ಆಸ್ಪತ್ರೆ, ಮಾಲ್, ಕಾರ್ಖಾನೆ ಮತ್ತಿತರೆಡೆ ಇರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಸಮೀಕ್ಷೆಗೆ ಕ್ರಮ- ಎಂ. ಶಿವಣ್ಣ…!!!

Listen to this article

ಆಸ್ಪತ್ರೆ, ಮಾಲ್, ಕಾರ್ಖಾನೆ ಮತ್ತಿತರೆಡೆ ಇರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಸಮೀಕ್ಷೆಗೆ ಕ್ರಮ- ಎಂ. ಶಿವಣ್ಣ

ದಾವಣಗೆರೆ
ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ವಿವಿಧ ಬಗೆಯ ಮಾಲ್‍ಗಳು, ಕಾರ್ಖಾನೆ ಸೇರಿದಂತೆ ವಿವಿಧೆಡೆ ಇರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳ ಸಮೀಕ್ಷೆಗೆ ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರು ಹೇಳಿದರು.
ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು 2013 ರಲ್ಲಿಯೇ ಸಂಪೂರ್ಣ ನಿಷೇಧಿಸಲಾಗಿದ್ದರೂ, ರಾಜ್ಯದಲ್ಲಿ ಇನ್ನೂ ಅಲ್ಲಲ್ಲಿ ನಡೆಯುತ್ತಿರುವುದು ದುರ್ದೈವ. ರಾಜ್ಯದಲ್ಲಿ ಒಟ್ಟು 5080 ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳನ್ನು ಗುರುತಿಸಲಾಗಿದ್ದು, ನಿಯಮಾನುಸಾರ ಇವರಿಗೆ ಪರಿಹಾರ ಹಾಗೂ ಪುನರ್ವಸತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಸರ್ವೆ ಕಾರ್ಯ ರಾಜ್ಯದ 12 ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಇನ್ನೂ 18 ಜಿಲ್ಲೆಗಳಲ್ಲಿ ಆಗಬೇಕಿದೆ. ಪಂಚಾಯತಿಗಳಲ್ಲಿ, ಪುರಸಭೆ, ನಗರಸಭೆ, ಮಹಾನಗರಪಾಲಿಕೆ ಮುಂತಾದೆಡೆ ಕೆಲಸ ಮಾಡುತ್ತಿರುವವರ ನಿಖರ ಸಂಖ್ಯೆ ಇದೆ. ಆದರೆ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು, ವಿವಿಧ ಮಾಲ್‍ಗಳು, ಕಾರ್ಖಾನೆ ಸೇರಿದಂತೆ ಹಲವೆಡೆ ಇರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್‍ಗಳ ಮಾಹಿತಿ ಇಲ್ಲ. ಹೀಗಾಗಿ ಇಂತಹವರಿಗೆ ಸರ್ಕಾರದ ಸೌಲಭ್ಯ ಇನ್ನೂ ದೊರಕಿಲ್ಲ. ಶೀಘ್ರದಲ್ಲಿಯೇ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೆ ಮೈಸೂರು, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸರ್ವೆ ನಡೆಸಿ, ವರದಿ ಸಲ್ಲಿಸುವ ಕಾರ್ಯವನ್ನು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಅವರಿಗೆ ವಹಿಸಲಾಗಿದೆ. ಈ ವರದಿಯ ಬಳಿಕ ಇಡೀ ರಾಜ್ಯದಲ್ಲಿ ಸರ್ವೆ ಕಾರ್ಯ ನಡೆಸಲಾಗುವುದು. ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ನೇಮಕದಲ್ಲಿ ರೋಸ್ಟರ್ ಪಾಲನೆ ಕುರಿತಂತೆ ಸಮಸ್ಯೆ ಇದೆ. ಶೀಘ್ರದಲ್ಲಿಯೇ ಸಮಾಜ ಕಲ್ಯಾಣ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸಲಾಗುವುದು. ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಜರುಗಿದ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಬಂಧಪಟ್ಟ ಅಧಿಕಾರಿಗಳು ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ. ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ, ಅವರ ವಿರುದ್ಧ ಶೀಘ್ರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಿವಣ್ಣ ಹೇಳಿದರು.
ದಾವಣಗೆರೆಯಲ್ಲಿ ಪೌರಕಾರ್ಮಿಕರಾಗಿ 380 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ಜನವರಿ ಅಂತ್ಯದ ವೇಳೆಗೆ ಅಥವಾ ಫೆಬ್ರವರಿ ಮೊದಲ ವಾರದೊಳಗೆ ಉದ್ಘಾಟನೆ ಮಾಡಲಾಗುವುದು. ಮ್ಯಾನುಯಲ್ ಸ್ಕ್ಯಾವೆಂಜರ್ಸ್, ಅಥವಾ ಅವರ ಅವಲಂಬಿತರÀಲ್ಲಿ ಯಾರಾದರೂ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ, ಅಂತಹವರಿಗೆ ಕಸ ವಿಲೇವಾರಿಯ ಆಟೋ ಟಿಪ್ಪರ್ ಚಾಲನೆಗೆ ನೇಮಿಸಿಕೊಳ್ಳುವಂತೆ, ಸುಲಭ ಶೌಚಾಲಯಗಳ ನಿರ್ವಹಣೆ ಹೊಣೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಶ್ರಯ ಸಮಿತಿಯಡಿ ನೀಡಲಾಗುವ ನಿವೇಶನ ಹಂಚಿಕೆ ಸಂದರ್ಭದಲ್ಲಿ ಪೌರಕಾರ್ಮಿಕರಿಗೂ ಇಂತಿಷ್ಟು ನಿವೇಶನಗಳನ್ನು ಮೀಸಲಿರಿಸಲು ಕೋರಿ, ಸಮಿತಿಯ ಅಧ್ಯಕ್ಷರಾಗಿರುವ ಆಯಾ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪೌರ ಕಾರ್ಮಿಕರಿಗೆ ತಪ್ಪದೆ ಬೆಳಗಿನ ಉಪಹಾರ ನೀಡುವುದು, ಗ್ಲೌಸ್, ಶೂ ಮುಂತಾದ ಸುರಕ್ಷತಾ ಸಾಧನ ಬಳಸುವುದನ್ನು ಕಡ್ಡಾಯಗೊಳಿಸಲು ಕೂಡ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಹೇಳಿದರು.
ಇದಕ್ಕೂ ಮುನ್ನ ಆಯೋಗದ ಅಧ್ಯಕ್ಷರು ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಶೀಘ್ರ ಸಮಸ್ಯೆಗಳ ಪರಿಹಾರದ ಆಶ್ವಾಸನೆ ನೀಡಿದರು. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸೇವಾ ಸಂಘದ ಜಿಲ್ಲಾಧ್ಯಕ್ ಎಸ್. ಶಂಕರ್, ಸಫಾಯಿ ಕರ್ಮಚಾರಿಗಳ ಕುಟುಂಬಗಳಿಗೆ ವಸತಿ ಸೌಲಭ್ಯ ನೀಡಬೇಕು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಸಾಲ ಸೌಲಭ್ಯ, ಪಶುಸಂಗೋಪನೆ ಇಲಾಖೆಯಲ್ಲಿ ಗ್ರೂಪ್ ಡಿ ಮತ್ತು ಗ್ರೂಪ್ ಸಿ ಹುದ್ದೆಗಳನ್ನು ನೀಡಬೇಕು, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 15-20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಫಾಯಿ ಕರ್ಮಚಾರಿಗಳಿಗೆ ಖಾಯಂ ಗೊಳಿಸಬೇಕು, ದಾವಣಗೆರೆ ವಿವಿ ಗೆ ಡಾ. ಬಿ.ಆರ್. ಅಂಬೇಡ್ಕರ್ ವಿವಿ ಎಂದು ನಾಮಕರಣ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದರು. ಸಾಗರ್ ಅವರು, ಸಫಾಯಿಕರ್ಮಚಾರಿಗಳು ಹೆಚ್ಚು ವಾಸವಿರುವ ಗಾಂಧಿನಗರದಲ್ಲಿ ಜಿಮ್ ಪಾರ್ಕ್ ಹಾಗೂ ಗ್ರಂಥಾಲಯ ನಿರ್ಮಾಣವಾಗಬೇಕು, ಪೌರಕಾರ್ಮಿಕರಿಗಾಗಿ ನಗರಪಾಲಿಕೆಯ ವಿವಿಧ ವಾರ್ಡ್‍ಗಳಲ್ಲಿ ವಿಶ್ರಾಂತಿಗೃಹ ನಿರ್ಮಾಣವಾಗಬೇಕು ಎಂದರು. ಹನುಮಂತಪ್ಪ ಅವರು, ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯ ಶೀಘ್ರ ದೊರೆಯಬೇಕು, ವಿನಾಕಾರಣ ವಿಳಂಬ ಮಾಡುವುದು ಸರಿಯಲ್ಲ ಎಂದರು. ಬಾಬಣ್ಣ ಅವರು, ಗ್ರಾಮೀಣ ಪ್ರದೇಶಗಳಲ್ಲೂ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳು ಇದ್ದು, ಈ ಬಗ್ಗೆ ಸಮೀಕ್ಷೆ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಸಿಇಒ ಡಾ. ವಿಜಯ ಮಹಾಂತೇಶ್, ಎಸ್‍ಪಿ ರಿಷ್ಯಂತ್ ಸಿ.ಬಿ., ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರಮಾ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೋಣೆಪ್ಪ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜಾಗೃತ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು..

ವರದಿ. ರಾಜು, ಎಂ, ದಾವಣಗೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend