SRH, V/S DC :ಸೂಪರ್ ಓವರ್ ನಲ್ಲಿ ಗೆದ್ದು ಬೀಗಿದ ಡೆಲ್ಲಿ ಕ್ಯಾಫಿಟಲ್ಸ್…!!!

Listen to this article

ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೂಪರ್ ಓವರ್​ನಲ್ಲಿ ಗೆದ್ದು ಬೀಗಿದೆ. ಡೆಲ್ಲಿ ನೀಡಿದ 160 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಸನ್​ರೈಸರ್ಸ್​ 159 ರನ್​ಗಳಿಸುವ ಮೂಲಕ ಪಂದ್ಯವು ಸೂಪರ್​ ಓವರ್​ನತ್ತ ಸಾಗಿತು. ಸೂಪರ್​ ಓವರ್​ನಲ್ಲಿ ಸನ್​ರೈಸರ್ಸ್​ ನೀಡಿದ 8 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನ 160 ರನ್​ಗಳ ಗುರಿ ಬೆನ್ನತ್ತಿದ ಸನ್​ರೈಸರ್ಸ್​ ಹೈದರಾಬಾದ್​ಗೆ ಡೇವಿಡ್ ವಾರ್ನರ್-ಜಾನಿ ಬೈರ್​ಸ್ಟೋವ್ ಉತ್ತಮ ಆರಂಭ ಒದಗಿಸಿದ್ದರು. ಇದಾಗ್ಯೂ ತಂಡದ ಮೊತ್ತ 28 ರನ್ ಆಗಿದ್ದ ವೇಳೆ ವಾರ್ನರ್ (7) ರನೌಟ್​ಗೆ ಬಲಿಯಾದರು. ಈ ಹಂತದಲ್ಲಿ ಜೊತೆಗೂಡಿ ಕೇನ್ ವಿಲಿಯಮ್ಸನ್ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರು.

ಆದರೆ ಪವರ್​ಪ್ಲೇಯ 6ನೇ ಓವರ್​ನಲ್ಲಿ ಅವೇಶ್ ಖಾನ್​ಗೆ ವಿಕೆಟ್ ಒಪ್ಪಿಸಿ ಜಾನಿ ಬೈರ್​ಸ್ಟೋವ್ (38 ರನ್, 18 ಎಸೆತ) ನಿರಾಸೆ ಮೂಡಿಸಿದರು. ಇದಾಗ್ಯೂ ಮೊದಲ 6 ಓವರ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ 56 ರನ್ ಕಲೆಹಾಕಿತು.

ಈ ವೇಳೆ ಕಣಕ್ಕಿಳಿದ ವಿರಾಟ್ ಸಿಂಗ್ ಕೇವಲ 4 ರನ್​ಗಳಿಸಿ ಅವೇಶ್ ಖಾನ್​ಗೆ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಏಕಾಂಗಿ ಹೋರಾಟ ಮುಂದುವರೆಸಿದ ಕೇನ್ ವಿಲಿಯಮ್ಸನ್ 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೇ ಅಭಿಷೇಕ್ ಶರ್ಮಾ (5) ಹಾಗೂ ರಶೀದ್ ಖಾನ್ (0) ಅಕ್ಷರ್ ಪಟೇಲ್​ ಎಲ್​ಬಿ ಬಲೆ ಬಿದ್ದು ನಿರ್ಗಮಿಸಿದರು.

ಅಂತಿಮ 3 ಓವರ್​ನಲ್ಲಿ ಸನ್​ರೈಸರ್ಸ್​ಗೆ 39 ರನ್​ಗಳ ಅವಶ್ಯಕತೆಯಿತ್ತು. 18ನೇ ಓವರ್​ನಲ್ಲಿ ವಿಲಿಯಮ್ಸನ್-ವಿಜಯ್ ಶಂಕರ್ ಜೊತೆಗೂಡಿ 11 ರನ್ ಕಲೆಹಾಕಿದರು. ಕೊನೆಯ 12 ಎಸೆತಗಳಲ್ಲಿ 28 ರನ್​ಗಳ ಅಗತ್ಯವಿತ್ತು. 19ನೇ ಓವರ್​ನಲ್ಲಿ ವಿಜಯ್ ಶಂಕರ್ (8) ವಿಕೆಟ್ ಒಪ್ಪಿಸಿದರು. ಈ ವೇಳೆ ಕಣಕ್ಕಿಳಿದ ಜಗದೀಶ್ ಸುಚಿತ್ 2 ಬೌಂಡರಿ ಬಾರಿಸಿ ಗೆಲುವಿನ ಅಂತರ ಕಡಿಮೆಗೊಳಿಸಿದರು. ಅದರಂತೆ ಅಂತಿಮ ಓವರ್​ನಲ್ಲಿ 16 ರನ್​ಗಳು ಬೇಕಿತ್ತು.

ಕಗಿಸೋ ರಬಾಡ ಎಸೆದ 20ನೇ ಓವರ್​ನ ಮೊದಲ ಎಸೆತ ವೈಡ್. ಮತ್ತೊಂದು ಎಸೆತದಲ್ಲಿ ಕೇನ್ ವಿಲಿಯಮ್ಸನ್ ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ 1 ಬೈಸ್ ರನ್. 3ನೇ ಎಸೆತದಲ್ಲಿ ಸುಚಿತ್ ಸಿಕ್ಸ್ ಸಿಡಿಸಿದರು. 4ನೇ ಎಸೆತದಲ್ಲಿ 1 ಬೈಸ್ ರನ್. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. 1 ಲೆಗ್​ ಬೈಸ್ ರನ್ ಪಡೆಯುವ ಮೂಲಕ ಸನ್​ರೈಸರ್ಸ್​ ಹೈದರಾಬಾದ್ 159 ರನ್​ಗಳೊಂದಿಗೆ ಪಂದ್ಯವನ್ನು ಟೈ ಮಾಡಿಕೊಂಡಿತು. ಹೀಗಾಗಿ ಪಂದ್ಯವು ಸೂಪರ್ ಓವರ್​ನತ್ತ ಮುಖ ಮಾಡಿತು.

ಡೆಲ್ಲಿ ಕ್ಯಾಪಿಟಲ್ಸ್ ಪರ ಅಕ್ಷರ್ ಪಟೇಲ್ ಎಸೆದ ಸೂಪರ್ ಓವರ್​ನಲ್ಲಿ ಕೇನ್ ವಿಲಿಯಮ್ಸನ್-ಡೇವಿಡ್ ವಾರ್ನರ್ ಜೋಡಿ 7 ರನ್​ ಕಲೆಹಾಕಿತು. 8 ರನ್​​ಗಳ ಗುರಿ ಪಡೆದ ಡೆಲ್ಲಿ ಪರ ರಿಷಭ್ ಪಂತ್-ಶಿಖರ್ ಧವನ್ ಬ್ಯಾಟಿಂಗ್ ಮಾಡಿದರು. ರಶೀದ್ ಖಾನ್ ಎಸೆದ ಈ ಓವರ್​ನಲ್ಲಿ 8 ರನ್ ಕಲೆಹಾಕುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿತು.ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಬ್ಯಾಟಿಂಗ್ ಆಯ್ದುಕೊಂಡರು. ಡೆಲ್ಲಿ ಪರ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಭರ್ಜರಿ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ಈ ಜೋಡಿ ಸನ್​ರೈಸರ್ಸ್​ ಬೌಲರುಗಳು ವಿರುದ್ದ ಮುಗಿಬಿದ್ದರು. ಪರಿಣಾಮ ಪವರ್​ಪ್ಲೇನಲ್ಲಿ ಡೆಲ್ಲಿ ಮೊತ್ತ 51ಕ್ಕೆ ಬಂದು ನಿಂತಿತು.

ಮೊದಲ ವಿಕೆಟ್​ಗೆ 81 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ರಶೀದ್ ಖಾನ್ ಯಶಸ್ವಿಯಾದರು. 28 ರನ್​ಗಳಿಸಿದ್ದ ಶಿಖರ್ ಧವನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ರಶೀದ್ ಖಾನ್ ಸನ್​ರೈಸರ್ಸ್​ಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅರ್ಧಶತಕ ಬಾರಿಸಿದ್ದ ಪೃಥ್ವಿ ಶಾ (53ರನ್, 39 ಎಸೆತ) ರನೌಟ್​ಗೆ ಬಲಿಯಾದರು. ಈ ಹಂತದಲ್ಲಿ ಜೊತೆಗೂಡಿದ ರಿಷಭ್ ಪಂತ್ ಹಾಗೂ ಸ್ಟೀವ್ ಸ್ಮಿತ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

3ನೇ ವಿಕೆಟ್​ಗೆ 58 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಸಿದ್ದಾರ್ಥ್​ ಕೌಲ್ ಬೇರ್ಪಡಿಸಿದರು. 19ನೇ ಓವರ್​ನಲ್ಲಿ ರಿಷಭ್ ಪಂತ್ (37) ಔಟ್ ಮಾಡಿ ಎಸ್​ಆರ್​ಹೆಚ್​​ಗೆ 3ನೇ ಯಶಸ್ಸು ತಂದುಕೊಟ್ಟರು. ಇನ್ನು ಬಂದ ವೇಗದಲ್ಲೇ ಶಿಮ್ರಾನ್ ಹೆಟ್ಮೆಯರ್​ ಔಟ್ ಮಾಡಿ ಕೌಲ್ 4ನೇ ವಿಕೆಟ್ ಉರುಳಿಸಿದರು.

ಸ್ಟೀವ್ ಸ್ಮಿತ್ ಅವರ ಅಜೇಯ 34 ರನ್​ಗಳ ನೆರವಿನೊಂದಿಗೆ ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್​ ಪೇರಿಸಿತು. ಸನ್​ರೈಸರ್ಸ್​ ಹೈದರಾಬಾದ್ ಪರ 4 ಓವರ್​ನಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ವರದಿ, ನ್ಯೂಸ್ ಬ್ಯುರೋ ಎಚ್ಚರಿಕೆ ಕನ್ನಡ ನ್ಯೂಸ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend