ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಸತತ 255 ದಿನ ನಿರಂತರ ಧರಣಿಮಾಡುತ್ತಿದ್ದರೂ ಚಕರಾವೆತ್ತದ ಸರ್ಕಾರ……??

Listen to this article

ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಸತತ 255 ದಿನ ನಿರಂತರ ಧರಣಿಮಾಡುತ್ತಿದ್ದರೂ ಚಕರಾವೆತ್ತದ ಸರ್ಕಾರ……??

ಕರ್ನಾಟಕದಲ್ಲಿ ಮೀಸಲಾತಿ ಹೆಚ್ಚಳ: ಕಾರ್ಯಸಾಧುವೇ?

ಹರಪನಹಳ್ಳಿ :-ಕರ್ನಾಟಕದ ಬಿಜೆಪಿ ನೇತೃತ್ವದ ಸರ್ಕಾರವು ಸರ್ವಪಕ್ಷಗಳ ಸಭೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಇರುವ ಮೀಸಲಾತಿಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ನೇಮಿಸಿದ್ದ ಜಸ್ಟಿಸ್ ನಾಗಮೋಹನ್ ದಾಸ್‌ರವರ ವರದಿಯ ಶಿಫಾರಸ್ಸಿನಂತೆ ಎಸ್‌ಸಿ ಸಮುದಾಯಗಳಿಗೆ 15% ಇಂದ 17%ಗೆ ಮತ್ತು ಎಸ್‌ಟಿ ಸಮುದಾಯಕ್ಕೆ 3% ಇಂದ 7%ಗೆ ಮೀಸಲಾತಿ ಹೆಚ್ಚಿಸುವುದಾಗಿ ತಿಳಿಸಿದೆ. ಅಷ್ಟು ಮಾತ್ರವಲ್ಲದೆ ಮೀಸಲಾತಿ ಹೆಚ್ಚಿಸುವ ಮೂಲಕ ದಲಿತರ ಉದ್ಧಾರ ನಮ್ಮಿಂದಲೇ ಎಂಬ ಸಂಭ್ರಮಾಚರಣೆಯಲ್ಲಿ ಬಿಜೆಪಿ ತೊಡಗಿದೆ.

ಎಸ್‌ಟಿ ಸಮುದಾಯದ ಸ್ವಾಮೀಜಿಗಳು ಸಿಎಂ ಬೊಮ್ಮಾಯಿಯವರಿಗೆ ಸನ್ಮಾನ ಮಾಡಿದರೆ, ಸುರಪುರದ ಬಿಜೆಪಿ ಶಾಸಕ ರಾಜು ಗೌಡ ಮೀಸಲಾತಿ ಹೆಚ್ಚಿಸಿದ್ದಕ್ಕಾಗಿ ’ಜೀವ ಇರುವವರೆಗೆ ನಿಮಗೆ ಗುಲಾಮರಾಗಿ ಇರ್ತಿವಿ’
ಎಂದು ಸಿಎಂ ಓಲೈಸುವ ಮಾತನಾಡಿದ್ದಾರೆ ಮತ್ತು ವ್ಯಾಪಕ ಟೀಕೆಗೂ ಗುರಿಯಾಗಿದ್ದಾರೆ.

90ರ ದಶಕದಲ್ಲಿ ಮಂಡಲ್ ಆಯೋಗದ ಶಿಫಾರಸ್ಸಿನಂತೆ ಒಬಿಸಿ ಮೀಸಲಾತಿ ಜಾರಿಗೊಳಿಸಲು ಹೊರಟಾಗ ತೀವ್ರವಾಗಿ ವಿರೋಧಿಸಿದ್ದ, ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ್ದ ಬಿಜೆಪಿ,ಆರ್‌ಎಸ್‌ಎಸ್ ಈಗ ಇದ್ದಕ್ಕಿದ್ದಂತೆ ಮೀಸಲಾತಿ ಪರವಾಗಿ ವರ್ತಿಸುತ್ತಿದೆಯೇ? ಅಥವಾ ಕರ್ನಾಟಕದಲ್ಲಿ 2023ಕ್ಕೆ ವಿಧಾನಸಭಾ ಚುನಾವಣೆ ನಡೆಯುವ ಕಾರಣದಿಂದ ದಲಿತ ಮತಗಳಿಗಾಗಿ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಹಾಗಾಗಿ ಐತಿಹಾಸಿಕವಾಗಿ ಘಟಿಸಿರುವ ಮೀಸಲಾತಿ ಪರ-ವಿರುದ್ಧದ ವಾದಗಳನ್ನು ನೋಡೋಣ.

ಕೆ.ಎಂ ಮುನ್ಶಿ ಸಂವಿಧಾನದ ರಚನಾ ಸಭೆಯಲ್ಲಿದ್ದ ಆನಂತರ ವಿಶ್ವ ಹಿಂದೂ ಪರಿಷತ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಕೆ.ಎಂ ಮುನ್ಶಿಯವರು ಮೀಸಲಾತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಹತ್ತು ವರ್ಷಗಳ ಕಾಲ ಮಾತ್ರ ಮೀಸಲಾತಿ ನೀಡಲು ಅಂಬೇಡ್ಕರ್ ಹೇಳಿದ್ದರು ಎಂದು ವಾದಿಸಿದವರಲ್ಲಿ ಹೆಚ್ಚಿನವರು ಆರ್‌ಎಸ್‌ಎಸ್‌ನವರೆ ಆಗಿದ್ದರು.

ಸಂವಿಧಾನ ಜಾರಿಯಾದ ಮರುವರ್ಷವೆ ತಮಿಳುನಾಡಿನಲ್ಲಿ ಮೀಸಲಾತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಂವಿಧಾನದ ಆರ್ಟಿಕಲ್ 15 ಧರ್ಮ, ಜಾತಿ, ಲಿಂಗ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ಹೇಳುತ್ತದೆ.

ಮೀಸಲಾತಿ ತಾರತಮ್ಯ ಮಾಡುತ್ತದೆ ಎಂದು ಬಲಪಂಥೀಯರಾದ ಚಂಪಕಂ ದೊರೆರಾಜನ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುತ್ತಾರೆ. ಹಲವು ವಿಚಾರಣೆಗಳ ನಂತರ ಕೋರ್ಟ್ ಸಂವಿಧಾನ ತಿದ್ದುಪಡಿಯ ಮೂಲಕ ಆರ್ಟಿಕಲ್ 15ಕ್ಕೆ ಮೀಸಲಾತಿಗೆ ಅನ್ವಯಿಸುವುದಿಲ್ಲ ಎಂದು ಹೇಳುವ ಮೂಲಕ ಮೀಸಲಾತಿಯನ್ನು ಎತ್ತಿ ಹಿಡಿಯುತ್ತದೆ.

1990ರಲ್ಲಿ ವಿ.ಪಿ ಸಿಂಗ್‌ರವರು ಮಂಡಲ್ ಆಯೋಗದ ವರದಿಯನ್ವಯ ಒಬಿಸಿ ಮೀಸಲಾತಿ ಜಾರಿಗೊಳಿಸಲು ಮುಂದಾಯಿತು. ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ನೀಡುವುದನ್ನು ವಿರೋಧಿಸಿ ಬಿಜೆಪಿ ಮುಖಂಡ ರಾಮಾ ಜೋಯಿಸ್‌ರವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅದೇ ಸಮಯದಲ್ಲಿ ಅಡ್ವಾಣಿಯವರು ಕಮಂಡಲ ಯಾತ್ರೆ ನಡೆಸುವ ಮೂಲಕ ಬಿಜೆಪಿ ಒಬಿಸಿ ಮೀಸಲಾತಿಯನ್ನು ತೀವ್ರವಾಗಿ ವಿರೋಧಿಸಲಾಗಿತ್ತು.

ಟ್ರಾನ್ಸ್‌ಜೆಂಡರ್‌‌‌ಗಳು ವಿಶೇಷ ಮೀಸಲಾತಿಗೆ ಅರ್ಹರಾಗಿದ್ದಾರೆ: ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿತ್ತು,

2006ರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೊಳಿಸಲು ಯುಪಿಎ ಸರ್ಕಾರ ಮುಂದಾದಾಗ ಅದನ್ನು ವಿರೋಧಿಸಿ ಗುಜರಾತ್ ವೈದ್ಯಕೀಯ ವಿದ್ಯಾರ್ಥಿಗಳು ಬೀದಿಗಿಳಿದರು.ಆರ್‌ಎಸ್‌ಎಸ್, ಎಬಿವಿಪಿ ಮೀಸಲಾತಿ ವಿರೋಧಿ ಹೋರಾಟದ ನೇತೃತ್ವ ವಹಿಸಿದ್ದರು.

2008ರ ನಂತರ ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳು ಜನಪ್ರಿಯವಾದಾಗಿನಿಂದ ಮೀಸಲಾತಿ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಲಾಯಿತು. ಆನ್‌ಲೈನ್‌ನಲ್ಲಿ ಮೀಸಲಾತಿ ವಿರುದ್ಧ ಕ್ಯಾಂಪೇನ್ ಮಾಡಿದ ಬಹುತೇಕರು ಬಲಪಂಥೀಯರೇ ಆಗಿದ್ದು ಆರ್‌ಎಸ್‌ಎಸ್, ಬಿಜೆಪಿ ಸಮರ್ಥಕರಾಗಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಸಹ ಮೀಸಲಾತಿಯನ್ನು ಎಷ್ಟು ಕಾಲ ಮುಂದುವರಿಸುವುದು ಎಂಬ ಹೇಳಿಕೆ ನೀಡಿದ್ದರು. ಆರ್‌ಎಸ್‌ಎಸ್ ಸಂಘಚಾಲಕ ಮೋಹನ್ ಭಾಗವತ್ ಹಲವಾರು ಬಾರಿ ಮೀಸಲಾತಿ ವಿರುದ್ಧ ಮಾತನಾಡಿದ್ದಾರೆ.

“ಮೀಸಲಾತಿ ಜನ್ಮಸಿದ್ಧ ಹಕ್ಕಲ್ಲ. ಮೀಸಲಾತಿ ನೀತಿಯನ್ನು ಪರಾಮರ್ಶೆಗೆಒಳಪಡಿಸಬೇಕು” ಎಂದು ಹೇಳುವ ಮೂಲಕ ತಮ್ಮಅಸಹನೆಹೊರಹಾಕಿದ್ದಾರೆ.

ಇಷ್ಟು ವರ್ಷಗಳ ಕಾಲ ಒಳಗೊಳಗೆ ಮೀಸಲಾತಿಯನ್ನು ವಿರೋಧಿಸಿದ್ದ ಬಿಜೆಪಿ ಇತ್ತೀಚಿಗೆ ತನ್ನ ಮತ್ತೊಂದು ನಾಲಗೆಯನ್ನು ಹೊರತೆಗೆಯುತ್ತಿದೆ. ನಾವು ಮೀಸಲಾತಿ ನೀಡುತ್ತೇವೆ ಎನ್ನುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಏಕಾಏಕಿ 2019ರ ಲೋಕಸಭಾ ಚುನಾವಣೆಗೂ ಮೊದಲು ಸಂವಿಧಾನ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ದುರ್ಬಲರಾದ ಮೇಲ್ಜಾತಿಗಳಿಗೆ (EWS) ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ಮೀಸಲಾತಿಯನ್ನು ಘೋಷಿಸಿದರು.

