ನಾಣ್ಯಾಪುರ:ಅಗಣಿತ “ಪವಾಡಗಳ ಶಕ್ತಿ ದೇವ ಶ್ರೀ ಜಗಲೂರಪ್ಪ” ನ ಹಬ್ಬ…!!!

Listen to this article

ನಾಣ್ಯಾಪುರ:ಅಗಣಿತ “ಪವಾಡಗಳ ಶಕ್ತಿ ದೇವ ಶ್ರೀ ಜಗಲೂರಪ್ಪ” ನ ಹಬ್ಬ..

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ: ತಾಲೂಕಿನ ಗಡಿ ಗ್ರಾಮ, ಹಾಗೂ ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರ‍ಾಮದಲ್ಲಿ. ಪ್ರತಿ ಕಾರ್ತೀಕ ಮಾಸದ ಹೊಸ್ತಿಲು ಹುಣ್ಣಿಮೆ ಸಂದರ್ಭದಲ್ಲಿ, ಅಗಣಿತ ಪವಾಡಗಳ ಶಕ್ತಿ ದೇವ ಶ್ರೀಜಗಳೂರಪ್ಪನ ಹಬ್ಬ ಜರುಗುತ್ತದೆ. ನ12ರಂದು ನಾಣ್ಯಾಪುರ ಗ್ರಾಮದಲ್ಲಿ, ಪ್ರತಿ ವರ್ಷದಂತೆ ಭಾರಿಯೂ ಬಹು ಅದ್ಧೂರಿಯಾಗಿ ಹಬ್ಬ ಜರುಗಿಸಲಾಗಿದೆ.

