ಚಿತ್ರದುರ್ಗ: ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಬುಧವಾರ ಭೇಟಿ ನೀಡಿದರು. ಈ ವೇಳೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಸಿ.ರಘುಚಂದನ್ ಹಾಗೂ ಶಾಸಕ ಎಂ.ಚಂದ್ರಪ್ಪ ಜೊತೆ ಸೌಹಾರ್ದ ಮಾತುಕತೆ ನಡೆಸಿದರು.
ಈ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಗೋವಿಂದ ಎಂ.ಕಾರಜೋಳ, ‘ನಾನು ಚಂದ್ರಪ್ಪ ಒಂದೇ ತಾಟಿನಲ್ಲಿ ಉಂಡವರು. ಕೆಲ ಪರಿಸ್ಥಿತಿ ಹಾಗೂ ಆವೇಶದಲ್ಲಿ ಕೆಲ ಮಾತುಗಳು ಬರುತ್ತವೆ. ಅವನ್ನು ಯಾರೂ ಮನಸ್ಸಿಗೆ ತೆಗೆದುಕೊಳ್ಳುವುದು ಬೇಡ’ ಎಂದು ಮನವಿ ಮಾಡಿದರು.
‘ಸಹೋದರ ಚಂದ್ರಪ್ಪ ಸುಪುತ್ರ ರಘುಚಂದನ್ ಯುವಕ, ಆಶಾವಾದಿ. ಸತತ ಹೋರಾಟ ಮಾಡಿಕೊಂಡು ಬಂದವರು. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಯಾವುದೋ ಲೆಕ್ಕಾಚಾರದಲ್ಲಿ ನನಗೆ ಟಿಕೆಟ್ ನೀಡಿದರು. ಆದರೆ, ನಾನು ಬೇಡ ಎಂದು ಹೇಳಿದ್ದೆ. ಆದರೆ, ಪಕ್ಷದ ರಾಷ್ಟ್ರೀಯ ನಾಯಕರು, ನಾನು ಯಾರ ಮಾತು ಮೀರುವುದಿಲ್ಲವೋ ಅವರು ನಿಲ್ಲಲೇಬೇಕು ಎಂದಾಗ ಅನಿವಾರ್ಯವಾಗಿ ಬಂದು ನಾಮಪತ್ರ ಸಲ್ಲಿಸಿದ್ದೇನೆ’ ಎಂದರು.‘ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಶಾಸಕರಾದ ಎಂ.ಚಂದ್ರಪ್ಪ ಹಾಗೂ ಅವರ ಪುತ್ರ ರಘುಚಂದನ್ ಇಬ್ಬರೂ ಬೆಂಬಲವಾಗಿ ನಿಂತಿದ್ದಾರೆ’ ಎಂದು ತಿಳಿಸಿದರು.
ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಸಿ.ರಘುಚಂದನ್ ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಮಾತು ಕೊಟ್ಟಿದ್ದೇವೆ. ಜೀವ ಹೋದರೂ ಮಾತಿಗೆ ತಪ್ಪಲ್ಲ. ನಮ್ಮ ಮಾತಿಗೆ ಬದ್ಧರಾಗಿ ಗೋವಿಂದ ಎಂ.ಕಾರಜೋಳ ಅವರ ಪರವಾಗಿ ಚುನಾವಣೆ ನಡೆಸುತ್ತೇವೆ’ ಎಂದರು ‘ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸುತ್ತೇವೆ. ಹೊರಗೊಂದು, ಒಳಗೊಂದು ಮಾಡುವುದಿಲ್ಲ. ಅವರು ಹೇಳಿದ ಕಡೆಗಳಲ್ಲಿ ಕೆಲಸ ಮಾಡುತ್ತೇನೆ. ನಾನು ರಾಜ್ಯಸಭೆ, ಪರಿಷತ್ ಆಸೆ ಇಟ್ಟುಕೊಂಡಿಲ್ಲ. ಜನರ ನಡುವೆ ಬೆಳೆದವರು. ಚುನಾವಣೆಯ ಮೂಲಕವೇ ರಾಜಕಾರಣ ಮಾಡುತ್ತೇವೆ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಮತ್ತಿತರರಿದ್ದರು…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030