ನಮ್ಮ ನಡೆ ಮತಗಟ್ಟೆ ಕಡೆ ಮತದಾನ ಜಾಗೃತಿ ಕಾರ್ಯಕ್ರಮ
ಶೇ.100 ರಷ್ಟು ಮತದಾನ ಮಾಡಲು ಸಹಕರಿಸುವಂತೆ ಸಿಇಓ ಮನವಿ
ಶಿವಮೊಗ್ಗ :ಶಿವಮೊಗ್ಗದಲ್ಲಿ ಈ ಬಾರಿ ಎಲ್ಲ ಮತದಾರರು ಮತದಾನ ಮಾಡುವ ಮೂಲಕ ಶೇ.100 ರಷ್ಟು ಮತದಾನ ಆಗಲು ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮತದಾರರಲ್ಲಿ ಮನವಿ ಮಾಡಿದರು.
ಏ.28 ರ ಬೆಳಿಗ್ಗೆ 7 ಕ್ಕೆ ಜಿಲ್ಲಾಧಿಕಾರಿ ಕಚೇರಿ ಯಿಂದ ಜಿಲ್ಲಾ ಪಂಚಾಯತ್ ವರೆಗೆ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಶಿವಮೊಗ್ಗ ಮತದಾನ ಜಾಗೃತಿ ವತಿಯಿಂದ ಏರ್ಪಡಿಸಿದ್ದ ‘ನಮ್ಮ ನಡೆ ಮತಗಟ್ಟೆ ಕಡೆ’ ಜಾಥಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ, ಅವರು ಮಾತನಾಡಿದರು.
ನಮ್ಮ ನಡೆ ಮತಗಟ್ಟೆಗಳ ಕಡೆ ಕಾರ್ಯಕ್ರಮದ ಅಂಗವಾಗಿ ಇಂದು ಎಲ್ಲ ತಾಲ್ಲೂಕುಗಳಲ್ಲಿ ಧ್ವಜಾರೋಹಣ ನಡೆದಿದ್ದು, ಜಿಲ್ಲೆಯ 36 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಮಾದರಿ ಮತಗಟ್ಟೆಗಳ ಮೂಲಕ ಚುನಾವಣಾ ಪ್ರಕ್ರಿಯೆ ವೀಕ್ಷಣೆ ಮತ್ತು ಮಾಹಿತಿಯನ್ನು ಮತದಾರರಿಗೆ ಒದಗಿಸಲಾಗುವುದು ಎಂದರು.
ಶಿವಮೊಗ್ಗ ಮಹಾನಗರಪಾಲಿಕೆ ಅಧಿಕಾರಿ ಸುಪ್ರಿಯ ಮಾತನಾಡಿ ಶಿವಮೊಗ್ಗ ತಾಲೂಕು ಮಟ್ಟದಲ್ಲಿ ಮತದಾನದ ಪ್ರಮಾಣ ಹೆಚ್ಚಿದೆ. ಆದರೆ ಶಿವಮೊಗ್ಗ ನಗರ ಮತ್ತು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ನಾವೆಲ್ಲ ಮತದಾನ ಮಾಡೋಣ ಎಂದು ತಿಳಿಸಿದರು.
ಸ್ವೀಪ್ ಐಕಾನ್ ಹಾಗೂ ಮನೋವೈದ್ಯರಾದ ಡಾ. ಶುಬ್ರತಾ ಮಾತನಾಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಮತದಾನ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಮೇ 7 ಕ್ಕೆ ಯಾವುದೇ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳದೆ ಎಲ್ಲರೂ ಮತದಾನ ಮಾಡಿರೆಂದು ಅರಿವು ಮೂಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸ್ವೀಪ್ ಐಕಾನ್ ನಾಗರಾಜ್ ತೊಂಬ್ರಿ ಅವರು ಮತದಾನದ ಕುರಿತಾದ ಗೀತೆ ಗಾಯನ ಮಾಡಿ ಜಾಗೃತಿ ಮೂಡಿಸಿದರು.
ಪ್ರಥಮ ಬಾರಿಗೆ ಮತದಾಮ ಮಾಡುತ್ತಿರುವ ಯುವ ಮತದಾರ ಜಿಲ್ಲಾ ಪಂಚಾಯತ್ ಸಿ ಇ ಓ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮತದಾನ ಪ್ರಮಾಣ ಪತ್ರವನ್ನು ನೀಡಿದರು.
ಇದೇ ವೇಳೆ ಜಿಲ್ಲಾ ಪಂಚಾಯತ್‍ನಲ್ಲಿ ಮಾದರಿ ಮತಗಟ್ಟೆ ಸ್ಥಾಪಿಸಿ, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು, ಮತದಾನ ಪ್ರಕ್ರಿಯೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ನಮ್ಮ ನಡೆ ಮತಗಟ್ಟೆ ಕಡೆ ಜಾಥಾವು ಜಿಲ್ಲಾಡಳಿತ ಕಚೇರಿಯಿಂದ ಹೊರಟು ಜಿಲ್ಲಾ ಪಂಚಾಯತ್ ತಲುಪಿತು. ಜಾಥಾದಲ್ಲಿ ಹೊಳೆಹೊನ್ನೂರು ಚಂದ್ರನಾಯ್ಕ್ ಡೊಳ್ಳು ಕುಣಿತ ತಂಡದವರು ಪಾಲ್ಗೊಂಡು ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ರಾಜ್ಯ ಮಟ್ಟದ ಸ್ವೀಪ್ ತರಬೇತಿದಾರ ನವೀದ್ ಅಹ್ಮದ್ ಪರ್ವೇಜ್, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು…
ವರದಿ. ಸುರೇಶ್ ಶಿವಮೊಗ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030