“ಮೀಸಲಾತಿಯೆಂಬುದು ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ. ಬದಲಿಗೆ ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟವರಿಗೆ ಸಿಗಬೇಕಾದ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ” ಎಂಬ ತತ್ವಕ್ಕೆ ಎಳ್ಳುನೀರು ಬಿಟ್ಟುಬಿಟ್ಟರು. ಇದರ ವಿರುದ್ಧ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಎತ್ತಿದ್ದಾರೆ. ಅದರ ತೀರ್ಪು ಏನಾಗಲಿದೆ ಎಂಬುದು ಕರ್ನಾಟಕದ ಪ್ರಕರಣ ಸೇರಿದಂತೆ ಹಲವು ಸಂದರ್ಭಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ವಿ.ಪಿ ಸಿಂಗ್‌ ನಾವೀಗ ಕರ್ನಾಟಕದ ವಿಷಯಕ್ಕೆ ಬರುವುದಾದರೆ ಮೀಸಲಾತಿ ಹೆಚ್ಚಳ ಸ್ವಾಗತಾರ್ಹವಾಗಿದೆ. ಆದರೆ ಅದು ಜಾರಿಯಾಗುವಂತೆ ಮಾಡುವ ಇಚ್ಛಾಶಕ್ತಿ ಬಿಜೆಪಿಗಿದೆಯೇ ಎಂದರೆ ನಿರಾಸೆ ಕಾಡುತ್ತದೆ.

ಏಕೆಂದರೆ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಹಲವು ವರ್ಷಗಳ ಕಾಲ ಮತ್ತು ಈಗ ಸತತ 255 ದಿನ ನಿರಂತರ ಧರಣಿ ಮಾಡುತ್ತಿದ್ದರೂ ಆ ಬಗ್ಗೆ ಚಕರಾವೆತ್ತದ ಸರ್ಕಾರ ಚುನಾವಣೆ ಹೊಸ್ತಿಲಲ್ಲಿ ದಿಢೀರನೆ ಮೀಸಲಾತಿ ಹೆಚ್ಚಳ ಘೋಷಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

ಮಂತ್ರಾಲಯದ ಬ್ರಾಹ್ಮಣ ಸ್ವಾಮೀಜಿಯೊಬ್ಬರು ಶಿಕ್ಷಣ ಸಚಿವ ಸುರೇಶ್ ಕುಮಾರ್‌ರವರಿಗೆ ಒಂದು ಫೋನ್ ಮಾಡಿ ’ಹೊಸ ಮತಗಳ ಉದಯ’ ಪಾಠ ನಮ್ಮ ಧರ್ಮದ ವಿರುದ್ಧವಿದೆ ಎಂದು ಹೇಳಿದ ತಕ್ಷಣ ಆ ಪಾಠವನ್ನು ಬೋಧಿಸದಂತೆ ತಡೆಹಿಡಿಯಲಾಯಿತು. ಆನಂತರ ಆ ಪಾಠವನ್ನು ತಿದ್ದುಪಡಿ ಮಾಡಲಾಯಿತು. ಆದರೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ವರ್ಷಗಟ್ಟಲೆ ಹೋರಾಡಿ, 8 ತಿಂಗಳು ಧರಣಿ ಕೂರಬೇಕಾದದ್ದು ಏಕೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಲಿದೆಯೇ? ಜಸ್ಟಿಸ್ ದಾಸ್‌ರವರು ವರದಿ ಕೊಟ್ಟಿದ್ದು ಯಾವಾಗ? ಸರ್ಕಾರ ಘೋಷಿಸಿದ್ದು ಯಾವಾಗ ಎಂದು ನೋಡಿದರೆ ಅನುಮಾನ ಮತ್ತಷ್ಟು ದಟ್ಟವಾಗುತ್ತದೆ.

