ಮೋದಿ ಆಸ್ತಿ ಮಾಡಿಲ್ಲವಂತೆ…!!!

Listen to this article

ಮೋದಿ_ಆಸ್ತಿ_ಮಾಡಿಲ್ಲವಂತೆ:

“ನಾನು ಅಕ್ರಮವಾಗಿ ಆಸ್ತಿಪಾಸ್ತಿ ಗಳಿಸಿದ್ರೆ, ವಿದೇಶದಲ್ಲಿ ಹಣ ಇಟ್ಟಿದ್ರೆ ತೋರಿಸಿ ನೋಡೋಣ. ನಾನು ಯಾವತ್ತೂ ಶ್ರೀಮಂತನಾಗಬೇಕೆಂಬ ಕನಸು ಕಂಡಿಲ್ಲ.” ಎಂದು ಹೇಳುತ್ತಿರುತ್ತಾರೆ ನರೇಂದ್ರ ಮೋದಿ.*

ಹೌದು, ತಾವು ತಮಗೆ, ತಮ್ಮ ಕುಟುಂಬಕ್ಕೆ ಏನನ್ನೂ ಮಾಡಿಕೊಂಡಿಲ್ಲ! ಬಡ ತಾಯಿ ಮತ್ತು ಹೆಂಡತಿಯನ್ನು ಬಿಟ್ಟು ಬಂದವರು ನೀವು. ಆದರೆ, ತಮ್ಮ ಧಣಿಗಳ ಸೇವೆಗೆ, ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದೀರಿ. ತಮಗೆ ಆಶ್ರಯ ಕೊಟ್ಟು, ದೇಶದ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಮಾಡಿದ ‘ಸಂಘ’ ಮತ್ತು ಅದರ ಪೋಷಕರಾದ ದೊಡ್ಡ ಬಂಡವಾಳಗಾರರಿಗೆ ಏನು ಬೇಕೋ ಆ ಎಲ್ಲವನ್ನೂ ಮಾಡಿಕೊಟ್ಟಿದ್ದೀರಿ. ಇವರ ಅಣತಿಯಂತೆ ವಿದೇಶಿ ಬಂಡವಾಳಗಾರರಿಗೂ ದೇಶದ ಸಂಪತ್ತನ್ನು ದೋಚಲು ಸಾಕಷ್ಟು ಅನುವು ಮಾಡಿಕೊಟ್ಟಿದ್ದೀರಿ. ನಿಮ್ಮ ಐಷಾರಾಮಿ ಜೀವನಕ್ಕಾಗಿ ಏನು ಬೇಕೋ ಅವೆಲ್ಲವನ್ನು ಇವರೆಲ್ಲರೂ ಸೇರಿ ಪೂರೈಸುತ್ತಿದ್ದಾರೆ. ಮತ್ತು ನಿಮ್ಮ ಜೀವಿತಾವಧಿ ಪೂರ್ಣಗೊಳ್ಳುವವರೆಗೂ ಪೂರೈಸುತ್ತಲೇ ಇರುತ್ತಾರೆ. ಹೀಗಿರುವಾಗ ನಿಮಗೆ ಸ್ವಂತ ಆಸ್ತಿಪಾಸ್ತಿಗಳ ಚಿಂತೆ ಏಕೆ?

*ತಮ್ಮ ಧಣಿಗಳ ಸೇವೆಗಾಗಿ ಬಡವರ ಬದುಕನ್ನು ಬಲಿ ಕೊಟ್ಟಿದ್ದೀರಿ. ಜನಸಾಮಾನ್ಯರ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದೀರಿ. ಉದ್ಯಮಿಗಳ ಲಕ್ಷಾಂತರ ಕೋಟಿ ತೆರಿಗೆ ಮನ್ನಾ ಮಾಡಿದ್ದೀರಿ.*

ದೊಡ್ಡವರ ಕಪ್ಪು ಹಣ ಬಿಳಿ ಮಾಡಲು ಬಡವರ ಬಳಿ ಇದ್ದ ಐನೂರು, ಸಾವಿರ ನೋಟುಗಳಿಗೆ ಮೌಲ್ಯವೇ ಇಲ್ಲದಂತೆ ಮಾಡಿ, ಅದನ್ನೂ ಒಮ್ಮೇಲೆ ಕುಸಿದು ಕೊಂಡು, ಸಂಕಷ್ಟ ತಂದಿಟ್ಟಿರಿ.

*ಇತ್ತ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತದ ಹಣ ಇಡಲಾಗದ ಬಡವರಿಗೆ ದಂಡ ವಿಧಿಸುತ್ತೀರಿ. ಸಾಲ ತೀರಿಸಲಾಗದ ಬಡ ರೈತರ ಆಸ್ತಿ ಜಪ್ತಿ ಮಾಡುತ್ತೀರಿ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಪಡೆದ ಸಾಲ ಮರುಪಾವತಿ ಮಾಡಲಾಗದ ಕಾರಣಕ್ಕೆ ಬಲವಂತವಾಗಿ ವಸೂಲಿ ಮಾಡಲು ಮುಂದಾಗುತ್ತೀರಿ. ಅತ್ತ ಉದ್ಯಮಪತಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುತ್ತೀರಿ. ಮತ್ತೆಮತ್ತೆ ಅವರಿಗೇ ಸಾಲ ಕೊಡುತ್ತೀರಿ.*

ದೊಡ್ಡ ಬಂಡವಾಳಗಾರರಿಗೆ ಮತ್ತು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳಿಗೆ ‘ವಿದೇಶಿ ನೇರ ಬಂಡವಾಳ ಹೂಡಿಕೆ’ ಹೆಸರಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ಮುಕ್ತ ಅವಕಾಶ ಕೊಟ್ಟು, ಸಣ್ಣ ಪುಟ್ಟ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಹೊಡೆದಿದ್ದೀರಿ.

*ಪ್ರಕೃತಿ ಸಂಪತ್ತನ್ನು ದೋಚಲು, ಬ್ಯಾಂಕುಗಳನ್ನು ದೋಚಲು, ಸಾರ್ವಜನಿಕ ಉದ್ದಿಮೆಗಳನ್ನು ತಮ್ಮಂತೆ ಮಾಡಿಕೊಳ್ಳಲು, ರೈತರ ಕೃಷಿ ಭೂಮಿ ಕಸಿದುಕೊಳ್ಳಲು, ಕೃಷಿ, ವಿಮೆ, ಹಣಕಾಸು, ಕೈಗಾರಿಕಾ ಉತ್ಪಾದನೆ, ರೈಲ್ವೆ, ರಸ್ತೆ, ಸಾರಿಗೆ, ಶಿಕ್ಷಣ, ಆರೋಗ್ಯ,… ಈ ಎಲ್ಲಾ ವಲಯಗಳಲ್ಲಿಯೂ ದೇಶದ ಬಂಡವಾಳಗಾರರು ಮತ್ತು ಇವರ ಮಿತ್ರರಾದ ವಿದೇಶಿ ಬಂಡವಾಳಗಾರರು ಏಕಸ್ವಾಮ್ಯ ಸಾಧಿಸಲು ಏನು ಬೇಕೋ ಅವೆಲ್ಲವನ್ನು ತಾವು ತಮ್ಮ ಅಧಿಕಾರಾವಧಿಯಲ್ಲಿ ಮಾಡಿಕೊಡಲು ತಮ್ಮ ಶಕ್ತಿ ಮೀರಿ ಪ್ರಯತ್ನ ಪಟ್ಟಿರುವಿರಿ. ದೇಶವನ್ನು ಲೂಟಿ ಮಾಡಲು ಬಂಡವಾಳಗಾರರಿಗೆ ಮುಕ್ತ ಅವಕಾಶ ಕೊಟ್ಟಿದ್ದೀರಿ.*

ಉದ್ಯಮಿಗಳಿಗೆ ಅನುಕೂಲವಾಗುವಂತೆ ಕಾರ್ಮಿಕ ಕಾನೂನುಗಳಿಗೂ ತಿದ್ದುಪಡಿ ತಂದಿರಿ.

*ಕೃಷಿ ಭೂಮಿಯನ್ನು ಸುಲಭವಾಗಿ, ಯಾವುದೇ ಕಾನೂನಿನ ತೊಡಕುಗಳಿಲ್ಲದೆ ಉದ್ಯಮಿಗಳು ಕಸಿದುಕೊಳ್ಳಲು ಅನುಕೂಲವಾಗುವಂತೆ ಮಾಡುವ ಪ್ರಯತ್ನದಲ್ಲಿ ‘ಭೂಸ್ವಾಧೀನ ಮಸೂದೆ ಕಾಯ್ದೆ’ಗೆ ತಿದ್ದುಪಡಿ ತರಲು ಮೂರು ಬಾರಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಇನ್ನಿಲ್ಲದ ಪ್ರಯತ್ನ ಪಟ್ಟಿರಿ.*

ನಂತರ ಜನರು ಕೊರೋನಾ ಭಯದಲ್ಲಿ ಇದ್ದಾಗ ಸಂಸತ್ತಿನಲ್ಲಿ ವಿರೋಧ ಮಾಡುವ ಸಂಸದರನ್ನು ಹೊರ ಹಾಕಿ, ಮೋಸದಿಂದ ಸಂಸತ್ತಿನ ಒಪ್ಪಿಗೆ ಪಡೆದು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದೇ ಬಿಟ್ಟಿರಿ.

*ಕೃಷಿ ಕಾಯ್ದೆಗಳನ್ನು ವಿರೋಧಿಸಿದ ರೈತರ ಹೋರಾಟ ಹತ್ತಿಕ್ಕಲು ಏನೆಲ್ಲಾ ತಂತ್ರಗಳು, ದಾಳಿ, ದಬ್ಬಾಳಿಕೆ ಮಾಡಿದಿರಿ ನೀವು. ಹತ್ತಾರು ಸಾವಿರ ರೈತರು ಬಿಸಿಲು, ಮಳೆ, ಚಳಿ, ಕೊರೋನಾ ವೈರಸ್‌ನ ಭೀತಿ ಎಲ್ಲವನ್ನೂ ಎದುರಿಸಿ ದೆಹಲಿಯ ಹೆದ್ದಾರಿಗಳಲ್ಲಿ ಕುಳಿತು ಪ್ರತಿಭಟನೆ ಮಾಡುವಾಗಲೂ ನಿಮಗೆ ಆ ರೈತರ ಬಗ್ಗೆ ಕೊಂಚವೂ ಕನಿಕರ ಬರಲಿಲ್ಲ. ತಮಗೆ ಉದ್ಯಮಿಗಳ ಸೇವೆಯೇ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿರಿ. ಸತತ ಒಂದು ವರ್ಷ ನಿರಂತರವಾಗಿ ಪ್ರತಿಭಟನೆ ಮಾಡಿದ ನಂತರ ಐದು ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದಂತೆ ಕೃಷಿ ಕಾಯ್ದೆಗಳನ್ನು ಹಿಂಪಡೆದಿರಿ. ಅಂದು ನೀವು ರೈತರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ಯಾವುದೇ ಪ್ರಯತ್ನ ನಿಮ್ಮಿಂದ ಕಾಣುತ್ತಿಲ್ಲ.*

ಸ್ವದೇಶಿ ಮತ್ತು ವಿದೇಶಿ ದೊಡ್ಡ ಬಂಡವಾಳಗಾರರಿಗೆ ತಾವು ಮಾಡಿರುವ ಇಂಥ ಸಹಾಯಕ್ಕೆ ‘ಸಂಘ’ ಮತ್ತು ಬಂಡವಾಳಗಾರರು ಒಂದೇ ಜನ್ಮದಲ್ಲಿ ತಮ್ಮ ಋಣ ತೀರಿಸಲು ಸಾಧ್ಯವಿಲ್ಲ ಬಿಡಿ. ನಿಮಗೊಂದು ಗುಡಿ ಕಟ್ಟಿಸಿ ಶತಮಾನಗಳ ಕಾಲ ನಿಮ್ಮನ್ನು ಪೂಜಿಸುತ್ತಾರೆ…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend