ಆರೋಗ್ಯಕರ ವ್ಯಕ್ತಿ ಸಮಾಜದ ಶಕ್ತಿ ದೇಶದ ಆಸ್ತಿ
ಅಮೃತಾಪುರದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ
ಹೊಳಲ್ಕೆರೆ : ತಂಬಾಕಿನಂತಹ ತಾತ್ಕಾಲಿಕ ಅಮಲು ತರುವ ಪದಾರ್ಥಗಳ ಸೇವನೆ ಮನುಷ್ಯರಲ್ಲಿ ಕ್ಯಾನ್ಸರನಂತಹ ಮಾರಕ ರೋಗಗಳನ್ನು ತರುತ್ತದೆ. ಹಣ ಕೊಟ್ಟು ಅನಾರೋಗ್ಯ ಕೊಳ್ಳುವ ದುಸ್ಸಾಹಸಕ್ಕೆ ಯಾರು ಹೋಗಬಾರದು ಎಂದು ಮುಖ್ಯೋಪಾಧ್ಯಾಯರಾದ ಡಿ.ಸಿದ್ಧಪ್ಪ ಹೇಳಿದರು.
ಹೊಳಲ್ಕೆರೆ ಚಿಕ್ಕಜಾಜೂರು ಸಮೀಪದ ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆ ವತಿಯಿಂದ ತಂಬಾಕು ಮುಕ್ತ ಯುವ ಅಭಿಯಾನ ಪ್ರತಿಜ್ಞಾ ವಿಧಿಗೆ ಚಾಲನೆ ನೀಡಿ ಮಾತನಾಡಿದ ಅವರು ಸಿಗರೇಟು ಬೀಡಿ ಗುಟ್ಕಾ ಸುಪಾರಿ ಮುಂತಾದ ಅಮಲು ತರುವ ಪದಾರ್ಥಗಳು ಮನುಷ್ಯರಿಗೆ ಆ ತಕ್ಷಣದ ಸುಖ ನೀಡಿ ನೆಮ್ಮದಿ ತಂದಂತೆ ಅನಿಸಿದರು ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟುಮಾಡುತ್ತವೆ. ತಂಬಾಕು ಸೇವನೆಯು ತಲೆನೋವು, ಗಂಟಲು ಊತ, ಹೊಟ್ಟೆಯ ನೋವು, ಕರುಳು ಬೇನೆ, ಅಕಾಲಿಕ ಮುದಿತನ, ಏಕಾಗ್ರತೆಯ ನಾಶ, ಕ್ಯಾನ್ಸರ್ ಬೇನೆ ತರುವ ಮೂಲಕ ಜೀವನ ನಾಶ ಮಾಡುತ್ತವೆ. ಸಂಸಾರದ ನೆಮ್ಮದಿ ಕುಂಠಿತಗೊಳಿಸಿ ಹಣಕಾಸಿಕ ತೊಂದರೆಯನ್ನು ಉಂಟುಮಾಡುತ್ತವೆ. ಸಮಾಜದಲ್ಲಿ ಗೌರವ ಇಲ್ಲವಾಗಿಸುತ್ತವೆ. ಹಾಗಾಗಿ ಚಿಕ್ಕಂದಿನಿಂದಲೇ ಯೋಗ ಧ್ಯಾನದ ಮೂಲಕ ಪೌಷ್ಟಿಕ ಆಹಾರ ಸೇವನೆಯ ಮೂಲಕ ಸದೃಢ ದೇಹ ಮತ್ತು ಮನಸ್ಸು ಹೊಂದಬೇಕು. ಆರೋಗ್ಯಕರ ವ್ಯಕ್ತಿ ಸಮಾಜದ ಶಕ್ತಿ ಮತ್ತು ದೇಶದ ಆಸ್ತಿ ಎಂದು ತಿಳಿಸಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಹಶಿಕ್ಷಕರಾದ ಟಿ.ಪಿ.ಉಮೇಶ್ ತಂಬಾಕು ಮುಕ್ತ ಯುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅಮೃತಾಪುರ ಗ್ರಾಮಸ್ಥರಿಗೆ ಜಾಥಾ ಮೂಲಕ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ, ತಂಬಾಕು ಮುಕ್ತ ಗ್ರಾಮದ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ರಾಧಾ ಅಕ್ಷರ ದಾಸೋಹ ಸಹಾಯಕರಾದ ತಿಮ್ಮಮ್ಮ, ಶಾರದಮ್ಮ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030