ಮಾಯಾವತಿಯವರು_ಉತ್ತರಪ್ರದೇಶದಲ್ಲಿ ಸಾಧಿಸಿದ್ದೇನು..!?

Listen to this article

ಮಾಯಾವತಿಯವರು_ಉತ್ತರಪ್ರದೇಶದಲ್ಲಿ ಸಾಧಿಸಿದ್ದೇನು..!?

– ಮಹೇಶ್ ಕುಮಾರ್ ಸರಗೂರು

ಮೋತಿಲಾಲ್ ನೆಹರು ಮಗ ಜವಾಹರ್ ಲಾಲಾ ನೆಹರು, ಜವಾಹರ್ ಲಾಲ್ ಮಗಳು ಇಂದಿರಾ ಗಾಂಧಿ, ಇಂದಿರೆಯ ಮಗ ರಾಜೀವ್ ಗಾಂಧಿ, ರಾಜೀವ್ ಮಗ ರಾಹುಲ್ ಗಾಂಧಿ ಮುಖ್ಯಮಂತ್ರಿಯಾಗುವುದೋ ಅಥವಾ ಪ್ರಧಾನ ಮಂತ್ರಿಯಾಗುವುದೋ ಅಷ್ಟೇನೂ ಪ್ರಯಾಸದ ಕೆಲಸವಲ್ಲ. ಕಾರಣ, ಅವರಿಗೆ ರಾಜಕೀಯದ ಹಿನ್ನೆಲೆ ಮತ್ತು ಮುನ್ನೆಲೆ ಎರಡೂ ಇದೆ. ಜಾತಿಬಲವಿದೆ. ಹಾಗೆಯೆ ಹಣಬಲವೂ ಇದೆ. ಆದರೆ ರಾಜಕೀಯದ ಗಂಧಗಾಳಿಯೂ ಗೊತ್ತಿಲ್ಲದ, ಜಾತಿಜನಾಂಗದ ಬೆಂಬಲವಿಲ್ಲದ, ಸಮಾಜದ ಕಟ್ಟಕಡೆಗೆ ಸೇರಿದ ವ್ಯಕ್ತಿ, ಅದರಲ್ಲೂ ಹೆಣ್ಣೊಬ್ಬಳು ಸ್ವಂತ ಬಲದ ಮೂಲಕ ರಾಜಕಾರಣದಲ್ಲಿ ಮೇಲೇರಿ ಬರುವುದು ಭಾರತದ ಮಟ್ಟಿಗೆ ಅಷ್ಟು ಸುಲಭ ಸಾಧ್ಯದ ಮಾತಲ್ಲ!

ಭಾರತದ ಅತಿದೊಡ್ಡ ರಾಜ್ಯವಾಗಿರುವ, ಅತಿಹೆಚ್ಚು ಎಂ.ಪಿ ಕ್ಷೇತ್ರಗಳನ್ನು ಹೊಂದಿರುವ, ಅತಿಹೆಚ್ಚು ಬ್ರಾಹ್ಮಣ ಪ್ರಧಾನಿಗಳನ್ನು ದೇಶಕ್ಕೆ ನೀಡಿ ಬ್ರಾಹ್ಮಣರ ಹೃದಯ ಭಾಗ ಎನಿಸಿಕೊಂಡಿರುವ ಉತ್ತರ ಪ್ರದೇಶದಂತಹ ರಾಜಕೀಯ ಪ್ರಯೋಗ ಭೂಮಿಯಲ್ಲಿ ಒಂದಲ್ಲ..ಎರಡಲ್ಲ.. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ, ಬಿಎಸ್ಪಿಯನ್ನು ದೇಶದ ಮೂರನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿಸಿದ ಮಾಯಾವತಿಯವರು ಉತ್ತರ ಪ್ರದೇಶದಲ್ಲಿ ಸಾಧಿಸಿದ್ದೇನು.? ಎನ್ನುವುದನ್ನು ನಾವು ಬಹಳ ವಸ್ತುನಿಷ್ಠವಾಗಿ ಮತ್ತು ತರ್ಕಬದ್ಧವಾಗಿ ಜನರ ಮುಂದೆ ಪ್ರಸ್ತುತಪಡಿಸಬೇಕಿದೆ. ಯಾಕೆಂದರೆ, ಬಿಜೆಪಿಯಿಂದ ಮೂರು ಬಾರಿ ಸರಕಾರವನ್ನು ಬಾಡಿಗೆ ಪಡೆದು, ಬಾಡಿಗೆದಾರನೇ ಬೆಚ್ಚಿ ಬೀಳುವಂತೆ ಆಡಳಿತ ನಡೆಸಿದ ಮಾಯಾವತಿಯವರ ನಡೆಯನ್ನು ಕೆಲವು ದಲಿತ ಸಾಹಿತಿಗಳು, ಕಾಂಗ್ರೆಸ್ ಮುಸುಕುಧಾರಿ ಬುದ್ದಿಜೀವಿಗಳು, ಮಾರ್ಕ್ಸ್ ಸೋಗಿನ ವಿಚಾರವಾದಿಗಳು ಹಿಗ್ಗಾ-ಮುಗ್ಗಾ ಟೀಕಿಸುತ್ತಾ ದಲಿತರಲ್ಲಿಯೇ ಅಪನಂಬಿಕೆ ಮತ್ತು ಮನಸ್ತಾಪಗಳು ಹುಟ್ಟಿಕೊಳ್ಳುವಂತೆ ಮಾಡಿದ್ದಾರೆ. ಆ ಕಾರಣದಿಂದ ಮಾಯಾವತಿಯವರ ಅವಧಿಯಲ್ಲಿ ಆಗಿರುವ ಸಾಧಕ-ಭಾದಕಗಳನ್ನು ಬಹಳ ನಿರ್ಲಿಪ್ತತೆಯಿಂದ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ತೆರೆದಿಡಬೇಕಾದದ್ದು ನಮ್ಮ ಚಾರಿತ್ರಿಕ ಜವಾಬ್ದಾರಿಯಾಗಿದೆ.

ಮಾಯಾವತಿಯವರ ಅಧಿಕಾರ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ಆಗಿರುವ ಸಾಮಾಜಿಕ ಪರಿವರ್ತನೆ ಮತ್ತು ಆರ್ಥಿಕ ವಿಮೋಚನೆಯ ಬಗ್ಗೆ ಮನುವಾದಿ ಪಕ್ಷಗಳು ಮತ್ತು ಮಾಧ್ಯಮಗಳು ಈವರೆಗೂ ಏನನ್ನೂ ಮಾತನಾಡಿಲ್ಲ! ‘ಮಾಯಾವತಿಯವರು ಬಿಜೆಪಿ ಜೊತೆ ಮೈತ್ರಿ ರಾಜಕಾರಣ ಮಾಡಿದರು’.. ‘ತಮ್ಮದೇ ಪುತ್ಥಳಿಯನ್ನು ಎಲ್ಲಾ ಕಡೆ ನಿಲ್ಲಿಸಿದರು’ ಎಂದು ಬೊಬ್ಬೆ ಹಾಕುವುದನ್ನು ಬಿಟ್ಟರೆ ಇವರು ಬೇರೇನನ್ನೂ ಹೇಳಿಲ್ಲ!

ವಿಪರ್ಯಾಸವೆಂದರೆ, ಇವರ ಅರಚಾಟವನ್ನು ನಿಜವೆಂದು ಭ್ರಮಿಸಿರುವ ಬುದ್ದಿಜೀವಿಗಳು ಕೂಡ ಮೈತ್ರಿ ಮತ್ತು ಪ್ರತಿಮೆಗಳ ಸುತ್ತ ಈಗಲೂ ಗಿರಕಿ ಹೊಡೆಯುತ್ತಲೇ ಇದ್ದಾರೆ! ಆದರೆ ಈ ಪುತ್ಥಳಿಗಳನ್ನೂ ಒಳಗೊಂಡಂತೆ, ಅಕ್ಕ ಮಾಯಾವತಿಯವರು ಮಾಡಿರುವ ಸಾಧನೆಗಳ ಬಗ್ಗೆ ಅಧ್ಯಯನ ಮಾಡಿರುವ ಸಂಶೋಧಕರ ತಂಡವೊಂದು ವಿವರವಾದ ವರದಿಯನ್ನು ನೀಡಿದೆ.

ದೇವೇಶ್ ಕಪೂರ್, ಸಿ,ಬಿ. ಪ್ರಸಾದ್, ಲಾಂತ್ ಪ್ರಿಂಚೆಟ್ ಮತ್ತು ಡಿ. ಶ್ಯಾಮ್ ಬಾಬು ಎಂಬ ಸಾಮಾಜಿಕ ಸಂಶೋಧನಾಕಾರರು ಆಳವಾದ ಅಧ್ಯಯನ ನಡೆಸಿ, “Rethinking inequality:Dalits in u.p in the market Reform era ” ಎಂಬ ವಸ್ತುನಿಷ್ಠ ಪ್ರಬಂಧವನ್ನು ತಯಾರು ಮಾಡಿದ್ದಾರೆ. 1990 ರಿಂದ 2008 ರ ವರೆಗಿನ ಅವಧಿಯಲ್ಲಿ ಉತ್ತರಪ್ರದೇಶದ ದಲಿತರ ಬದುಕಿನಲ್ಲಿ ಸಾಕಷ್ಟು ಸಮೃದ್ಧವೆನಿಸಿರುವ ಪಶ್ಚಿಮಭಾಗದ ಖುರ್ಜಾ ಪ್ರದೇಶದಲ್ಲಿರುವ ಹಾಗು ಹಿಂದುಳಿದ ಪೂರ್ವಭಾಗದ ಬಿಲಾರಿಯಾಗಾಂಚ್ ಪ್ರದೇಶದಲ್ಲಿರುವ ಎಲ್ಲ ದಲಿತ ಮನೆಗಳನ್ನು ಇಲ್ಲಿ ಸರ್ವೇ ಮಾಡಲಾಗಿದೆ. ಈ ಮಹತ್ವಪೂರ್ಣ ಅಧ್ಯಯನದ ಸಾರಾಂಶ ಭಾಗವನ್ನು ಖ್ಯಾತ ಅರ್ಥಶಾಸ್ತ್ರಜ್ಞರಾದ ಸ್ವಾಮಿನಾಥನ್ ಅಯ್ಯರ್ ರವರು ‘Times of india ಪತ್ರಿಕೆಯಲ್ಲಿ ಎರಡು ಟೈಟಲ್ ಗಳಲ್ಲಿ ಎರಡು ಕಂತುಗಳಲ್ಲಿ ಬರೆದಿದ್ದಾರೆ. 26.9.10 ರಂದು ಪ್ರಕಟವಾದ ಲೇಖನದಲ್ಲಿ “Dalits are marching ahead in uttar pradesh (ಉತ್ತರ ಪ್ರದೇಶದಲ್ಲಿ ಮುನ್ನಡೆಯುತ್ತಿರುವ ದಲಿತರು) ಎಂಬ ಟೈಟಲ್ ನಲ್ಲಿ ದಲಿತರು ಸಾಧಿಸಿರುವ ಆರ್ಥಿಕ ಪ್ರಗತಿಯ ಬಗ್ಗೆ ಬರೆದಿದ್ದಾರೆ. ಮಾನ್ಯ ಸ್ವಾಮಿನಾಥನ್ ಹೇಳುತ್ತಾರೆ; “1990-2008ರ ಅವಧಿಯು ಉತ್ತರ ಪ್ರದೇಶವು ಅಸಾಧಾರಣ ಬೆಳವಣಿಗೆಯನ್ನು ಕಂಡ ಅವಧಿಯಾಗಿದೆ. ದಲಿತ ಮತ್ತು ಹಿಂದುಳಿದ ಜನರ ಆರ್ಥಿಕ ಅಭಿವೃದ್ಧಿಗೆ ಇದು ಅತ್ಯಂತ ಚಾಲನಶಕ್ತಿಯಾಗಿದೆ. ನಾಲ್ಕು ಬಾರಿ ಮುಖ್ಯಮಂತ್ರಿಯಾದ ಮಾಯಾವತಿಯವರು ಇಡೀ ಅಧಿಕಾರಶಾಹಿ ವರ್ಗವನ್ನು ಮತ್ತಿತರ ಲಾಬಿಗಳನ್ನು ಸರಿಯಾದ ರೀತಿಯಲ್ಲಿ ಬಳಸಿ ಎಲ್ಲಾ ವರ್ಗಗಳ ಉನ್ನತಿಗೆ ದಾರಿ ಮಾಡಿಕೊಟ್ಟಿದ್ದಾರೆ. ಆರ್ಥಿಕ ಸೌಲಭ್ಯ ಮತ್ತು ಅವಕಾಶಗಳಲ್ಲೂ ದಲಿತರು ತಮ್ಮ ನ್ಯಾಯಯುತ ಪಾಲು ಪಡೆಯುವಲ್ಲಿ ಮಾಯಾವತಿಯವರ ಸರ್ಕಾರವು ಮಹತ್ತರ ಪಾತ್ರ ವಹಿಸಿದೆ. ಇದರಿಂದಾಗಿ, ದಲಿತರು ಮೇಲ್ಜಾತಿಯವರ ಕಣ್ಣಲ್ಲಿ ಕಣ್ಣಿಟ್ಟು ನೇರವಾಗಿ ನೋಡಬಲ್ಲ ತಾಕತ್ತನ್ನು ಪಡೆದಿದ್ದಾರೆ… ಹಳೆಯದಾವುದು ಇನ್ನು ಮುಂದೆ ಮರುಕಳಿಸಲಾರದು” ( Times of india, 26.09.2010)

* ಗುಡಿಸಲುಗಳನ್ನು ಬಿಟ್ಟು ಪಕ್ಕಾ ಮನೆಗಳನ್ನು ಕಟ್ಟಿಕೊಂಡವರಲ್ಲಿ ಪೂರ್ವಭಾಗದಲ್ಲಿ ಶೇ.18.1 ರಿಂದ ಶೇ.64.4 ಕ್ಕೆ ಏರಿಕೆಯಾಗಿದೆ. ಪಶ್ಚಿಮ ಭಾಗದಲ್ಲಿ 38.4 ರಿಂದ ಶೇ.94.6 ಕ್ಕೆ ಏರಿಕೆಯಾಗಿದೆ.

* ಸಾಮಾನ್ಯವಾಗಿ ದಲಿತರು ಭೂಹೀನ ಕೃಷಿಕಾರ್ಮಿಕರಾಗಿದ್ದಾರೆ. ಆದರೆ ಈ ಭೂಹೀನರ ಸಂಖ್ಯೆಯು ಕಡಿಮೆಯಾಗಿದೆ. ಪೂರ್ವಭಾಗದಲ್ಲಿ ದಲಿತ ಕೃಷಿ ಕಾರ್ಮಿಕರ ಸಂಖ್ಯೆಯು 76% ನಿಂದ 45.6 % ಗೆ ಇಳಿದಿದೆ ಮತ್ತು ಪಶ್ಚಿಮ ಭಾಗದಲ್ಲಿ 46.1% ನಿಂದ 20.5% ಗೆ ಇಳಿದಿದೆ. ಕೃಷಿ ಕೆಲಸವನ್ನು ಬಿಟ್ಟು ಕೌಶಲ್ಯ ಕೆಲಸಗಳನ್ನು ಮಾಡುವ ದಲಿತರ ಸಂಖ್ಯೆಯು ಹೆಚ್ಚುತ್ತಿದೆ. ಈ ಅಸಂಪ್ರದಾಯಕ ಕೆಲಸಗಳನ್ನು ಮಾಡುವ ದಲಿತರ ಸಂಖ್ಯೆಯು ಪೂರ್ವಭಾಗದಲ್ಲಿ ಶೇ.14 ರಿಂದ ಶೇ. 37 ಕ್ಕೇರಿದೆ. ಮತ್ತು ಪಶ್ಚಿಮ ಭಾಗದಲ್ಲಿ ಶೇ.9.3 ರಿಂದ ಶೇ.42.1 ಕ್ಕೇರಿದೆ. ಇದರ ಪರಿಣಾಮವಾಗಿ ಹಳ್ಳಿಗಳಿಂದ ನಗರಗಳತ್ತ ವಲಸೆ ಹೋಗುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಪೂರ್ವ ಭಾಗದಲ್ಲಿ ವಲಸಿಗರ ಪ್ರಮಾಣವು 14% ರಿಂದ 50.5% ಕ್ಕೆ ಏರಿಕೆಯಾದರೆ, ಪಶ್ಚಿಮದಲ್ಲಿ 6.1% ರಿಂದ 28.6% ಗೆ ಏರಿಕೆಯಾಗಿದೆ.

* ಎಲ್ಲಕ್ಕಿಂತ ಕ್ರಾಂತಿಕಾರಿ ಬೆಳವಣಿಗೆಯೆಂದರೆ, ಸ್ವಂತ ವ್ಯಾಪಾರ ನಡೆಸುವ ದಲಿತ ಕುಟುಂಬಗಳ ಸಂಖ್ಯೆಯು ಪೂರ್ವದಲ್ಲಿ 4.2% ರಿಂದ 11% ಕ್ಕೆ ಏರಿಕೆಯಾಗಿದೆ ಮತ್ತು ಪಶ್ಚಿಮದಲ್ಲಿ 6% ನಿಂದ 36.7 ಕ್ಕೆ ಏರಿಕೆಯಾಗಿದೆ.

* ಇಂದು ನಮ್ಮ ದೇಶದ GDP ಪ್ರಮಾಣವು ಶೇ.6.7 ರಷ್ಟಿದೆ. ಈ ಪ್ರಮಾಣವನ್ನು ಶೇ. 9 ಕ್ಕೆ ಏರಿಸಬೇಕೆಂದು ಯೋಜನಕಾರರು ಚಿಂತಿಸುತ್ತಿದ್ದಾರೆ. ಮಾಯಾವತಿಯವರ ಆಳ್ವಿಕೆಯಲ್ಲಿ ಉತ್ತರ ಪ್ರದೇಶದಲ್ಲಿ GDP ಪ್ರಮಾಣವು ಶೇ.6.29 ರಷ್ಟಿತ್ತು. ಅಂದರೆ ರಾಷ್ಟ್ರೀಯ ಪ್ರಮಾಣಕ್ಕಿಂತ ಇಲ್ಲಿ ಕಡಿಮೆ ಇತ್ತು. ಆದರೆ ಉತ್ತರ ಪ್ರದೇಶದಲ್ಲಿ ಹಿಂದಿನ ಸರ್ಕಾರಗಳಿಗಿಂತ ತಲಾ ಆದಾಯವು ಹತ್ತು ಪಟ್ಟು ಹೆಚ್ಚಾಗಿತ್ತು ಎಂದು ಅಂಕಿ-ಅಂಶಗಳೇ ಸ್ಪಷ್ಟಪಡಿಸಿವೆ.

ಶ್ರೀ ಸ್ವಾಮಿನಾಥನ್ ರವರು ತಮ್ಮ ಎರಡನೇ ಕಂತಿನಲ್ಲಿ ‘The social Revolution in uttar pradesh ‘ (ಉತ್ತರ ಪ್ರದೇಶದಲ್ಲಿ ಸಾಮಾಜಿಕ ಕ್ರಾಂತಿ) ಎಂಬ ತಲೆಬರಹದಲ್ಲಿ ಹೀಗೆ ಬರೆದಿದ್ದಾರೆ. (30.02.2010)

* ಉತ್ತರ ಪ್ರದೇಶದಲ್ಲಿ ಇತರೆ ರಾಜ್ಯಗಳಿಗಿಂತ ಹೆಚ್ಚಿನ ಬಡತವಿದೆ. ಆದರೆ ಇಲ್ಲಿನ ಪ್ರಮುಖ ಸಮಸ್ಯೆಯು ಬಡತನಕ್ಕೆ ಸಂಬಂಧಿಸಿದ್ದಲ್ಲ. ಈ ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವುದು ಸಾಮಾಜಿಕ ಸಮಸ್ಯೆಯಾಗಿದೆ. ಆದರೆ ಸಂತಸದ ಸಂಗತಿಯೇನೆಂದರೆ, ಇದೀಗ ಸಾಮಾಜಿಕ ಅಸಮಾನತೆಯೂ ಮಾಯವಾಗುತ್ತಿದೆ.

* ಸಾಮಾಜಿಕ ಜಾತಿ ತಾರತಾಮ್ಯಕ್ಕೆ ತುತ್ತಾಗಿದ್ದ ದಲಿತರು ಮಾಯಾವತಿಯವರ ಅಧಿಕಾರಾವಧಿಯಲ್ಲಿ ಸಾಮಾಜಿಕವಾಗಿ ಮುನ್ನೆಲೆಗೆ ಬರುತ್ತಿದ್ದಾರೆ.. ಹಿಂದೆ ಇದ್ದ ಪಂಕ್ತಿಭೇದ, ಅಸ್ಪೃಶ್ಯತೆ, ಜೀತಗಾರಿಕೆಯಲ್ಲಿ ಗಣನೀಯ ಪ್ರಮಾಣದ ಬದಲಾವಣೆಯಾಗಿದೆ. ಅಲ್ಲದೆ ಇತರೆ ವರ್ಗಗಳಲ್ಲಿ ಕೂಲಿಯಾಳುಗಳಾಗಿ ದುಡಿಯುತ್ತಿದ್ದ ದಲಿತರು ಈಗ ತಾವೇ ಸ್ವತಃ ಕೃಷಿಭೂಮಿ ಹೊಂದಿ ಸ್ವಾವಲಂಬನೆಯ ಬದುಕಿಗೆ ಒಗ್ಗಿಕೊಳ್ಳುತ್ತಿದ್ದಾರೆ.

* ಸದಾಕಾಲ ಹಿಂದೂ-ಮುಸ್ಲಿಂ ಗಲಭೆಗಳಿಗೆ ಹೆಸರಾಗಿರುವ ಉತ್ತರಪ್ರದೇಶ, ನ್ಯಾಷನಲ್ ಕ್ರೈಂ ಕಂಟ್ರೋಲ್ ರೆಕಾರ್ಡ್ಸ್ ಪ್ರಕಾರ ಮಾಯಾವತಿಯವರ ಅವಧಿಯಲ್ಲಿ 34 ನೇ ಸ್ಥಾನದಲ್ಲಿತ್ತು. ಅಂದರೆ ಕೊನೆಯಿಂದ ಎರಡನೇ ಸ್ಥಾನದಲ್ಲಿತ್ತು!

* ಭೂರಹಿತ ಕೃಷಿಕಾರ್ಮಿಕರಾಗಿದ್ದ ದಲಿತರು ಮಾಯಾವತಿಯವರ ಆಳ್ವಿಕೆಯ ಅವಧಿಯಲ್ಲಿ ಮೇಲ್ಜಾತಿ ಭೂಮಾಲೀಕರಿಂದ ಭೂಮಿಯನ್ನು ಲೀಸ್ ಗೆ ಪಡೆದು ಫಸಲಿನಲ್ಲಿ ಪಾಲು ಕೇಳುವ ಕೃಷಿಕರಾದರು. ಸತ್ತ ದನ-ಎಮ್ಮೆಗಳನ್ನು ಎಳೆಯುವುದನ್ನು ಬಿಟ್ಟರು. ಜೀತದ ಬದುಕಿಗೆ ಗುಡ್ ಬೈ ಹೇಳಿದರು. ತಾವೇ ಸ್ವಂತ ವ್ಯಾಪಾರ ನಡೆಸ ತೊಡಗಿದರು. ದಲಿತ್ ಬಿಸಿನೆಸ್ ಫ್ಯಾಮಿಲಿಗಳು ಹುಟ್ಟಿಕೊಂಡವು. ದಲಿತರು ಕೇವಲ ಸರ್ಕಾರೀ ನೌಕರಿಗಳಿಗೆ ಗಂಟು ಬೀಳುವ ಬದಲು ಕುಶಲ ಕೆಲಸಗಳತ್ತ ಮುಖ ಮಾಡಿದರು. ಎಲ್ಲಕ್ಕಿಂತ ಮಿಗಿಲಾಗಿ, ಅಲ್ಲಿನ ಠಾಕೂರರು ದಲಿತರ ಹೆಣ್ಣುಮಕ್ಕಳನ್ನು ಭೋಗಿಸುವುದು ತಮ್ಮ ಪ್ರತಿಷ್ಠೆ ಎಂದು ತಿಳಿದಿದ್ದ ಕಾಲವೊಂದಿತ್ತು. ಆದರೆ ಬದಲಾದ ಕಾಲದಲ್ಲಿ ತನ್ನನ್ನು ಕೆಡಿಸಲು ಬಂದ ಠಾಕೂರನ ಮರ್ಮಾಂಗವನ್ನೇ ಕತ್ತರಿಸಿದ ಪೂಲ್ ಮತಿ’ಯ ಪರಂಪರೆ ಪ್ರಾರಂಭವಾಯಿತು!

* ದಲಿತರು ಮೇಲ್ಜಾತಿ ಭೂಮಾಲಿಕರ ಹೊಲಗದ್ದೆಗಳಲ್ಲಿ ಎತ್ತು-ಕೋಣಗಳಾಗಿ ದುಡಿಯುತ್ತಿದ್ದ ಕಾಲವೊoದಿತ್ತು.. ಈಗ ಸ್ವತಃ ಭೂಮಾಲೀಕರಾಗಿ ಬದುಕುತ್ತಿದ್ದಾರೆ!

* ಭಾರತದ ರಾಜಧಾನಿ ದಿಲ್ಲಿಯಲ್ಲಿ ಪ್ರತಿನಿತ್ಯ ಕನಿಷ್ಠ ಹತ್ತು ಮಂದಿ ಅನಾಥ ಕೂಲಿ ಕಾರ್ಮಿಕರು ಸಾಯುತ್ತಿದ್ದ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ದಲಿತ್ ಬಿಸಿನೆಸ್ ಫ್ಯಾಮಿಲಿಗಳು ಹುಟ್ಟಿಕೊಂಡವು.

* ಭಾರತದ ಎಲ್ಲೆಡೆ ವಿದ್ಯಾವಂತ ದಲಿತರಿಗೆ ಮೀಸಲಾತಿಯ ಮೂಲಕ ಸರ್ಕಾರೀ ನೌಕರಿಗಳನ್ನು ಪಡೆಯುವುದೇ ಬಲು ದೊಡ್ಡ ಕನಸು.. ಆದರೆ ಯುಪಿಯ ದಲಿತರು ಉದ್ಯೋಗ ಮೀಸಲಾತಿಯನ್ನು ದಾಟಿ ಸ್ವಂತ ಉದ್ದಿಮೆಗಳತ್ತ ನಡೆದರು.

ಈ ಅಧ್ಯಯನದಲ್ಲಿ ಕಂಡು ಬರುವ ಅಂಶವೆಂದರೆ, ಉತ್ತರ ಪ್ರದೇಶದ ಜನರ ಹಣಕಾಸಿನ ಪರಿಸ್ಥಿತಿಗಿಂತ ಅವರ ಸಾಮಾಜಿಕ ಪರಿಸ್ಥಿಯಿಯು ಬಲುಬೇಗ ಉತ್ತಮಗೊಂಡಿದೆ. ಶೋಷಿತ ಜನರಿಗೆ ಸ್ವಾಭಿಮಾನ ಮತ್ತು ಘನತೆಯ ಬದುಕು ಅತ್ಯವಶ್ಯಕ. ಮಾಯಾವತಿಯವರು ತಮ್ಮ ಪುತ್ಥಳಿಗಳನ್ನು ನಿಲ್ಲಿಸಿರುವುದೂ ಸಹ ದಲಿತರ ಸಾಮಾಜಿಕ ಸ್ಥಾನಮಾನಗಳನ್ನು ಹೆಚ್ಚಿಸುವುದಕ್ಕೆ ಕಾರಣವಾಗಿದೆ.

ಒಂದು ಸಮುದಾಯದ ಮನಸ್ಥಿತಿಯು ಬದಲಾವಣೆಯಾಗಬೇಕಾದರೆ ಆ ಸಮುದಾಯಕ್ಕೆ ಇರಬಹುದಾದ ಭವ್ಯ ಇತಿಹಾಸದ ಬಗ್ಗೆ ಜಾಗೃತಿ ಮೂಡಬೇಕು. ಭವ್ಯವಾದ ನೆನಪುಗಳಿಲ್ಲದ ಸಮಾಜಕ್ಕೆ ಭವ್ಯವಾದ ಕನಸುಗಳೂ ಇರುವುದಿಲ್ಲ. ಕನಸುಗಳು ಇಲ್ಲದ ಸಮಾಜವು ಹೊಟ್ಟೆಪಾಡಿಗಾಗಿ ಬದುಕುವ ಸ್ವಾಭಿಮಾನವಿಲ್ಲದ ಪ್ರಾಣಿಗಳ ಕೂಟವಾಗಿರುತ್ತದೆ. ನಮ್ಮ ಎಲ್ಲಾ ಮಹಾಪುರುಷರ ಮುಂದಿದ್ದ ದೊಡ್ಡ ಸವಾಲು ಇದೇ ಆಗಿತ್ತು. ಕೇವಲ ಹೊಟ್ಟೆಪಾಡಿಗಾಗಿ ಬದುಕುವ ಪ್ರಾಣಿಗಳಂತಹ ಜೀವಿಗಳನ್ನು ಸ್ವಾಭಿಮಾನವುಳ್ಳ ಮನುಷ್ಯರನ್ನಾಗಿ ರೂಪಿಸುವುದು ಹೇಗೆ? ಸ್ವಾಭಿಮಾನದ ಬದುಕಿಗಾಗಿ ಅವರನ್ನು ಹಂಬಲಿಸುವಂತೆ ಮಾಡುವುದು ಹೇಗೆ? ಎಲ್ಲಾ ಸವಾಲುಗಳಿಗೆ ಸಮರ್ಥ ಉತ್ತರವಾಗಿ ನಮ್ಮ ಮಹಾಪುರುಷರು ಮರೆಮಾಚಲ್ಪಟ್ಟಿದ್ದ ಬಹುಜನ ಸಮಾಜದ ಚರಿತ್ರೆಯನ್ನು ಬೆಳಕಿಗೆ ತಂದರು. ಆ ಚರಿತ್ರೆಯ ಮೂರ್ತರೂಪವೇ ನಮ್ಮ ಮಹಾಪುರುಷರ ತ್ಯಾಗ-ಬಲಿದಾನಗಳನ್ನು ಸಾರುವ ಸ್ಮಾರಕ, ಪುತ್ಥಳಿ ಮತ್ತು ಉದ್ಯಾನವನಗಳಾಗಿವೆ. ಉತ್ತರಪ್ರದೇಶದ ಲಕ್ನೋ ನಗರಕ್ಕೆ ಭೇಟಿ ಕೊಡುವ ಬಹುಜನರು ಇಂದು ನಾವು ಅಸಾಮಾನ್ಯರು, ‘we are great ‘ ಎಂದು ಉದ್ಗರಿಸುತ್ತಾರೆ! ಅಲ್ಲಿ ನಮ್ಮ ಮಹಾಪುರುಷರ ತ್ಯಾಗ-ಬಲಿದಾನಗಳ ಚಿತ್ರಗಳನ್ನು ನೋಡುವ ಬಹುಜನರ ಕಣ್ಣಲ್ಲಿ ಭಾರತದ ಮುಂದಿನ ಪ್ರಭುದ್ದ ಭಾರತದ ಕಲ್ಪನೆಯು ತಾನಾಗಿಯೇ ಮೊಳೆಯುತ್ತದೆ. ಹೀಗೆ ಆಂತರಿಕವಾಗಿ ಪರಿವರ್ತನೆಯಾಗುವ ಪ್ರಜೆಗಳಿಂದ ಮಾತ್ರ ನಿಜವಾದ ಹಾಗು ಶಾಶ್ವತವಾದ ಕ್ರಾಂತಿಯಾಗಲು ಸಾಧ್ಯ!

ಹುಟ್ಟುಹಬ್ಬದ ಶುಭಾಶಯಗಳು ‌ ಬೆಹೆನ್ಜಿ…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend