ಮಕ್ಕಳಿಗೆ ಸಕಾಲದಲ್ಲಿ ದಡಾರ ಲಸಿಕೆ ಹಾಕಿಸಿ, ಸೋಂಕು ತಡೆಯಲು ಕೈ ಜೋಡಿಸಿ
ಬಳ್ಳಾರಿ:ಮಾರ್ಬಿಲೀ ವೈರಸ್ ಪ್ರಭೇದದ ರುಬೆಲ್ಲಾ ವೈರಸ್‍ನಿಂದ ಹರಡುವ ದಡಾರ ವೈರಾಣುವಿನ ಸೋಂಕು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆಯಾದರೂ ಹದಿಹರೆಯದವರು ಮತ್ತು ಪ್ರೌಢರನ್ನು ಕೂಡ ಬಾಧಿಸುತ್ತದೆ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಸಕಾಲದಲ್ಲಿ ದಡಾರ ಲಸಿಕೆ ಹಾಕಿಸುವ ಮೂಲಕ ಸೋಂಕು ತಡೆಯಲು ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಹೇಳಿದರು.
ಕುರುಗೋಡು ತಾಲ್ಲೂಕಿನ ಮುಷ್ಟಗಟ್ಟೆ ಗ್ರಾಮದಲ್ಲಿ ಮನೆ ಭೇಟಿ ಸಂದರ್ಭದಲ್ಲಿ ಮಾತನಾಡಿದ ಅವರು, ಮಗುವಿನ ವಯಸ್ಸಿನ ಅನುಗುಣವಾಗಿ ದಡಾರ ಲಸಿಕೆಯ ಮೊದಲು ಡೋಸನ್ನು 9-12 ತಿಂಗಳ ವಯಸ್ಸು ಮತ್ತು ಎರಡನೇ ಡೋಸನ್ನು 16-24 ತಿಂಗಳ ವಯಸ್ಸಿನಲ್ಲಿ ಹಾಕಿಸುವ ಮೂಲಕ ದಡಾರ ರೋಗವನ್ನು ನಿಯಂತ್ರಿಸಲು ಕೈ ಜೋಡಿಸಬೇಕು ಎಂದು ಅವರು ಕೋರಿದರು.
ಪ್ರಸ್ತುತ ಪ್ರಖರ ಬೇಸಿಗೆಯ ಹಿನ್ನಲೆಯಲ್ಲಿ ಮಕ್ಕಳಿಗೆ ಬೆವರುಸಾಲಿ ರೂಪದಲ್ಲಿಯೂ ಸಹ ಮೈಮೇಲೆ ಚಿಕ್ಕ ಚಿಕ್ಕ ಗುಳ್ಳೆಗಳು (ನುಚ್ಚುಗುಳ್ಳೆ) ಕಂಡುಬರುತ್ತವೆ. ಕೆಲವೊಮ್ಮೆ ಪಾಲಕರಿಗೆ ದಡಾರದ ಕುರಿತು ಗುರುತಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಸೂಚಿಸಿದರು.
ದಡಾರವು ಒಂದು ತೀವ್ರ ತರಹದ ಸೋಂಕು ರೋಗವಾಗಿದ್ದು, ಗಾಳಿಯ ಮೂಲಕ ಹರಡುತ್ತದೆ. ದಡಾರ ಲಸಿಕೆ ಹಾಕಿಸಿಕೊಳ್ಳದ ಅಥವಾ ಈ ಹಿಂದೆ ದಡಾರಕ್ಕೆ ತುತ್ತಾಗದವರಲ್ಲಿ ಈ ವೈರಾಣು ಸೋಂಕು ಉಂಟುಮಾಡುವ ಮೂಲಕ ದಡಾರಕ್ಕೆ ಕಾರಣವಾಗಬಹುದು ಎಂದರು.
ಮಕ್ಕಳ ಗುಂಪಿನಲ್ಲಿ ಇರಬಹುದಾದ ಸೋಂಕುಪೀಡಿತ ಮಗು ಒಂದು ಬಾರಿ ಸೀನಿದರೆ ಸಾಕು, ಗುಂಪಿನಲ್ಲಿರುವ ಇತರೆ ಮಕ್ಕಳಿಗೂ ದಡಾರ ಹರಡುತ್ತದೆ. ಈ ವೈರಾಣುವಿನ ಸಂಪರ್ಕಕ್ಕೆ ಬರುವ ರೋಗ ನಿರೋಧಕ ಶಕ್ತಿ ಹೊಂದಿರುವ ಯಾವುದೇ ಮಗು ದಡಾರಕ್ಕೆ ತುತ್ತಾಗುತ್ತದೆ, ದಡಾರ ಸೋಂಕಿಗೆ ಒಳಗಾಗಿರುವ ವ್ಯಕ್ತಿ ನಿಮ್ಮ ಹತ್ತಿರದಲ್ಲಿ ಸೀನಿದರೆ, ಕೆಮ್ಮಿದರೆ ಅಥವಾ ಕೇವಲ ನಿಮ್ಮ ಜತೆಗೆ ಮಾತನಾಡಿದರೆ ಕೂಡ ನಿಮಗೆ ದಡಾರ ಸೋಂಕು ಉಂಟಾಗಬಲ್ಲದು. ಒಂದು ವೇಳೆ ನಿರ್ಲಕ್ಷಿಸಿದರೆ ಮಗುವಿಗೆ ಅಪಾಯ ಎದುರಾಗಬಹುದಾಗಿದ್ದು, ಸಾರ್ವಜನಿಕರು ಲಸಿಕೆಯ ಜೊತೆಗೆ ಮಕ್ಕಳ ಶುಚಿತ್ವ ಹಾಗೂ ಪೌಷ್ಠಿಕ ಆಹಾರ ನೀಡುವುದಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ದಡಾರ ಲಕ್ಷಣಗಳು:
38.3 ಡಿಗ್ರಿ ಸೆಂಟಿಗ್ರೇಡ್ ಅಥವಾ ಅದಕ್ಕಿಂತ ಹೆಚ್ಚು ಜ್ವರ, ಕೆಮ್ಮು, ಮೂಗಿನಿಂದ ಸಿಂಬಳ ಸುರಿಯುವಂತಹ ಶೀತ ಅಥವಾ ಕಣ್ಣುಗಳು ಕೆಂಪಾಗುವುದು, ಜ್ವರ ಆರಂಭವಾಗಿ 3 ರಿಂದ 7 ದಿನಗಳ ಬಳಿಕ ಮೈಮೇಲೆ ಕೆಂಪನೆಯ ನೀರು ಸಹಿತ ಗುಳ್ಳೆಗಳು ಉಂಟಾಗುತ್ತದೆ. ಈ ಗುಳ್ಳೆಗಳು ಕಿವಿಗಳ ಹಿಂಭಾಗದಲ್ಲಿ ಉಂಟಾಗಲು ಆರಂಭವಾಗಿ ಬಳಿಕ ಮುಖಕ್ಕೆ ಹರಡುತ್ತವೆ, ಅನಂತರ ದೇಹವಿಡೀ ವ್ಯಾಪಿಸಿ ಕೈಗಳು ಮತ್ತು ಕಾಲುಗಳಿಗೂ ಹರಡುತ್ತವೆ.
ಪ್ರಸ್ತುತ ಎಲ್ಲಾ ತಾಲ್ಲೂಕು ಮಟ್ಟದ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ದಡಾರದೊಂದಿಗೆ ರುಬೆಲ್ಲಾ ರೋಗಕ್ಕೂ ಸಹಿತ ದಡಾರ ರುಬೆಲ್ಲಾ ಜಂಟಿ ಲಸಿಕೆಯನ್ನು ಹಾಕಲಾಗುತ್ತಿದ್ದು, ಪ್ರತಿ ಗುರುವಾರ ಗ್ರಾಮೀಣ ಭಾಗದ ಎಲ್ಲಾ ಹಳ್ಳಿಗಳಲ್ಲಿ ಹಾಗೂ ನಗರ ಪ್ರದೇಶದ ವಾರ್ಡ್ ಮಟ್ಟದಲ್ಲಿ ನಿಗಧಿಪಡಿಸಿ ಸ್ಥಳಗಳಲ್ಲಿ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರಕುಮಾರ್, ವೈದ್ಯಾಧಿಕಾರಿಗಳಾದ ಡಾ.ಗುರು ಬಸವರಾಜ್, ಡಿಎನ್‍ಓ ಗಿರೀಶ್, ಆರೊಗ್ಯ ಮೇಲ್ವಿಚಾರಣಾಧಿಕಾರಿ ವಿರುಪಾಕ್ಷಿ ಸೇರಿದಂತೆ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು….
ವರದಿ. ವಿರೇಶ್, ಎಚ್, ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030