ಬಳ್ಳಾರಿ ಮಹಾನಗರ ಪಾಲಿಕೆ: ವಿವಿಧ ವಾರ್ಡ್‍ಗಳಲ್ಲಿ ಮತದಾನ ಜಾಗೃತಿ
ಸುಭದ್ರ ಪ್ರಜಾಪ್ರಭುತ್ವ ಆಯ್ಕೆಗೆ ಮತದಾನ ಕಡ್ಡಾಯ: ದೇವರಾಜ
ಬಳ್ಳಾರಿ:ಸುಭದ್ರ ಪ್ರಜಾಪ್ರಭುತ್ವ ಆಯ್ಕೆಗೆ ಅರ್ಹ ಮತದಾರರೆಲ್ಲರಿಗೂ ಸ್ಥಾನಮಾನವಿದ್ದು, ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತದಾನ ಹಕ್ಕನ್ನು ಚಾಚೂ ತಪ್ಪದೇ ಚಲಾಯಿಸಬೇಕು ಎಂದು ಮಹಾನಗರ ಪಾಲಿಕೆಯ ಯೋಜನಾ ವ್ಯವಸ್ಥಾಪಕ ದೇವರಾಜ ಅವರು ಹೇಳಿದರು.
ರವಿವಾರದಂದು 94-ಬಳ್ಳಾರಿ ನಗರ ಕ್ಷೇತ್ರ ವ್ಯಾಪ್ತಿಯ ಬಳ್ಳಾರಿ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 19 ರ ವ್ಯಾಪ್ತಿಯ ಮಹಾನಂದಿ ಕೊಟ್ಟಂ, ಕನ್ನಡ ನಗರ ಹಾಗೂ ವಾರ್ಡ್ ಸಂಖ್ಯೆ 20 ರ ಗಣೇಶ ಕಾಲೋನಿ, ರಾಯಲ್ ಕಾಲೋನಿ, ಸಿದ್ದುಕಿ ಕಾಲೋನಿ ಮತ್ತು ನಿಜಲಿಂಗಪ್ಪ ಕಾಲೋನಿಗಳಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತದಾನದ ಹಕ್ಕು ಸಂವಿಧಾನಾತ್ಮಕವಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ದೊರೆತಿದೆ. ಪ್ರತಿನಿಧಿಗಳನ್ನು ಚುನಾವಣೆಗಳ ಮೂಲಕ ಆಯ್ಕೆ ಮಾಡುವಾಗ ಮತವನ್ನು ಹಣ ಅಥವಾ ಬೇರೆ ಯಾವುದೇ ಆಮಿಷಕ್ಕೆ ಒಳಗಾಗದೇ ಮತವನ್ನು ಮಾರಿಕೊಳ್ಳದೇ ನೈತಿಕವಾಗಿ ಮತದಾನ ಮಾಡಬೇಕು ಎಂದರು.
ಪ್ರತಿಯೊಬ್ಬರೂ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲುದಾರರಾಗಬೇಕು. ಹೀಗಾಗಿ, ನಗರದ ಹಲವು ಕಡೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ಬಾರಿ ಪೂರ್ಣ ಪ್ರಮಾಣದಲ್ಲಿ ಮತದಾನ ನಡೆಯುವ ಗುರಿ ಇಟ್ಟಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವುದು ಅತ್ಯಗತ್ಯವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸಾಕಷ್ಟು ಜನ ಜಾಗೃತಿ ಹಮ್ಮಿಕೊಂಡಿದ್ದು, ಮತದಾನದ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಪಾಲಿಕೆಯ ತ್ಯಾಜ್ಯ ಸಂಗ್ರಹಿಸುವ ವಾಹನಗಳಲ್ಲಿ ಮತದಾನದ ಜಾಗೃತಿ ಗೀತೆ ಪ್ರಸಾರವಾಗುತ್ತಿದೆ. ಇದರ ಜೊತೆಗೆ ಮತದಾನ ಜಾಗೃತಿ ಕುರಿತ ವಿವಿಧ ಗೀತೆಗಳನ್ನು ಪ್ರಸಾರ ಮಾಡಲಾಗುವುದು.
ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಎಲ್ಲಾ ಕಡೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಬ್ಯಾನರ್‍ಗಳನ್ನು ಹಾಕಲಾಗಿದೆ. ಮತದಾನ ಪ್ರಮಾಣ ಹೆಚ್ಚಳಕ್ಕೆ ನಗರದ ವಿವಿಧೆಡೆ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಲಯ ಆಯುಕ್ತ ಗುರುರಾಜ ಸವದಿ, ಪಾಲಿಕೆಯ ಪರಿಸರ ಅಭಿಯಂತರರಾದ ಕಿರಣ್, ಹರ್ಷವರ್ಧನ ಸೇರಿದಂತೆ ಕಂದಾಯ, ತಾಂತ್ರಿಕ ಮತ್ತು ಆರೋಗ್ಯ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಮತ್ತೀತರರು ಹಾಜರಿದ್ದರು….
ವರದಿ. ಮಂಜುನಾಥ್, ಎನ್, ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030