ಇಂದ್ರ ಸಾಹ್ನಿ ಪ್ರಕರಣ

ಇನ್ನು ಕಾನೂನು ತೊಡಕಿನ ವಿಚಾರಕ್ಕೆ ಬರುವುದಾದರೆ 1992ರ ಇಂದ್ರ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂಬ ಷರತ್ತನ್ನು ಹಾಕಿದೆ. ಜೊತೆಗೆ ವಿಶೇಷ ಸಂದರ್ಭದಲ್ಲಿ ಮಾತ್ರ ಈ ನಿಯಮವನ್ನು ಮೀರಬಹುದು ಎಂದು ಹೇಳಿದೆ.

ಈ ವಿಶೇಷ ಸಂದರ್ಭದ ಕಾರಣ ನೀಡಿ ಈಗಾಗಲೇ ದೇಶದ 9 ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವ ಉದಾಹರಣೆಗಳಿವೆ. ಆದರೆ ಕಳೆದ 90 ವರ್ಷಗಳಿಂದ ಜಾತಿಗಣತಿ ನಡೆಯದ, ನಿಖರವಾದ ಜಾತಿವಾರು ಡೇಟಾ ಇಲ್ಲದ ಕಾರಣ ವಿಶೇಷ ಸಂದರ್ಭವನ್ನು ನಿರೂಪಿಸಿ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಹಲವು ರಾಜ್ಯಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಜಾತಿಗಣತಿ ನಡೆದರೂ ಸಹ ಅದನ್ನು ಬಿಡುಗಡೆ ಮಾಡಿಲ್ಲ. ಇನ್ನು ಹೇಗೆ ವಿಶೇಷ ಕಾರಣ ತೋರಿಸಿ ಕರ್ನಾಟಕ ಮೀಸಲಾತಿಯನ್ನು ಶೇ56 ಹೆಚ್ಚಿಸಲು ಸಾಧ್ಯ ಎಂಬುದಕ್ಕೆ ಬಿಜೆಪಿ ಬಳಿ ಉತ್ತರವಿಲ್ಲ.

ತೆಲಂಗಾಣದ ಉದಾಹರಣೆ

ತೆಲಂಗಾಣದಲ್ಲಿ ಬುಡಕಟ್ಟು ಸಮುದಾಯದ ಜನಸಂಖ್ಯೆ ಶೇ.9ಕ್ಕಿಂತ ಹೆಚ್ಚಿದೆ ಎಂದು ವರದಿಗಳು ತಿಳಿಸಿವೆ. ಹಾಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್‌ಟಿ ಮೀಸಲಾತಿಯನ್ನು ಶೇ.6ರಿಂದ 10ಕ್ಕೆ ಏರಿಸಬೇಕೆಂದು 2017ರಲ್ಲಿ ತೆಲಂಗಾಣ ಸದನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಅದೇ ವರ್ಷ ಒಪ್ಪಿಗೆ ಮತ್ತು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಆದರೆ ಹೆಚ್ಚು ಕಡಿಮೆ ಆರು ವರ್ಷ ಕಳೆದರೂ ಸಹ ಅದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ! ಇತ್ತೀಚಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯವನ್ನು ತಪ್ಪುದಾರಿಗೆಳೆಯುತ್ತಿದೆ: ಸಿದ್ದರಾಮಯ್ಯ

ತೆಲಂಗಾಣದ ಮೀಸಲಾತಿ ಹೆಚ್ಚಳವನ್ನು ಕೇಂದ್ರ ಸರ್ಕಾರ ಏಕೆ ಅಂಗೀಕರಿಸಿಲ್ಲ? ಅಲ್ಲಿನ ಪ್ರಸ್ತಾಪವನ್ನು 6 ವರ್ಷ ಕಳೆದರೂ ಅಂಗೀಕರಿಸದಿದ್ದರೆ ಕರ್ನಾಟಕದ ಪ್ರಸ್ತಾಪವನ್ನು ಕೇವಲ 6 ತಿಂಗಳುಗಳಲ್ಲಿ ಅಂಗೀಕರಿಸುತ್ತದೆ ಎಂಬುದಕ್ಕೆ ಖಾತ್ರಿಯೇನು?

ಪ್ರಸನ್ನಾನಂದಪುರಿ ಸ್ವಾಮೀಜಿ
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡುತ್ತೇವೆ ಎನ್ನುವ ಮೂಲಕ ಕೇಂದ್ರ ಸರ್ಕಾರ EWS ಮೀಸಲಾತಿ ಜಾರಿಗೊಳಿಸುತ್ತಿದೆ. ಇದರಿಂದ ಹೆಚ್ಚು ನಷ್ಟಕ್ಕೆ ಒಳಗಾಗುವವರು ಒಬಿಸಿ ಮತ್ತು ದಲಿತರೆ ಆಗಿದ್ದಾರೆ. ಒಬಿಸಿ ಸಮುದಾಯಗಳ ಮೀಸಲಾತಿ ಹೆಚ್ಚಳಕ್ಕೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಇದು ಸಾಧ್ಯವಾಗಬೇಕಾದರೆ ಜಾತಿಗಣತಿ ನಡೆದು ಎಲ್ಲಾ ಸಮುದಾಯಗಳ ಜನಸಂಖ್ಯೆ, ಸಾಮಾಜಿಕ ಸ್ಥಿತಿಗತಿಯ ಅಧ್ಯಯನ ಅಥವಾ ಆರ್ಥಿಕ-ಸ್ಥಾನಮಾನದ ಸಮಗ್ರ ಡೇಟಾ ಹೊಂದಿರಬೇಕು. ಆದರೆ ಎಷ್ಟೇ ಒತ್ತಡ ಬಂದರೂ ಸಹ ಕೇಂದ್ರ ಸರ್ಕಾರ ಜಾತಿಗಣತಿಗೆ ಮುಂದಾಗುತ್ತಿಲ್ಲ.

ಜಾತಿಗಣತಿ ನಡೆಸಲು ಹಿಂದೇಟು ಏಕೆ?

ಆರ್ಥಶಾಸ್ತ್ರಜ್ಞ ಥಾಮಸ್ ಪಿಕೆಟಿಯವರ ಶಿಷ್ಯರಾದ ನಿತಿನ್ ಕುಮಾರ್ ಭಾರತಿಯವರು “ಭಾರತದಲ್ಲಿ ಸಂಪತ್ತಿನ ಅಸಮಾನ ಹಂಚಿಕೆ- ವರ್ಗ ಮತ್ತು ಜಾತಿ” ಎಂಬ ಸಂಶೋಧನ ಪ್ರಬಂಧವೊಂದನ್ನು ರಚಿಸಿದ್ದಾರೆ.

ಅದರಂತೆ ಇಂದಿಗೂ ದೇಶದಲ್ಲಿ ದಲಿತರು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡಲ್ಲಿಯೂ ಅತಿ ಕಡಿಮೆ ಸಂಪತ್ತಿನ ಮಾಲೀಕತ್ವ ಹೊಂದಿದ್ದಾರೆ. ಕಳೆದ ಒಂದು ದಶಕದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ತೃಪ್ತಿದಾಯಕವಾಗಿಲ್ಲ. ಇಂದಿಗೂ ಮುಂದುವರಿದ ಜಾತಿಗಳು ಅತಿಯಾದ ಪ್ರಾತಿನಿಧ್ಯವನ್ನ ಹೊಂದಿವೆ. ಇಂತಹ ಸಂದರ್ಭದಲ್ಲಿ ಜಾತಿಗಣತಿ ನಡೆದಿದ್ದೆ ಆದಲ್ಲಿ ಎಲ್ಲಾ ಜಾತಿಗಳಲ್ಲಿ ಎಷ್ಟು ಜನರಿದ್ದಾರೆ? ಅವರ ಶೈಕ್ಷಣಿಕ ಸಾಧನೆಯೆಷ್ಟು? ಆರ್ಥಿಕವಾಗಿ ಯಾವ ಸ್ಥಿತಿಯಲ್ಲಿದ್ದಾರೆ? ಎಷ್ಟು ಜನ ಉದ್ಯೋಗದಲ್ಲಿದ್ದಾರೆ? ಎಂದೆಲ್ಲಾ ವಿವರಗಳು ಬಹಿರಂಗಗೊಳ್ಳುತ್ತವೆ.

ಅವು ಖಂಡಿತವಾಗಿ ಬಲಾಢ್ಯ ಜಾತಿಗಳು ಈಗ ಸಾರ್ವಜನಿಕವಾಗಿ ಬಿಂಬಿಸುತ್ತಿರುವ ಅಂಕಿಸಂಖ್ಯೆಗಳಿಗೆ ತದ್ವಿರುದ್ಧವಾಗಿರುತ್ತವೆ ಎಂಬ ಅಭಿಪ್ರಾಯವಿದೆ.

ಜಾತಿಗಣತಿ ನಡೆದರೆ, ವಾಸ್ತವ ಸ್ಥಿತಿ ಅರಿವಾದರೆ ಮೋದಿ ಸರ್ಕಾರ ಮೇಲ್ಜಾತಿಗಳಿಗೆ ನೀಡುತ್ತಿರುವ 10% ಮೀಸಲಾತಿಗೆ ದೊಡ್ಡ ಪ್ರತಿರೋಧ ಬರುತ್ತದೆ ಎಂಬ ಭಯವಿದೆ. ಹಾಗಾಗಿ ಈ ಪಟ್ಟಭದ್ರ ಹಿತಾಸಕ್ತಿಗಳೇ ಈ ಜಾತಿಗಣತಿ ನಡೆಸಲು ಅವಕಾಶ ನೀಡುತ್ತಿಲ್ಲ.

ಇನ್ನು ಬಿಜೆಪಿ ಸರ್ಕಾರವೂ ಸಹ ಶಿಕ್ಷಣವನ್ನುಖಾಸಗೀಕರಣಗೊಳಿಸಿ, ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ. ಆ ಮೂಲಕ ಮೀಸಲಾತಿ ಕೊಟ್ಟರೂ ಸಹ ಅದು ಜನರಿಗೆ ಸಿಗದಂತೆ ಅಪ್ರಸ್ತುತ ಮಾಡುತ್ತಿದೆ.

ಈ ಎಲ್ಲಾ ಕಾರಣಗಳನ್ನು ವಿಶ್ಲೇಷಿಸಿದಾಗ ಬಿಜೆಪಿಯ ಮೀಸಲಾತಿ ಹೆಚ್ಚಳ ಎಂಬುದು ದೊಡ್ಡ ನಾಟಕದ ಭಾಗ ಎಂಬುದು ಅರಿವಾಗುತ್ತದೆ. ಮೀಸಲಾತಿ ತುಳಿತಕ್ಕೊಳಕ್ಕಾದವರ ಹಕ್ಕಾಗಿದೆ. ಆದರೆ ಅದನ್ನು ಕೊಡಲು ಸರ್ಕಾರಗಳು ಎಷ್ಟು ಸತಾಯಿಸುತ್ತಿವೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ.

ಪ್ರತಾಪ್ ಛಲವಾದಿ ಹರಪನಹಳ್ಳಿ ತಾಲ್ಲೂಕು ದಲಿತ ವಿದ್ಯಾರ್ಥಿ ಪರಿಷತ್ ಸಂಚಾಲಕರು ಮತ್ತು ಹರಪನಹಳ್ಳಿ ತಾಲ್ಲೂಕು ಛಲವಾದಿ ಮಹಾಸಭಾ ಘಟಕದ ಪ್ರಧಾನಕಾರ್ಯದರ್ಶಿಗಳು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend