ಗಂವ್ಹಾರನಲ್ಲಿ ಡಿ.ಸಿ. ಗ್ರಾಮ ವಾಸ್ತವ್ಯ; ಜನಪರ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಿ -ಯಶವಂತ ವಿ. ಗುರುಕರ್…!!!

Listen to this article

ಗಂವ್ಹಾರನಲ್ಲಿ ಡಿ.ಸಿ. ಗ್ರಾಮ ವಾಸ್ತವ್ಯ;
ಜನಪರ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಿ
-ಯಶವಂತ ವಿ. ಗುರುಕರ್

ಕಲಬುರಗಿ, ಬಡಜನರ ಕಲ್ಯಾಣಕ್ಕಾಗಿ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಸದುಪಯೋಗ ಮಾಡಿಕೊಂಡು ಪ್ರಗತಿ ಹೊಂದಬೇಕು ಎಂದು ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಕರೆ ನೀಡಿದರು.
ಶನಿವಾರ ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿಗಳ ಪ್ರೌಢ ಶಾಲೆ ಅವರಣದಲ್ಲಿ ಆಯೋಜಿಸಿದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಡವ-ಬಲ್ಲಿದ ಎನ್ನದೇ ಸರ್ವರಿಗೂ ಅರೋಗ್ಯ ಎಂಬ ಪರಿಕಲ್ಪನೆಯಲ್ಲಿ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿದ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ಮತ್ತು ಎ.ಪಿ.ಎಲ್. ಕುಟಂಬಕ್ಕೆ 1.50 ಲಕ್ಷ ರೂ. ವರೆಗಿನ ಉಚಿತವಾಗಿ ಚಿಕಿತ್ಸೆ ಒದಗಿಸುವ ಆಯುಷಮನ್ ಭಾರತ -ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಕೇವಲ ಶೇ.20 ರಷ್ಟು ಜನ ಮಾತ್ರ ಇದರ ಪ್ರಯೋಜನ ಪಡೆದಿದ್ದಾರೆ. ಗಂವ್ಹಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 5,000 ಜನಸಂಖ್ಯೆಯಲ್ಲಿ ಬಹುತೇಕರು ಇದರ ಕಾರ್ಡ್ ಪಡೆದಿಲ್ಲ. ಮಾರಣಾಂತಿಕ ಕಾಯಿಲೆ, ರಸ್ತೆ ಅಪಘಾತ ಸಂದರ್ಭದಲ್ಲಿ ಇದು ಬಹಳ ಉಪಯೋಗಕ್ಕೆ ಬರಲಿದೆ. ಜನರು ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದ ಅವರು ಯು.ಕೆ., ಕೆನೆಡಾ, ಮಿಡಿಲ್ ಈಸ್ಟ್ ದೇಶಗಳು ಹೊರತುಪಡಿಸಿದರೆ ನಮ್ಮಲ್ಲಿ ಮಾತ್ರ ಈ ಯೋಜನೆ ಇದೆ ಎಂದರು.
72 ಗಂಟೆಯಲ್ಲಿ ಸಾಮಾಜಿಕ ಪಿಂಚಣಿ ಒದಗಿಸುವ “ಹಲೋ ಕಂದಾಯ ಸಚಿವರೇ” ಯೋಜನೆ ಜಾರಿಯಾಗಿದ್ದು, ವೃದ್ಧರು ಸರ್ಕಾರಿ ಕಚೇರಿಗೆ ಅಲಿಯದೆ ಟೋಲ್ ಪ್ರೀ ಸಂಖ್ಯೆ 155245 ಕರೆ ಮಾಡಿ ಮನೆಯಲ್ಲಿ ಕುಳಿತುಕೊಂಡೇ ಪಿಂಚಣಿ ಪಡೆಯಬಹುದು. ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್ ನೀಡಲಾಗುತ್ತದೆ. ಪಿ.ಎಫ್., ಇ.ಎಸ್.ಐ., ಆದಾಯ ತೆರಿಗೆ ಪಾವತಿ ಮಾಡುವವರು ಹೊರತುಪಡಿಸಿ ಈ ಯೋಜನೆ ಪಡೆಯಲು ಅರ್ಹರಿದ್ದು, ಕಾರ್ಡ್ ಪಡೆದುಕೊಂಡಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರೆ 2 ಲಕ್ಷ ರೂ., ಸಾಮಾನ್ಯವಾಗಿ ನಿಧನವಾದಾಗ 1 ಲಕ್ಷ ರೂ. ಆರ್ಥಿಕ ಸೌಲಭ್ಯ ದೊರೆಯಲಿದೆ ಎಂದರು.

ಜಿಲ್ಲೆಯಲ್ಲಿ ತಾಂಡಾದಲ್ಲಿ ವಾಸಿಸುವ 30 ಸಾವಿರ ಕುಟುಂಬಕ್ಕೆ ಹಕ್ಕು ಪತ್ರ ನೀಡಲು ಸಿದ್ದತೆ ನಡೆದಿದೆ. ಈ ಮಾಸಾಂತ್ಯದಲ್ಲಿ ಹಕ್ಕುಪತ್ರ ನೀಡಲಾಗುವುದು. ಹೀಗಾಗಿ ತಾಂಡಾ ನಿವಾಸಿಗಳಿಗೆ ಖಾಸಗಿ ಜಮೀನಿನ ಮಾಲೀಕರು ಆಗಾಗ ಬಂದು ತೊಂದರೆ ನೀಡುವುದು ತಪ್ಪಲಿದೆ. ಜೊತೆಗೆ ಕಂದಾಯ ಗ್ರಾಮವಾಗುವುದರಿಂದ ರಸ್ತೆ, ಸ್ಮಶಾನ ಭೂಮಿ ಸೇರಿದಂತೆ ಇನ್ನೀತರ ಮೂಲಸೌಕರ್ಯ ದೊರೆಯಲಿವೆ ಎಂದರು.
ಪ್ರಸಕ್ತ ಸಾಲಿನ ಅತಿವೃಷ್ಟಿಯಿಂದ ಬೆಳೆ ಹಾನಿಯಾದವರ ಪೈಕಿ 7 ಕಂತಿನಲ್ಲಿ ಜಿಲ್ಲೆಯ 2.57 ಲಕ್ಷ ರೈತರಿಗೆ 234 ಕೋಟಿ ರೂ. ಬೆಳೆ ಪರಿಹಾರ ಒಂದು ತಿಂಗಳಿನಲ್ಲಿಯೇ ನೀಡಲಾಗಿದೆ. ಇದರಲ್ಲಿ ಗಂವ್ಹಾರ ಗ್ರಾಮದ 977 ಜನರು ಬೆಳೆ ಪರಿಹಾರ ಪಡೆದಿದ್ದಾರೆ. ಇದಲ್ಲದೆ ಅತಿವೃಷ್ಠಿಯಿಂದ ಹಾನಿಯಾದ ಗ್ರಾಮದ 11 ಮನೆಗಳಿಗೆ ತಲಾ 50 ಸಾವಿರ ರೂ. ಪರಿಹಾರ 24 ಗಂಟೆಯಲ್ಲಿಯೇ ನೀಡಲಾಗಿದೆ. ಇನ್ನು ಜೇವರ್ಗಿ ತಾಲೂಕಿನಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ಪರಿಹಾರ ಸೌಲಭ್ಯ ನೀಡಲಾಗಿದೆ ಎಂದರು.


47 ಇ-ಶ್ರಮ್ ವಿತರಣೆ, 1.50 ಲಕ್ಷ ಮದುವೆ ಸಹಾಯಧನ ಮಂಜೂರು: ಸೌಲಭ್ಯ ವಿತರಣಾ ಭಾಗವಾಗಿ ಕಾರ್ಮಿಕ ಇಲಾಖೆಯಿಂದ 47 ಜನರಿಗೆ ಇ-ಶ್ರಮ ಕಾರ್ಡ್ ಮತ್ತು 6 ಕಟ್ಟಡ ಕಾರ್ಮಿಕರಿಗೆ ಎಲೆಕ್ಟ್ರಿಕಲ್ ಕಿಟ್ ವಿತರಿಸಲಾಯಿತು. ಕಟ್ಟಡ ಕಾರ್ಮಿಕರಾದ ಕಮಲಾಬಾಯಿ, ತಾರಾಬಾಯಿ ಹಾಗೂ ಸಿದ್ದಪ್ಪ ಎನ್ನವವರ ಮಕ್ಕಳ ಮದುವೆಗೆ ತಲಾ 50 ಸಾವಿರ ರೂ. ಸಹಾಯಧನದ ಮಂಜೂರಾತಿ ಆದೇಶ ಪ್ರತಿ ಸಹ ನೀಡಲಾಯಿತು. ಇದಲ್ಲದೆ ಗರ್ಭಿಣಿ ಮಹಿಳೆಯರಿಗೆ ತಾಯಿ ಕಾರ್ಡ್, ಸುಕನ್ಯಾ ಸಮೃದ್ಧಿ ಪಾಸ್ ಬುಕ್ ವಿತರಣೆ, ಎ.ಬಿ.ಆರ್.ಕೆ. ಆರೋಗ್ಯ ಕಾರ್ಡ್, ವೃದ್ಧರಿಗೆ ಸಾಮಾಜಿಕ ಪಿಂಚಣಿ ಆದೇಶ ಪತ್ರ ವಿತರಣೆ ಮಾಡಲಾಯಿತು.

ಮಹಿಳಾ ಅಧಿಕಾರಿಗಳಿಂದ ಸೀಮಂತ: ಗರ್ಭಿಣಿ ಬಾಣಂತಿ ಮಹಿಳೆಯರಿಗೆ ಗ್ರಾ.ಪಂ. ಅಧ್ಯಕ್ಷೆ ಶಿವಕಲಾ ಪಾಟೀಲ ನೇತೃತ್ವದಲ್ಲಿ ಸಹಾಯಕ ಆಯುಕ್ತೆ ಮಮತಾ ಕುಮಾರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ, ಎ.ಪಿ.ಎಂ.ಸಿ. ಕಾರ್ಯದರ್ಶಿ ಸುಮಂಗಲಾ ಹೂಗಾರ, ಅಬಕಾರಿ ಸಿ.ಪಿ.ಐ ವನಿತಾ ಎಸ್., ತಾಲೂಕಾ ಅಲ್ಪಸಂಖ್ಯಾತ ಅಧಿಕಾರಿ ಶಕುಂತಲಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಮಹಾದೇವಿ ಅವರು ಅರತಿ ಬೆಳಗಿ ಹೂ, ಬಳೆ, ಹಣ್ಣು ನೀಡಿ ಉಡಿ ತುಂಬುವ ಮೂಲಕ ಸೀಮಂತ ಕಾರ್ಯಕ್ರಮ ನಡೆಸಿಕೊಟ್ಡರು. ಅಂಗನವಾಡಿ ಮಕ್ಕಳಾದ ಕು.ಕಮಲಾಬಾಯಿ ಮತ್ತು ಕು.ಕವಿತಾ ಅವರ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಿಡಿಪಿಓ ಭೀಮರಾಯ ಇದ್ದರು.

ರಸ್ತೆ ಸರಿಪಡಿಸಿ, ಸಾರಿಗೆ ಸಂಪರ್ಕ ಕಲ್ಪಿಸಿ: ಅಹವಾಲು ಆಲಿಕೆ ಸಂದರ್ಭದಲ್ಲಿ ಗ್ರಾಮದ ಮುಖಂಡರು ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಗ್ರಾಮದಲ್ಲಿ ರಸ್ತೆ ಸರಿಪಡಿಸಬೇಕು. ರಸ್ತೆ ಸರಿಯಿಲ್ಲದ ಕಾರಣ ಸಾರಿಗೆ ಬಸ್ ಓಡಿಸುತ್ತಿಲ್ಲ. ಅಂಗನವಾಡಿಯಲ್ಲಿ ಕಳಪೆ ಆಹಾರ ಪೂರೈಸಲಾಗುತ್ತಿದೆ. ಅನಧಿಕೃತ ಮದ್ಯದಂಗಡಿಗಳಿಗೆ ಬ್ರೆಕ್ ನೀಡಬೇಕು. ಗ್ರಾಮದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಕ್ರಿಮಿಕೀಟಗಳ ಹಾವಳಿ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ಆರೋಗ್ಯ ಅಧಿಕಾರಿಗಳಿಗೆ ಮತ್ತು ಪಿ.ಡಿ.ಓ.ಗಳಿಗೆ ನಿರ್ದೇಶನ ನೀಡಬೇಕು ಎಂಬಿತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಕೇಳಿಕೊಂಡರು. ಇನ್ನು ಹಲವರು ಪಿಂಚಣಿ ಮಂಜೂರಾಗಿದ್ದರು ಪಿಂಚಣಿ ಬರುತ್ತಿಲ್ಲ ಎಂದು ಮಂಜೂರಾತಿ ಆದೇಶ ಪ್ರತಿ, ಆಧಾರ್ ಕಾರ್ಡ್ ಹಿಡಿದುಕೊಂಡು ಡಿ.ಸಿ. ಬಳಿ ಬಂದರು. ಇವರೆಲ್ಲರಿಗೂ ಪಿಂಚಣಿ ಪಾವತಿಯಾಗುವಂತೆ ಕೂಡಲೆ ಕ್ರಮ ವಹಿಸಿ ಎಂದು ತಹಶೀಲ್ದಾರರಿಗೆ ಡಿ.ಸಿ. ಸೂಚಿಸಿದರು.

ಆರೋಗ್ಯ ಶಿಬಿರಕ್ಕೆ ಉತ್ತಮ ಸ್ಪಂದನೆ, 168 ಆರೋಗ್ಯ ಕಾರ್ಡ್ ವಿತರಣೆ: ಗ್ರಾಮ ವಾಸ್ತವ್ಯ ಅಂಗವಾಗಿ ಅರೋಗ್ಯ ಇಲಾಖೆಯಿಂದ ಆಯೋಜಿಸಿದ ಆರೋಗ್ಯ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಸ್ಥಳದಲ್ಲಿಯೇ 168 ಆರೋಗ್ಯ ಕಾರ್ಡ್ ವಿತರಿಸಲಾಯಿತು. 286 ಜನರು ಬಿ.ಪಿ., ಶುಗರ್ ತಪಾಸಣೆಗೆ ಒಳಗಾಗದರು. 86 ಜನರು ಕಣ್ಣು ತಪಾಸಣೆ ಮಾಡಿಕೊಂಡಿದ್ದು, ಇದರಲ್ಲಿ 22 ಜನರಿಗೆ ಶಸ್ತಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು. 224 ಜನರು ಐ.ಸಿ.ಟಿ.ಸಿ. ಸಮಾಲೋಚನೆಗೆ ಒಳಗಾದರು. ತಾಲೂಕಾ ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ, ಡಾ.ಅಪರ್ಣಾ ಭದ್ರಶೆಟ್ಟಿ ನೇತೃತ್ವದಲ್ಲಿ ಆರೋಗ್ಯ ತಂಡ ಸಾರ್ವಜನಿಕರ ತಪಾಸಣೆ ಮಾಡಿ, ಅಗತ್ಯ ಔಷಧಿಗಳನ್ನು ನೀಡಿದರು.

ಸಾಂಪ್ರದಾಯಿಕ ಸ್ವಾಗತ: ಗಂವ್ಹಾರ ಗ್ರಾಮಕ್ಕೆ ಆಗಮಿಸಿದ ಡಿ.ಸಿ. ಯಶವಂತ ವಿ. ಗುರುಕರ್ ಅವರಿಗೆ ಗ್ರಾಮದ ಮಹಿಳೆಯರು ಕುಂಭ ಕಳಸದೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಡಿ.ಸಿ. ಯಶವಂತ ವಿ.ಗುರುಕರ್‍ಮ, ನೂತನ ಸಹಾಯಕ ಆಯುಕ್ತೆ ಮಮತಾ ಕುಮಾರಿ ಹಾಗೂ ತಹಶೀಲ್ದಾರ ಸಂಜೀವಕುಮಾರ ದಾಸರ್ ಅವರನ್ನು ಎತ್ತಿನ ಚಕಡಿಯಲ್ಲಿ ಕೂರಿಸಿ ಡೊಳ್ಳು, ಹಲಗೆ ವಾದನ, ಲಂಬಾಣಿ ಮಹಿಳೆಯರ ನೃತ್ಯದೊಂದಿಗೆ ಕಾರ್ಯಕ್ರಮದ ವೇದಿಕೆ ಸ್ಥಳಕ್ಕೆ ಕರೆತರಲಾಯಿತು. ನಂತರ ಡಿ.ಸಿ. ಯಶವಂತ ವಿ. ಗುರುಕರ್ ಅವರು ಗ್ರಾಮದ ಶ್ರೀ ಸದ್ಗುರು ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿಗಳ ಮಠಕ್ಕೆ ತೆರಳಿ ಪೀಠಾಧಿಪತಿಗಳ ದರ್ಶನ ಪಡೆದು ಗ್ರಾಮ ವಾಸ್ತವ್ಯ ಸವಿನೆನಪಿನಲ್ಲಿ ಶಾಲಾ ಆವರಣದಲ್ಲಿ ಗಿಡ ನೆಟ್ಟರು.
ಪಡಿತರ ಅಂಗಡಿ, ಆರೋಗ್ಯ ಕೇಂದ್ರಕ್ಕೆ ಡಿ.ಸಿ. ಭೇಟಿ: ಮಧ್ಯಾಹ್ನದ ಊಟದ ನಂತರ ಡಿ.ಸಿ. ಯಶವಂತ ವಿ. ಗುರುಕರ್ ಅವರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ಸೌಲಭ್ಯಗಳ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ ಅವರಿಂದ ಮಾಹಿತಿ ಪಡೆದುಕೊಂಡರು. ನಂತರ ಗ್ರಾಮದ ತಾಂಡಾಗೆ ಭೇಟಿ ನೀಡಿ, ತಾಂಡಾ ನಿವಾಸಿಗಳ ಅಹವಾಲು ಆಲಿಸಿದರು. ನಂತರ ಪಡಿತರ ಅಂಗಡಿಗೆ ಭೇಟಿ ನೀಡಿ ಅಲ್ಲಿದ್ದ ಪಡಿತರದಾರರೊಂದಿಗೆ ಮಾತನಾಡುತ್ತಾ ಪಡಿತರ ಸರಿಯಾಗಿ ನಿಡಲಾಗುತ್ತಿದ್ದಿಯೆ ಎಂದು ವಿಚಾರಿಸಿ, ಪಡಿತರವನ್ನು ಯಾವುದೇ ಕಾರಣಕ್ಕೂ ಕಾಳಸಂತೆಯಲ್ಲಿ ಮಾರಾಟ ಮಾಡಬಾರದು ಎಂದು ತಿಳಿಸಿದರು.

ಸದ್ಗುರು ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮೀಜಿಗಳ ಮಠದ ಪೀಠಾಧಿಪತಿ ಪೂಜ್ಯ ಸೋಪಾನನಾಥ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಿವಕಲಾ ಮಾಲಿಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ, ಜಂಟಿ ಕೈಗಾರಿಕಾ ನಿರ್ದೇಶಕ ಮಾಣಿಕ ರಘೋಜಿ, ಡಿ.ಹೆಚ್.ಓ. ಡಾ.ರಾಜಶೇಖರ ಮಾಲಿ, .ಡಿ.ಎಲ್.ಆರ್.ಶಂಕರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ, ಜಿಲ್ಲಾ ಆಯುμï ಅಧಿಕಾರಿ ಗಿರಿಜಾ, ತಾಲೂಕ ಪಂಚಾಯತ್ ಇ.ಓ. ಅಬ್ದುಲ್ ನಬಿ, ತಾಲೂಕು ಅರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು, ಗ್ರಾಮಸ್ಥರು, ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ತಹಶೀಲ್ದಾರ ಸಂಜೀವ ಕುಮಾರ ದಾಸರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ವಾಸ್ತವ್ಯ ಅಂಗವಾಗಿ ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ, ಪಶು ಸಂಗೋಪನೆ ಇಲಾಖೆಯಿಂದ ಮಳಿಗೆ ತೆರೆದು ಜನಪರ ಯೋಜನೆಗಳ ಮಾಹಿತಿ ನೀಡಲಾಯಿತು. ಕಂದಾಯ ಇಲಾಖೆಯಿಂದ ಕುಂದುಕೊರತೆ ಸ್ವೀಕಾರ ಕೇಂದ್ರ ತೆರೆಯಲಾಗಿತ್ತು…

ವರದಿ. ಎಚ್ಚರಿಕೆ ಕನ್ನಡ ನ್ಯೂಸ್ ವರದಿಗಾರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend