೨೨೫ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕನ್ನಡ ರತ್ನ ಪ್ರಶಸ್ತಿ ಪ್ರದಾನ
ಹರಪನಹಳ್ಳಿ: ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ಹೆಚ್ಚು ಶ್ರೀಮಂತವಾಗಿದೆ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದು ಎಸ್ ಯು ಜೆ ಎಂ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಪಟ್ಟಣದ ಬಸಮ್ಮ ಕಲಾಮಂದಿರದಲ್ಲಿ ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ ೨೦೨೩-೨೪ ನೇ ಸಾಲಿನ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಮೇರು ಕೃತಿಗಳನ್ನು ಹೆಚ್ಚು ಓದಬೇಕು. ಕಾವ್ಯ, ಕಥೆ, ನಾಟಕ, ಕಾದಂಬರಿ, ಪ್ರವಾಸ ಕಥನ ಎಲ್ಲಾ ಆಯಾಮಗಳ ಪುಸ್ತಕಗಳನ್ನು ನಿರಂತರ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಹಳೆಗನ್ನಡ ನವ್ಯ ಸಾಹಿತ್ಯದ ಮಾತ್ರವಲ್ಲದೆ ಹೊಸ ತಲೆಮಾರಿನ ಕವಿ ಲೇಖಕರ ಕೃತಿಗಳನ್ನು ಅಭ್ಯಾಸ ಮಾಡಬೇಕು. ಹೆಚ್ಚು ಹೆಚ್ಚು ಅಧ್ಯಯನ ನಡೆಸಿದರೆ ಮಾತ್ರ ಕವಿ ಲೇಖಕರಾಗಲು ಸಾಧ್ಯ ಎಂದು ತಿಳಿಸಿದರು.
ಹೂವಿನ ಹಡಗಲಿ ಸಿಂಚನ ಪ್ರಕಾಶನದ ಸುರೇಶ ಅಂಗಡಿ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರಾಮೀಣ ಪ್ರದೇಶದ ಅದರಲ್ಲಿಯೂ ಕನ್ನಡ ಮಾಧ್ಯಮದಲ್ಲಿ ಓದಿದವರು ಹೆಚ್ಚು ಸಾಧನೆ ಮಾಡಿದ್ದಾರೆ. ದುಡಿಮೆಯ ಒಂದು ಭಾಗವನ್ನು ಕನ್ನಡ ಕಟ್ಟುವ ಕಾರ್ಯಗಳಿಗೆ ವಿನಿಯೋಗಿಸಿ ಎಂದರು.
ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಸಪ್ನ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಕಾರಣಕ್ಕೂ ನಮ್ಮಿಂದ ಯಾವುದೇ ಕೆಲಸ ಸಾಧ್ಯವಿಲ್ಲ ಎನ್ನಬಾರದು. ಸತತಪ್ರಯತ್ನ ಪಡುತ್ತಿರಬೇಕು, ಸಾಧ್ಯವಿಲ್ಲ ಎಂದು ಮನಸ್ಸಿನಲ್ಲಿ ಮಾತ್ರ ಅಂದುಕೊಳ್ಳಬಾರದು. ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸವಿರಬೇಕು. ಪ್ರತಿಯೊಬ್ಬರಲ್ಲಿ ಒಂದು ವಿಶಿಷ್ಟವಾದ ಗುಣವಿರುತ್ತದೆ. ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ ಆಗ ಯಶಸ್ವಿ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು.
೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ೧೨೪,೧೨೩,೧೨೨,೧೨೧,೧೨೦ ಅಂಕಗಳನ್ನು ಪಡೆದ ೨೨೫ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ “ಕನ್ನಡ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೂವಿನಹಡಗಲಿ ಕರ್ನಾಟಕ ಪ್ರೆಸ್ ಕ್ಲಬ್ ಹಾಗೂ ಸಿಂಚನ ಪ್ರಕಾಶನದ ವತಿಯಿಂದ ಪತ್ರಕರ್ತರಾದ ಎಂ ದಯಾನಂದ, ಕೆ ಕರಿಬಸಪ್ಪ ಮತ್ತು ಸುರೇಶ್ ಅಂಗಡಿ ಇವರು ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಸಪ್ನ ಮತ್ತು ಉಪನ್ಯಾಸಕರಾದ ಹೆಚ್.ಮಲ್ಲಿಕಾರ್ಜುನ ಇವರನ್ನು ಸನ್ಮಾನಿಸಿದರು.
ವಿಜಯನಗರ, ಬಳ್ಳಾರಿ, ದಾವಣಗೆರೆ, ಹಾವೇರಿ, ಕೊಪ್ಪಳ, ಚಿತ್ರದುರ್ಗ ಮತ್ತು ಶಿವಮೊಗ್ಗ ಮೊದಲಾದ ನೆರೆಯ ಜಿಲ್ಲೆಗಳ ಕನ್ನಡದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಲಾಯಿತು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030