ಕೋಳಿ ಕೂಗದ ಗ್ರಾಮವೆಂದೇ ಖ್ಯಾತಿಯಾದ ನಾಣ್ಯಾಪುರದಲ್ಲಿ, ಅಗಣಿತ ಪವಾಡಗಳ ಶಕ್ತಿ ದೇವ ಶ್ರೀಜಗಲೂರಪ್ಪ ನೆಲೆಸಿದ್ದಾನೆ ಎಂಬ ನಂಬಿಕೆ ಇಲ್ಲಿಯ ಆಸ್ಥಿಕರದ್ದು. ಈ ದೇವರ ಹಬ್ಬವನ್ನು ಗ್ರಾಮದ ಎಲ್ಲಾ ಕೋಮಿನವರು ಸೌಹಾರ್ದತೆಯಿಂದ, ಜಾನಪದೀಯ ನೆಲೆಗಟ್ಟಿನಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀಜಗಲೂರಪ್ಪ ಸ್ವಾಮಿ ನಾಣ್ಯಾಪುರ ಗ್ರಾಮದ ಸಮಸ್ತ ಗ್ರಾಮಸ್ತರ, ಹಾಗೂ ನೆರೆ ಹೊರೆ ಗ್ರಾಮಗಳ ಧಾರ್ಮಿಕ ಶ್ರದ್ಧಾವಂತರ ಆರಾಧ್ಯ ದೈವವಾಗಿದೆ. ಪ್ರತಿ ವರ್ಷದ ಹೊಸ್ತಿಲು ಹುಣ್ಣಿಮೆಯ ಸಂದರ್ಭದಲ್ಲಿ, ಗ್ರ‍ಾಮದಲ್ಲಿ ಶ್ರೀಜಗಲೂರಪ್ಪನ ಹಬ್ಬವನ್ನು, ಧಾರ್ಮಿಕ ಹಾಗೂ ಜಾನಪದೀಯ ನೆಲೆಗಟ್ಟಿನಲ್ಲಿ ಆಚರಿಸಲಾಗುತ್ತದೆ. ಹಬ್ಬವನ್ನು ದೇವರ ಎತ್ತುಗಳ ಹಬ್ಬವೆಂತಲೂ ಕರೆಯಲ‍ಾಗುತ್ತದೆ, ತುಂಬಾ ವೈಶಿಷ್ಟಪೂರ್ಣ ಬಹು ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳ ಹಬ್ಬವಾಗಿದೆ. ಶ್ರೀಜಗಲೂರಪ್ಪ ದೇವರು ಭಕ್ತರು ತನು ಮನ ಶುದ್ಧತೆಯಿಂದ ಆರಾಧಿಸಿದರೆ ಸಾಕು, ಪ್ರಸನ್ನಃ ನಾಗಿ ಭಕ್ತರ ಸಂಕಷ್ಟಗಳನ್ನು ಕಳೆಯುತ್ತ‍ಾನೆ. ಭಕ್ತರು ಶ್ರದ್ಧೆಯಿಂದ ಆರಾಧಿಸಿದರೆ ಅವರ ಇಷ್ಟಾರ್ಥಗಳನ್ನು, ನೀಡುತ್ತಾನೆಂದು ಗ್ರಾಮದ ಹಿರಿಯರು ತಮ್ಮ ಅನುಭವದ ಬುತ್ತಿ ಬಿಚ್ವಿಡುತ್ತಾರೆ. “ನಡೆದುಕೊ ಪಡೆದುಕೋ” ಅಂದರೆ ಶ್ರದ್ಧಾ ಭಕ್ತಿಯ ಆಧಾರದ ಮೇಲೆ, ಶ್ರೀ ಜಗಲೂರಪ್ಪ ದೇವರ ಒಲುಮೆ ಸಾಧ್ಯ ಎನ್ನುತ್ತಾರೆ ಗ್ರಾಮದ ಹಿರಿಯರು. ಶ್ರೀ ಜಗಲೂರಪ್ಪ , ಪಾಪಣ್ಣ, ಆನಂದ, ಜಗಲೂರಪ್ಪ, ಜಗದೀಶ, ಎಂಬ ನಾಮಗಳಿಂದ ಕರೆಯಲ್ಪಡುವ ನಿರಾಕಾರ ದೈವೀ ಶಕ್ತಿಯಾಗಿದೆ. ಶ್ರೀಜಗಲೂರಪ್ಪ ದೇವರ ಆರಾಧಕರು, ಶ್ರೀಜಗಲೂರಪ್ಪನ ಹೆಸರಲ್ಲಿ ದೇವರಿಗೆ ಬಿಡುವ ಎತ್ತುಗಳಲ್ಲಿ ದೇವರನ್ನ ಕಾಣುತ್ತಾರೆ. ದೇವರ ಎತ್ತುಗಳನ್ನು ಭಕ್ತರು ಸಾಕ್ಷಾತ್ ಶ್ರೀಜಗಲೂರಪ್ಪ ದೇವನೆಂದು, ಕೆಲವರು ತಮ್ಮ ಮನೆತದ ಪೂರ್ವಜರೆಂದು ಭಾವಿಸುತ್ತಾರೆ. ಹಾಗಾಗಿ ಗ್ರ‍‍ಾಮದ ಮನೆ ಮನೆ ಯಿಂದ ಕನಿಷ್ಠ ಒಂದು ಎತ್ತನ್ನು, ದೇವರ ಹೆಸರಲ್ಲಿ ದೇವಸ್ಥ‍ಾನದ ವಶಕ್ಕೆ ಬಿಡಲ‍‍ಾಗುತ್ತದೆ. ಇದೇ ರೀತಿಯ‍ಾಗಿ ಬಿಟ್ಟ ನೂರಕ್ಕೂ ಹೆಚ್ಚು ದೇವರ ಎತ್ತುಗಳು ಇವೆ, ಹೀಗೆ ದೇವರೆತ್ತು ಗಳನ್ನು ಪರಿಭಾವಿಸುವ ಕ್ರಮವಿದೆ. ಇದು ಮ್ಯಾಸನಾಯಕರ ಕಂಪಳರಂಗ, ಗಾದ್ರಿಪಾಲನಾಯಕ, ಬೋರೆ ದೇವರು, ಬೋಸೆದೇವರು, ಬಂಗಾರದೇವರು, ಬೊಮ್ಮದೇವರು ಇವೇ ಮೊದಲಾದ ದೈವದ ಒಕ್ಕಲುಗಳಲ್ಲಿ ರೂಡಿಯಲ್ಲಿದೆ. ಮುಖ್ಯವಾಗಿ ಯಾವುದೇ ಹಬ್ಬ ಪ್ರಾರಂಭಕ್ಕೂ ಮುನ್ನ ಮುತ್ತಯ್ಯಗಳ ಪೂಜೆಯ ಮೂಲಕ ಮತ್ತು ಮುತ್ತಯ್ಯಗಳ ಮೀಸಲು ಹಾಲು, ತುಪ್ಪ ಬಂದ ನಂತರವೇ ಪೂಜೆ ನೆರವೇರಲಿದೆ.

ದೈವೀ ಶಕ್ತಿಯ ಪ್ರತೀಕ ಒಡಪು:-
ಇಲ್ಲಿ ಗೂಡು, ದೇವರಗುಡಿ ಮತ್ತು ಉದಿ ಪದಿ, ಒಡಪು ಇವುಗಳ ಬಗ್ಗೆ ಕೆಲವು ವಿಚಾರಗಳನ್ನು ಹೇಳಲಾಗುತ್ತೆ, ಈಗಾಗಲೇ ಹೇಳಿದ ಹಾಗೆ ಗೂಡು ದೇವರ ಎತ್ತುಗಳನ್ನು ಕೂಡಲು ಊರ ಹೊರಗೆ ಮುಳ್ಳು ಕಳ್ಳೆಗಳಿಂದ ನಿರ್ಮಿಸಲಾಗುತಿತ್ತು. ಆದ್ರೆ ಕಾಲಾನಂತರದಿಂದ ಅಧುನಿಕರಣವಾಗಿದೆ, ಈ ದೊಡ್ಡಿಯೊಳಗೆ ಒಡಪು ಇರುತ್ತದೆ. ಒಡಪು ಎಂದರೆ ದಿನಾಲು ಬೆಳಿಗ್ಗೆ, ಸಾಯಂಕಾಲ ಬೆಂಕಿ ಹಾಕಲು ಮಾಡಿರುವ ಒಂದು ಗುಂಡಿ. ಇದು ಸಾಮಾನ್ಯವಾದ ಗುಂಡಿಯಲ್ಲ ಅದಕ್ಕೂ ದೈವ ಮಾನ್ಯತೆ ಇದೆ. ಇದರಲ್ಲಿ ದೊರೆಯುವ ಬೂದಿಯನ್ನು ವಿಭೂತಿ ಯಂತೆ ಹಣೆಗೆ ಧರಿಸುತ್ತಾರೆ. ಹಾಗಾಗಿಯೇ ಈ ಗುಂಡಿಯನ್ನು ಕೇವಲ ಗುಂಡಿಯೆಂದು ಕರೆಯದೇ ಒಡಪು ಎಂದು ಕರೆದಿದ್ದಾರೆ. ದೇವರ ಗುಡಿ ಹಟ್ಟಿಯಲ್ಲಿರುತ್ತದೆ. ಆ ಗುಡಿಯ ಮುಂದೆ ಮುತ್ತಯ್ಯಗಳ ಪೂಜಾಸ್ಥಾನವೊಂದಿರುತ್ತದೆ. ಅಲ್ಲಿ ಮುತ್ತಯ್ಯಗಳ ಹಾಲಿನಿಂದ ಬಂದ ಬೆಣ್ಣೆಯಿಂದ ಗರುಡಗಂಬದ ದೀಪಗಳನ್ನು ಉರಿಸುತ್ತಾರೆ. ಮತ್ತೆ ಅಲ್ಲಿಯೂ ಒಡಪು ಇರುತ್ತದೆ.

ಸರತಿಯಂತೆ ಕರ್ಥ ಪಾಲನೆ:-
ಕಿಲಾರಿಗಳನ್ನು ನೇಮಿಸುವುದು ಗುಡಿಕಟ್ಟಿನ ಕುಲಸಾವಿರದವರು ಸೇರಿ, ತಲೆತಲಾಂತರದಿಂದ ಬಂದ ಕುಟುಂಬಗಳನ್ನು ಆಯ್ಕೆ ಮಾಡಲಾಗುತ್ತೆ, ಈಗ ಕುಟುಂಬದ ಒಳಗೆ ಸರತಿಯಂತಿ ಈ ವೃತ್ತಿ ನಿರ್ಧರಿಸುತ್ತಾರೆ.


ಕಿಲಾರಿಗಳು ಧಾರ್ಮಿಕ ಕಟ್ಟಾಳು:-
ಕಿಲಾರಿಗಳ ಕೆಲಸಗಳು ಅತ್ಯಂತ ಕಠಿಣತರ ವಾದಂತಹವು ದೇವರ ಎತ್ತುಗಳನ್ನು ದಿನಾಲು ಮೇಯಿಸುವುದು. ಸುರಕ್ಷಿತವಾಗಿ ನೋಡಿಕೊಳ್ಳು ವುದು, ಹಬ್ಬದ ಸಂದರ್ಭಕ್ಕೆ ಹಾಲನ್ನು ಮೀಸಲಿಡಿದು, ಅದರಿಂದ ಬಂದ ಬೆಣ್ಣೆಯನ್ನು ಮತ್ತು ಒಂದಿಷ್ಟು ಮೀಸಲು ಹಾಲನ್ನು ದೇವರ ಗುಡಿಗೆ ಒಪ್ಪಿಸುವುದು, ಗೂಡಿಂದ ದೇವರೆತ್ತು ಗಳನ್ನು ಕರೆತಂದು ಹಬ್ಬ ಮುಗಿಸಿಕೊಂಡು ಕರೆದೊಯ್ಯುವುದು. ಗುಡಿಯ ಮುಂಭಾಗದಲ್ಲಿ ಇರುವ ಮುತ್ತಯ್ಯಗಳ ಪದಿಯಲ್ಲಿ ಪೂಜಾಕಾರ್ಯ ನೆರವೇರಿಸುವುದು. ಹಾಗೆಯೇ ಭಕ್ತರು ಗೂಡಿಗೆ ಮಲಗಲು ಬಂದಾಗ ಅವರಿಗೆ ಪೂಜೆ ಮಾಡಿಕೊಟ್ಟು ಪ್ರಸಾದ ನೀಡಿ ಕಳುಹಿಸುವುದು ಇತ್ಯಾದಿ ಆಚರಣೆಯಲ್ಲಿದೆ. ಇಂತಹ ಅನೇಕ ಮಹತ್ವದ ಧಾರ್ಮಿಕ ಕೆಲಸ ಕಾರ್ಯಗಳನ್ನು ಕಿಲಾರಿಗಳು ಮಾಡಬೇಕಾಗಿರುತ್ತದೆ.

ಕಿಲಾರಿಗಳ ವೇಷ ಭೂಷಣ ಮತ್ತು ಜೀವನ ನಿರ್ವಹಣೆ:-
ದೇವರ ಕೆಲಸವೆಂದು ಎತ್ತುಗಳನ್ನು ಕಾಯುವ ಕಿಲಾರಿಗಳಿಗೆ ಕುಲಸಾವಿರದವರಿಂದ ದೈವಿಕ ದೀಕ್ಷೆಯಾಗುತ್ತದೆ. ಇವರು ದೀಕ್ಷೆಯಾದ ದಿನದಿಂದ ಮೈಗೆ ಪೂರ್ತಿ ಬಟ್ಟೆ ಧರಿಸುವುದಿಲ್ಲ.ತಲೆಗೆ ರುಮಾಲು.ಸೊಂಟಕ್ಕೆ ಒಂದು ಪಂಚೆ,ಹೊದಿಯಲು ಒಂದು ಪಚ್ಚಡ,ಹೆಗಲ ಮೇಲೊಂದು ಕಂಬಳಿ, ಕೈಯಲ್ಲಿ ಬಿದುರಿನ ಒಂದು ಕೋಲು ಮತ್ತು ನೀರಿನ ಕುಡಿಕೆ ಇದು ಕಿಲಾರಿಗಳ ಸಾಮಾನ್ಯ ವೇಷ.ಇವರು ಬಹಳ ದಿನಗಳ ಕಾಲ ಗೂಡಿನಲ್ಲಿಯೇ ಬಂದರಿಕೆ ಸೊಪ್ಪಿನ ತಡಿಕೆಗಳ ಮೇಲೆ ಮಲಗುತ್ತಿದ್ದರು.ಈಗೀಗ ಊರಿಗೆ ಬಂದು ಮಲಗುವ ಪರಿಪಾಠವಿದೆ.

ಮೀಸಲು:-
ಭಕ್ತರು ನೀಡುವ ದವಸ ಧಾನ್ಯಗಳೇ ಇವರ ಜೀವನ ನಿರ್ವಹಣೆಗೆ ಆಧಾರ ಸುಗ್ಗಿಯ ಕಾಲದಲ್ಲಿ ಕಿಲಾರಿಗಳು ಪ್ರತಿ ಭಕ್ತರು ಕಣಗಳಿಗೆ ಬೇಟಿ ನೀಡಿ ದಾನ್ಯಗಳನ್ನು ಸಂಗ್ರಹಿಸುತ್ತಾರೆ. ಕಿಲಾರಿ ಹೋಗದೇ ಇದ್ದರು ಕೆಲ ಭಕ್ತರು ಕಿಲಾರಿಯ ಮನೆಗೆ ತಮ್ಮ ಭಕ್ತಿಯ ಸ್ವರೂಪವನ್ನು ದವಸವನ್ನು ಒಪ್ಪಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ದೊರೆಯುವ ಕಾಯಿ,ಕಾಸು ಕೂಡ ಜೀವನ ನಿರ್ವಹಣೆಗೆ ಪೂರಕ
ಮಡಿವಂತಿಕೆ:-
ಇವರ ವಿಶೇಷವೇನೆಂದರೆ ಅತಿಯಾದ ಮಡಿವಂತಿಕೆ ಕಿಲಾರಿಗಳು ತಮ್ಮ ಮನೆಯಲ್ಲಿ ಬೇರೆ ಸದಸ್ಯರು ಉಂಡ ತಟ್ಟೆಯಲ್ಲಿ ಉಣ್ಣುವುದಿಲ್ಲ, ಬೇರೆಯರ ಮನೆಗಳಲ್ಲಿ ಉಣ್ಣುವುದಿಲ್ಲ. ತೀರಾ ಉಣ್ಣಲೇ ಬೇಕಾದ ಪ್ರಸಂಗ ಬಂದರೆ ದೊನ್ನೆಯಲ್ಲಿ ಉಣ್ಣುತ್ತಾರೆ. ಪ್ರಯಾಣ ಏನೆಂದರೂ ಕಾಲನ್ನಡಿಗೆ ಯದು. ಬಹಳ ಎಂದರೆ ದ್ವಿಚಕ್ರದಲ್ಲಿ,ಅದು ಸ್ವಗೋತ್ರದವರಾದರೆ ಮಾತ್ರ.ಪಟ್ಟಣಗಳಿಗೆ ಹೋಗುವುದೇ ಅಪರೂಪ. ಇಂತಹ ಮಡಿವಂತಿಕೆ ಇದ್ದು,ಕಾಲನಂತರದಲ್ಲಿ ಇದು ಸಡಿಲವಾತ್ತಿದೆ.

ಕಿಲಾರಿಗಳು:-
ಎತ್ತುಗಳನ್ನು ಕಾಯುತ್ತಿದ್ದ ಈ ಕಿಲಾರಿ ಸಂಪ್ರದಾಯ ಸುಮಾರು ತಲತಲಾಂತರದಿಂದ ಬಂದದ್ದು, ಎಂಬುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಅಂತ ಉದಾಹರಣೆಗಳಲ್ಲಿ ಹಿಂದೇ ಕಿಲಾರಿಗಳಿಗೆ ಕಾರ್ಯನಿರ್ವಹಿಸುತ್ತಾ, ಪ್ರಕೃತಿಯಲ್ಲಿ ಅಪಾಯಗಳಿಗೆ ಸಿಕ್ಕಿ ಮಡಿದ ಕಿಲಾರಿಗಳು ಇಂದು ಪೂಜ್ಯನೀಯರಾಗಿದ್ದಾರೆ. ಧಾರ‍್ಮಿಕ ವೃತ್ತಿಯಾಗಿರುವ ಕಿಲಾರಿತನ ನಶಿಸುತ್ತಿದೆ ಆದರೂ ಜನರಿಗೆ ದೈವದ ಬಗೆಗೆ ಇರುವ ಭಯ, ನಂಬಿಕೆ ಸಂಪ್ರದಾಯ ರೂಪದಲ್ಲಿರುವುದೇ ಖುಷಿಯ ಸಂಗತಿ.

ವೈಶಿಷ್ಟ್ಯ ಗಳ ಗ್ರಾಮ ನಾಣ್ಯಾಪುರ.. ನಾಣ್ಯಾಪುರ ಗ್ರ‍ಾಮ ಕೋಳಿ ಕೂಗದ ಗ್ರಾಮವೆಂದೇ ಪ್ರತೀತಿ ಯಲ್ಲಿದೆ, ಜೊತೆಗೆ ಇನ್ನೂ ಕೆಲ ವೈಶಿಷ್ಠತೆ ಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. ಗ್ರಾಮದ ಹೊರವಲಯದಲ್ಲಿ ತುಂಬಾ ಪುರಾತನ ಕಾಲದಲ್ಲಿ ಶರಣರು ನಿರ್ಮಿಸಿದ್ದರು ಎನ್ನಲ‍ಾಗುವ, ಶ್ರೀಸಂಗನ ಬಸವೇಶ್ವರ ಸ್ವಾಮಿ ಮಠ ಹಾಗೂ ದೇವಸ್ಥಾನವಿದೆ. ಗ್ರಾಮದ ಹೃದಯ ಭಾಗದಲ್ಲಿ ಶ್ರೀ ಜಗಲೂರಪ್ಪ ದೇವಸ್ಥಾನದ ಮುಂಭಾಗದಲ್ಲಿ, ಪಾಳೆಗಾರರು ನಿರ್ಮಿಸಿರುವ ಕಲ್ಲಿನ ಕಟ್ಟಡದ ಕೋಟೆ ಬುರ್ಜು ಇದೆ. ಪ್ರಮುಖವಾಗಿ ಮೂರು ಕೋಮಿನವರು ವಾಸವಿರುವ ಈ ಗ್ರಾಮದಲ್ಲಿ, ಪರಸ್ಪರ ಅನೂನ್ಯತೆ ಸಹಬಾಳ್ವೆಯಿಂದ ಸೌಹಾರ್ಧತೆ ವಾತಾವರಣ ಮನೆ ಮಾಡಿದೆ…

ವರದಿ. ಸಂತೋಷ ಮ್ಯಾಗೇರಿ, ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend