ಚಳ್ಳಕೆರೆ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆಗೆ ಅದ್ದೂರಿ ಸ್ವಾಗತ ಕೋರಿದ ಶಾಸಕರಾದ ಟಿ ರಘುಮೂರ್ತಿ…!!

Listen to this article

ಚಳ್ಳಕೆರೆ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆಗೆ ಅದ್ದೂರಿ ಸ್ವಾಗತ ಕೋರಿದ ಶಾಸಕರಾದ ಟಿ ರಘುಮೂರ್ತಿ
ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಂಗಳವಾರ 12ನೇ ದಿನಕ್ಕೆ ಕಾಲಿಟ್ಟಿದೆ. ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆ ಗ್ರಾಮದಿಂದ ಮಂಗಳವಾರ ಬೆಳಿಗ್ಗೆ 7 ಗಂಟೆ ವೇಳೆಗೆ ಆರಂಭವಾದ ಪಾದಯಾತ್ರೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಣಿಕೆರೆ ಕಡೆಗೆ ಸಾಗಿತು. ಸಾಣಿಕೆರೆ ಗ್ರಾಮದಲ್ಲಿ ಒಂದಿಷ್ಟು ವಿಶ್ರಾಂತಿ ಪಡೆದ ನಂತರ ಅಲ್ಲಿಂದ ಚಳ್ಳಕೆರೆ ನಗರದತ್ತ ರಾಹುಲ್ ಗಾಂಧಿ ಅವರೊಂದಿಗೆ ಅಪಾರ ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಅಭಿಮಾನಿಗಳು ಹೆಜ್ಜೆ ಹಾಕಿದರು.
ಸೋಮವಾರ ಮತ್ತು ಮಂಗಳವಾರ ಬೆಳಿಗ್ಗೆ 11 ಗಂಟೆ ತನಕ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ನಡೆಸಿದ ರಾಹುಲ್ ಗಾಂಧಿ, ಸಮಾಜದ ನಿರ್ಲಕ್ಷಿತ ಸಮುದಾಯಗಳಾದ ಲಂಬಾಣಿ ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ ನಂತರ ಶೋಷಿತ ತಳ ಸಮುದಾಯಗಳಾದ ದಕ್ಕಲಿಗರು, ಸುಡುಗಾಡು ಸಿದ್ದರು, ದೊಂಬಿದಾಸರು, ಕೊರಮರು, ಹಂದಿ ಜೋಗಿ ಮುಂತಾದ ಸಮುದಾಯಗಳ ಪ್ರಮುಖರೊಂದಿಗೆ ಸಂವಾದ ನಡೆಸಿ, ಅವರ ದೈನಂದಿನ ಜೀವನದ ಸ್ಥಿತಿಗತಿಗಳು, ಕಷ್ಟ ನಷ್ಟಗಳ ಕುರಿತು ಸಮಾಲೋಚನೆ ನಡೆಸಿದರು.ಇದೇ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಉಳ್ಳೇರಹಳ್ಳಿಯಲ್ಲಿ ಬಹಿಷ್ಕಾರಕ್ಕೆ ಒಳಪಟ್ಟಿದ್ದ ದಲಿತ ಬಾಲಕ ಚೇತನ್ ಕುಟುಂಬ ಸಹ ಭಾಗಿಯಾಗಿತ್ತು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯಲ್ಲಿ ಸೆ. 22 ರಂದು ದಲಿತ ಬಾಲಕ ಚೇತನ್ ದೇವರ ಉತ್ಸವದ ಊರುಗೋಲು ಮುಟ್ಟಿದ್ದಕ್ಕೆ ಕುಟುಂಬದ ಮೇಲೆ ದೌರ್ಜನ್ಯ ಎಸಗಲಾಗಿತ್ತು. ಕಳೆದ ಸೆ.7 ರಂದು ಉಳ್ಳೇರಹಳ್ಳಿ ಗ್ರಾಮದ ಭೂತಮ್ಮ ದೇವರ ಉತ್ಸವ ಆಯೋಜನೆ ಮಾಡಲಾಗಿತ್ತು. ಈ ವೇಳೆ ಉತ್ಸವದ ಮೂರ್ತಿ ಹೊತ್ತು ತರುವ ವೇಳೆ ಕೈಜಾರಿ ಬಿದ್ದ ಉತ್ಸವ ಮೂರ್ತಿಯ ಗುಜ್ಜುಕೋಲ ಅಥವಾ ಊರುಗೋಲನ್ನು ಅದೇ ಗ್ರಾಮದ ದಲಿತ ಬಾಲಕ ಚೇತನ್​ ಎಂಬಾತ ಮುಟ್ಟಿ ಎತ್ತಿಕೊಟ್ಟಿದ್ದ. ಇದೇ ಕಾರಣಕ್ಕೆ ಗ್ರಾಮದ ಕೆಲವು ಹಿರಿಯರು ಆ ಬಾಲಕನನ್ನು ನಿಂದಿಸಿ ದಲಿತ ಜನಾಂಗಕ್ಕೆ ಸೇರಿದ ನೀನು ದೇವರ ಊರುಗೋಲು ಮುಟ್ಟಿ ಅಪಚಾರ ಮಾಡಿದ್ಯಾ ಎಂದು ಹೀಯಾಳಿಸಿದ್ದರು. ಜೊತೆಗೆ ಆ ಬಾಲಕ ತಂದೆ ರಮೇಶ್​ ಹಾಗೂ ತಾಯಿ ಶೋಭಾರನ್ನು ಕರೆಸಿ ಜಾತಿನಿಂದನೆ ಮಾಡಿ ಬೆದರಿಸಿದ್ದನ್ನು ಸ್ಮರಿಸಬಹುದಾಗಿದೆ. ಇಂತಹ ಶೋಷಿತ ಸಮುದಾಯಗಳ ಕಷ್ಟ ಸುಃಖಗಳನ್ನು ರಾಹುಲ್ ಗಾಂಧಿ ಆಲಿಸಿದರು.

ಸಾಣಿಕೆರೆಯಿಂದ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಆರಂಭ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸಾಣಿಕೆರೆ ಗ್ರಾಮದಿಂದ ಭಾರತ್ ಜೋಡೋ ಪಾದಯಾತ್ರೆಯನ್ನು ಮಂಗಳವಾರ ಮಧ್ಯಾಹ್ನ ಆರಂಭಿಸಲಾಯಿತು. ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು ಈ ಪಾದಯಾತ್ರೆಗೆ ನಿರೀಕ್ಷೆ ಮೀರಿದ ಜನಸ್ತೋಮ ಸೇರಿತ್ತು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಹತ್ತಾರು ಸಾವಿರ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಚಳ್ಳಕೆರೆ ಕ್ಷೇತ್ರದಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಸಾಣಿಕೆರೆ ಗ್ರಾಮದಿಂದ ರಾಹುಲ್ ಗಾಂಧಿಯೊಂದಿಗೆ ಚಳ್ಳಕೆರೆ ನಗರದತ್ತ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆಗೆ ಬಾರಿ ಜನ ಬೆಂಬಲ ವ್ಯಕ್ತವಾಯಿತು. ಪಾದಯಾತ್ರೆ ಉದ್ದಕ್ಕೂ ಸಾವಿರಾರು ಮಂದಿ ಕೈ ಕಾರ್ಯಕರ್ತರು ಭಾಗಿಯಾಗಿದ್ದರು.

ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಚಿವ ಎಚ್.ಆಂಜನೇಯ, ರಾಮನಾಥ ರೈ, ಪ್ರಿಯಾಂಕ ಖರ್ಗೆ ಸೇರಿ ಹಲವರು ಭಾಗಿಯಾಗಿದ್ದರು.

ಅಧ್ಯಕ್ಷ ಡಿಕೆಶಿ ಸುದ್ದಿಗೋಷ್ಠಿ.

ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರ ಜೊತೆ ಸಂವಾದ ಮಾಡಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಇನ್ನೂ ವಿಶೇಷ ಎಂದರೆ ರಾಹುಲ್ ಗಾಂಧಿ ಅವರು ಕೈಯಿಲ್ಲದ ಶಿಕ್ಷಕಿ ಜೊತೆಗೆ ಸಂವಾದ ನಡೆಸಿದ್ದಾರೆ. ಭಾರತ್ ಜೋಡೋ ಇದೊಂದು ಚಳುವಳಿ, ಯಾರು ಬೇಕಾದರೂ ಭಾಗವಹಿಸಬಹುದು. ಗಾಂಧಿ ಕುಟುಂಬದ ರಾಹುಲ್ ಗಾಂಧಿ ಬಂದಿದ್ದಾರೆ. ಲಕ್ಷಾಂತರ ಮಂದಿ ಹಳ್ಳಿ ಹಳ್ಳಿಯಿಂದ ಬಂದು ಶುಭ ಹಾರೈಸಿದ್ದಾರೆ ಎಂದು ಡಿಕೆಶಿ ತಿಳಿಸಿದರು.
ರಾಜಕಾರಣಕ್ಕಾಗಲಿ, ಭಾರತ್ ಜೋಡೋ ಪಾದಯಾತ್ರೆಗಾಗಲಿ ರಾಜ್ಯದ ಯಾವುದೇ ಮಕ್ಕಳನ್ನ ಉಪಯೋಗಿಸಿಲ್ಲ. ಹೊಟ್ಟೆಯಲ್ಲಿ ಇರುವ ಮಗುವಿಗೂ ನಮ್ಮ ಸರ್ಕಾರ ಕಾರ್ಯಕ್ರಮ ನೀಡಿತ್ತು. ಮಕ್ಕಳನ್ನ ಬಳಸುತ್ತಿದ್ದೇವೆ‌ ಎಂದು ಆರೋಪಿಸುತ್ತಿದ್ದಾರೆಂದು ಅವರು ದೂರಿದರು.

ಕಾಂಗ್ರೆಸ್ ಪಕ್ಷದ ಆಡಳಿತ ಇದ್ದಾಗ ದೇಶದ ಪ್ರತಿ ಪ್ರಜೆಯ ರಕ್ಷಣೆ ಮಾಡಿದ್ದೇವೆ, ಮುಂದೆ ಮಾಡುತ್ತೇವೆ. ರಾಜಕೀಯವಾಗಿ ಮಕ್ಕಳ ಕಮಿಷನ್ ನಿಂದ ಕಂಪ್ಲೇಟ್ ಪೈಲ್ ಮಾಡಿಸಿದ್ದಾರೆ. ನಮ್ಮ ಪಾದಯಾತ್ರೆ ಗೌರವ ತಡೆದುಕೊಳ್ಳದೆ ಈ ರೀತಿ ಮಾಡಿದ್ದಾರೆ. ಇದಕ್ಕೆ ನಾವು ಉತ್ತರ ಕೊಡುವ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.

ಪಾದಯಾತ್ರೆಗೆ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಹಿರಿಯೂರಿನಲ್ಲಿ ಬಸ್ ಡಿಕ್ಕಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ನಾನು ಮುಂದಿನ ದಿನ ಅವರ ಕುಟುಂಬವನ್ನು ಭೇಟಿ ಮಾಡುತ್ತೇನೆ. ನಮ್ಮ ಪಕ್ಷದಿಂದ 10 ಲಕ್ಷ ಪರಿಹಾರ ನೀಡುತ್ತೇವೆ. ಯಾತ್ರೆ ಮುಗಿದ ಬಳಿಕ ಚೆಕ್ ನೀಡಿ ಬರುತ್ತೇನೆ. ಬಿಜೆಪಿಯವರ ಟೀಕೆ-ಟಿಪ್ಪಣಿಗಳೆಲ್ಲವನ್ನು ಸಂತೋಷದಿಂದ ಸ್ವಾಗತಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಪ್ರಧಾನ ಮಂತ್ರಿ ಆಗುವ ಭಾಗ್ಯ ಇದ್ದರು ತ್ಯಾಗ ಮಾಡಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದ್ದಾರೆ ರಾಹುಲ್ ಗಾಂಧಿ. ದೇಶವನ್ನ ಒಗ್ಗಟ್ಟು ಮಾಡಲು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ, ಬಿಜೆಪಿ ಮುಖಂಡರಿಗೆ ತಡೆಯಲು ಆಗುತ್ತಿಲ್ಲ. ಎಲೆಕ್ಷನ್ ಬರುತ್ತಿದೆ ಜನರ ಬೆಂಬಲ ಯಾವ ರೀತಿ ಬರುತ್ತಾರೆ ಎಂದು ನೀವೆ ನೋಡಿ ಎಂದು ಮಾಧ್ಯಮಗಳಿಗೆ ತಿಳಿಸಿದರು. ಆಕಾಶದಲ್ಲಿ ಬೀಳುವ ಹನಿ ಹನಿ ಕೊನೆಗೆ ನದಿಯಾಗುವ ರೀತಿ ಇರುತ್ತದೆ. ಬಿಗ್ ಟ್ರೀಮ್ ಎಂದರೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಬದಲಾವಣೆ ಎಂದರ್ಥ. ಎಐಸಿಸಿ ಚುನಾವಣೆ ಅಕ್ಟೋಬರ್-17 ರಂದು ನಡೆಯಲಿದ್ದು ಪಿಸಿಸಿ ಸದಸ್ಯರು ಮತ ಹಾಕುತ್ತಾರೆ. 17 ರಂದು ಪಾದಯಾತ್ರೆಗಳು ಯಾತ್ರಾ ಸ್ಥಳಗಳಲ್ಲೇ ಬೇರೆ ಬೂತ್ ಮಾಡಿ ಮತ ಹಾಕುತ್ತೇವೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಪಾದಯಾತ್ರೆಗೆ ಮಳೆ ಕಾಟ-

ಹಿರಿಯೂರು ತಾಲೂಕಿನ ಹರ್ತಿಕೋಟೆಯಿಂದ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಭಾರತ್ ಜೋಡೋ ಪಾದಯಾತ್ರೆ ಆರಂಭವಾಗಬೇಕಿತ್ತು. ಆ ಸಂದರ್ಭದಲ್ಲೂ ತುಂತುರು ಮಳೆ ಆರಂಭವಾಗಿದ್ದರಿಂದಾಗಿ ಒಂದು ಗಂಟೆ ತಡವಾಗಿ ಪಾದಯಾತ್ರೆ ಆರಂಭವಾಗಿ ನಂತರ ಚಳ್ಳಕೆರೆ ತಾಲೂಕಿನ ಸಾಣಿಕೆರೆಯತ್ತ ಸಾಗಿತು. ಇದಾದ ನಂತರ ಚಳ್ಳಕೆರೆ ನಗರದತ್ತ ಹೆಜ್ಜೆ ಹಾಕುತ್ತಿದ್ದಂತೆ ಮತ್ತೆ ಜಿಟಿ ಜಿಟಿ ಆರಂಭವಾಯಿತು. ರಾಹುಲ್ ಗಾಂಧಿ ಜೊತೆಯಲ್ಲಿ ಸಾವಿರಾರು ಕೈ ಕಾರ್ಯಕರ್ತರು ಮಳೆಯಲ್ಲೇ ಪಾದಯಾತ್ರೆ ಮಾಡಿದರು.ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹಾಗು ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳು ರಾಮನಾಥ್ ರೈ ಮತ್ತು ಪ್ರಿಯಾಂಕ ಖರ್ಗೆ ರವರ ಜೊತೆಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಇನ್ನು ರಾಹುಲ್ ಗಾಂಧಿ ಅವರನ್ನು ನೋಡಲು ಸಾಣಿಕೆರೆ ಗ್ರಾಮದಲ್ಲಿ ಜನಸಾಗರವೇ ಕಿಕ್ಕಿರಿದು ತುಂಬಿತ್ತು. ರಸ್ತೆಯ ಎರಡೂ ಬದಿಯಲ್ಲಿ ಜನರು ಬಿಲ್ಡಿಂಗ್, ಮನೆ, ಅಂಗಡಿ, ವಾಹನಗಳ ಮೇಲೆ ನಿಂತು ಪಾದಯಾತ್ರೆ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತ್ತು.

ಇನ್ನು ಯಾತ್ರೆ ಸಾಗುವ ಮಾರ್ಗ ಸಂಪೂರ್ಣ ಸಿಂಗಾರಗೊಂಡಿದೆ. ಸಾಣಿಕೆರೆ – ಚಳ್ಳಕೆರೆ ರಸ್ತೆ ಮಾರ್ಗ ಫ್ಲೆಕ್ಸ್ ಹಾಗೂ ಬ್ಯಾನರ್ ಗಳು ರಾರಾಜಿಸುತ್ತಿದ್ದವು. ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಗೆ ಬಂದಿದ್ದಾರೆ..

ವರದಿ.ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend