ಹೆಚ್ಚುತ್ತಿರುವ ತಾಪಮಾನ ಮತ್ತು ಕುಡಿಯುವ ನೀರು, ಮೇವು ಲಭ್ಯತೆ ಬಗ್ಗೆ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು…!!!

Listen to this article

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ
ಹೆಚ್ಚುತ್ತಿರುವ ತಾಪಮಾನ ಮತ್ತು ಕುಡಿಯುವ ನೀರು, ಮೇವು ಲಭ್ಯತೆ ಬಗ್ಗೆ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇದರ ಬಗ್ಗೆ ಅರಿವು, ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಕುಡಿಯುವ ನೀರು, ಜಾನುವಾರು ಮೇವು, ನರೇಗಾ ಉದ್ಯೋಗ ನೀಡುತ್ತಿರುವ ಬಗ್ಗೆ ಪ್ರಗತಿ ಪರಿಶೀಲಿಸಿ , ಮಾತನಾಡಿದರು.

ಪ್ರಸ್ತುತ ದಿನದವರೆಗೆ ಜಿಲ್ಲೆಯ 37 ಗ್ರಾಮಗಳಿಗೆ 58 ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೋರವೆಲ್ , ಪೈಪ್ ಲೈನ್, ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆಯಲು ಒಪ್ಪಂದ ಎಲ್ಲವೂ ಆಗಿದೆ. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ , ಅಪವ್ಯಯ, ಸೋರಿಕೆ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.

ನವಿಲುತೀರ್ಥ ಜಲಾಶಯದಿಂದ ಎಂ.ಆರ್.ಬಿ.ಸಿ ಕಾಲುವೆ ಮುಖಾಂತರ ಜಿಲ್ಲೆಯ ನವಲಗುಂದ -37, ಅಣ್ಣಿಗೇರಿ-13, ಹುಬ್ಬಳ್ಳಿ-07 ಮತ್ತು ಕುಂದಗೋಳ-01 ಸೇರಿ ಒಟ್ಟು 58 ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗಿದ್ದು, ಮೇ ತಿಂಗಳ ಅಂತ್ಯದವರೆಗೆ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುಶಃ ಉಂಟಾಗುವುದಿಲ್ಲ. ಕೆರೆಗಳ ನೀರಿನ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯಲ್ಲಿ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಮೇವು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ 7 ಸ್ಥಳಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದ್ದು, ರೈತರು ಮೇವು ಪಡೆದುಕೊಳ್ಳುತ್ತಿದ್ದಾರೆ. ಮೇ ತಿಂಗಳನ್ನು ಗಮನದಲ್ಲಿಟ್ಟುಕೊಂಡು ರೈತರಿಂದ ಮೇವು ಬೇಡಿಕೆ ಅಂದಾಜಿಸಿ, ಈಗಲೇ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಿ. ರೈತರು ಪಶುಪಾಲಕರಿಗೆ ಹೆಚ್ಚು ತಾಪಮಾನ ಇರುವ ಈ ಸಂದರ್ಭದಲ್ಲಿ ಜಾನುವಾರು ಪಾಲನೆ ಮತ್ತು ಸುರಕ್ಷತೆ ಬಗ್ಗೆ ತಿಳುವಳಿಕೆ ನೀಡಿ ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದರು.

ನೀರಾವರಿ ಸೌಲಭ್ಯವಿರುವ ರೈತರಿಗೆ ನವೆಂಬರ್ ತಿಂಗಳಲ್ಲಿ ಸುಮಾರು 37 ಸಾವಿರ ಮೇವು ಬೀಜಗಳ ಕಿಟ್ ವಿತರಿಸಲಾಗಿತ್ತು. ಇದರಿಂದ ರೈತರಿಗೆ ಅಂದಾಜು 45 ಸಾವಿರ ಟನ್ ಮೇವು ಲಭ್ಯವಾಗಿರುತ್ತದೆ. ಈಗ ಮತ್ತೆ ಸರಕಾರದಿಂದ ಮೇವು ಬೀಜದ ಕಿಟ್ ಬಂದಿದ್ದು, ಅಗತ್ಯವಿರುವ ರೈತರಿಗೆ ವಿತರಿಸಿ ಎಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ವಿಫಲ ಕೊಳವೆ ಬಾವಿ ಮುಚ್ಚಿಸಿ : ಪ್ರತಿ ತಿಂಗಳು ಪಂಚಾಯತರಾಜ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಆಗಿ ತಮ್ಮ ವ್ಯಾಪ್ತಿಯ ಸಫಲ ಮತ್ತು ವಿಫಲ ಕೊಳವೆ ಬಾವಿಗಳ ಸಮೀಕ್ಷೆ ಮಾಡಿ ವರದಿ ನೀಡಲು ತಿಳಿಸಲಾಗಿದೆ. ಅದರಂತೆ ಈಗ ಬೇಸಿಗೆ ಕಾಲವಾಗಿರುವುದರಿಂದ ರೈತರು ಕೃಷಿ, ಕುಡಿಯುವ ನೀರಿಗಾಗಿ ಹೆಚ್ಚು ಹೆಚ್ಚು ಕೊಳವೆ ಬಾವಿ ತೋಡಿಸುತ್ತಾರೆ. ಅದರಲ್ಲಿ ನೀರು ಬಂದರೆ ಮೋಟಾರು ಇಳಿಸಿ ಬಳಕೆ ಮಾಡುತ್ತಾರೆ. ನೀರು ಬರದಿದ್ದಲ್ಲಿ ಹಾಗೆ ತೆರೆದು ಬಿಟ್ಟು ಬಿಡುತ್ತಾರೆ. ಇದರಿಂದ ಮಕ್ಕಳ ಜೀವಕ್ಕೆ ಆಪತ್ತು ಆಗುವ ಸಾಧ್ಯವಿರುತ್ತದೆ. ಅಂತಹ ಅಪಾಯಕಾರಿ ಕೊಳವೆ ಬಾವಿಗಳನ್ನು ಬಂದ್ ಮಾಡಿಸಬೇಕು. ವಿಫಲ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮುಚ್ಚಿಸುವುದು ತಹಶೀಲ್ದಾರ್ ಹಾಗೂ ತಾಲ್ಲೂಕ ಪಂಚಾಯತ ಇ.ಓ ಗಳ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರೈತರೊಂದಿಗೆ ನಾವಿದ್ದೇವೆ : ಬರಗಾಲದಲ್ಲಿ ಬಸವೆಳೆದಿರುವ ರೈತರಿಗೆ ಮಾಹಿತಿಯುಕ್ತ ಆಸರೆ ಆಗಲು ಜಿಲ್ಲಾಡಳಿತ ಆರಂಭಿಸಿರುವ ರೈತರೊಂದಿಗೆ ನಾವಿದ್ದೇವೆ ಅಭಿಯಾನವನ್ನು ಪ್ರತಿ ತಾಲ್ಲೂಕಿನಲ್ಲಿರುವ ಜಾನುವಾರು ಮಾರುಕಟ್ಟೆ , ದನಗಳ ಸಂತೆಯಲ್ಲಿ ಆಯೋಜಿಸಿ , ಜಿಲ್ಲಾಡಳಿತ , ತಾಲ್ಲೂಕು ಆಡಳಿತ ನಿಮ್ಮೊಂದಿಗೆ ಇದ್ದು, ನಿಮ್ಮ ಕಷ್ಟಗಳಿಗೆ ಸ್ಪಂದಿಸಲಿದೆ ಎಂಬ ಭರವಸೆಯನ್ನು ರೈತರಲ್ಲಿ ಮೂಡಿಸಬೇಕು.

ಧಾರವಾಡ ಜಿಲ್ಲಾಡಳಿತದಿಂದ ಜೂನ ತಿಂಗಳವರೆಗೆ ಬರಬಹುದಾದ ಕುಡಿಯುವ ನೀರಿನ ಸಮಸ್ಯೆ, ಜಾನುವಾರು ಮೇವು ಕೊರತೆ ಅಂದಾಜಿಸಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರಿಗೆ, ಸಾರ್ವಜನಿಕರಿಗೆ ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಲು ಜಿಲ್ಲಾಧಿಕಾರಿಗಳ ಕಚೇರಿ, ತಹಶೀಲ್ದಾರ ಕಚೇರಿ ಮತ್ತು ತಾಲ್ಲೂಕು ಪಂಚಾಯತಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ, ಮೇವು ಬ್ಯಾಂಕ್ ತೆರೆದು, ಮೇವು ಪೂರೈಸಲಾಗುತ್ತಿದೆ. ಈ ಎಲ್ಲಾ ಮಾಹಿತಿ ಜಿಲ್ಲೆಯ ಪ್ರತಿ ಗ್ರಾಮಗಳಿಗೆ ತಲುಪಬೇಕು ಎಂದರು.

ಪ್ರತಿ ಗ್ರಾಮಪಂಚಾಯತಿಯಿಂದ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಬರ ನಿರ್ವಹಣೆಯಲ್ಲಿ ಕೈಗೊಂಡಿರುವ ಕ್ರಮಗಳು, ಮೇವು ಲಭ್ಯತೆ, ಕುಡಿಯವ ನೀರು, ಸಹಾಯವಾಣಿಗಳ ಬಗ್ಗೆ ಡಂಗುರ ಸಾರುವ, ಟಂ, ಟಂ ಹೊಡೆದು ಹೇಳುವ ಮತ್ತು ಕಸದ ವಾಹನಗಳಲ್ಲಿ ಜಿಂಗಲ್, ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ಮಾಹಿತಿ ತಲುಪಿಸಬೇಕು. ಜನರಿಗೆ ಮಾಹಿತಿ ಕೊರತೆ ಆಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ತಹಶೀಲ್ದಾರರು ಮತ್ತು ಪಶುಪಾಲನೆ ಅಧಿಕಾರಿಗಳು ಪ್ರತಿ ಜಾನುವಾರು ಮಾರುಕಟ್ಟೆಯಲ್ಲಿ ಅಭಿಯಾನ ಕುರಿತು ಹೆಚ್ಚು ಪ್ರಚಾರ ಮಾಡಬೇಕು. ಮಾರುಕಟ್ಟೆಗೆ ಬಂದಿರುವ ರೈತರನ್ನು ಮಾತನಾಡಿಸಿ, ಅವರಿಗೆ ಮಾಹಿತಿ ನೀಡಬೇಕು. ಧ್ವನಿವರ್ಧಕ ಬಳಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ತಮ್ಮ ತಾಲ್ಲೂಕಿನಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಶುಪಾಲನೆ ಇಲಾಖೆಯ ನಿರ್ದೇಶಕ ಡಾ. ರವಿ ನಿಲಿಗೌಡರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ, ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಭೂದಾಖಲೆಗಳ ಉಪನಿರ್ದೇಶಕ ಮೋಹನ ಶಿವಣ್ಣವರ ಸೇರಿದಂತೆ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ತಾ.ಪಂ ಇ.ಓ ಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು….

ವರದಿ. ಮಹಾಲಿಂಗ ಗಗ್ಗರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend