ತ್ರೈಮಾಸಿಕ ಕೆಡಿಪಿ ಸಭೆ ನಡೆಸಲು ಆಗ್ರಹ..
ಹೊಳಲ್ಕೆರೆ: ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದ್ದು, ಸರ್ಕಾರದ ಅನುದಾನ ದುರ್ಬಳಕೆಯಾಗುತ್ತಿದೆ. ಆದ್ದರಿಂದ ಕೂಡಲೇ ಕೆಡಿಪಿ ಸಭೆ ಕರೆಯಬೇಕು ಎಂದು ತಾಪಂ ನಾಮ ನಿರ್ದೇಶಿತ ಕೆಡಿಪಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಪಾಡಿಗಟ್ಟೆ ಒತ್ತಾಯಿಸಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಡಿಪಿ ಸಭೆಯ ಬಗ್ಗೆ ಅಸಡ್ಡೆ ತೋರು ತ್ತಿರುವ ಅಧಿಕಾರಿಗಳು ಹಾಗೂ ಶಾಸಕರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಇದು ಮತದಾರರಿಗೆ ಮಾಡುತ್ತಿರುವ ಮಹಾ ಮೋಸ ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲದೆ ಜನರು ಸೊರಗುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು, ಶಾಸಕರು ಹಾಗೂ ಕೆಡಿಪಿ ಸದಸ್ಯರನ್ನೊಳಗೊಂಡ ಒಂದು ಸಮಿತಿ ಇದೆ. ತೈಮಾಸಿಕವಾಗಿ ತಾಲೂಕಿನ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಕಾನೂನಾತ್ಮಕವಾಗಿ ಸರಿದೂಗಿಸಿಕೊಂಡು ಹೋಗಬೇಕು. ಕೆಡಿಪಿ ಸಭೆ ಕರೆಯುವ ಸಂಬಂಧ ಅಧಿಕಾರಿಗಳ ಗಮನಕ್ಕೆ ತಂದರೆ ನೋಡೋಣ, ಮಾಡೋಣ, ಶಾಸಕರು ದಿನಾಂಕ ಕೊಡಲಿ, ಅನಂತರ ನೋಡೋಣ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಯವರು ಬರೀ ಶಾಸಕರ ದಿನಾಂಕ ಕೇಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಹಾಗಿದ್ದರೆ ಕೆಡಿಪಿ ಸದಸ್ಯರ ಅವಶ್ಯಕತೆ ಯಾದರೂ ಏನಿದೆ, ಸರ್ಕಾರದಿಂದ ಅವರನ್ನು ಏಕೆ ನಾಮ ನಿರ್ದೇಶನ ಮಾಡಬೇಕಾಗಿತ್ತು, ಶಿಕ್ಷಣ ಆರೋಗ್ಯ, ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸದೆ ಶಾಸಕರು ಭೂಮಿಪೂಜೆ ಮಾಡುತ್ತಾ ಕುಳಿತುಕೊಂಡರೆ ಅಭಿವೃದ್ಧಿಯಾಗುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಇನ್ನಿತರ ಇಲಾಖೆಗಳಲ್ಲಿ ಕಾಮಗಾರಿಗಳು ಯಾವ ರೀತಿ ಹಂಚಿಕೆಯಾಗಿವೆ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ತಾಲೂಕಿನಲ್ಲಿ ಸಮರ್ಪಕವಾಗಿ ನಡೆಯುತ್ತಿದೆಯೇ, ಇದನ್ನು ಚರ್ಚಿಸಲು ಯಾರ ಬಳಿ ಕೇಳಬೇಕು, ಯಾರನ್ನು ಕೇಳಬೇಕು ಎಂದು ಸುರೇಶ್, ಕೂಡಲೇ ತ್ರೈಮಾಸಿಕ ಸಭೆ ಕರೆಯುವಂತೆ ಜಿಲ್ಲಾಧಿಕಾರಿಯವರು ತಾಪಂ ಇಒಗೆ ನಿರ್ದೇಶನ ನೀಡಬೇಕೆಂದು ಒತ್ತಾಹಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030