ವಿದ್ಯಾರ್ಥಿಗಳು ಟಿ.ವಿ.ಮತ್ತುಮೊಬೈಲ್ ಗಳಂತ ಸಮೂಹ
ಮಾಧ್ಯಮಗಳ ವ್ಯಾಮೋಹಕ್ಕೆ ಒಳಗಾಗದೇ ಶ್ರದ್ಧೆಯಿಂದ
ಅಭ್ಯಾಸಮಾಡಬೇಕು :ನಿ.ಪ್ರಾಂಶುಪಾಲ ಚಂದ್ರಶೇಖರಯ್ಯ
ಹಿರಿಯೂರು :
ಇಂದಿನ ವಿದ್ಯಾರ್ಥಿಗಳು ಸದಾ ಟಿ.ವಿ. ಮೊಬೈಲ್ ಗಳಂತಹ ಸಮೂಹ ಮಾಧ್ಯಮಗಳ ವ್ಯಾಮೋಹಕ್ಕೆ ಒಳಗಾಗದೇ ಶ್ರದ್ಧೆ, ಆಸಕ್ತಿಯಿಂದ ಅಭ್ಯಾಸ ಮಾಡುವ ಮೂಲಕ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು. ಆಗ ಮಾತ್ರ ಸ್ವಾಸ್ಥ್ಯ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂಬುದಾಗಿ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರಯ್ಯನವರು ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಸ್ವಾಸ್ಥ್ಯಸಂಕಲ್ಪ” ಕಾರ್ಯಕ್ರಮವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ತಂದೆ-ತಾಯಿಗಳ ಪರಿಶ್ರಮ, ಅವರ ಸಂಕಷ್ಟಗಳನ್ನು ಅರಿಯದೆ ದುಷ್ಚಟಗಳ ದಾಸರಾಗಿ ಸಿಗರೇಟ್, ಗುಟ್ಕಾ, ತಂಬಾಕು, ಹಾಗೂ ಡ್ರಗ್ಸ್ ಸೇವನೆಯಂತಹ ಮಾದಕ ವ್ಯಸನಿಗಳಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳದೇ ಕಷ್ಟಪಟ್ಟು ಓದಿ, ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುವ ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರಲ್ಲದೆ,
ಸಮಾಜದ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿಭಾವಂತರಾಗಿದ್ದು, ವಿದ್ಯಾರ್ಥಿಗಳು ಯಾವುದೇ ಆಸೆ, ವ್ಯಾಮೋಹಗಳಿಗೆ ಒಳಗಾಗದೇ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಂಡು ಕಠಿಣ ಪರಿಶ್ರಮದಿಂದ ಓದಿ, ಅಭ್ಯಾಸ ಮಾಡುವ ಮೂಲಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಓದಿದ ಶಾಲೆಗೆ ಹಾಗೂ ಹೆತ್ತ ತಂದೆ-ತಾಯಿಗಳಿಗೆ ಕೀರ್ತಿಯನ್ನು ತರಬೇಕು ಎಂಬುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪರವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಈಗಾಗಲೇ ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳ ಸುಧಾರಣೆಗಾಗಿ ಹಲವು ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಿದೆ ಎಂದರಲ್ಲದೆ,
ಇದೀಗ ಭವಿಷ್ಯದ ದೃಷ್ಠಿಯಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ದುಷ್ಚಟಗಳಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಿ ಅವರನ್ನು ಜಾಗೃತಗೊಳಿಸುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವತ್ತ ಹೆಜ್ಜೆ ಇಟ್ಟಿರುವುದು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂಬುದಾಗಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕರಾದ ಶಿವಕುಮಾರ್ ಮಾತನಾಡಿ, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಜೀವಗಳೆಂದರೆ ತಂದೆತಾಯಿಗಳು ಮಾತ್ರ ಮಕ್ಕಳಿಗೆ ಉತ್ತಮ ಜೀವನ ಕಲ್ಪಿಸುವ ಉದ್ದೇಶದಿಂದ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ತಂದೆ-ತಾಯಿಗಳ ಋಣ ತೀರಿಸಬೇಕಾದರೆ ನಾವು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದರಲ್ಲದೆ,
ವಿದ್ಯಾರ್ಥಿಗಳು ತಂದೆ-ತಾಯಿಗಳು ಹಾಗೂ ಗುರುಹಿರಿಯರ ಮಾರ್ಗದರ್ಶನದಲ್ಲಿ ಜೀವನದ ಮೌಲ್ಯಗಳನ್ನು ರೂಢಿಸಿಕೊಂಡು ವಿದ್ಯಾಭ್ಯಾಸ ಮಾಡುವುದರ ಜೊತೆಗೆ ತಮ್ಮ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಪಡೆದು, ಸಮಾಜದ ಸತ್ಪ್ರಜೆಗಳಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಶಾಂತಕುಮಾರಿ, ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಕೋ-ಆರ್ಡಿನೇಟರ್ ಗಳಾದ ಶ್ರೀಮತಿ ನಂದಿನಿ, ಶ್ರೀಮತಿ ರಚನ, ಶಿಕ್ಷಕರುಗಳಾದ ಉಮೇಶ್ ಯಾದವ್, ಶಿವರಾಜ್ ನಾಯಕ್, ಶಿಕ್ಷಕಿಯರುಗಳಾದ ರಜಿಯಾ, ಗಂಗಮ್ಮ, ರಂಜಿತಾ, ಸಬೀಹಾ, ಮುಬೀನಾ, ಹೇಮಲತಾ, ದ್ರಾಕ್ಷಾಯಣಿ, ಸಾಧಿಕಾ, ಮಮತಾ,ಭಾಗ್ಯ, ಪೂಜಾ, ಕಾವ್ಯ, ಜಯಸುಧಾ, ಅಕ್ಷಿತಾ, ಸುಲೋಚನಾ, ಮಮತಾ, ಸೇರಿದಂತೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030