ಭಾರತದ 73ನೇ ಗಣರಾಜ್ಯೋತ್ಸವ ದಿನಾಚರಣೆ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕ್ರಮ: ಸಚಿವ ಬಿ.ಸಿ.ಪಾಟೀಲ್…!!!

Listen to this article

ಭಾರತದ 73ನೇ ಗಣರಾಜ್ಯೋತ್ಸವ ದಿನಾಚರಣೆ
ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕ್ರಮ: ಸಚಿವ ಬಿ.ಸಿ.ಪಾಟೀಲ್
ಚಿತ್ರದುರ್ಗ,
ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ರೂ.1ಲಕ್ಷ ಕೋಟಿ ಹಾಗೂ ಆಹಾರ ಸಂಸ್ಕರಣೆಗೆ ರೂ.10 ಸಾವಿರ ಕೋಟಿ ನೀಡಲಾಗಿದ್ದು, ಇದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ 73ನೇ ಭಾರತ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಸಂದೇಶ ನೀಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರೈತರ ಬದುಕು ಸುಧಾರಣೆಯತ್ತ ಸಾಗುತ್ತಿದ್ದು, ರೈತರಿಗೆ ಸಂತಸದ ದಿನಗಳು ಬರುತ್ತಿವೆ. ಕೋವಿಡ್-19ರ ಸಂಕಷ್ಟದ ಸಂದರ್ಭದಲ್ಲಿಯೂ ದೇಶದ ಆರ್ಥಿಕ ಸ್ಥಿತಿ ಹಾಳಾಗದಂತೆ ನೋಡಿಕೊಂಡಿದ್ದು, ಕೋವಿಡ್-19 ಅನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಬಹುನಿರೀಕ್ಷಿತ  ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ 3.51 ಕೋಟಿ ಶಿಷ್ಯ ವೇತನವನ್ನು ನೀಡಲಾಗಿದೆ. ರೈತರಿಗೆ ಬೆಳೆ ನಷ್ಟ ಪರಿಹಾರ ವಿಚಾರವಾಗಿ ಬೆಳೆ ಸಮೀಕ್ಷೆ ಕಾರ್ಯವನ್ನು ಸಹ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ  327.17 ಕೋಟಿ ಹಣ ಜಮೆ ಮಾಡಿದ್ದು, ಅತಿವೃಷ್ಠಿಯಿಂದ ಉಂಟಾದ ಹಾನಿಗೆ ರೂ68.13 ಕೋಟಿ ಪರಿಹಾರ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯ ಜೀವನಾಡಿ ಹಾಗೂ ಮಹತ್ವಾಕಾಂಕ್ಷೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ಸಕಾರಗೊಳಿಸುವಲ್ಲಿ ಸರ್ಕಾರವು  ಕಟಿಬದ್ಧವಾಗಿದ್ದು, ಜಿಲ್ಲೆಯ ಕುಡಿಯುವ ನೀರು ಮತ್ತು  ಕೃಷಿ ಕ್ಷೇತ್ರಗಳಿಗೆ ಜೀವ ತುಂಬಿ ರೈತರ ಬಾಳನ್ನು ಹಸನಾಗಿಸಲು ಕ್ರಮವಹಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯು ಸುಮಾರು 119 ಕಿ.ಮೀ ಕಾಲುವೆ ಹಾದು ಹೋಗಲಿದ್ದು, ಅದರಲ್ಲಿ 58 ಕಿ.ಮೀ ಕಾಲುವೆಯ ಕಾಮಗಾರಿಯೂ ಪೂರ್ಣಗೊಂಡಿದೆ.  ಇದರಿಂದ ಜಿಲ್ಲೆಯ ಒಟ್ಟು 93 ಕೆರೆಗಳಿಗೆ ನೀರು ತುಂಬಿಸುವಂತಹ ಯೋಜನೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಮಣ್ಣಿನ ಗುಣ ಮತ್ತು ಮದಕರಿ ನಾಯಕ ಆಳಿದಂತಹ ಕೋಟೆಯ ಜನರ ಗುಣ ನನಗೆ ಗೊತ್ತಿದೆ. ಇದು ಕೋಟೆ, ಕಲ್ಲು ಬಂಡೆಗಳ ನಾಡಾಗಿದ್ದರೂ ಕೋಟನಾಡಿನ ಜನರ ಹೃದಯ ಮೃದು ಎಂದು ಸಂತಸ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆ ಸಿರಿಧಾನ್ಯಗಳಿಗೆ ಹೆಸರುವಾಸಿಯಾಗಿದೆ. ಈ ವರ್ಷದಲ್ಲಿ ಕೃಷಿ ಇಲಾಖೆ ರಾಜ್ಯಮಟ್ಟದಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ. 2023ರಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳವನ್ನು ಆಯೋಜಿಸಲು ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸ ಸಾಗರ ತುಂಬಿದ್ದು, ಭದ್ರಾ ಮೇಲ್ದಂಡೆ ಯೋಜನೆ ಜಿಲ್ಲೆಯ ಜನರಿಗೆ ವರದಾನವಾಗಿದೆ. ನೆಲ-ಜಲ-ಜನರ ರಕ್ಷಣೆಗೆ ರಾಜ್ಯಸರ್ಕಾರ ಬದ್ಧವಾಗಿದೆ ಎಂದರು.
ಆಕರ್ಷಕ ಪಥ ಸಂಚಲನ: ಭಾರತ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪ್ರೊಬೇಷನರಿ ಪೊಲೀಸ್ ಉಪಾಧೀಕ್ಷಕ ದಿನಕರ್ ಅವರು ಕವಾಯತು ಸಮಾದೇಷ್ಟರಾಗಿ ಕಾರ್ಯನಿರ್ವಹಿಸಿದರು.
ಪೊಲೀಸ್ ತುಕಡಿ, ಗೃಹ ರಕ್ಷಕ ದಳ, ಅಬಕಾರಿ ಇಲಾಖಾ ತುಕಡಿ, ಅರಣ್ಯ ಇಲಾಖಾ ತುಕಡಿ, ಎನ್‍ಸಿಸಿ ತುಕಡಿ ಹಾಗೂ ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳಿಂದ ಆಕರ್ಷಕ ಪಥ ಸಂಚಲನ ಜರುಗಿತು.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬ್ಯಾಂಡ್ ಮಾಸ್ಟರ್ ಸಿ. ಪಾಂಡುರಂಗ ಅವರ ನೇತೃತ್ವದಲ್ಲಿ ಪೊಲೀಸ್ ವಾದ್ಯವೃಂದ ಹಾಗೂ ಅಗಸನಕಲ್ಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಬ್ಯಾಂಡ್ ತಂಡಗಳು ಭಾಗವಹಿಸಿದ್ದವು.
ಸ್ನಾತಕ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ ಪದವಿಧರರಿಗೆ ಸನ್ಮಾನ: ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಡಳಿತ ವತಿಯಿಂದ 2020-21ನೇ ಸಾಲಿನ ಸ್ನಾತಕ ಪದವಿ ಪರೀಕ್ಷೆಯಲ್ಲಿ ಅತಿಹೆಚ್ಚು ರ್ಯಾಂಕ್ ಪಡೆದು ಚಿನ್ನದ ಪದಕ ಗಳಿಸಿದ ಎಸ್‍ಜೆಎಂ ಕಾಲೇಜಿನ ಸಿ.ಎಂ.ಚೈತನ್ಯ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆರ್.ಎಂ.ವಿದ್ಯುಲ್ಲತಾ, ಟಿ.ಸಿರೀಶಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಸನ್ಮಾನ: ಭಾರತ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಾದ ಮೆಹಬೂಬ್ ನಗರದಲ್ಲಿ ನಡೆದ 7ನೇ  ಕೆ.ಸಿ.ಆರ್. ನ್ಯಾಷಿನಲ್ ಲೆವಲ್ ಕರಾಟೆ ಚಾಂಪಿಯನ್ ಶಿಫ್‍ನಲ್ಲಿ ಭಾಗವಹಿಸಿದ ಪ್ರಥಮ ಸ್ಥಾನ ಪಡೆದ ಎಸ್.ಎಂ.ಸುದರ್ಶನ್, ಆಲ್ ಇಂಡಿಯಾ ಫೆಡ್‍ರೇಟೆಡ್ ರ್ಯಾಪಿಡ್ ಚೆಸ್ ಟೋರ್ನ್‍ಮೆಂಟ್ ರಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದ ಎಂ.ಎಸ್.ಸಿಂಚನ ಹಾಗೂ ಬೆಳವಾಡಿ, ಮಾಲುಂಗೆ, ಪುಣೆ ರಾಜ್ಯದಲ್ಲಿ ನಡೆದ ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೆರೇಷನ್‍ರಲ್ಲಿ ಭಾಗವಹಿಸಿ ತೃತೀಯ ಸ್ಥಾನಪಡೆದ ಹೆಚ್.ಹರ್ಷ ಅವರನ್ನು ಗೌರವಿಸಲಾಯಿತು.
ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದಲ್ಲಿ 15 ವರ್ಷ ಅಪಘಾತರಹಿತ ಮತ್ತು ಅಪರಾಧರಹಿತ ಮತ್ತು ಸಾರ್ವಜನಿಕ ದೂರುಗಳಲ್ಲಿ ಭಾಗಿಯಾಗದೆ ಕರ್ತವ್ಯಕ್ಕೆ ಗೈರುಹಾಜರಾಗದೇ ಉತ್ತಮವಾಗಿ ಸೇವೆ ಸಲ್ಲಿಸಿದ ವಾಹನ ಚಾಲಕರಾದ ಕರಿಬಸಪ್ಪ ಹಾಗೂ ಪಿ.ಕೆ.ಸುರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬದ್ರಿನಾಥ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು…

ವರದಿ. ಗಿರೀಜಾ, ಬಿ, ಜೆ, ಬೆಳ್ಳೆಕಟ್ಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend