ಭಾರತದ ಪ್ರಥಮ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಖ್: ಮತ್ತೊಬ್ಬ ಅಕ್ಷರದವ್ವ…!!!

Listen to this article

ಭಾರತದ ಪ್ರಥಮ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಖ್: ಮತ್ತೊಬ್ಬ ಅಕ್ಷರದವ್ವ
ಜ.9ರಂದು ಜನ್ಮದಿನ ಸಂಭ್ರಮದಿಂದ ಆಚರಿಸಿ ಅವರನ್ನು ಗೌರವಿಸೋಣ

ನಮ್ಮ ಇತಿಹಾಸದಲ್ಲಿ ಹೆಣ್ಣುಮಕ್ಕಳು ಮತ್ತು ತಳಸಮುದಾಯದ ಶೋಷಣೆಗೆ `ಅಕ್ಷರ’ ಎನ್ನುವುದೂ ಒಂದು ಅಸ್ತ್ರವಾಗಿದೆ. ಈ ಸಾಮಾಜಿಕ ಅಡೆತಡೆಯನ್ನು ಮೀರಿ ಅಕ್ಷರವಂಚಿತರಲ್ಲಿ ವಿದ್ಯೆಯ ಹಣತೆ ಹಚ್ಚಿದ, ಸಾವಿತ್ರಿಬಾಯಿ ಫುಲೆ ಸಹವರ್ತಿ ಫಾತಿಮಾ ಶೇಖ್ ಅವರಂಥ ಶಿಕ್ಷಕಿಯರ ಕೊಡುಗೆ ನಿಜಕ್ಕೂ ಐತಿಹಾಸಿಕ

ಜೀವನವನ್ನು ರೂಪಿಸಿಕೊಳ್ಳಲು ನೆರವಾಗುವ ಜ್ಞಾನ ಮತ್ತು ಶಿಕ್ಷಣ ನೀಡುವ ಗುರುವಿಗೆ ಭಾರತೀಯ ಸಮಾಜದಲ್ಲಿ ಅತ್ಯಂತ ಮಹತ್ವದ ಸ್ಥಾನ. ಆದರೆ ಜ್ಞಾನ ಮತ್ತು ಶಿಕ್ಷಣವನ್ನು ನೀಡುವ ವಿಚಾರ ಇರಲಿ, ಅದನ್ನು ಪಡೆಯಲು ಕೂಡ ಹೆಣ್ಣಿಗೆ ಎಷ್ಟರ ಮಟ್ಟಿಗೆ ಅವಕಾಶವಿತ್ತು ಎನ್ನುವುದು ಸಾಮಾಜಿಕವಾಗಿ ಮುಖ್ಯವಾದ ವಿಚಾರ. ಶಿಕ್ಷಣ ಇತಿಹಾಸದ ನಿರೂಪಣೆಯಲ್ಲಿ ಪುರುಷಗುರುವಿನ ಪ್ರಶಂಸೆ ಸಹಜವಾಗಿ ಇರುತ್ತದೆ. ಸ್ತ್ರೀಗುರುವನ್ನು ಗುರುತಿಸುವುದೂ ಬಹಳ ಅಪರೂಪ. ಹಾಗೆ `ಮರೆತ’ ಶಿಕ್ಷಕಿಯರಲ್ಲಿ ಫಾತಿಮಾ ಬೇಗಂ ಶೇಖ್ ಅವರದು ಪ್ರಮುಖ ಹೆಸರು. ಶಿಕ್ಷಕಿಯರೇ ಅಪರೂಪವಾಗಿದ್ದ ನಮ್ಮ ದೇಶದಲ್ಲಿ ಅವರು ಮೊದಲ ಮುಸ್ಲಿಂ ಶಿಕ್ಷಕಿ ಎನ್ನುವುದಂತೂ ಇನ್ನಷ್ಟು ಪ್ರಾಮುಖ್ಯ ಪಡೆಯುತ್ತದೆ.

ಮೇಲ್ಜಾತಿಯಲ್ಲಿ ಹುಟ್ಟಿದ ಗಂಡಸರಿಗೆ ಮಾತ್ರ ಓದುಬರಹದ ಅವಕಾಶ ಇದ್ದ ಕಾಲದಲ್ಲಿ, ಹೆಣ್ಣುಮಕ್ಕಳಿಗೆ ಮತ್ತು ದಲಿತರ ಮಕ್ಕಳಿಗೆ ಅಕ್ಷರ ಕಲಿಸಲು ಹೊರಟ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ಪಟ್ಟ ಕಷ್ಟ ಮತ್ತು ಎದುರಿಸಿದ ವಿರೋಧ ಅಷ್ಟಿಷ್ಟಲ್ಲ. ಆಗಿನ ಕಾಲದಲ್ಲೇ ಪುಣೆಯಲ್ಲಿ ಮೂರು ಶಾಲೆಗಳನ್ನು ಅವರು ಆರಂಭಿಸಿದ್ದರು. ತಂದೆತಾಯಿ ಸೇರಿ ಕುಟುಂಬದ ಸದಸ್ಯರು, ಜಾತಿಯ ಜನರು, ನೆರೆಹೊರೆಯವರು ಎಲ್ಲರೂ ಇದನ್ನು ನಿಲ್ಲಿಸುವಂತೆ ಒತ್ತಾಯಿಸಿ ಅವರಿಗೆ ಇನ್ನಿಲ್ಲದ ಕಿರುಕುಳ ಕೊಟ್ಟರು. 1849 ರಲ್ಲಿ ಜ್ಯೋತಿಬಾ ಮತ್ತು ಸಾವಿತ್ರಿ ಇಬ್ಬರನ್ನೂ ಮನೆಯಿಂದಲೇ ಹೊರಹಾಕಲಾಯಿತು.

ಮನೆಯಿಂದ ಹೊರಬಿದ್ದ ಅವರಿಗೆ ನಿಲ್ಲಲು ನೆಲೆ ಕೊಟ್ಟ ಪುಣೆಯ ಗಂಜಿ ಪೇಟೆಯಲ್ಲಿದ್ದ ಉಸ್ಮಾನ್ ಶೇಖ್, ತನ್ನ ಮನೆಯಲ್ಲೇ ಇರಲು ಹೇಳಿದ್ದಲ್ಲದೆ, ಶಾಲೆ ನಡೆಸಲೂ ಅವಕಾಶ ಮಾಡಿಕೊಟ್ಟರು. ಉಸ್ಮಾನ್ ಶೇಖ್ ಅವರ ತಂಗಿಯಾದ ಫಾತಿಮಾ ಶೇಖ್ ಇದಕ್ಕೆ ಪೂರ್ತಿ ಬೆಂಬಲ ಕೊಟ್ಟರು. 1849 ರಲ್ಲಿ ಆ ಮನೆಯಲ್ಲಿ ಹೊಸ ಶಾಲೆ ಆರಂಭವಾಯಿತು. ಸಾವಿತ್ರಿಬಾಯಿ ಆಶಯಗಳ ಜೊತೆ ಮನಃಪೂರ್ವಕವಾಗಿ ನಿಂತ ಫಾತಿಮಾ ಶೇಖ್ ಶಿಕ್ಷಕ ತರಬೇತಿ ಪಡೆದು ಆ ಶಾಲೆಯಲ್ಲಿ ಶಿಕ್ಷಕಿಯಾಗಿ ಮಕ್ಕಳಿಗೆ ಕಲಿಸತೊಡಗಿದರು. ಮಕ್ಕಳಿಗೆ ವಿದ್ಯೆ ಬಹಳ ಮುಖ್ಯ ಎಂದು ನಂಬಿದ್ದ ಉಸ್ಮಾನ್ ಶೇಖ್ ತಂಗಿಗೆ ಎಲ್ಲ ಉತ್ತೇಜನ ನೀಡಿದರು.

ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಶಿಕ್ಷಕಿಯರಾಗಿ ಕೆಲಸ ಮಾಡುವುದನ್ನು ವಿರೋಧಿಸುತ್ತಿದ್ದ ಜನ ಅವರು ರಸ್ತೆಯಲ್ಲಿ ನಡೆದು ಹೋಗುವಾಗ ಬೈಗುಳದ ಸುರಿಮಳೆ ಸುರಿಸಿ ಕಲ್ಲೆಸೆಯುತ್ತಿದ್ದರು. ಅವರ ಸೀರೆಗಳ ಮೇಲೆ ಸಗಣಿನೀರು ಎರಚುತ್ತಿದ್ದರು. ಆದರೆ ಇದಾವುದನ್ನೂ ಲೆಕ್ಕಿಸದೆ ಇಬ್ಬರೂ ಹೆಣ್ಣುಮಕ್ಕಳು ಮತ್ತು ಕೆಳವರ್ಗದವರ ಮಕ್ಕಳ ಅಕ್ಷರ ಕಲಿಕೆಗೆ ಬದ್ಧರಾಗಿದ್ದರು. ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯವನ್ನು ಇಬ್ಬರೂ ವಿರೋಧಿಸುತ್ತಿದ್ದರು. ಜ್ಯೋತಿಬಾ ಮತ್ತು ಸಾವಿತ್ರಿ ಫುಲೆ ಅವರು ಜನರ ವಿರೋಧ ಲೆಕ್ಕಿಸದೆ, ಅಕ್ಷರ ವಂಚಿತರಿಗೆ ಶಿಕ್ಷಣ ನೀಡಲು ಒಟ್ಟು 18 ಶಾಲೆಗಳನ್ನು ತೆರೆದರು. ದಲಿತರು ಮತ್ತು ಮುಸ್ಲಿಮರು ಪರಸ್ಪರ ಸಹಕಾರ ಬೆಳೆಸಿಕೊಂಡರೆ ಒಳ್ಳೆಯದೆಂದು ಇವರೆಲ್ಲರೂ ನಂಬಿದ್ದರು. ಮುಸ್ಲಿಂ ಮಹಿಳೆಯಾಗಿ ಫಾತಿಮಾ ಶೇಖ್ ಇನ್ನೂ ಹೆಚ್ಚು ವಿರೋಧ ಮತ್ತು ಕಷ್ಟವನ್ನು ಎದುರಿಸಿದರು. ಆದರೆ ತನ್ನ ಆಸೆಯನ್ನು ಬಿಡದ ಫಾತಿಮಾ, ತಮ್ಮ ಹೆಣ್ಣುಮಕ್ಕಳಿಗೆ ಶಾಲೆ ಬೇಡ ಎನ್ನುತ್ತಿದ್ದ ತಂದೆತಾಯಿಗಳ ಜೊತೆ ಚರ್ಚಿಸಿ, ಅವರ ಮನವೊಲಿಸುವುದರಲ್ಲಿ ತುಂಬಾ ಶ್ರಮಪಡುತ್ತಿದ್ದರು.

ಜ್ಯೋತಿಬಾ ಫುಲೆ ಅವರಿಗೆ ಬರೆದ ಅನೇಕ ಪತ್ರಗಳಲ್ಲಿ ಸಾವಿತ್ರಿಬಾಯಿ ಅವರು ತಮ್ಮ ಆತ್ಮೀಯ ಗೆಳತಿಯನ್ನು ಪ್ರೀತಿಯಿಂದ ಹೊಗಳಿದ್ದಾರೆ. ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಅವರ ಗೆಳೆತನ ಹಲವು ಸಕಾರಾತ್ಮಕ ವಿಚಾರಗಳಿಗೆ ಸಂಕೇತವಾಗಿದೆ. ವಿಭಿನ್ನ ಧರ್ಮಗಳಿಗೆ ಸೇರಿದ್ದರೂ ಸಾಮಾಜಿಕ ಬದ್ಧತೆ ಅವರನ್ನು ಒಂದುಗೂಡಿಸಿತ್ತು. ಸಾವಿತ್ರಿಬಾಯಿ, ಫಾತಿಮಾ ಶೇಖ್, ಸಗುಣಾಬಾಯಿ ಇವರೆಲ್ಲ 19ನೇ ಶತಮಾನದಲ್ಲಿ ಹೆಣ್ಣುಮಕ್ಕಳು ಮತ್ತು ಅಕ್ಷರವಂಚಿತ ಸಮುದಾಯಗಳಿಗೆ ವಿದ್ಯೆ ಕಲಿಸಲು ಪಣತೊಟ್ಟ `ಸಾಮಾಜಿಕ ಸರಸ್ವತಿ’ ಯರು ಎಂದು ಹೇಳಬಹುದು. ನಮ್ಮ ದೇಶದ ಈ ಮೊದಲ ಶಿಕ್ಷಕಿಯರನ್ನು ಗುರುತಿಸಿ ಮುಂದಿನ ತಲೆಮಾರುಗಳಿಗೆ ಅವರ ಕೆಲಸದ ಮಹತ್ವವನ್ನು ತಿಳಿಸುವ ಅಗತ್ಯವಂತೂ ಇದ್ದೇ ಇದೆ.

ಸಾವಿತ್ರಿಬಾಯಿ ಫುಲೆ ಅವರನ್ನು ಭಾರತದ ಮೊದಲ ಶಿಕ್ಷಕಿ ಎಂದು ಗೌರವಿಸಲಾಗಿದೆ. 1998 ರಲ್ಲಿ ಸಾವಿತ್ರಿಬಾಯಿ ಫುಲೆ ಅವರ ನೆನಪಿನ ಅಂಚೆಚೀಟಿ ತರಲಾಯಿತು. 2015 ರಲ್ಲಿ ಪುಣೆ ವಿಶ್ವವಿದ್ಯಾನಿಲಯಕ್ಕೆ `ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯ’ ಎಂದು ನಾಮಕರಣ ಮಾಡಲಾಗಿದೆ. ಗೂಗಲ್ ಈ ವರ್ಷ ಜನವರಿಯಲ್ಲಿ ಅವರಿಗೆ ಗೂಗಲ್ ಡೂಡಲ್ ಗೌರವ ನೀಡಿತು.
2022ರ ಜ.9ರಂದು ಗೂಗಲ್ ನ ಡೂಡಲ್ ಗೌರವ ಪೂರ್ವಕ ವಾಗಿ ಪೂರಕವಾಗಿ ನಮನ ಸಲ್ಲಿಸಿದೆ.

ಹಾಗೆಯೇ ಫಾತಿಮಾ ಶೇಖ್ ಅವರ ಕೊಡುಗೆಯನ್ನೂ ಸೂಕ್ತವಾಗಿ ದಾಖಲಿಸುವುದು ಅಗತ್ಯವಾಗಿದೆ…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend