿಸಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಗೊಳಿಸಬೇಕು. ಹೊನ್ನಾಳಿ ಸೇರಿದಂತೆ ಇತರೆ ತಾಲ್ಲೂಕುಗಳಲ್ಲಿ ಶಾಸಕರು ಮತ್ತು ಜನಪ್ರತಿನಿಧಿಗಳ ಸಹಕಾರ ಉತ್ತಮವಾಗಿದೆ. ಆದರೆ ಕೋವಿಡ್ ನಿಯಮಾವಳಿ ಪ್ರಕಾರವೇ ರೋಗಿಗಳನ್ನು ಉಪಚರಿಸಬೇಕು ಎಂದು ಸೂಚನೆ ನೀಡಿದರು.
ಹೋಂ ಐಸೊಲೇಷನ್ ಸೂಕ್ತವಲ್ಲ: ಗ್ರಾಮೀಣ ಪ್ರದೇಶಗಳಲ್ಲಿ ಕ್ಷಿಪ್ರಗತಿಯಲ್ಲಿ ಸೋಂಕು ಹರಡುತ್ತಿದೆ. ಅವರು ಹೋಂ ಐಸೊಲೇಷನ್ ನಿಯಮಗಳನ್ನು ಪಾಲಿಸದೇ ಇಡೀ ಮನೆ ಮತ್ತು ಸುತ್ತಮುತ್ತಲಿನವರಿಗೆ ಹರಡುತ್ತಿದ್ದಾರೆ. ಆದ ಕಾರಣ ತಹಶೀಲ್ದಾರ್, ಇಓ ಸೇರಿದಂತೆ ತಾಲ್ಲೂಕು ತಂಡ ಪಾಸಿಟಿವ್ ಇರುವವರ ಮನೆಗಳಿಗೆ ತೆರಳಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಬೇಕು ಎಂದು ಸೂಚನೆ ನೀಡಿದ ಅವರು ನಗರ ಪ್ರದೇಶದ ಎಲ್ಲ ಸೌಕರ್ಯ ಇರುವ ಮನೆಗಳಲ್ಲೂ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಿಸಿಸಿ ಗೆ ದಾಖಲಿಸಲು ಸೂಚನೆ ನೀಡಿದರು.
ಅನುಕೂಲ ಇರುವವರಿಗೆ ಖಾಸಗಿ ಆಸ್ಪತ್ರೆಗಳು ಲಾಡ್ಜ್‍ನಲ್ಲಿ ಕೋವಿಡ್ ಆರೈಕೆ ವ್ಯವಸ್ಥೆ ಮಾಡಬಹುದು. ಈ ನಿಟ್ಟಿನಲ್ಲಿ ಚಿಂತಿಸಿದರೆ ಕೋವಿಡ್ ಇಳಿಮುಖ ಆಗುವ ಸಾಧ್ಯತೆ ಇದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ದಾವಣಗೆರೆ ನಗರ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿ ಇನ್ನು ಎರಡು ವಾರಗಳಲ್ಲಿ ಕೋವಿಡ್ ಸಂಪೂರ್ಣ ಇಳಿಮುಖಗೊಳಿಸಲು ತಹಶೀಲ್ದಾರರು ಮತ್ತು ಇತರ ಅಧಿಕಾರಿಗಳು ಏನೆಲ್ಲಾ ಕ್ರಮ ಕೈಗೊಂಡಿದ್ದಾರೆಂಬ ಬಗ್ಗೆ ಪರಿಶೀಲನೆ ನಡೆಸಿದ ಅವರು ತಾಲ್ಲೂಕುಗಳಲ್ಲಿ ಸಕ್ರಿಯ ಪ್ರಕರಣಗಳು ಇಲ್ಲದ ಗ್ರಾಮಗಳನ್ನು ಸಂರಕ್ಷಿಸುವ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ಹಾಗೂ ದಿನೇ ದಿನೇ ಕೋವಿಡ್ ಮುಕ್ತ ಗ್ರಾಮಗಳನ್ನಾಗಿ ಮಾಡುವಲ್ಲಿ ಗ್ರಾಮಸ್ಥರಾದಿಯಾಗಿ ಎಲ್ಲರೂ ಶ್ರಮಿಸಬೇಕು.
ಮನುಕುಲಕ್ಕೇ ಸವಾಲಾಗಿರುವ ಈ ಕೋವಿಡ್‍ನಿಂದ ಆಚೆ ಬರಬೇಕಿದೆ. ಎಲ್ಲರೂ ಪರಿಶ್ರಮದಿಂದ ಪ್ರಾಮಾಣಿಕ ಪ್ರಯತ್ನ ಮಾಡಿ, ನಿತ್ಯ ಅನುಸರಣೆ ಮಾಡಿ ಕೋವಿಡ್‍ನಿಂದ ಹೊರಬರಲು ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಅಲ್ಪಕಾಲ ಮದುವೆ ನಿಷೇಧದ ಚಿಂತನೆ : ಮಾರ್ಗಸೂಚಿಗಳಾಚೆ ಮದುವೆಗಳು ಸೋಂಕು ಹರಡುವಿಕೆಗೆ ಕಾರಣವಾಗಿವೆ. ಈಗಾಗಲೇ ನಿಗದಿಯಾದ, ನಡೆಯುತ್ತಿರುವ ಮದುವೆಗಳನ್ನು ನಿಲ್ಲಿಸುವುದು ಕಷ್ಟ. ಆದ ಕಾರಣ ಜೂನ್ 5 ರ ನಂತರ 15 ದಿನಗಳ ಕಾಲ ಮದುವೆಗಳನ್ನು ನಿಷೇಧ ಮಾಡಿದಲ್ಲಿ ಸೋಂಕು ನಿಯಂತ್ರಣಕ್ಕೆ ತರಬಹುದೆಂಬ ಬಗ್ಗೆ ತಹಶೀಲ್ದಾರರ ಸಲಹೆ ಪಡೆದ ಅವರು ಜಿಲ್ಲಾಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸುವಂತೆ ಸೂಚಿಸಿದರು.
ವಾರದಲ್ಲಿ ಮೂರು ದಿನ ಸಂಪೂರ್ಣ ಬಂದ್ ಚಿಂತನೆ : ವಾರದಲ್ಲಿ 2 ರಿಂದ 3 ದಿನ ಬೆಳಿಗ್ಗೆ 6 ರಿಂದ 12 ಗಂಟೆವರೆಗೆ ದಿನಸಿ, ತರಕಾರಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿ ಇನ್ನುಳಿದ ದಿನಗಳಂದು ಹಾಲು ಒಂದನ್ನು ಹೊರತುಪಡಿಸಿ ಸಂಪೂರ್ಣ ಬಂದ್ ಮಾಡುವ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ಚಿಂತನೆ ನಡೆಸುವಂತೆ ತಿಳಿಸಲಾಗಿದೆ ಎಂದರು.
ದಾವಣಗೆರೆ ನಗರದಲ್ಲೂ ಹೆಚ್ಚು ಪ್ರಕರಣಗಳು ಇದ್ದು, ಸೋಂಕು ತಗ್ಗಿಸಲು ಕೋವಿಡ್ ಕೇರ್ ಸೆಂಟರ್‍ಗಳ ಬಳಕೆ ಹೆಚ್ಚಿಸಬೇಕು. ಇನ್ನು ಮುಂದೆ ಸೋಂಕು ಹೆಚ್ಚು ಹರಡದಂತೆ ಕ್ರಮ ವಹಿಸಬೇಕು. ಶೀಘ್ರ ಪರೀಕ್ಷೆ ಮತ್ತು ಚಿಕಿತ್ಸೆ ಹಾಗೂ ಹರಡದಂತೆ ಸಿಸಿಸಿ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು. ಟಾರ್ಗೆಟೆಡ್ ಗುಂಪಿಗೆ ಲಸಿಕಾಕರಣದ ಯೋಜನೆ ಮಾಡಿಕೊಂಡು ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸುವಲ್ಲಿ ಪರಿಣಾಮಕಾರಿ ಕ್ರಮ ವಹಿಸಬೇಕೆಂದು ತಿಳಿಸಿದರು. ಜಿಲ್ಲಾ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಇದೇ ರೀತಿ ತಾಲ್ಲೂಕು ಮಟ್ಟ ಹಾಗೂ ಗ್ರಾಮೀಣ ಮಟ್ಟದಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಕೋವಿಡ್‍ನ್ನು ಜಯಿಸಬೇಕೆಂದು ಸಲಹೆ, ಸೂಚನೆಗಳನ್ನು ನೀಡಿದರು.

ಕೋವಿಡ್ ಪಾಸಿಟಿವ್ ಇರುವವರ ಮನೆ ಮುಂದೆ ಪೋಸ್ಟರ್ ಅಂಟಿಸಿ…
ಮುಂದಿನ ಎರಡು ವಾರಗಳ ಕಾಲ ಗಂಭೀರವಾಗಿ ಪರಿಶ್ರಮ ಪಟ್ಟು ಕೋವಿಡ್ ನಿಯಂತ್ರಿಸಲು ಯತ್ನಿಸಿದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲಿದೆ. ಆದ ಕಾರಣ ಕೋವಿಡ್ ಪಾಸಿಟಿವ್ ಬಂದವರ ಮನೆಗಳನ್ನು ಸೀಲ್‍ಡೌನ್ ಮಾಡಬಹುದು ಅಥವಾ ದೊಡ್ಡದಾಗಿ ಪೋಸ್ಟರ್ ಅಂಟಿಸುವ ಕೆಲಸ ಆಗಬೇಕು. ಆಗ ಅವರಿಂದ ಇತರರಿಗೆ ಸೋಂಕು ಹರಡುವುದು ತಪ್ಪುತ್ತದೆ. ಯಾರೂ ಕೂಡ ಕೋವಿಡ್ ಸೋಂಕಿನ ಕುರಿತು ವೈಯಕ್ತಿಕ ನಿರ್ಧಾರ ಕೈಗೊಳ್ಳುವುದು ಬೇಡ. ಸೋಂಕಿತರು, ಅವರ ಸಂಪರ್ಕಿತರು, ಎಸ್‍ಎಆರ್‍ಐ ಮತ್ತು ಐಎಲ್‍ಐ ಲಕ್ಷಣ ಇರುವವರಿಗೆ ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಿಸಿ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಇರಿಸಿ ಚಿಕಿತ್ಸೆ ನೀಡಬೇಕು.

ಎಸ್.ಆರ್.ಉಮಾಶಂಕರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಕ್ಸಿಜನ್ ಮತ್ತು ಬೆಡ್ ಕೊರತೆ ಇಲ್ಲ. ಹೋಂ ಐಸೊಲೇಷನ್ ಬದಲಾಗಿ ಕೋವಿಡ್ ಕೇರ್ ಸೆಂಟರ್‍ಗೆ ಬರಲು ಮನವೊಲಿಸಿ ಕರೆತರಲಾಗುತ್ತಿದೆ. ಇನ್ನೂ ಹೆಚ್ಚಿನ ಶ್ರಮ ವಹಿಸಿ ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ. ಸಿಇಓ ಡಾ.ವಿಜಯ ಮಹಾಂತೇಶ ಬಿ.ದಾನಮ್ಮನವರ್, ಎಡಿಸಿ ಪೂಜಾರ ವೀರಮಲ್ಲಪ್ಪ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಸ್‍ಎಲ್‍ಓ ರೇಷ್ಮಾ ಹಾನಗಲ್ ಡಿಹೆಚ್‍ಓ ಡಾ.ನಾಗರಾಜ್, ಡಿಎಸ್ ಡಾ.ಜಯಪ್ರಕಾಶ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ವರದಿ.ರೇಖಾ,ಆರ್, ಲಿಂಗಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend