ಜಿಲ್ಲಾ ಪೋಲೀಸ ಧ್ವಜ ದಿನಾಚರಣೆ ಹಾಗೂ ಪೋಲೀಸ ಸಿಬ್ಬಂದಿಗೆ ಸೈಬರ್ ಕ್ರೈಮ್ ತಿಳುವಳಿಕೆ,ಕಾರ್ಯಕ್ರಮ…!!!

Listen to this article

ಜಿಲ್ಲಾ ಪೋಲೀಸ ಧ್ವಜ ದಿನಾಚರಣೆ
ಪೋಲೀಸ ಸಿಬ್ಬಂದಿಗೆ ಸೈಬರ್ ಕ್ರೈಮ್ ತಿಳುವಳಿಕೆ, ಉನ್ನತವಾದ ತಾಂತ್ರಿಕ ತರಬೇತಿ ಮತ್ತು ಪೋಲೀಸ ಮ್ಯಾನುವಲ್ ಮನದಟ್ಟು ಅಗತ್ಯವಿದೆ: ನಿವೃತ್ತ ಪೋಲೀಸ ಅಧೀಕ್ಷಕ ಎ.ಎಸ್.ಮಗೆಣ್ಣವರ

ಧಾರವಾಡ : ಇಂದು ಪೋಲೀಸ ಇಲಾಖೆಗೆ ವಿವಿಧ ವಿಷಯಗಳ ಪದವಿ, ಸ್ನಾತಕೋತ್ತರ ಪದವಿಧರರು ಸೇರಿಕೊಳ್ಳುತ್ತಿದ್ದಾರೆ. ಅವರಿಗೆ ಇಂದು ಅಕ್ಷರಸ್ಥರು, ಅನಕ್ಷರಸ್ಥರು ಎಂಬ ಬೇಧವಿಲ್ಲದೆ ಬಹುತೇಕರನ್ನು ವಂಚಿಸುತ್ತಿರುವ ಸೈಬರ್ ಕ್ರೈಮ್ ಬಗ್ಗೆ ಮತ್ತು ಅಪರಾಧ ಪ್ರಕರಣಗಳನ್ನು ಶಿಕ್ಷೆಗೆ ಒಳಪಡಿಸಲು ಅಗತ್ಯವಿರುವ ಸಾಕ್ಷಿ ಸಂಗ್ರಹ, ತನಿಖೆಗೆ ಅಗತ್ಯವಿರುವ ತಾಂತ್ರಿಕ ಜ್ಞಾನದ ತರಬೇತಿ ನೀಡಬೇಕೆಂದು ನಿವೃತ್ತ ಪೋಲೀಸ ಅಧೀಕ್ಷಕ ಎ.ಎಸ್.ಮಗೆಣ್ಣವರ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಧಾರವಾಡ ಪೋಲೀಸ್ ಇಲಾಖೆ ಜಿಲ್ಲಾ ಸಶಸ್ತ್ರ ಮೀಸಲು ಪೋಲೀಸ್ ಪಡೆಯ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೋಲೀಸ ಧ್ವಜ ದಿನಾಚರಣೆ ಮತ್ತು ಸೇವಾ ನೀವೃತ್ತರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.

ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿದರೆ ಸಾಲದು. ಅಪರಾಧಿಗಳು ಮಾಡಿದ ಅಪರಾಧ ಸಾಬೀತು ಆಗಿ, ಅವರಿಗೆ ಶಿಕ್ಷೆ ಆಗುವವರೆಗೆ ಪಾಲೋಅಫ್ ಮಾಡಬೇಕು ಎಂದು ಅವರು ಹೇಳಿದರು.

ಸಾರ್ವಜನಿಕರ ಸಹಕಾರವಿಲ್ಲದೆ ನಮ್ಮ ಕರ್ತವ್ಯ ಪೂರ್ಣವಾಗುವುದಿಲ್ಲ. ಸಾರ್ವಜನಿಕರ ಶಾಂತಿ, ಸುರಕ್ಷತೆ ಮತ್ತು ಸುವ್ಯವಸ್ಥೆ ಬಗ್ಗೆ ಪೋಲೀಸ ಇಲಾಖೆ ಕಾಳಜಿವಹಿಸುವದರಿಂದ ಜನರೊಂದಿಗೆ ಇಲಾಖೆಯ ಸಂಬಂಧ ಉತ್ತಮವಾಗಿ ಬೆಳೆಯುತ್ತದೆ ಎಂದರು.

ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ, ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡದ ಬಗ್ಗೆ ಸರಿಯಾದ ತಿಳುವಳಿಕೆ ನೀಡಿ, ಜಾಗೃತಿ ಮೂಡಿಸಬೇಕು. ಸಾರ್ವಜನಿಕರೊಂದಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪೋಲೀಸ ಇಲಾಖೆ ಬಗ್ಗೆ, ಪೋಲೀಸ ಕಾರ್ಯಗಳ ಬಗ್ಗೆ, ದಿನನಿತ್ಯದ ಸಾಮಾನ್ಯ ಕಾನೂನುಗಳ ಬಗ್ಗೆ ವಿಶೇಷ ಕಾರ್ಯಕ್ರಮಗಳ ಮೂಲಕ ತಿಳುವಳಿಕೆ ಮೂಡಿಸಬೇಕು ಎಂದು ಅವರು ತಿಳಿಸಿದರು.

ಪೋಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪೋಲೀಸ ಮ್ಯಾನುವಲ್ ಮನನ ಮಾಡಿಕೊಳ್ಳಬೇಕು. ಕರ್ನಾಟಕ ಪೋಲೀಸ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿ ಅಗತ್ಯವೆನಿಸಿದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಲಹೆಗಳನ್ನು ಪಡೆಯಬೇಕು. ಹೆಮ್ಮೆ, ಅಭಿಮಾನದಿಂದ ಪ್ರತಿಯೊಬ್ಬರು ಕರ್ತವ್ಯ ನಿರ್ವಹಿಸಬೇಕು. ಪ್ರತಿ ಪೋಲೀಸ ಠಾಣೆಯಲ್ಲಿ ಅಂತಹ ಪೂರಕ ವಾತಾವರಣ ನಿರ್ಮಾಣವಾಗಬೇಕು. ಪೋಲೀಸ ಇಲಾಖೆಯ ಎಲ್ಲರೂ ಕೂಡಿ, ಪರಸ್ಪರ ಗೌರವ, ಅಭಿಮಾನದಿಂದ ಕರ್ತವ್ಯ ನಿರ್ವಹಿಸುವದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಿ, ಜನಸ್ನೇಹಿ ಪೋಲೀಸ ಆಗಲು ಸಾಧ್ಯವಿದೆ ಎಂದು ಎ.ಎಸ್.ಮಗೆಣ್ಣವರ ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಪೋಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಅವರು ಸ್ವಾಗತಿಸಿ, ಕಳೆದ ಸಾಲಿನ ಪೋಲೀಸ್ ಕಲ್ಯಾಣ ಚಟುವಟಿಕೆಗಳ ವರದಿ ಮಂಡಿಸಿದರು.
ಹೆಚ್ಚುವರಿ ಪೋಲೀಸ್ ಅಧೀಕ್ಷಕ ನಾರಾಯಣ ಬರಮನಿ ಅವರು ವಂದಿಸಿದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಪಥಸಂಚಲನ: ಪೋಲೀಸ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪರೇಡ್ ಕಮಾಂಡರ್ , ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್.ಪಿ.ಐ. ವಿಠ್ಠಲ ಟಿ.ಕೋಕಟನೂರ ಹಾಗೂ 2ನೇ ಪರೇಡ್ ಕಮಾಂಡರ್ ಆರ್.ಎಸ್.ಗುಡನಟ್ಟಿ ಅವರ ನಾಯಕತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ಪಥಸಂಚಲನದ ವಿವಿಧ ತಂಡಗಳಿಗೆ ಮಲ್ಲನಗೌಡ ಗುತ್ತರಗಿ, ಮಂಜುನಾಥ ಕುರಗೋಡ,ಆನಂದಕುಮಾರ.ಬಿ., ಮಲ್ಲಿಕಾರ್ಜುನ ನರಗುಂದ, ಕುಮಾರಿ.ಲಕ್ಷ್ಮಿ ದೇಗಿನಾಳ ಮತ್ತು ವಾಸು ರಕ್ಷೇದ ಅವರು ನೇತೃತ್ವವಹಿಸಿದ್ದರು.

ಆರ್.ಎಸ್.ಐ. ವೈ.ಎಫ್.ಭಜಂತ್ರಿ ಹಾಗೂ ಸ್ಟಿಕ್ ಮೇಜರ್ ಸಾಗರ ಬಸರಕೋಡಿ ಅವರ ತಂಡ ಮಧುರವಾದ ಹಿನ್ನಲೆ ಸಂಗೀತದೊಂದಿಗೆ ಪೋಲೀಸ್ ಬ್ಯಾಂಡ್ ನುಡಿಸಿತು.

ಸೇವಾ ನಿವೃತ್ತರಿಗೆ ಗೌರವ ಸನ್ಮಾನ:*ಏಪ್ರಿಲ್ 2023 ರಿಂದ ಮಾರ್ಚ್ 2024 ರ ಅವಧಿಯಲ್ಲಿ ಸೇವಾ ನಿವೃತ್ತರಾದ ಗುಡಗೇರಿ ಪೋಲೀಸ ಠಾಣೆಯ ಎಸ್.ಎ.ಮಿಶ್ರಿಕೋಟಿ, ಅಳ್ನಾವರ ಪೆÇಲೀಸ ಠಾಣೆಯ ಎಂ.ಎ.ಅಧೋನಿ ಮತ್ತು ಕೆ.ಬಿ.ಗುಡಗೇರಿ, ಧಾರವಾಡ ಗ್ರಾಮೀಣ ಠಾಣೆಯ ಆರ್.ಎಸ್.ಜಾಧವ, ರಾಜ ಗುಪ್ತವಾರ್ತೆಯ ಬಿ.ಎಂ. ಕೆರಕನವರ, ಹುಬ್ಬಳ್ಳಿ ಗ್ರಾಮೀಣ ಠಾಣೆಯ ಎಂ.ಎಚ್.ಕವಲೂರ, ಡಿಸಿಆರ್ ಬಿ ಯ ಮಹಿಳಾ ಎ.ಎಸ್.ಐ ಎಸ್.ವಿ.ಚಂಗಳಿ, ಮಹಿಳಾ ಪೋಲೀಸ ಠಾಣೆಯ ಬಿ.ಎಲ್.ಬಳಿಗೇರ ಮತ್ತು ಡಿಎಆರ್ ನ ಎಸ್.ಕೆ.ಪೇಟೆ ಅವರನ್ನು ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಿ, ಸೇವಾ ನಿವೃತ್ತರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಧಾರವಾಡ ಕೇಂದ್ರ ಕಾರಾಗೃಹ ಅಧೀಕ್ಷಕ ಡಾ.ಕೆ.ಎಂ.ಮರಿಗೌಡ ಸೇರಿದಂತೆ ಜಿಲ್ಲೆಯ ಹಿರಿಯ ಪೋಲೀಸ ಅಧಿಕಾರಿಗಳು, ಎಲ್ಲ ಠಾಣೆಗಳ ಸಿಪಿಐ ಅವರು, ನಿವೃತ್ತ ಹಿರಿಯ ಪೋಲೀಸ ಅಧಿಕಾರಿಗಳು, ಸಿಬ್ಬಂದಿಗಳು, ಪೋಲೀಸ್ ಕುಟುಂಬಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು….

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend